ಎಂ ಆರ್ ಗಿರಿಜಾ ಪ್ರವಾಸ ಕಥನ : ಹೈಡ್ರೋಚಾಲಿತ ಪ್ರಾರ್ಥನಾ ಚಕ್ರಗಳು!

(ಇಲ್ಲಿಯವರೆಗೆ…)

ಗಾಂಟೆ ಮೊನಸ್ಟರಿ, ಕಣಿವೆಯಲ್ಲಿರುವ ಒಂದು ಚಿಕ್ಕ ಬೆಟ್ಟದ ಮೇಲೆ ಇದೆ. ಬೌದ್ಧ ಧರ್ಮದ ನ್ಯಿನ್ಗಂಪ ಪಂಥದ ಅತಿ ದೊಡ್ಡ ಮೊನಸ್ಟೆರಿ ಇದು.
ಪೆಮ ಲಿಂಗ್ಪ ಎಂಬ ಯೋಗಿಯು 15 ನೇ ಶತಮಾನದಲ್ಲಿ ಇಲ್ಲಿಗೆ ಬಂದಿದ್ದನಂತೆ, ಅವನ ವಂಶದವರು ಮುಂದೆ ಇಲ್ಲಿ ಒಂದು ದೇವಾಲಯ ಕಟ್ಟಿಸುವರು ಎಂದು ಅವನು ಹೇಳಿದ್ದನಂತೆ. ಈಗಿರುವ ದೇವಾಲಯವನ್ನು ಪೆಮ ಲಿಂಗ್ಪನ ಗೌರವಾರ್ಥ ಅವನ ಮೊಮ್ಮಗ ಪೇಮ ಟ್ರಿನ್ಲಿ ಇದನ್ನು ಕಟ್ಟಿಸಿದ್ದಾನೆ.
ಅನೇಕ ಮೊನಾಸ್ಟೆರಿಗಳಂತೆ ಇಲ್ಲಿಯೂ ಕೂಡ ಬಣ್ಣ ಬಣ್ಣದ ಕುಸುರಿ ಕೆಲಸದ ತುಂಬಾ ವಿವರಗಳಿರುವ ಪೇಂಟಿಂಗ್ ಇವೆ.ಇವುಗಳನ್ನು ಮರದ ತುಂಡುಗಳ ಮೇಲೆ ಚಿತ್ರಿಸಿದ್ದಾರೆ. ಅಲ್ಲೊಂದು ಗರುಡನ ಚಿತ್ರವನ್ನು ನೋಡಿದೆ.ನಮ್ಮ ದೇಶದಲ್ಲಿರುವಂತೆ ಅವರೂ ಕೂಡ ಗರುಡನನ್ನು ಪಕ್ಷಿ ರಾಜ ಎಂದು ನಂಬುತ್ತಾರೆ.ಈ ಮೊನಸ್ಟೆರಿ ಒಳಗೆ ಉಳಿದ ಕಿರು ಬುದ್ಧರ ಮೂರ್ತಿಗಳೊಡನೆ ಅವರು ಪೆಮ ಲಿಂಗ್ಪನ ಮೂರ್ತಿ ಇಟ್ಟಿದ್ದಾರೆ. ಈತ ಗುರು ರಿಂಪೋಚೆಯ ಅವತಾರ ಎನ್ನುತ್ತಾರೆ.
ಗುರು ರಿಂಪೋಚೆ ಅಲ್ಲಲ್ಲಿ ಗುಪ್ತವಾಗಿರಿಸಿದ್ದ ಆಧ್ಯಾತ್ಮಿಕ ತವನಿಧಿಗಳನ್ನು ಈತ ಜನಗಳ ಮುಂದೆ ಬಿಚ್ಚಿಡುತ್ತಾ ಹೋದ. ಬೂಮ್ತಾಂಗ್ ನ ಜ್ವಾಲಾಕೊಳದ ಕತೆ ತುಂಬಾ ಪ್ರಸಿದ್ದ. ತಾನು ಗುರು ರಿಂಪೋಚೆಯ ಅಧಿಕೃತ ಪ್ರತಿನಿಧಿ ಎನ್ನುವುದನ್ನು ತೋರಿಸಲು, ಒಮ್ಮೆ ಕೈಯ್ಯಲ್ಲಿ ಬಟರ್ ಲ್ಯಾಂಪ್ ಹಿಡಿದು ಬೂಮ್ತಾಂಗ್ನ ಕೊಳಕ್ಕೆ ಇಳಿದನಂತೆ. ಮೇಲೆದ್ದಾಗ ನಿಧಿಯ ಜೊತೆಗೆ ಲ್ಯಾಂಪ್ ಹಾಗೇ ಉರಿಯುತ್ತಲೇ ಇತ್ತಂತ್ತೆ. ಈತನ ಅವತಾರಗಳೂ ನೂರೆಂಟು.
ನನಗೆ ಹೊಟ್ಟೆ ತಾಳ ಹಾಕತೊಡಗಿತ್ತು. ಕೊಕ್ಕರೆ ಕಾಣದೆ ಹೋಗಿದ್ದರಿಂದ ಏನಾದರೂ ತಿನ್ನಬೇಕೆಂದುಕೊಂಡೆ. ಕೆಲವೊಮ್ಮೆ ನಿರಾಸೆಯಾದಾಗ ಹಸಿವು ಜಾಸ್ತಿ ಆಗುತ್ತದೆ.ಅದೇ ರೀತಿ ಈಗಲೂ ಆಯಿತು.
ಕಣಿವೆ ಪಕ್ಕದಲ್ಲಿರುವ ಪುಟ್ಟ ರೆಸ್ಟೊರೆಂಟ್ ಗೆ ಗೈಡ್ ಕರೆದು ತಂದ. ಅಲ್ಲಿಯ ಕೆಲಸಗಾರರು ಬಫೆ ಲಂಚ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.ಇಡೀ ಕಣಿವೆಯಲ್ಲಿ ಕೆಲವೇ ಕೆಲವು ರೆಸ್ಟೊರೆಂಟ್ ಗಳಿವೆ. ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಅಷ್ಟೇನೂ ಚೆನ್ನಾಗಿಲ್ಲ. ಅವರು ಲೆಂಟಿಲ್ ಸೂಪ್, ಕೆಂಪಕ್ಕಿ ಅನ್ನ, ಬತೂರ,ಆಲುಗೆಡ್ಡೆ ದಶಿ ಮತ್ತು ಒಂದಷ್ಟು ತರಕಾರಿ ನೀಡಿದರು. ಇದು ಅಂಥೆಂಟಿಕ್ ಭೂತಾನಿ ಊಟ.
ಎಣ್ಣೆಯಿಲ್ಲದ ತರಕಾರಿ ಜಾಸ್ತಿ ಇರುವ ಊಟ ರುಚಿಯಾಗಿತ್ತು. ಶಾಂತ ಸುಂದರ ಕಣಿವೆ ನೋಡುತ್ತ ಊಟ ಮಾಡುವುದು ಸೊಗಸಾಗಿತ್ತು. ನಾನು ಊಟವಾದ ಮೇಲೆ ಅಂಜುತ್ತಲೆ ಟಾಯ್ಲೆಟ್ ಇದೆಯಾ ಎಂದೆ. ಅವರು ದಾರಿ ತೋರಿಸಿದರು. ಆಶ್ಚರ್ಯ ಅಂದರೆ ಅದು ತುಂಬಾ ನೀಟಾಗಿತ್ತು. ಇದು ಎಲ್ಲಾ ಹೆಣ್ಣುಮಕ್ಕಳ ಸಮಸ್ಯೆ ಎಲ್ಲಿಗಾದರು ಇಡೀ ದಿನ ಹೊರಗೆ ಹೋಗಬೇಕಾದರೆ ನಾನು ನೀರು ಕುಡಿಯುವುದನ್ನೇ ನಿಲ್ಲಿಸಿಬಿಡ್ತೀನಿ. ನಾನು ಮಾತ್ರ ಅಲ್ಲ. ನಾನು ಕೇಳಿದಂತೆ ಇದು ಹಲವರ ಟೆಕ್ನಿಕ್. ನಮ್ಮ ದೇಶದ ದುಸ್ಥಿತಿಯ ಸಾರ್ವಜನಿಕ ಟಾಯ್ಲೆಟ್ ಗಳು ಕಲಿಸಿರೋ ಪಾಠ ಇದು.

ನನಗೆ ಕಣಿವೆಯಲ್ಲಿ ಸ್ವಲ್ಪ ಅಲೆಯಬೇಕು ಅನಿಸಿತು, ಗಾಡಿಯಲ್ಲಿ ಮುಂದೆ ಹೋಗಿ ಎರಡು ಕಿಲೋಮೀಟರ್ ಆದ ಮೇಲೆ ನಿಂತಿರಲು ಡ್ರೈವರ್ಗೆ ಹೇಳಿ ನಾನು ನಡೆಯತೊಡಗಿದೆ. ಸುತ್ತ ವನಸಿರಿ ಮೈಚಾಚಿ ಮಲಗಿತ್ತು. ನಡೆದಂತೆ ರೈತರು ಆಲುಗೆಡ್ಡೆ ಬೀಜ ಬತ್ತನೆ ಮಾಡುತ್ತಿರುವುದು ಕಣ್ಣಿಗೆ ಬಿತ್ತು. ರೈತರು ಗಡಿಬಿಡಿಯಲ್ಲಿದ್ದರು. ಹಾಸನದಲ್ಲಿ ಹುಟ್ಟಿ ಬೆಳೆದವಳಿಗೆ ಸಾವಿರಾರು ಮೈಲಿ ದೂರದ ದೇಶದಲ್ಲಿ ಮತ್ತೆ ಆಲು ಗೆಡ್ಡೆ ಪರಿಸರ ನೋಡಿ ಒಂದು ರೀತಿ ಆಪ್ತತೆ ಬಂದು ಬಿಟ್ಟಿತು.ಎತ್ತಣ ಹಾಸನ, ಎತ್ತಣ ಭೂತಾನ್ ಎತ್ತಣಿಂದೆತ್ತಣ ಆಲುಗೆಡ್ಡೆ ಸಂಬಂಧವಯ್ಯಾ ಎಂದು ಅಲ್ಲಮನನ್ನು ನೆನಪಿಸಿಕೊಂಡೆ. allma for all times ಎಂದರೆ ಇದೇ ಅಲ್ಲವಾ ಎಂದು ನನಗೆ ನಾನೇ ಹೇಳಿಕೊಂಡು ಖುಷಿ ಪಟ್ಟೆ.

