ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೂರೀ ದೂರೀ ದೂರಮ್ಮಾ ದೂರಿ..

ಅವ್ವ
ರಾಜೇಂದ್ರ  ಪ್ರಸಾದ್

ಮಬ್ಬಿನ ಮುಂಜಾನೆ ಮಾಳಿಗೆ ಮನೆಯ
ಮೂರುಲೋಕದ ಭಾರಹೊತ್ತ ಮುಂಬಾಗಿಲ ತೆಗೆದು
ಹಕ್ಕಿ ಕೂಗುವ ಮೊದಲೇ ಅಂಗಳ, ಹಜಾರ, ಕೊಟ್ಟಿಗೆಗಳ ಕಸ ಎತ್ತಿ
ಕೆರೆಯ ಕೀರೆಮಡಿಯ ಬಳಿ ಸಾರಿ ಈರುಳ್ಳಿ ಸೊಪ್ಪು ಮೆಣಸು ಮಡಿಲಿಗೆ ಕಟ್ಟಿ
ಹಟ್ಟಿ ಬಗಲಿಗಿನ ಕೋಟೆ ಹಳ್ಳವ ಇಳಿದು ಮಲ್ಲಿಗೆ, ನಂದಿಬಟ್ಟಲ ಹೂವ
ಮಕ್ಕಳಂತೆ ಜೋಪಾನ ಬಿದುರು ಬುಟ್ಟಿಗೆ ತುಂಬಿಕೊಂಡು
ಬಾವಿ ಕಟ್ಟೆಯ ಮೇಲೆ ಕೂರಿಸಿ, ಬಿಡಿಸಿಕೊಂಡ ತುರುಬ ತಿರುಗಿ ಕಟ್ಟುವಳು.

ಕನ್ನೆ ಕೆನ್ನೆಯಂತೆ ಕೆಂಪಾದ ಮೂಡಣದೇವ ನೊಗವನು ಹೊತ್ತು
ಬಚ್ಚಲ ಮನೆಯ ಅಂಗಳಕೆ ಬಂದು ನಿಂತಾಗ
ತೆಂಗು ಗರಿಗಳ, ನಾರು-ನುಚ್ಚುಗಳ ನೀರೊಲೆಗೆ ತುಂಬಿ ಹೊತ್ತಿಸಿ
ಅಡಿಗೆ ಕೋಣೆಯಿಂದ ತೆಗೆದ ರಾತ್ರಿಯ ಮುದ್ದೆ ಮಡಿಕೆಯ ಸೀಕಲು
ಮುಸರೆ ಕೆರೆಯುತ್ತಾ ಕೂತರೆ ಜೊತೆಗೆ ಶುರುವು
ಹೇಟೆ ಹುಂಜಗಳ, ಎಮ್ಮೆ ಕರುಗಳ ಬೆಳಗಿನ ಘಂಟಾನಾದ.

ನೂರಡಿ ಅಂಗಳಕೆ ಸೆಗಣಿ ತಾರಿಸಿ ಎಳೆರಂಗೋಳಿಯ ಎಳೆದು
ವಾರದ ಮಡಿಸ್ನಾನವ ಮುಗಿಸಿ ಕಲಶಕನ್ನಡಿಗಳ ಗೂಡಿಗೆ ಹೂದೀಪಗಳನನಿಟ್ಟು
‘ಗೋವಿಂದಾss..’ ಎಂದು ಹರಿವ ಶಿಂಷೆಯ ಮೂಲೆಗೆ ಕೈಮುಗಿದು ನಿಲ್ಲುವಳು.

ಏರಿನ ಎತ್ತು ನೊಗದ ಕಂಬಕೆ ಕಟ್ಟಿ ಹೊಲಕೆ ಕಳುಹಿಸಿ
ಕರೆವ ಎಮ್ಮೆಯ ಕೊಟ್ಟಿಗೆಗೆ ಕಟ್ಟಿ ಹಾಲು ಹಿಂಡಿ ತಂಬಿಗೆ ತುಂಬಿಸಿ
ಕೆಂಡ ಕೆದುಕಿ ವಾಗೊಲೆಯಲ್ಲಿ ಕಾಯಲು ಬಿಟ್ಟು
ಉರಿಯ ಒಲೆಯ ಮೇಲೆ ಎಸರಿನ ಗಡಿಗೆ ಇಟ್ಟು
ಸಡಿಲಗೊಂಡ ಸೆರಗ ಸೊಂಟಕ್ಕೆ ಬಿಗಿದು ಬೀಗವಿಡುವಳು.

ಸೀಗೆ ದಾಸವಾಳ ಅರೆದಂಟಿನಲಿ ಸಾಲು ಮಕ್ಕಳ ಕೂರಿಸಿ
ತಲೆಯ ಉಜ್ಜಿ ಮೈಯ ತಿಕ್ಕಿ ಕಂಚಿನ ಚೊಂಬಿನಲ್ಲಿ
ಕಾದ ಬಿಸಿನೀರ ಮೊಗೆಮೊಗೆದು ಅಡಿಯಿಂದ ಮುಡಿವರೆಗೆ ಸುರಿಯುತಿರೆ
ದೇವತೆಗಳೆಲ್ಲಾ ಗುಡಿಯ ಅಭಿಷೇಕಕೆ ಮುನಿಸಿಕೊಂಡರವಂತೆ!

ಅರೆದ ಖಾರಕೆ ರಾಗಿರೊಟ್ಟಿಯ ತಟ್ಟಿ, ಗಂಡ ಮಕ್ಕಳಿಗೆ ಉಣಿಸಿ
ಹಡಿಗೆ ತುಂಬುವಳು, ಎಸರು ಮುದ್ದೆ ಸೊಪ್ಪು ಕಾಯಿಪಲ್ಲೆ ಅನ್ನವ ಹರಡಿ
ಗಡಿಗೆ ತುಂಬುವಳು, ಹೊಸಬಾವಿಯ ಸಿಹಿನೀರು ಮಜ್ಜಿಗೆಯ ಕೂಡಿ
ಪುರುಸೊತ್ತು ಪಲ್ಲಂಗವಿಲ್ಲ ಪುಕಾರುಗಳಿಗೆ ಕಿವಿಯಿಲ್ಲ, ಸರಸರನೆ
ಊಟ ಹೊತ್ತು ನಡೆವಳು ಹೊಲದ ಆಳುಗಳಿಗೆ ದೂರಕೆ ಅಳುಕದೇ.

ತಿಟ್ಟು-ತೆವರುಗಳ ಏರಿಳಿದು ಹಡಿಗೆ ತುಂಬಾ ಕಾಯಿ, ಕಾಳು ಕಡ್ಡಿ
ನಾಟಿ ಗದ್ದೆಯ ಏಡಿ ಮೀನು ಸೀಗಡಿ ಕಳಲೆ ಕಾಯಿಪಲ್ಲೆಗಳ ಹೊತ್ತು ಹಟ್ಟಿಗೆ ಬರುವಳು
ಗುಡಾಣದ ರಾಗಿಯ ಒನೆದು, ಕಣಜದ ಅಕ್ಕಿಯ ಆರಿಸಿ ಎಸೆಯುತ್ತಾ ಕೊಕ್ಕೋ ಎಂದು ಕೋಳಿ ಹಿಂಡ ಕರೆವಳು
ಆರಿಸುತ್ತಾ ಒನೆಯುತ್ತಾ ಅಡುಗೆ ಕೋಣೆಯ ಅಡ್ಡಗೋಡೆಗೆ ಚೂರು ಒರಗುವಳು ನಿದ್ದೆ ಮಾರಿಯು ಮೈತುಂಬಿ

ಗೋಧೂಳಿಗೆ ಎಚ್ಛೆತ್ತು ಅಂಗಳ ಗುಡಿಸಿ ಹೊಂಗೆಯೆಣ್ಣೆಯ ಸೊಡರ ಹಚ್ಚಿ ಮಾಳಿಗೆಯ ಮೇಲು ಕಿಟಕಿ ಮುಚ್ಚುವಳು
ಆಡುವ ಮಕ್ಕಳು, ಓದುವ ಮಕ್ಕಳು ಆಳು ದನಕರು ಎಲ್ಲಾ ಹಟ್ಟಿಯ ಸೇರುವುದರೊಳಗೆ ಮುದ್ದೆಯ ತಿರುವಿ
ಎಸರಿನ ಗಡಿಗೆ ