ನಂದಿನಿ ಹೆದ್ದುರ್ಗ
ಲಿಂಗದಲಿ ಮನವಾಗಿ
ಲಿಂಗದಲಿ ನೆನಹಾಗಿ
ಹೊತ್ತುಗೊತ್ತಿಲ್ಲದೆ
ಹೊತ್ತಿಕೊಳ್ಳುತ್ತದೆ
ಲಿಂಗವನರಿವ ಮಾಯೆ
ನುಡಿಸುತ್ತೇನೆ
ಮಂದ್ರಕ್ಕೆ ಮೋಹ
ತಾರಕದಲ್ಲಿ ವಿರಹ
ಹುಸಿ ವಿದಾಯ
ಇತ್ಯಾದಿ
ಅಗಮ್ಯ ಅಗೋಚರದಲ್ಲಿ
ತಳಮಳಿಸುವ
ಅವನ
ತೊಳೆಯಲು
ಹುಚ್ಚು ಮಳೆ
ಗೆ
ಒಡ್ಡಿಕೊಳ್ಳುವಾಗೆಲ್ಲ
ಘನತೇಜವೊಂದು
ಲೋಕೋತ್ಪತ್ತಿಯ
ಬೀಜ ಬಿತ್ತುತ್ತದೆ

ನನ್ನ ಹಾದು ಹೋಗುವ
ಹಂಬಲಗಳ
ಕದ್ದು ಓದಿದವನಂತೆ
ಸುಲಿಪಲ್ಲ ಗೊರವ
ಕದ ತಟ್ಟುತ್ತಾನೆ
ಸಾವ ಕೆಡುವ ಗಂಡಗಳನು
ಒಲೆಯೊಳಗಿಕ್ಕಿ
ತಿಲದ ಮರೆಯ ತೈಲ
ಸುರಿದಾಗ
ಎಳೆಕಿರಣ
ತಿರುವಿಗಿಳಿಯುತ್ತದೆ
ಹೊಂದುವುದ
ಹೇಳುವಾಗ
ಹದ್ದು ಮೀರಬಾರದು
ಎನ್ನುತ್ತಾ
ಮುದ್ದುಗರೆಯುತ್ತಾನೆ
ಜಗದಗಲ ಮುಗಿಲಗಲ
ಅವನಗಲ ಎನ್ನಾಳ
ಗಳತ್ತತ್ತ
ಹೊತ್ತೊಯ್ಯುವಾಗ
ಅನುವನರಿತು ತನುವ
ಮರೆತ
ಕುರಿತಲ್ಲದೆ
ಮತ್ತೇನು
ಹೇಳಬಹುದು
ನೀನೇ ಹೇಳೆ
ಗೆಳತಿ!






0 Comments