ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂದಿನಿ ಹೆದ್ದುರ್ಗ ಕವಿತೆ – ಕನಸಲ್ಲೇ ಮುಗಿದವರು…

ನಂದಿನಿ ಹೆದ್ದುರ್ಗ

ಪಡುವಣಕೆ ಕೆಂಪು
ಕಲರವದ ಬೆಳಗು
ಹುಲ್ಲುಹುಲ್ಲಿನ ಮೇಲೆ
ಹೊಳೆವ ನಲ್ಲೆಯರು
ಹಾಡು ಕಲಿತ ಕಡಲು
ಎಚ್ಚರಾಗು ಮರವೇ
ಎಚ್ಚರಾಗು
ಮುಡಿದ ಹಕ್ಕಿಗಳ
ಚದುರಿಸಿದೆ ಗಾಳಿ

ಕಣ್ಣು ಹುಣ್ಣಿಮೆ
ತುಟಿಯಲ್ಲಿ ಚಿಟ್ಟೆ
ಬಿಚ್ಚಿದರೆ ಬಿಗಿದ ತುರುಬು
ಚುಕ್ಕಿಗೂ ಗೊಂದಲ
ತೊಟ್ಟದ್ದು ಬಣ್ಣದ ಬಟ್ಟೆಗಳೇ?
ಸತ್ಯವೇ ಹೊತ್ತ ನಗು?
ದಿಟ್ಟಿಯಲ್ಲಿದ್ದಿದ್ದು ಗಟ್ಟಿಯೆ?
ಕೊರಳು ಹೊರಡಿಸಿದ್ದು
ಎದೆಯ ಮಾತೇ?
ನೋಡಬಹುದು ಹೊಕ್ಕು
ಕಳೆಯಬಹುದೇ ಸಿಕ್ಕು?

ಹೋಗಿ ಬಂದವರು
ಹೋಗಿಯೂ ಉಳಿದವರು
ಹೋಗದೆ ಕುಂತವರು
ಕುಂತು ಹೊರಟವರು
ಕುಂತೆದ್ದು ಹೊರಡುವವರು
ಇರುವಂತೆ ನಟಿಸುವವರು
ಹೊರಟೇ ಹೋದವರು
ಹೊರಟು ಉಳಿವವರು
ಉಳಿದೂ ತಿಳಿಯದಂತಿರುವವರು
ಉಳಿಯಲೇ ಎನುವವರು
ಬರುವಾಸೆ ಇರುವವರು
ಬಾರದೇ ಬಯಸಿದವರು
ವಿಳಾಸ ಕಳೆದವರು
ವಿಳಾಸ ಕಳೆವವರು
ಕಳೆದೇ ಹೋದವರು
ಕರೆದರೆ ಕೆಪ್ಪಿನವರು
ಕಣ್ಣು ತಪ್ಪಿಸಿದವರು
ಕನವರಿಸಿ ಕಾದವರು
ಕನಸಲ್ಲೇ ಮುಗಿದವರು
ಬಯಸಿಯೂ ಬರದವರು

ಹೊಂದಿಕೆಯೇ ತ್ರಾಸು
ಹೊಸದಕ್ಕೆ ಹೂಹಾಸು

‍ಲೇಖಕರು avadhi

10 February, 2023

1 Comment

  1. ಸಂಗೀತ ರವಿರಾಜ್

    ಒಳ್ಳೆಯ ಕವಿತೆ ನಂಡಿನಿಯವರೆ
    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading