
ಬಿದಲೋಟಿ ರಂಗನಾಥ್
ಹುತ್ತವೊಂದು ಕತ್ತು ಚಾಚಿ
ಮುಗಿಲ ಬೆಳಕು ಸುರಿದು
ಕೋವಿ ಕೋವಿಯಲು ಹಾಲ್ಬೆಳದಿಂಗಳ ನೊರೆ
ಬಾಣಂತಿಯೊಬ್ಬಳು ಎದೆ ಹಾಲ ಹಿಂಡಿ
ಮೊಲೆ ತೊಟ್ಟಿಗೆ ತುಟಿಕಚ್ಚುವ ಕೂಸ ಕರೆದಳು
ಮಾತಿಲ್ಲದ ಆ ಕೂಸು
ನವಿಲ ಹೆಜ್ಜೆಯನು ಬೊಗಸೆಗೆ ತುಂಬಿ
ಮೋಡದ ಕಣ್ಣಂಚಲಿ
ಬೆಳಕಿನ ರಂಗೋಲಿ ಬಿಡಿಸುವಾಗ
ಹುತ್ತವೇ ಹದ್ದಾಗಿ ಮಗುವ ಕುಕ್ಕುವ ಪರಿಗೆ

ನೆಲವೇ ಮಮ್ಮಲ ಮರುಗಿ ಒಡೆಯಿತು
ಕಣ್ಣೀರ ಕೋಡಿ
ಉರಿವ ಪಂಜು ಮುಗ್ಗರಿಸಿ ಬಿದ್ದು
ಕತ್ತಲ ರಾತ್ರಿಯಲಿ ಕಲ್ಲುಕೋಳಿ ಕೂಗಿ
ಬಸವನುಡ್ಡರಿಸಿ ಬಾಲವೆತ್ತಿ
ಬೆಳದಿಂಗಳ ಕೆಡವಿ
ಜೀವ ಬಿಟ್ಟ ನೋವಿಗೆ
ಮೌನಗೊಂಡವು ಕರುಳು
ಊಸೂರೆಂದವು ಜೀವದನಿ
ಧ್ವನಿಯಿಲ್ಲದ ಕಿವಿಯೊಳಗೆ
ಮುತ್ತು ಸುರಿವ ಶಬ್ದ
ಮುಟ್ಟಾದ ಮುತ್ತೈದೆ ನಕ್ಕಾಳೋ
ಕಾಲದಂಚನು ಕೈಯಲ್ಲಿ ಹಿಡಿದು
ಸುಖದ ನೆಲದೊಳು ಗರ್ಭ ಕಟ್ಟಿ

ಸವತಿಯ ಮಚ್ಚರಕೆಚ್ಚರವಾಗಿ
ಹಡೆದಾಳೋ ನಂಟಿಲ್ಲದ ಗಂಟಾದ ಮಕ್ಕಳನ್ನು
ಹಾಲು ದಕ್ಕದ ಮಗುವು
ಹುತ್ತದ ಕೋವಿಯಲಿ ಉಕ್ಕುವ ಹಾಲಿಗೆ
ನಾಲಿಗೆ ಚಾಚಿ ಬೆಸೆಯಿತು ಗರ್ಭ ಸಂಬಂಧ.






0 Comments