ಪುರುಷೋತ್ತಮ ಬಿಳಿಮಲೆ
ದೆಹಲಿ ಕರ್ನಾಟಕ ಸಂಘವು ದೆಹಲಿ ತುಳು ಸಿರಿ ಮತ್ತು ಬಿಲ್ಲವರ ಅಸೋಸಿಯೇಷನ್ ಅವರ ಸಹಯೋಗದಲ್ಲಿ ಮಾರ್ಚ್ 23 ರಂದು ತುಳು ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿತ್ತು. ದೆಹಲಿ ಕರ್ಣಾಟಕ ಸಂಘದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಷನ್ ಅವರು ಪ್ರಕಾಶಿಸಿದ ಶ್ರೀ ನಾರಾಯಣ ಗುರು ವಿಜಯ ದರ್ಶನ ಕೃತಿಯನ್ನು ಬಿಡುಗಡೆ ಮಾಡಲಾಯಿತು. ನಾಡಿನಾದ್ಯಂತ ಪ್ರಸಿದ್ಧವಾಗಿರುವ ಸಾಗರ್ ಹೋಟೆಲ್ ಗ್ರೂಪ್ ನ ಮಾಲೀಕರಾಗಿದ್ದ ಶ್ರೀ ಜಯರಾಮ ಬನಾನ್ ಅವರು ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ನಾರಾಯನಗುರು ವಿಜಯ ದರ್ಶನ ಕೃತಿಯನ್ನು ಮೂಲತಹ ಕನ್ನಡದಲ್ಲಿ ಬರೆದ ಶ್ರೀ ಬಾಬು ಶಿವ ಪೂಜಾರಿ ಅವರು ಮಾತಾಡಿ- ಶ್ರೀ ನಾರಾಯಣ ಗುರುಗಳು ಭಾರತೀಯ ಸಾಂಪ್ರದಾಯಕ ತಿಳುವಳಿಕೆಯನ್ನು ಪ್ರಶ್ನಿಸಿ ಶೂದ್ರ ವರ್ಗಕ್ಕೆ ನ್ಯಾಯ ಒದಗಿಸಲು ಹೋರಾಡಿದರು’ ಎಂದು ಹೇಳಿ ಶ್ರೀ ಗುರುಗಳ ಸಾಧನೆಯ ಮಹತ್ವವನ್ನು ಸೋದಾಹರಣವಾಗಿ ವಿವರಿಸಿದರು. ಮೂಲ ಕನ್ನಡ ಪುಸ್ತಕವನ್ನು ಆಂಗ್ಲ ಭಾಷೆಗೆ ಸೊಗಸಾಗಿ ಅನುವಾದಿಸಿದ ಲೇಖಕಿ ಶ್ರೀಮತಿ ಶಶಿಲೇಖ ಅವರು ಮಾತಾಡಿ, ಈ ಕೃತಿಯು ನನ್ನ ತಿಳುವಳಿಕೆಯ ಮೇಲೆ ಅಪಾರವಾದ ಪ್ರಭಾವ ಬೀರಿ, ನಾನು ಹೊಸದಾಗಿ ಐಒಚಿಸುವಂತೆ ಮಾಡಿದೆ, ಗುರುಗಳ ಮಾರ್ಗ ದರ್ಶನದಲ್ಲಿ ನಾನೀಗ ನಡೆಯುತ್ತಿದ್ದೇನೆ’ ಎಂದು ಹೇಳಿ ಅನುವಾದ ಕಾರ್ಯದಲ್ಲಿ ನೆರವಾದವರನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲೇಖಕಿ, ಸಾಮಾಜಿಕ ಹೋರಾಟಗಾರ್ತಿ ಶ್ರೀಮತಿ ಬಿ ಎಂ ರೋಹಿಣಿ ಅವರು ಮಾತಾಡಿ ಕರಾವಳಿ ಜಿಲ್ಲೆಗಳಲ್ಲಿ ಹೆಣ್ಣು ಮಕ್ಕಳು ಪಡುತ್ತಿರುವ ಕಷ್ಟಗಳನ್ನು ಮನಮುಟ್ಟುವಂತೆ ವಿವರಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಬಾಬು ಶಿವ ಪೂಜಾರಿ, ಶ್ರೀಮತಿ ಶಶಿಲೇಖಾ ಮತ್ತು ಶ್ರೀಮತಿ ಬಿ ಎಂ ರೋಹಿಣಿ ಅವರನ್ನು ಬಿಲ್ಲವರ ಅಸೋಸಿಯೇಷನ್ ವತಿಯಿಂದ ಶ್ರೀ ಜಯರಾಮ ಬನಾನ್ ಮತ್ತು ಶ್ರೀ ಪ್ರಭಾಕರ ಬಂಗೇರ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತಾಡುತ್ತಾ -‘ ದೆಹಲಿ ಕರ್ನಾಟಕ ಸಂಘವು ಕರ್ನಾಟಕದ ಎಲ್ಲ ಭಾಷೆಗಳಿಗೆ ಒಂದು ವೇದಿಕೆಯಾಗಬೇಕು ಎಂಬುದು ನನ್ನ ಆಸೆ.
ಆ ಪ್ರಕಾರ ಇವತ್ತು ತುಳು ಕಾರ್ಯಕ್ರಮ ನಡೆಯುತ್ತಿದೆ, ಮುಂದೆ ಕೊಡವ ಮತ್ತು ಕೊಂಕಣಿ ಭಾಷೆಯ ಕಾರ್ಯಕ್ರಮಗಳೂ ನಡೆಯಲಿವೆ’ ಎಂದು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ದೆಹಲಿ ತುಳು ಸಿರಿಯ ಸದಸ್ಯರು ಪೂಜಾ ಪ್ರದೀಪ್ ಅವರ ನೇತ್ರತ್ವದಲ್ಲಿ ತುಳು ಭಾವಗೀತೆಯೊಂದನ್ನು ಪ್ರಸ್ತುತ ಪಡಿಸಿದರು. ಡಾ. ಅವನೀಂದ್ರನಾಥ ರಾವ್ ಅವರು ಸ್ವಾಗತಿಸಿದರು. ಕಾರ್ಯದರ್ಶಿ ಸಿ ಎಂ ನಾಗರಾಜ ಅವರು ವಂದಿಸಿದರು. ಆನಂತರ ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಪ್ರಖ್ಯಾತ ಗಾಯಕ ಶ್ರೀ ಶಶಿಧರ ಕೋಟೆ ಅವರು ಶ್ರೀ ಅಮೃತ ಸೋಮೇಶ್ವರ ಮತ್ತು ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ತುಳು ರಚನೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಪ್ರೇಕ್ಷಕರ ಕೋರಿಕೆ ಮೇರೆಗೆ ಕನ್ನಡ ಮತ್ತು ಹಿಂದಿ ಗೀತೆಗಳನ್ನೂ ಹಾಡಿ ಜನರನ್ನು ರಂಜಿಸಿದರು.







kanndada kampannu rajadhaniylli vyvastithavagi pasarisuva nimagella abinandaneglu…