ಇನ್ನು ಇಲ್ಲಿರುವ ಎರಡು ಮಸ್ತ್ ನದಿಗಳ ವಿಚಾರ ನಿಮಗೆ ಹೇಳಬೇಕು. ಏನಪ್ಪಾ ಅಂದ್ರೆ ಇಲ್ಲಿ ನಕೈ ಚೂ ಮತ್ತು ಗೆ ಚೂ ಅಂತ ಎರಡು ನದಿಗಳಿವೆ. ಒಂದು ನದಿ ಹಾವು, ಇನ್ನೊಂದು ನದಿ ಹಂದಿಯ ರೂಪಕಗಳು. ಒಂದು ಸಲ ಎರಡೂ ಪ್ರಾಣಿಗಳು ಪಂದ್ಯ ಕಟ್ಟಿಕೊಂಡವು, ಯಾರು ಓಟದಲ್ಲಿ ಗೆಲ್ಲುತ್ತಾರೆ ಅಂತ. ಹಂದಿ ಗೆದ್ದರೆ ಅಲ್ಲಿ ಭತ್ತ ಬೆಳೆಯುತ್ತಾರೆ, ಹಾವು ಗೆದ್ದರೆ ಅಲ್ಲಿ ಎಂದಿಗೂ ಭತ್ತ ಬೆಳೆಯುವುದಿಲ್ಲ ಎಂಬುದೇ ಆ ಪಂದ್ಯ. ಕೊನೆಗೆ ಗೆದ್ದದ್ದು ಹಾವು! ವಾಸ್ತವವೆಂದರೆ ಆ ಎತ್ತರದಲ್ಲಿ ಭತ್ತ ಬೆಳೆಯುವುದಕ್ಕೆ ಅನುಕೂಲವಾದ ವಾತಾವರಣವಿಲ್ಲ, ಹಾಗಾಗಿ ಅಲ್ಲಿ ಭತ್ತ ಬೆಳೆಯುವುದಿಲ್ಲ ಅಷ್ಟೆ.
ಕಾಗೆ ಥರ ಕಾಣುವ ನೂರಾರು ಹಕ್ಕಿಗಳನ್ನು ಕಣಿವೆಯಲ್ಲಿ ನೋಡಿದೆ, ಅವು ಕಾಗೆಗಳಲ್ಲ, ಅವುಗಳ ಕೊಕ್ಕು ಕೆಂಪು ಬಣ್ಣದಲ್ಲಿತ್ತು. ಇದಕ್ಕೆ ರೆಡ್ ಬಿಲ್ಡ್ ಚೊ(Red billed chough) ಎಂದು ಹೆಸರು. ಅವುಗಳು ಪಾರಿವಾಳಗಳ ಹಾಗೆ ಗುಂಪಿನಲ್ಲಿ ಹಾರಾಟ ಮಾಡುತ್ತಿದ್ದವು. ಒಟ್ಟಿಗೆ ಹಾರುತ್ತವೆ, ಒಟ್ಟಿಗೆ ಕೂರುತ್ತವೆ.
ಈ ಕಣಿವೆಯಲ್ಲಿ ಎರಡು ಗಂಟೆ ಕ್ರಮಿಸಬಹುದಾದ ಒಂದು ಸುಂದರವಾದ ಟ್ರೆಕ್ಕಿಂಗ್ ಕಾಲು ಹಾದಿ ಇದೆ.ಆದರೆ ಸಮಯದ ಅಭಾವದಿಂದ ಅಲ್ಲಿಗೆ ಹೋಗಲಿಲ್ಲ. ಕಣಿವೆಗೆ ವಿದಾಯ ಹೇಳುವ ಸಮಯ ಬಂದಾಗ ಬೇಜಾರಾಯಿತು. ಮತ್ತೆ ವಾಂಗ್ಡಿ ಕಡೆ ವಾಪಸ್ ಹೊರಟೆವು. ದಾರಿಯಲ್ಲಿ ಗಾಡಿ ನಿಲ್ಲಿಸಿ, ಕೆಲವು ಸುಂದರ ಚಿತ್ರಗಳನ್ನು ಕ್ಲಿಕ್ಕಿಸಿದೆ.ನಾನು ಹೇಳಿದ ಕಡೆಯಲ್ಲೆಲ್ಲ ಗಾಡಿ ನಿಲ್ಲಿಸಿದ ಶಾಂತ ಸ್ವಭಾವದ ಗೈಡ್ ಲಾಲ್ ನ ತಾಳ್ಮೆ ಮೆಚ್ಚುವಂತದ್ದು ಬಿಡಿ.

ಹೋಗುವಾಗೆಲ್ಲಾ ಸಣ್ಣ ಪುಟ್ಟ ಜಲಪಾತಗಳ ಪಕ್ಕದಲ್ಲಿದ್ದ ಚಿಕ್ಕ ಚಿಕ್ಕ ಸ್ತೂಪಗಳಂಥ ಆಕೃತಿಗಳನ್ನು ನೋಡಿದ್ದೆ. ಅವು ಏನು ಎಂಬುದು ಆಗ ಸ್ಪಷ್ಟವಾಗಲಿಲ್ಲ. ವಾಪಸ್ ಬರುವಾಗ ನೋಡೇಬಿಡೋಣ ಅಂತ ಒಂದು ಕಡೆ ಇಳಿದು ನೋಡಿದೆ. ಈ ಪುಟ್ಟ ಚೌಕಾಕಾರದ ಗೂಡಿನಂಥ ಸ್ತೂಪಗಳ ಒಳಗಡೆ ಪ್ರೇಯರ್ವೀಲ್ ಗಳನ್ನು ಫಿಕ್ಸ್ ಮಾಡಿದ್ರು. ಯಾರು ತಿರುಗಿಸದೆಯೆ ಅದು ತನ್ನ ಪಾಡಿಗೆ ತಾನು ತಿರುಗುತ್ತಿತ್ತು.ಗಂಟೆ ಹೊಡೆದು ಕೊಳ್ಳುತ್ತಿತ್ತು. ಇದು ಸೌರ ಚಾಲಿತವೇ ಎಂದು ನೋಡಿದರೆ ಅದು ಹೈಡ್ರೋ ಚಾಲಿತ ಪ್ರೇಯರ್ವೀಲ್ ಆಗಿತ್ತು. ನದಿಯ ನೀರನ್ನು ಪೈಪ್ನ ಮೂಲಕ ಪ್ರೇಯರ್ವೀಲ್ನ ಕೆಳಗೆ ಇರುವ ಟರ್ಬೈನ್ ಗೆ ಹಾಯಿಸಿ ಆ ನೀರಿನ ಶಕ್ತಿಯಿಂದ ಟರ್ಬೈನ್ ತಿರುಗಿದಂತೆ ಪ್ರೇಯರ್ವೀಲ್ ತಿರುಗುತ್ತದೆ. A simple engineering!!!
ಆ ನೀರು,ಆ ಪ್ರೇಯರ್ವೀಲ್, ಸುತ್ತಲ ಶಾಂತ ವಾತಾವರಣ, ಇಳಿ ಮಧ್ಯಾಹ್ನದ ನೀರವತೆ ಗಳನ್ನು ಅನುಭವಿಸುತ್ತಾ ಹಾಗೇ ಕಾಲು ಚಾಚಿ ಕುಳಿತುಬಿಟ್ಟೆ.

(ಮುಂದುವರಿಯುವುದು…)

‍ಲೇಖಕರು avadhi

May 16, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. ರುದ್ರೇಶ ಕಿತ್ತೂರ

    ನಿಮ್ಮ ಪ್ರವಾಸ ಕಥನವು ತುಂಬಾ ಚೆನ್ನಾಗಿದೆ,ನಿಮ್ಮ ಬರವಣಿಗೆಯು ಸ್ವತಃ ನಾವೆ ಪ್ರವಾಸ ಗೈದ ಅನುಭವ ನೀಡುತ್ತಿದೆ,ಅಭಿನಂದನೆಗಳು,

    ಪ್ರತಿಕ್ರಿಯೆ

Trackbacks/Pingbacks

  1. ಎಂ ಆರ್ ಗಿರಿಜಾ ಪ್ರವಾಸ ಕಥನ : ಮೊನೆಸ್ಟರಿ, ಪ್ರೇಯರ್‌ಫ್ಲಾಗ್‌ಗಳು ಮತ್ತು ಪ್ರೇಯರ್‌ವೀಲ್‌ಗಳು « ಅವಧಿ / Avadhi - [...] ಎಂ ಆರ್ ಗಿರಿಜಾ ಪ್ರವಾಸ ಕಥನ : ಮೊನೆಸ್ಟರಿ, ಪ್ರೇಯರ್‌ಫ್ಲಾಗ್‌ಗಳು ಮತ್ತು ಪ್ರೇಯರ್‌ವೀಲ್‌ಗಳು May 17, 2014 by avadhinew (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: