ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೊಡ್ಡವರು ನೋಡಬೇಕಾದ ಮಕ್ಕಳ ಸಿನಿಮಾ

‘ಹಿರಿಯ ಪ್ರಾಥಮಿಕ ಶಾಲೆ – ಕಾಸರಗೋಡು, ಕೊಡುಗೆ – ರಾಮಣ್ಣ ರೈ’
ದೊಡ್ಡವರು ನೋಡಬೇಕಾದ ಮಕ್ಕಳ ಸಿನಿಮಾ

 ಅಂತಃಕರಣ

(ಲೇಖಕ ಶಿವಮೊಗ್ಗ ನಗರದ ಲೋಯಲಾ ಪ್ರೌಢಶಾಲೆಯ
ಒಂಬತ್ತನೆಯ ತರಗತಿಯ ವಿದ್ಯಾರ್ಥಿ)

ಕಳೆದ ಎರಡು ವಾರದ ಸಮಯದಲ್ಲಿ ಬಿಡುಗಡೆಯ ನಂತರದ ಮೊದಲ ಶೋ ಸಿನಿಮಾವಾಗಿ ನಾನು ನೋಡಿದ ಎರಡನೇ ಸಿನೆಮಾ ಸರ್ಕಾರಿ ‘ಹಿರಿಯ ಪ್ರಾಥಮಿಕ ಶಾಲೆ – ಕಾಸರಗೋಡು, ಕೊಡುಗೆ – ರಾಮಣ್ಣ ರೈ’. (ಮೊದಲ ಸಿನಿಮಾ ಹಿಂದಿಯ ‘ಗೋಲ್ಡ್’)

ನಿನ್ನೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶಾಲೆಗೆ ರಜೆಯಿದ್ದ ಕಾರಣ ನಿನ್ನೆಯೇ ಬಿಡುಗಡೆಯಾಗಲಿದ್ದ ರಿಷಭ್ ಶೆಟ್ಟಿ ನಿರ್ದೇಶನದ ಈ ಸಿನೆಮಾಕ್ಕೆ ಹೋಗಬೇಕೆಂದು ಪ್ಲ್ಯಾನ್ ಮೊದಲೇ ಹಾಕಿದ್ದೆ. ಹಾಗೆಯೇ ನಿನ್ನೆ(ಶುಕ್ರವಾರ) ನನ್ನ ಮೂವರು ಗೆಳೆಯರಾದ ಆದರ್ಶ, ಸೂರ್ಯ ಮತ್ತು ನಿಖಿಲ್ ಜೊತೆ ಶಿವಮೊಗ್ಗದ ವೀರಭದ್ರೇಶ್ವರ ಟಾಕೀಸ್‍ಗೆ ಹೋಗಿ ಸಿನೆಮಾ ನೋಡಿಕೊಂಡು ಬಂದೆ.

‘…. ಶಾಲೆ’ ಒಂದು ಮಕ್ಕಳ ಸಿನೆಮಾ ಎಂದು ಹೇಳಬಹುದು. ಆದರೆ ಇದು ದೊಡ್ಡವರೂ ಸಹ ನೋಡಬಹುದಾದ ಮತ್ತು ನೋಡಬೇಕಾದ ಮಕ್ಕಳ ಸಿನೆಮಾ.

ಕರ್ನಾಟಕದಲ್ಲಿ ಮುಚ್ಚುತ್ತಿರುವ ಸರ್ಕಾರಿ ಶಾಲೆಗಳು ಹಾಗೂ ಕಾಸರಗೋಡು ಕರ್ನಾಟಕದ್ದು ಎನ್ನುವ ಹೋರಾಟವೆರಡನ್ನೂ ಒಟ್ಟಿಗೆ ಸೇರಿಸಿ ಈ ಸಿನೆಮಾ ಮಾಡಿದ್ದಾರೆ ರಿಷಭ್. ಕಾಸರಗೋಡಿನಲ್ಲಿ ಕನ್ನಡ ಶಾಲೆಯೊಂದನ್ನು ಮುಚ್ಚುವುದನ್ನು ವಿರೋಧಿಸುವ ಹೋರಾಟವನ್ನಾಧರಿಸಿ ಈ ಸಿನೆಮಾವನ್ನು ಸೃಷ್ಟಿಸಲಾಗಿದೆ.

ಮೊದಲಾರ್ಧದ ಸಿನಿಮಾ ಬಹಳ ಮೋಜಿನಿಂದ ಸಾಗುತ್ತದೆ. ಮಮ್ಮೂಟಿ, ಪ್ರವೀಣ, ಪಲ್ಲವಿ, ಮಹೀಂದ್ರ, ಉಪಾಧ್ಯಾಯರು, ಭುಜಂಗ, ಸೆಬಾಸ್ಟಿಯನ್, ನಂಬಿಯಾರ್ ಪಾತ್ರಗಳ ಸುತ್ತ ಮೊದಲಾರ್ಧ ಸಾಗುತ್ತದೆ. ಅನಂತ್ ನಾಗ್ ಪಾತ್ರ ನಿರೀಕ್ಷಿತವಾಗಿ ಎರಡನೇ ಅರ್ಧ ಶುರುವಾಗಿ ಕೆಲ ಹೊತ್ತಿಗೆ ಪರಿಚಯವಾಗುತ್ತದೆ. ತಮ್ಮ ಶಾಲೆಯನ್ನು ಉಳಿಸಿಕೊಳ್ಳಲು ಮಕ್ಕಳು ಮೈಸೂರಿನಿಂದ ಹೋರಾಟಗಾರರನ್ನು ಕರೆದುಕೊಂಡು ಬರುತ್ತಾರೆ. ಅಲ್ಲಿ ಸಿನೆಮಾಕ್ಕೊಂದು ದೊಡ್ಡ ಟ್ವಿಸ್ಟ್ ಸಿಗುತ್ತದೆ. ಅಲ್ಲಿಂದ ನಿಜವಾದ ಕಥೆ ಶುರುವಾಗುತ್ತದೆ.
ಸಿನೆಮಾ ತಂಡ ಪತ್ರಿಕಾಗೋಷ್ಠಿಗಳಲ್ಲಿ ಕಥೆಯ ಎಳೆಯನ್ನು ಬಿಟ್ಟಕೊಡದಿದ್ದಲ್ಲಿ ಸಿನೆಮಾ ಎರಡನೇ ಅರ್ಧದಲ್ಲಿ ಬಹಳ ರೋಚಕತೆಯಿಂದ ಕೂಡಿರುತ್ತಿತ್ತು. ಆದರೆ ಕನ್ನಡ ಶಾಲೆಯನ್ನು ಉಳಿಸುವ ಬಗೆಗೆ ಸಿನೆಮಾ ಇರುವುದು ಎನ್ನುವುದು ಮೊದಲೇ ಗೊತ್ತಿರುವಾಗ ಅಷ್ಟೇನೂ ರೋಚಕ ಭಾವ ನಮಗೆ ಉಂಟಾಗುವುದಿಲ್ಲ. ಕ್ಲೈಮಾಕ್ಸ್ ಹಂತದಲ್ಲಿ ಕೂಡ ನಿರ್ದೇಶಕರು ಸ್ವಲ್ಪ ಮಟ್ಟಿಗೆ ಸೋತು ಹೋಗಿದ್ದಾರೆ. ಟ್ರೇಲರ್‍ನ ಕೊನೆಯಲ್ಲಿ ಕ್ಲೈಮಾಕ್ಸ್ ಹಂತದಲ್ಲಿ ಬರುವ ಒಂದು ಮುಖ್ಯ ಡೈಲಾಗ್‍ನ್ನು ಬಿಟ್ಟುಕೊಟ್ಟಿರುವುದರಿಂದ ಸಿನೆಮಾದ ಕೊನೆಯಲ್ಲಿ ಅಷ್ಟು ರೋಚಕತೆ ಕಾಣಲಿಲ್ಲ. ಅಲ್ಲದೆ ಸಿನೆಮಾ ಕೊನೆಯಲ್ಲಿ ಸ್ವಲ್ಪ ಎಳೆದ ಹಾಗೆ ಅನಿಸುತ್ತದೆ.

ರೋಚಕತೆ ಒಂದನ್ನು ಬಿಟ್ಟು ಒಂದು ಸಿನೆಮಾದಲ್ಲಿ ನಿರೀಕ್ಷಿಸುವ ಉಳಿದೆಲ್ಲಾ ಅಂಶಗಳನ್ನು ನಾವಿದರಲ್ಲಿ ಪಡೆಯಬಹುದಾಗಿದೆ. ಕೆಲವು ಸಣ್ಣ ಅಂಶಗಳು ಸಿನೆಮಾವನ್ನು ಉತ್ತಮವಾಗಿ ಮಾಡುತ್ತವೆ. ಎಲ್ಲಾ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಸ್ಟಾರ್ ಸಿನೆಮಾಗಳಲ್ಲಿ ಸಾಮಾನ್ಯವಾಗಿ ಎದ್ದು ಕಾಣಿಸುವ ಅನಗತ್ಯವಾದ ಕಾಮಿಡಿಗಳು, ಅನಗತ್ಯವಾದ ಪಾತ್ರಗಳು ಈ ಸಿನಿಮಾದಲ್ಲಿ ಇಲ್ಲ.

ಹಾಡುಗಳು ಚಿತ್ರದ ಪ್ಲಸ್ ಪಾಯಿಂಟ್. ಈಗಿನ ಪ್ರಯೋಗಾತ್ಮಕ ಸಿನೆಮಾಗಳಲ್ಲಿ ಹಾಡುಗಳೇ ಇಲ್ಲದಿರುವಾಗ ಈ ಚಿತ್ರದ ಒಂಬತ್ತು ಹಾಡುಗಳು ಬಹಳ ಚೆನ್ನಾಗಿವೆ. ನನಗೆ ಈ ಸಿನೆಮಾದಲ್ಲಿ ಪ್ರವೀಣನ ಪಾತ್ರ ಮಾಡಿರುವ ರಂಜನ್ ಅವರ ಸಹಜ ಅಭಿನಯ ಬಹಳ ಇಷ್ಟವಾಯಿತು.

ಕೊನೆಯ ಮಾತೆಂದರೆ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಒಮ್ಮೆ ನೀವು ನೋಡಬಹುದಾದ ಸಿನೆಮಾ!

 

‍ಲೇಖಕರು avadhi

25 August, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading