– ವಿದ್ಯಾರಶ್ಮಿ ಪೆಲತ್ತಡ್ಕ
ಬೇಸಿಗೆ ರಜಾದಲ್ಲಿ ಚಿಕ್ಕವರಾದ ನಮಗೆಲ್ಲಾ ತೋಟ, ಗುಡ್ಡ ಅನ್ನುತ್ತಾ ತಿರುಗಾಡುವುದು, ಸಿಕ್ಕಿ ಸಿಕ್ಕಿದ ಹಣ್ಣುಗಳನ್ನೆಲ್ಲಾ ಮೆಲ್ಲುವುದೇ ಕೆಲಸ. ಜೊತೆಗೆ ಗೇರುಗುಡ್ಡಕ್ಕೆ ಹೋಗಿ ಗೇರುಬೀಜಗಳನ್ನು ಒಂದೂ ಬಿಡದಂತೆ ಹೆಕ್ಕಿ ತರುವ ಕಾಯಕವೂ ಇತ್ತೆನ್ನಿ. ಏನೇ ಆದರೂ ಇದೆಲ್ಲವೂ ನಮಗೆ ಮಜಾ ಕೊಡುವ ವಿಷಯಗಳು.
ಆದರೆ, ಅಮ್ಮಂದಿರಿಗೆ ಮಾತ್ರ ಹಾಗಲ್ಲ. ಈ ಕಾಲದಲ್ಲಾಗುವ ಸಕಲ ಕಾಯಿ, ಹಣ್ಣುಗಳಿಂದೆಲ್ಲಾ ಬಗೆಬಗೆಯ ಖಾದ್ಯಗಳನ್ನು ತಯಾರು ಮಾಡಿ ಮುಂದಿನ ಒಂದು ವರ್ಷಕ್ಕೆ ಕಾದಿರಿಸುವ ಜವಾಬ್ದಾರಿ. ಉಪ್ಪಿನಕಾಯಿ, ಹಪ್ಪಳ, ಸೆಂಡಿಗೆ ತಯಾರಿ, ಹಲಸಿನ ತೊಳೆ, ಮಾವಿನಕಾಯಿಯನ್ನು ಉಪ್ಪಿನಲ್ಲಿ ಹಾಕಿಡುವುದು ಹೀಗೆ ಮನೆಮನೆಯ ಹೆಣ್ಮಕ್ಕಳೂ ನಖಶಿಖಾಂತ ಬಿಝಿ. ಅವರ ಈ ಕೆಲಸದ ಮಧ್ಯದಲ್ಲಿ ನಮ್ಮಂತಹ ಚಿಲ್ಲರೆಗಳೆಲ್ಲಾದರೂ ಮೂಗು ತೂರಿಸಿಕೊಂಡು ಹೋದರಂತೂ ಅವರಿಗೆ ಎತ್ತಿ ಕುಕ್ಕುವಷ್ಟು ಸಿಡುಕು. ಆದರೂ ಅವರ ಈ ಹಗರಣಗಳ ನಡುವೆ ನಾವೂ ಒಮ್ಮೆ ತಲೆತೋರಿಸಿ ಬೈಸಿಕೊಂಡು ಬರದಿದ್ದರೆ ನಮಗೂ ನಿದ್ದೆ ಬರದು.
ಅದರಲ್ಲೂ ಮನೆಯ ಮಕ್ಕಳ ಪರಿವಾರದಲ್ಲೆಲ್ಲ ಚಿಕ್ಕವಳಾದ ನನಗೆ, ಹಪ್ಪಳ ಮಾಡುವ ದಿನ ಇರೋ ಮಕ್ಕಳೆಲ್ಲ ಬನ್ನಿ ಅಂತಂದು ಕರೆಯುವ ಅಮ್ಮ-ಅಜ್ಜಿಯರು ಉಪ್ಪಿನಕಾಯಿ ಮಾಡುವಾಗ ಏಕೆ ಕರೆಯುವುದಿಲ್ಲ ಅನ್ನೋ ಕುತೂಹಲ. ಹಪ್ಪಳದ ಹಿಟ್ಟನ್ನು ಕೊಂಚ ಕೊಂಚವೇ ತಿನ್ನುತ್ತಾ ಹಪ್ಪಳ ಒತ್ತುವ, ಅತ್ತಿತ್ತ ಓಡಾಡಿ ಅದನ್ನು ಚಾಪೆಯಲ್ಲಿ ಹಾಕುವವರಿಗೆ ಎಣ್ಣೆ ಇತ್ಯಾದಿ ಬೇಕಾದುದನ್ನು ಕೈಗೆ ತಂದುಕೊಡುವ ಪರಿಕರ್ಮದ ಕೆಲಸವೆಂದರೆ ನನಗಿಷ್ಟ. ಆದರೆ ಉಪ್ಪಿನಕಾಯಿ ಹಾಕುವಾಗ ಹಾಗೆಯೇ ಉಪ್ಪಿನಲ್ಲಿ ಹಾಕಿ ಕೊಂಚ ಬಾಡಿರುವ ಮಾವನ್ನೂ ತಿನ್ನಬಹುದೆನ್ನುವುದು ನನ್ನ ಲೆಕ್ಕಾಚಾರ. ಅದಲ್ಲದೇ ನಾಲ್ಕೈದು ವರ್ಷದವಳಿದ್ದಾಗಲೇ ಖಾರದ ಉಪ್ಪಿನಕಾಯಿಯನ್ನು ಹಾಗೇ ಸವಿಸವಿದು ತಿಂದ ಉಪ್ಪಿನಕಾಯಿ ಭಕ್ತೆ ನಾನು. ಹೀಗಾಗಿ ಅದರ ತಯಾರಿಯಲ್ಲಿ ನಾನೂ ಪಾಲ್ಗೊಳ್ಳಬೇಕೆನ್ನುವುದು ನನ್ನ ಬಯಕೆ. ಆದರೆ ಅಮ್ಮ ಸದಾ ಈ ಕೆಲಸದಿಂದ ನನ್ನನ್ನು ದೂರವಿಟ್ಟು ನನ್ನ ಆಸೆಗೆ ತಣ್ಣೀರೆರಚುವಾಗ ಸಿಟ್ಟೇ ಬರುತ್ತಿತ್ತು. ಆದರೇನು ಮಾಡುವುದು, ಅಮ್ಮ ಹೇಳಿದಂತೆ ಕೇಳಲೇಬೇಕಿತ್ತು. ಇಲ್ಲವಾದರೆ ಮರುದಿನದಿಂದ ಉಪ್ಪಿನಕಾಯಿ ಬಂದ್. ಊಟಕ್ಕೊಂದು ಮಿಡಿ, ಊಟ ಮಾಡಿ ಎದ್ದೇಳುವಾಗ ಕೈಯಲ್ಲಿ ಇನ್ನೊಂದು ಮಿಡಿ ಬೇಕಾಗುವ ನನಗೆ ಈ ಪರಿಯ ಶಿಕ್ಷೆಯನ್ನು ತಾಳುವುದೂ ಅಸಾಧ್ಯ. ಹಾಗಾಗಿ ಪ್ರತಿ ಬೇಸಗೆ ರಜೆಯಲ್ಲಿಯೂ ಆಸೆ ಅದುಮಿಕೊಂಡು ಸುಮ್ಮನಿರುತ್ತಿದ್ದೆ.
ಆದರೆ, ಆ ವರ್ಷ ಮಾತ್ರ ನನ್ನ ಉಪ್ಪಿನಕಾಯಿ ತಯಾರಿಯ ವೀಕ್ಷಣಾ ಕಾರ್ಯಕ್ಕೆ ಬಲ ಬಂದಿತ್ತು. ನನ್ನಿಂದ ಎರಡು ವರ್ಷ ಚಿಕ್ಕವಳಾದ ಚಿಕ್ಕಮ್ಮನ ಮಗಳು ಸುಷ್ಮಾ ಆ ರಜೆಯಲ್ಲಿ ಮನೆಗೆ ಬಂದಿದ್ದಳು. ಅವಳಿಗೂ ಉಪ್ಪಿನಕಾಯಿ ಅಂದರೆ ಪ್ರೀತಿಯೇ. ಮೇಕಿಂಗ್ ಆಫ್ ಉಪ್ಪಿನಕಾಯಿಯಲ್ಲಿ ಪಾಲ್ಗೊಳ್ಳುವ ನನ್ನ ವರ್ಷಗಳ ಬಯಕೆಯನ್ನು ಅವಳ ಮುಂದಿಟ್ಟೆ. ಅವಳಲ್ಲೂ ಈ ಬಗ್ಗೆ ಕುತೂಹಲ ಮೊಳೆಯಿತು. ಸರಿ, ಮೊದಲು ಅಮ್ಮನಲ್ಲಿ ನೇರವಾಗಿ ಕೇಳಿಯೇಬಿಟ್ಟೆವು, ‘ಅಮ್ಮಾ, ನಾವೂ ಉಪ್ಪಿನಕಾಯಿ ಮಾಡೋಕೆ ಸೇರ್ತೀವಮ್ಮಾ’. ಊಹೂಂ, ಅಮ್ಮನಿಗೆ ಈ ಬಾರಿಯೂ ಮನಸ್ಸು ಕರಗಲಿಲ್ಲ. ‘ಎಂತ, ಇಷ್ಟು ಸಣ್ಣ ಮಕ್ಳು ಉಪ್ಪಿನಕಾಯಿ ಮಾಡೋಕೆ ಸೇರೋದಾ? ಇನ್ನೂ ಒಂಭತ್ತು ಹತ್ತು ವರ್ಷದ ಮಕ್ಳು ನೀವು, ನೆಟ್ಟಗೆ ನಿಮ್ಮ ಕೆಲ್ಸ ಮಾಡ್ಕೊಳ್ಳೋಕೆ ಬರೋದಿಲ್ಲ ನಿಮ್ಗೆ. ಇನ್ನು ಉಪ್ಪಿನಕಾಯಿ ಬೇರೆ ಮಾಡ್ತೀರಾ? ಬೇಡಪ್ಪಾ, ನೀವಿಲ್ಲಿ ಬಂದು ಅಲ್ಲಿ ಇಲ್ಲಿ ಕೈಹಾಕಿ ಕಣ್ಣಿಗೆ ಕೈ ತಾಗಿಸ್ಕೊಂಡು ಉರಿ ಉರಿ ಅಂತ ಅಳೋಕೆ ಶುರು ಮಾಡಿದ್ರೆ ಸಮಾಧಾನ ಮಾಡೋಕೆ ನನ್ನ ಕೈಲಾಗೋದಿಲ್ಲಪ್ಪ. ಎಡಗೈ ಬಲಗೈ ಅನ್ನೋ ಭೇದವೂ ನಿಮ್ಗಿಲ್ಲ, ಎಲ್ಲೆಲ್ಲೋ ಮುಟ್ಟಿ ಹಾಳು ಮಾಡಿದ್ರೆ ನೋಡಿ ನಿಮ್ಮನ್ನು.. ಇವತ್ತು ಮಧ್ಯಾಹ್ನ ಈ ಕಡೆ ನಿಮ್ಮ ತಲೆಕಂಡ್ರೆ ನೋಡಿ…’ ಅಮ್ಮನ ರೂಲ್ ಯಾಕೋ ಸಡಿಲವಾಗೋ ಲಕ್ಷಣ ಕಾಣ್ತಿಲ್ಲ ಅಂದುಕೊಳ್ಳುತ್ತಿರುವಾಗ್ಲೇ ಸುಷ್ಮಾಗೆ ಒಂದು ಡೌಟ್ ಬಂತು. ‘ಏನೇ ಅದು, ದೊಡ್ಡಮ್ಮ ಹೇಳಿದ್ದು ಎಡಗೈ ಬಲಗೈ ಅಂತ? ಹಾಗಾದ್ರೆ ಉಪ್ಪಿನಕಾಯಿ ಮಾಡೋವಾಗ ಎಡಗೈ ಉಪಯೋಗ್ಸೋದೇ ಇಲ್ವಾ?’ ಅವಳ ಸಂದೇಹಕ್ಕೆ ನಾನೂ ಬೆಂಬಲಿಸಿದೆ, ‘ಹೌದಲ್ಲ, ಒಂದೇ ಕೈಯಲ್ಲಿ ಉಪ್ಪಿನಕಾಯಿ ಮಾಡೋದು ಹೇಗೆ? ಈ ಬಾರಿಯೇನೋ ಚಿಕ್ಕಮ್ಮನೂ ಅಮ್ಮನ ಜೊತೆಗಿದ್ದಾರೆ. ಆದ್ರೆ ಹೋದ ವರ್ಷ ಅಮ್ಮ ಒಬ್ಬರೇ ಉಪ್ಪಿನಕಾಯಿ ಮಾಡಿದ್ದರಲ್ಲ? ಒಂದೇ ಕೈಯಲ್ಲಿ ಹೇಗೆ ಮಾಡಿರಬಹುದು?’ ನನಗೂ ತೋಚಲಿಲ್ಲ. ಸರಿ, ಇಬ್ಬರೂ ಒಂದು ಪ್ಲಾನ್ ಮಾಡಿದೆವು. ಒಳಜಗಲಿಯ ಬಾಗಿಲ ಸಂದಿಯಲ್ಲಿ ಕೂತು ಉಪ್ಪಿನಕಾಯಿ ತಯಾರಿಯನ್ನು ಪೂರ್ತಿ ನೋಡೋದು. ಉಪ್ಪಿನಕಾಯಿ ಮಾಡಿ ಮುಗಿಸುವಷ್ಟು ಹೊತ್ತೂ ಯಾರೂ ಒಳಬರುವುದಿಲ್ಲ ಅನ್ನೋದು ಗ್ಯಾರಂಟಿ. ಹೀಗಾಗಿ ಕತ್ತಲಲ್ಲಿ ಕುಳಿತ ನಮ್ಮನ್ನು ನೋಡುವವರಂತೂ ಯಾರೂ ಇಲ್ಲ, ಅಣ್ಣಂದಿರೆಲ್ಲಾ ಹೊಳೆಬದಿಗೆ ಹೋಗಿರುತ್ತಾರೆ ಅನ್ನುವುದೂ ಗೊತ್ತಿತ್ತು.
ಸರಿ, ಎಲ್ಲರಿಗೂ ಬೇಗಬೇಗನೇ ಊಟ ಹಾಕಿ ಅಮ್ಮ, ಚಿಕ್ಕಮ್ಮಂದಿರು ಉಪ್ಪಿನಕಾಯಿಯ ತಯಾರಿಗೆ ಕುಳಿತರು. ಅಮ್ಮನಿಗೆ ಅದೇನು ಪಾಪ ಎನಿಸಿತೋ ಏನೋ, ತಾನೇ ಕರೆದು ನಮ್ಮಿಬ್ಬರ ಕೈಯಲ್ಲೂ ಎರಡೆರಡು ಮಾವಿನ ಹೋಳುಗಳನ್ನು ಇಟ್ಟು, ಹೋಗಿ ಆಡಿಕೊಳ್ಳಿ ಅಂತ ಕಳಿಸಿದಳು. ಅದಾಗಲೇ ಉಪ್ಪು ನೀರಲ್ಲಿ ತೊಳೆದು ಬಿಸಿಲಿನಲ್ಲಿ ಹಾಕಿ ಬಟ್ಟೆ ಮುಚ್ಚಿ ಒಣಗಿಸಿದ ಆ ಹೋಳುಗಳನ್ನು ಬಾಯಲ್ಲಿ ಹಾಕುತ್ತಿದ್ದಂತೆ ‘ಆಹಾ’ ಎನ್ನಿಸಿತು. ಊಂ, ಇನ್ನು ಇದಕ್ಕೆ ಖಾರ ಅರೆದು ಹಾಕಿದಾಗ ಅದೆಷ್ಟು ರುಚಿ ಇರುತ್ತದೋ ಅಂತ ಕಲ್ಪಿಸಿಕೊಂಡೇ ಬಾಗಿಲ ಮರೆಯಲ್ಲಿ ಕುಳಿತೆವು. ಉಪ್ಪಿನಕಾಯಿಗೆ ಬೇಕಾದ ಸಾಮಾನನ್ನೆಲ್ಲ ರೆಡಿ ಮಾಡಿಟ್ಟುಕೊಂಡರು ಅಮ್ಮ, ಚಿಕ್ಕಮ್ಮ. ಮಾವಿನ ಹೋಳು, ಕಾಯಿಸಿ ಆರಿಸಿದ ಉಪ್ಪು ನೀರು, ಮಸಾಲೆ ರುಬ್ಬಲು ಬೇಕಾದ ಸಾಸಿವೆ, ಅರಿಶಿನ, ಒಣಮೆಣಸು, ಉಪ್ಪು… ಎಲ್ಲವೂ. ಎಲ್ಲವನ್ನೂ ಕುತೂಹಲದಿಂದ ನೋಡುತ್ತಿದ್ದೆವು ನಾವಿಬ್ಬರೂ, ಉಪ್ಪಿನಕಾಯಿ ಮಾಡೋ ವಿಧಾನವನ್ನು ನಮ್ಮ ‘ಮನೆಯಾಟ’ದಲ್ಲಿ ಯಥಾವತ್ತಾಗಿ ಪಾಲಿಸುವ ಕನಸು ಕಾಣುತ್ತಾ…
ಈ ಮಧ್ಯದಲ್ಲೊಮ್ಮೆ ಚಿಕ್ಕಮ್ಮ ಸುಷ್ಮಾಳ ಅಪ್ಪ ಕರೆದರೆಂದು ಎದ್ದು ಹೊರಹೋದರು. ಅಮ್ಮ ಕೆಲಸದವಳಿಗೆ ಮಜ್ಜಿಗೆ ನೀರು ಕೊಡಲೆಂದು ತಾನೂ ಎದ್ದಳು. ಅಲ್ಲಿ ಯಾರೂ ಇಲ್ಲದ್ದು ಕಂಡು ನಮಗಿಬ್ಬರಿಗೂ ಮಾವಿನ ಹೋಳು ತಿನ್ನುವ ಚಪಲ ಸೆಳೆಯಿತು. ನಾನು ಮೆತ್ತಗೆದ್ದು ಮಾವಿನ ಹೋಳು ಇಟ್ಟಲ್ಲಿಗೆ ನೆಗೆದು ನಾಲ್ಕು ಹೋಳು ಕೈಗೆತ್ತಿಕೊಂಡು ಓಡಿ ಬರುವಾಗ ಪಾತ್ರೆ ಕಾಲಿಗೆ ತಾಗಿ ಉಪ್ಪುನೀರು ಕೊಂಚ ಚೆಲ್ಲಿತು. ನಾನು ಗಾಬರಿಯಾಗಿ ಪಾತ್ರೆಯನ್ನು ನೇರವಾಗಿಟ್ಟು ಸೀದಾ ಹೊರಗೆ ಬಂದುಬಿಟ್ಟೆ. ನಾನು ಹೊರಗೋಡಿದ್ದು ಕಂಡು ಸುಷ್ಮಾಳೂ ಮರೆಯಿಂದೆದ್ದು ನನ್ನ ಹಿಂದೆ ಬಂದಳು.

ಅಷ್ಟರಲ್ಲಿ ಅಮ್ಮ ‘ಯಾರದು’ ಅನ್ನುತ್ತ ಬಂದದ್ದು ಕೇಳಿಸಿತು. ಇನ್ನು ಇಲ್ಲಿ ನಿಂತರೆ ಉಳಿಗಾಲವಿಲ್ಲ ಅಂದುಕೊಂಡು ನಾವಿಬ್ಬರೂ ಮೆತ್ತಗೆ ಹೊಳೆಯ ಬದಿಗೆ ಪರಾರಿಯಾದೆವು. ನಾವು ಮಾಡಿದ್ದು ಅಮ್ಮನಿಗೆ ಇನ್ನೂ ಗೊತ್ತಾಗಿದೆಯೋ ಇಲ್ಲವೋ ಎಂದು ತಿಳಿಯಲಿಲ್ಲವಾದ್ದರಿಂದ ನಮ್ಮ ಈ ಸಾಹಸಕೃತ್ಯವನ್ನು ಯಾರಲ್ಲೂ ಹೇಳುವುದು ಬೇಡ ಅಂದುಕೊಂಡು ಸುಮ್ಮನಾದೆವು. ಇಳಿಸಂಜೆಗೆ ಹೆದರಿ ಹೆದರಿಯೇ ಮತ್ತೆ ಮನೆಗೆ ಕಾಲಿಟ್ಟಾಗಲೂ ಯಾರೂ ಉಪ್ಪು ನೀರಿನ ಅವಾಂತರದ ಬಗ್ಗೆ ಕೇಳಲಿಲ್ಲವಾದ್ದರಿಂದ ಬಹುಶಃ ಯಾರಿಗೂ ನಮ್ಮ ವಿಷಯ ತಿಳಿಯಲಿಲ್ಲವೆಂದು ಒಳಗೊಳಗೇ ಖುಷಿಯಾಗಿ ನಿಟ್ಟುಸಿರು ಬಿಟ್ಟೆವು. ರಾತ್ರಿ ಬೆಕ್ಕಿಗೆ ಅನ್ನ ಹಾಕುವಾಗಲೂ ಅಮ್ಮ, ‘ಹೂಂ, ನಿಂಗೆ ಹಾಲು ಹಾಕೋದಿಲ್ಲ, ನೀನಿದ್ರೆ ಉಪಕಾರಕ್ಕಿಂತ ಉಪದ್ರವವೇ ಜಾಸ್ತಿ’ ಅನ್ನುತ್ತ ಸಿಡುಕಿದ್ದು ಕೇಳಿ ಉಪ್ಪು ನೀರು ಚೆಲ್ಲಿದ್ದಕ್ಕೆ ಅಮ್ಮ ಬೆಕ್ಕಿನ ಮೇಲೆಯೇ ಸಂಶಯಪಟ್ಟಿದ್ದಾರೆ ಅಂದುಕೊಂಡು ಸದ್ಯ ಬಚಾವಾದೆವು ಅಂತ ಇನ್ನಷ್ಟು ನಿಶ್ಚಿಂತೆಯಿಂದ ನಿದ್ದೆ ಮಾಡಿದೆವು.
ಇದಾದ ಮರುದಿನವೇ ನಮ್ಮ ಮನೆಯಲ್ಲಿ ನೆರೆದಿದ್ದ ಮಕ್ಕಳ ತಂಡ ಹಾಗೂ ಅಕ್ಕಪಕ್ಕದ ಮನೆಯ ಮಕ್ಕಳೆಲ್ಲರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವ ಉಮೇದು ನನ್ನ ಅಣ್ಣಂದಿರಿಗೆ ಬಂತು. ಸಂಜೆಹೊತ್ತು ಹೊಳೆಬದಿಯಲ್ಲಿ ಏರ್ಪಾಡಾದ ಈ ಕಾರ್ಯಕ್ರಮದಲ್ಲಿ ಹಾಡು, ಭಾಷಣ, ಮಿಮಿಕ್ರಿ ಸ್ಪರ್ಧೆಗಳೆಲ್ಲ ಇದ್ದವು. ಕೊನೆಕ್ಷಣದಲ್ಲಿ ಆಶುಭಾಷಣ ಸ್ಪರ್ಧೆಯನ್ನೂ ಯಾರೋ ಸೇರಿಸಿದರು. ಹಾಡುವ ಸ್ಪರ್ಧೆಗೆ ಹೆಸರು ಕೊಟ್ಟಿದ್ದ ನಾನು ಇದಕ್ಕೂ ಸೇರಿದೆ. ದೊಡ್ಡ ಹುಡುಗರೆಲ್ಲ ಸ್ಪರ್ಧೆಗೆ ತಯಾರಿ ಮಾಡುತ್ತಿದ್ದಾಗ ಅಲ್ಲೇ ಮಾವಿನಕಾಯಿ ಜಗಿಯುತ್ತ ಸುತ್ತಾಡುತ್ತಿದ್ದ ನಮ್ಮ ಪಟಾಲಾಂ ಅನ್ನು ಕರೆದು ಎಲ್ಲರೂ ನಿಮಗಿಷ್ಟವಾದ ಒಂದು ಪದಾರ್ಥದ ಹೆಸರು ಹೇಳಿದ ಅಂದರು. ಎಲ್ಲರೂ ಒಂದೊಂದು ಹೇಳಿದರು. ನಾನೂ ‘ಉಪ್ಪಿನಕಾಯಿ’ ಅಂದುಬಿಟ್ಟೆ.
ಸ್ಪರ್ಧೆಗಳಿಗೆ ನನ್ನ ಅಪ್ಪ, ಸುಷ್ಮಾಳ ಅಪ್ಪ, ಪಕ್ಕದ ಮನೆ ಮನೋಜನ ತಂದೆ – ಹೀಗೆ ಹಿರಿಯರನ್ನು ತೀರ್ಪುಗಾರರನ್ನಾಗಿ ಮಾಡಲಾಗಿತ್ತು. ಹಾಡು ಹಾಡಿ ಆಯಿತು. ಎರಡನೆಯದು ಆಶುಭಾಷಣ. ಒಂದಿಬ್ಬರು ಮಾತನಾಡಿದ ಬಳಿಕ ನನ್ನ ಸರದಿ. ಚೀಟಿ ಹೆಕ್ಕಿದರೆ ‘ಉಪ್ಪಿನಕಾಯಿ’ ಎಂದೇ ಬರಬೇಕೇ? ಅಚ್ಚರಿ, ಜೊತೆಗೇ ಖುಷಿ. ಹೇಗಿದ್ದರೂ ನನಗೆ ಈ ವಿಷಯದಲ್ಲಿ ಉಳಿದವರಿಗಿಂತ ಹೆಚ್ಚಿನ ಪಾಂಡಿತ್ಯವಿತ್ತಲ್ಲ! ಸರಿ, ಆತ್ಮವಿಶ್ವಾಸದಿಂದಲೇ ಮಾತಿಗೆ ಶುರುಮಾಡಿದೆ. ಉಪ್ಪಿನಕಾಯಿಯ ರುಚಿಯ ವರ್ಣನೆ, ಊಟಕ್ಕೂ, ಊಟವಾದ ಮೇಲೆಯೂ ತಿನ್ನಬಹುದಾದ ವಿಶೇಷತೆ (ಊಟವಾದ ಮೇಲೆ ತಿನ್ನುತ್ತಿದ್ದವರು ನಾನು ಮತ್ತು ಸುಷ್ಮಾ ಮಾತ್ರ ಇರಬೇಕು)ಯನ್ನೆಲ್ಲ ಹೇಳಿ ಅದನ್ನು ಮಾಡುವ ವಿಧಾನವನ್ನೂ ಹೇಳಲು ತೊಡಗಿದೆ.
‘ಅಮ್ಮ ಮೊದಲು ಮಾವಿನ ಹೋಳುಗಳನ್ನು ಬಿಸಿಲಿನಲ್ಲಿ ಒಣಗಿಸಿಕೊಳ್ಳುತ್ತಾರೆ. ಆಗಲೂ ಇದನ್ನು ತಿನ್ನಲು ಚೆನ್ನಾಗಿರುತ್ತದೆ. ಮರುದಿನ ಮಸಾಲೆ ಅರೆಯುತ್ತಾರೆ..’ ಅನ್ನುತ್ತ ಏನೋ ಅನ್ನುವಷ್ಟರಲ್ಲಿ ಹಿಂದಿನ ದಿನ ಉಪ್ಪು ನೀರು ಚೆಲ್ಲಿದ್ದು, ಉಪ್ಪಿನಕಾಯಿ ತಯಾರಿಕೆ ನೋಡುವುದನ್ನು ಬಿಟ್ಟು ಅರ್ಧದಲ್ಲೇ ಓಡಿಬಂದದ್ದು ಎಲ್ಲ ನೆನಪಾಗಿ ತಲೆಯೆಲ್ಲ ಕಲಸುಮೇಲೋಗರವಾಯಿತು. ಬೇರೇನೂ ಹೇಳಲು ತೋಚದೇ, ‘ಉಪ್ಪಿನಕಾಯಿ ಮಾಡುವಾಗ ಮನೆಯಲ್ಲಿ ಬೆಕ್ಕು ಇರದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಮನೆಯವರು ಯಾರೂ ಇಲ್ಲದ ಹೊತ್ತು ನೋಡಿ ಅದು ಬಂದು ಉಪ್ಪಿನಕಾಯಿ ಮಾಡಲು ಇಟ್ಟುಕೊಂಡ ಉಪ್ಪುನೀರನ್ನು ಚೆಲ್ಲಬಹುದು. ಇದಲ್ಲದೆ ಉಪ್ಪಿನಕಾಯಿ ಮಾಡುವಾಗ ಎಡಗೈ ಹಾಕುವಂತಿಲ್ಲ ಎಂದು ಹೇಳುತ್ತಾರೆ. ಯಾಕೆಂದರೆ…’ ಅನ್ನುವಷ್ಟರಲ್ಲಿ ಕಾರಣ ತಿಳಿಯದೆ ಪೆಚ್ಚಾದೆ. ತೀರ್ಪುಗಾರರಾಗಿ ಕುಳಿತಿದ್ದ ಅಪ್ಪನ ಮುಖ ನೋಡಿದೆ. ‘ಊಂ, ಹೇಳು’ ಅಂದರು ಅಪ್ಪ. ಹೇಳುವುದಕ್ಕೇನೂ ತಿಳಿಯದೇ ಇನ್ನಷ್ಟು ಅವಮಾನವಾದಂತಾಗಿ ಕಣ್ಣು ತುಂಬ ನೀರು ತುಂಬಿ ಅಳುವುದಕ್ಕೆ ಶುರು ಮಾಡುತ್ತೇನೆನ್ನುವಾಗ ಬೆಲ್ ಹೊಡೆದು ಮಾನ ಉಳಿದಂತಾಯಿತು. ಆದರೂ ಎಲ್ಲರೆದರು ಹೋದ ಮರ್ಯಾದೆಗೆ ದುಃಖಿಸುತ್ತ ಒಬ್ಬಳೇ ತೋಟಕ್ಕೆ ಹೋಗಿ ಎಲ್ಲವೂ ಮುಗಿದ ಮೇಲೆ ಮತ್ತೆ ಮನೆಗೆ ಮರಳಿದೆ. ನೋಡಿದರೆ ‘ಎಲ್ಲಿ ಹೋಗಿದ್ಯೇ, ಆಶುಭಾಷಣ ಮಾಡೋದ್ರಲ್ಲಿ ಸೆಕೆಂಡ್ ಪ್ರೈಝ್ ಬಂದಿತ್ತಲ್ಲಾ, ತಗೊಳ್ಳೋಕೂ ಬರ್ಲಿಲ್ಲಾ..’ ಅನ್ನುತ್ತ ಎಲ್ಲರೂ ಕೇಳುವವರೇ.
ರಾತ್ರಿ ಊಟಕ್ಕೆ ಕುಳಿತಾಗ ಅಪ್ಪ ನನ್ನನ್ನು ಪಕ್ಕದಲ್ಲೇ ಕರೆದು ಕೂರಿಸಿಕೊಂಡರು. ‘ನೋಡಿದ್ಯೇನೇ, ಇವಳು ಉಪ್ಪಿನಕಾಯಿ ಬಗ್ಗೆ ಏನೆಲ್ಲಾ ಮಾತಾಡಿದ್ಲು ಅಂತ, ನೀನೂ ಕೇಳ್ಬೇಕಾಗಿತ್ತು..’ ಅಂದರು ಅಮ್ಮನಿಗೆ. ‘ಗೊತ್ತಾಯ್ತು, ಏನೇನು ಮಾತಾಡಿದ್ಯೇ?’ ಅಂದ್ರು ಅಮ್ಮ. ನಾನು ಏನೂ ಹೇಳಲಿಲ್ಲ. ಅಣ್ಣ ಕೇಳಿದ, ‘ಅಮ್ಮಾ, ಬೆಕ್ಕು ಬಂದು ಉಪ್ಪು ನೀರನ್ನು ಚೆಲ್ಲುತ್ತೆ ಅಂತೆಲ್ಲಾ ಹೇಳಿದ್ಲು ಇವ್ಳು. ಹೌದಾ, ಇವ್ಳಿಗೆ ಹೇಗೆ ಗೊತ್ತು ಇದೆಲ್ಲಾ?’
ಚಿಕ್ಕಮ್ಮನಿಗೆ ಅಚ್ಚರಿಯಾಗಿ, ‘ಹೌದಾ, ಹಾಗಂದ್ಲಾ ಇವ್ಳು? ನಿನ್ನೆ ನಾವಿಬ್ರೂ ಎಲ್ಲೋ ಎದ್ದು ಹೋಗಿ ವಾಪಸ್ ಬಂದಾಗ ಉಪ್ಪು ನೀರು ಚೆಲ್ಲಿತ್ತು. ಬೆಕ್ಕು ಚೆಲ್ಲಿದ್ದಾ ಅಥವಾ ಯಾರು ಚೆಲ್ಲಿದ್ದು ಅಂತ ಗೊತ್ತಾಗ್ಲಿಲ್ಲ’ ಅಂದರು ಚಿಕ್ಕಮ್ಮ. ‘ನಾವು ನೋಡಿದ್ವಿ ಅಮ್ಮಾ’ ಅಂದಳು ಸುಷ್ಮಾ ಅಷ್ಟರಲ್ಲಿ. ‘ನಿಮ್ಮಿಬ್ಬರನ್ನೂ ಆಟಕ್ಕೆ ಅಂತ ಕಳಿಸಿದ್ನಲ್ಲಾ ನಾನೇ. ಹೇಗೆ ನೋಡಿದ್ರಿ?’ ಅಂದಳು ಅಮ್ಮ.
‘ಅದೂ ದೊಡ್ಡಮ್ಮಾ, ನಾವಿಬ್ರೂ ಆಟಕ್ಕೆ ಹೋಗ್ಲಿಲ್ಲ. ಇಲ್ಲೇ ಬಾಗಿಲ ಸಂದೀಲಿ ಕೂತ್ಕೊಂಡು ನೋಡ್ತಾ ಇದ್ವಿ. ನೀವಿಬ್ರೂ ಎದ್ದು ಹೊರಗೆ ಹೋದ್ರಲ್ಲಾ, ಆಗ ಅಕ್ಕ ಎದ್ದು ಮಾವಿನ ಹೋಳು ತಗೊಳ್ಳೋಕೆ..’ ಅನ್ನುವಷ್ಟರಲ್ಲಿ ನಾನು ಬಾಯಿ ಹಾಕಿದೆ,
‘ಆಗ ಬೆಕ್ಕು ಬಂದು ಹಾರಿ ಉಪ್ಪು ನೀರನ್ನು ಚೆಲ್ಲಿಬಿಡ್ತು ಅಮ್ಮಾ’
ಅಮ್ಮನಿಗೆ ಯಾಕೋ ಸಂಶಯ ಬಂದು, ‘ಏನಾಯ್ತು ಸುಷ್ಮಾ, ನೀನೇ ಸರಿಯಾಗಿ ಹೇಳು’ ಅಂದಾಗ ಅವಳು ಸುಳ್ಳು ಹೇಳುವುದಕ್ಕೂ ಬಾರದೇ ಸತ್ಯವನ್ನೇ ಸರಿಯಾಗಿ ಒಪ್ಪಿಸಿದಳು. ಮುಗೀತು ಕಥೆ ಅಂದುಕೊಂಡು ಮತ್ತೆ ಅಳು ಬರುವಂತಾಯಿತು ನನಗೆ. ಆದರೂ ಧೈರ್ಯ ಮಾಡಿ ಅಪ್ಪನಿಗೇ ಮೊರೆಹೋಗಿ, ‘ಅದೂ ಅಪ್ಪಾ, ನಾನು ಬೇಕಂತ ಮಾಡಿದ್ದಲ್ಲ..’ ಅನ್ನುವಾಗ ಅಪ್ಪನೇ ಅಮ್ಮನಿಗೆ,
‘ನೋಡು, ಇನ್ಮೇಲೆ ನೀನು ಉಪ್ಪಿನಕಾಯಿ ಮಾಡುವಾಗ ಅವಳನ್ನೂ ಜೊತೆಗೆ ಕೂರಿಸ್ಕೋ. ಅಷ್ಟೊಂದು ಆಸೆಪಡ್ತಾಳೆ, ನೋಡಲಿ ಅವಳೂ. ಜೊತೆಗೆ ಅದೇನು ಎಡಗೈ ಬಳಸ್ಬಾರ್ದು ಅಂತ ಬೇರೆ ಹೇಳಿದ್ದೀಯಲ್ಲಾ, ಅದು ಯಾಕೆ ಅಂತಾನೂ ತಿಳಿಸಿ ಹೇಳು ಅವಳಿಗೆ’ ಅನ್ನುತ್ತ ಊಟ ಮುಗಿಸಿ ಎದ್ದು ಹೋದರು. ನಿಮ್ಮಂಥಾ ಮಕ್ಳೆಲ್ಲ ಬಂದು ಒದ್ದೆ ಕೈ ಹಾಕ್ಬಾದರ್ು, ಅದಕ್ಕೆ ನೀರು ಸೇರಿದ್ರೆ ಹುಳ ಆಗುತ್ತೆ ಅಂತ ಹಾಗೆ ಹೇಳ್ತೇವೆ ಮಾರಾಯ್ತಿ ಅಂತ ನಕ್ಕ ಅಮ್ಮ, ‘ಸರಿ, ಇನ್ಮೇಲೆ ಉಪ್ಪಿನಕಾಯಿ ಹಾಕೋವಾಗ ಬಂದು ಸುಮ್ಮನೇ ನೋಡ್ತಾ ಕೂತ್ಕೋಬೇಕು, ಆಯ್ತಾ’ ಅಂದರು ನನ್ನನ್ನೂ ಸುಷ್ಮಾಳನ್ನೂ ನೋಡಿ. ನನ್ನ ಕಣ್ಣೀರು ಅಲ್ಲೇ ಇಂಗಿ ನಗೆಯರಳಿತ್ತು.






baayi yalli neeerurisuvantha baraha..badukina kshanagalannu tivravagi anubhavisvudendare idhene! apyayamaavada lekhana…uppina kaayigagi kaayuvantaagide..
sumadhura sundara nenapu
ಬಾಲ್ಯವನ್ನು ತೀವ್ರವಾಗಿ ಜ್ಞಾಪಿಸಿದ ಸರಳ ಸುಂದರ ಲೇಖನ ನಿಮ್ಮದು. ಅಂದಹಾಗೆ, ಊಟ ಮುಗಿದಾದಮೇಲೆ ಅಮ್ಮನನ್ನು ಕಾಡಿ ಬೇಡಿ ಪಡೆದ ಮಾವಿನ / ನೆಲ್ಲಿಕಾಯಿ ಉಪ್ಪಿನಕಾಯಿಯ ಹೋಳನ್ನು, ಬಾಯಲ್ಲಿ ಚಪ್ಪರಿಸುತ್ತಾ ಚೀಪುತ್ತಿದ್ದಾಗ ಸಿಗುತ್ತಿದ್ದ ಆ ಸಂತೋಷ ಬ್ರಹ್ಮಾನಂದಕ್ಕಿಂತಾ ಮಿಗಿಲೇನೋ! ಇಂದಿಗೂ ಊಟದ ಸವಿ ಹೆಚ್ಚಿಸಲು ಅದರ ಸ್ವರ್ಗಸದೃಶ ರುಚಿಯ ನೆನಪಷ್ಟೇ ಸಾಕು ಅಂತನ್ನಿಸುವ ನನಗೆ, ಮುದ ನೀಡಿದ ಚೆಂದದ ಬರಹ! ಧನ್ಯವಾದಗಳು.
ಸೊಗಸಾದ ನಿರೂಪಣೆ,ಹೃದ್ಯ ಶೈಲಿ,ಬಾಲ್ಯಕ್ಕೆ ಕೊಂಡ್ಯೊಯುವ ನೆನಪುಗಳ ಸರಮಾಲೆ..ಲೇಖನ ಮುಂದುವರೆಯಲಿ..
ನನ್ನ ಮೋದೂರಜ್ಜ ಊಟ ಮಾಡುವಾಗ ಸರಿಯಾಗಿ ಜಗಿದು ತಿಂದ ಮಾವಿನ ಮಿಡಿ ಉಪ್ಪಿನಕಾಯಿಯನ್ನು ಊಟವಾದನಂತರ ಇಡಿಯಾಗಿ ಹೊಕ್ಕುಳಿನಿಂದ ತೆಗೆದು ಕೊಡುತ್ತಿದ್ದದ್ದು, ಪುಳಿಂಚ ರಾಮಯ್ಯ ಶೆಟ್ರು ಉಪ್ಪಿನಕಾಯಿ ಬಯಕೆಯವನೊಬ್ಬನ ಅಪ್ರತಿಮ ಹಾಸ್ಯ್ ಪ್ರಸಂಗ ಕಟ್ತುತ್ತಿದ್ದದ್ದು ಎಲ್ಲಾ ನೆನಪಿಗೆ ಬಂದವು. ಹೋಗ್ಲಿ ವರ್ತಮಾನದ ಸ್ಥಿತಿಯಲ್ಲಿ ವಿದ್ಯಾ ಉಪ್ಪಿನಕಾಯಿ ಮಾಡಲೂ ಬರುವ ಪ್ರವೀಣೆಯೋ ಮೊದಲಿನಂತೆಯೇ ತಿನ್ನುವುದರಲ್ಲಿ (ಲಾಯಕ್ ಹೊಡೆವವರಿಗಾಗಿ ಲೇಖನ ಮಾಡುವಲ್ಲಿ) ಮಾತ್ರವೋ ತಿಳಿಯಲಿಲ್ಲವಲ್ಲಾ 🙂
hiii balu sogasada baraha….
thanks all.
@ಅಶೋಕವರ್ಧನ ಜಿ.ಎನ್, ನನಗೆ ನಮ್ಮ ಅಮ್ಮನ ಥರ ಉಪ್ಪಿನಕಾಯಿ ಮಾಡೋದಕ್ಕೆ ಬರೋದಿಲ್ಲ. ಅಷ್ಟೆಲ್ಲಾ ಉದ್ದದ ವಿಧಾನದಲ್ಲಿ ಈಗ ಮಾಡೋರು ಕಡಿಮೆಯೆ. ನನಗೆ ಸುಲಭ, ಸರಳ ವಿಧಾನದಲ್ಲಿ ಮಾಡೋಕೆ ಬರ್ತದೆ. ಆದ್ರೆ ಅದು ಅಮ್ಮನ ಕೈ ರುಚಿ ಹೊಂದಿರೋದಿಲ್ಲ. ಅಷ್ಟೆಲ್ಲಾ ದಿನ ಬಾಳಿಕೆ ಬರೋದೂ ಇಲ್ಲ. 🙂