ನಂದಿನಿ ಹೆದ್ದುರ್ಗ
ನೆರೆಮನೆಯ ಅರಳು ಮರುಳಿನ
ವಿಧವೆ ಮುದುಕಿಯೂ
ಮೇಲಿನ ಓಣಿಯ ವಿಧುರ
ಹಣ್ಣು ಹಣ್ಣು ಅಜ್ಜಯ್ಯನೂ
ನಿತ್ಯವೂ ತಾಸುಗಟ್ಟಲೇ ಕೂತು ಮಾತಾನಾಡುತ್ತಾರೆ..
ಇಳಿಸಂಜೆ ಸಮಯಕ್ಕೆ ಇಳಿದು ಬರುವರು ತಾತ
ಇಳಿಜಾರಿನ ಈ ಮನೆಗೆ
ಮೆಲ್ಲ ಕೋಲನ್ನೂರುತ್ತ
ಏನಂತ ಮಾತು,
ಘನಗಹನ ಚರ್ಚೆ
ಎಂಬಚ್ಚರಿ ನನದು.
ಕುತೂಹಲಕ್ಕೆ ಕಿವಿಗೊಟ್ಟರೆ
ಹಲ್ಲಿಲ್ಲದ ತಾತನ
ಅರ್ಥವಾಗದ ಮಾತು
ಇನ್ನೂ ಅಜ್ಜಿಯೋ
ಅವಳ ‘ಇವರು’
ಇದ್ದಾಗಿನಿಂದಲೂ
ದ್ವನಿಯೆತ್ತಿದ್ದೆ ಗೊತ್ತಿಲ್ಲ
ಪಿಸುಗುಡುವ ಹೊರತು..

‘ಹೇಗೀದ್ದೀರಾ ತಾತಯ್ಯ’
ಎಂದು ಕೂಗಿದರೆ ಇಲ್ಲಿಂದ
‘ಊಟವೇ, ಇನ್ನೂ ಇಲ್ಲವ್ವ’
ಎನ್ನುವರು.
ಧ್ವನಿ ಉಡುಗಿದ ಅಜ್ಜಿಯೂ
ಕಿವಿ ಕೇಳದ ತಾತನೂ
ಮಾತು ಮನೆ ಕಟ್ಟುವುದು
ಕೆಲವೊಮ್ಮೆ ಏಳಂತಸ್ತು ಮೀರುವುದು..
ಪಾಳಿಯಂತೆ ಮೂರು ಮಕ್ಕಳ ಮನೆಯಲ್ಲಿ
ಮೂರು ಹೊತ್ತಿನ ತಾತಪ್ಪನೂ,
ಗಂಡು ಮೂರಿದ್ದರೂ
ಯಾರ ಹಂಗೂ ಬೇಡ
ಅಂಬಲಿಯಾದರೂ
ಸರಿಯೇ
ಆರಾಮು ಬೇಕು ಎನ್ನುವ ಅಜ್ಜಿಯೂ
ಹಾಲು ಬೆರೆತಿರದ
ನೀರು ಕಾಫಿಗೆ ಯಥೇಚ್ಛ ಬೆಲ್ಲ
ಸೇರಿಸಿ ಹೀರುತ್ತ ಅದಾವುದೋ
ಗತವ ನೆನೆಯುತ್ತ
ಮಕ್ಕಳ ಮಹತ್ಕಾರ್ಯಗಳ ಮೆಲುಕು ಹಾಕುತ್ತ
ಬೊಚ್ಚು ಬಾಯಿ ಊರಗಲ ಅಗಲಿಸಿ ನಗುತ್ತಾರೆ
ಹಸುಕಂದಮ್ಮಗಳ ಹಾಗೆ…

ಹಲ್ಲಿರದ ಬಾಯಲ್ಲಿ ಮೆಲ್ಲುವಾಗ
ಹಾರುವ ತಿನಿಸಿನಾಸೆಗೆ
ಅಲ್ಲಿಷ್ಟು ಗುಬ್ಬಚ್ಚಿಯೂ
ಸೇವೆ ಸಲ್ಲಿಸುತ್ತವೆ,
ಹತ್ತಿರದವರೇನೋ ಅನ್ನುವ ಹಾಗೆ.
…
ಇಂಥ ಚಂದದ ದೃಶ್ಯ
ಇನ್ನೆಲ್ಲಿ ಕಂಡೀತೂ
ಎಂಬಂತೆ
ದೃಷ್ಟಿ ಹಾಯಿಸುತ್ತೇನೆ
ನಾ ನಿತ್ಯ ಅತ್ತ.
ಒಂದರ್ದ ತಾಸು ಹೊರಗೆ ಏನೋ ಮಾಡುತ್ತ
ಮನಸಿನಲಿ
‘ಊರ ಕಣ್ಣು, ಮಾರಿ ಕಣ್ಣು’
ತಾಗದಿರಲೆಂದು ಕೇಳಿಕ್ಕೊಳ್ಳುತ್ತಾ






0 Comments