ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವರನ್ನು ಕ್ಷಮಿಸಿದ್ದೇನೆ.

ಶೋಭಾ ಹಿರೇಕೈ

—-

ನೋಡಲು ಬಂದವರೆಲ್ಲಾ
ಕೈ ಬೀಸಿಕೊಂಡು
ಹಾಗೇ ಬರುತ್ತಿಲ್ಲ, ಬದಲು
ಒಂದಿಷ್ಟು ಹಣ್ಣು ಹಂಪಲು
ಬ್ರೆಡ್ಡು ಬನ್ನು
ಜೊತೆಗೊಂದಿಷ್ಟು ಕಣ್ಣೀರ
ಸೆರಗ ಚುಂಗಿಗಂಟಿಸಿಕೊಂಡೇ ಬರುತ್ತಾರೆ.

ಹಾರೈಸುತ್ತಾರೆ ಇಷ್ಟಕ್ಕೇ ಮುಗಿತು
ದೇವರು ದೊಡ್ದ ವನು ಎನ್ನುತ್ತಾರೆ
ತಮ್ಮ ವ್ಯಥೆಯ ಕಥೆ ಹೇಳಿ
ನನ್ನದೊಂದಿಷ್ಟು ಕೇಳಿ
ದವಾಖಾನೆಯ ಬೆಡ್ಡೊಂದ
ಪಕ್ಕಕ್ಕಿರಿಸಿದಂತೆ
ಹಾಸಿ ಹೊದೆಸಿ
ಮತ್ತಲ್ಲಿಗೆ ಕರೆದೊಯ್ದು ಬಿಡುತ್ತಾರೆ
ಈಗಷ್ಟೇ..ಅಲ್ಲಿಂದ ಮರಳಿರುವ ನನ್ನ.

ಒಳಗೆ
ತಲೆದಿಂಬಿಗಾನಿಸಿಟ್ಟ
ಬಿಳಿ ಹಾಳೆಯಲ್ಲಿ
ಆಗಷ್ಟೇ ಜನಿಸುತ್ತಿರುವ ಕವಿತೆಯ ಸಾಲುಗಳು
ಕಥೆಯ ಪಾತ್ರಗಳು
ಅರೆಬರೆ ಮೊಲೆ ಚೀಪಿದ
ಹಸಿಗೂಸಂತೆ ಚೀರುತ್ತಿರುತ್ತವೆ.
ನಾನೋ ತಾಳಲಾರದೆ
ಮಧ್ಯಾಹ್ನದ ಮಾತ್ರೆ ನುಂಗಿ
ನೀರು ಕುಡಿಯುತ್ತೇನೆ.

ಬಂದವರು ಹೊರಡುವ ವೇಳೆಗೆ
ದೊಡ್ಡವರಾದ ದೇವರಿಗೀಗ
ಕಣ್ಣೇ ಇರುವುದಿಲ್ಲ
ಒಂದಿಷ್ಟು ಶಾಪ ಹಾಕುತ್ತಾರೆ
ದೇವರಂಥವರಿಗೇ…ಹೀಗಾಗಬಾರದು ಎನ್ನುತ್ತಾ

ನಾನು ಹೊರಟು ನಿಂತ ಅವರನ್ನು ಬಿಳ್ಕೊಟ್ಡು
ಇನ್ನೂ ….ಬರದವರ
ಬರಲೇಬೇಕಾದವರ ಲೆಕ್ಕ ಹಾಕುತ್ತೇನೆ

ಮತ್ತೂ….
ಬಂದವರ ಬಿಳ್ಕೊಟ್ಟು
ಮುಗುಳ್ನಗುತ್ತಾ..

ದೇವರನ್ನು ಕ್ಷಮಿಸುತ್ತೇನೆ.

‍ಲೇಖಕರು avadhi

29 September, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading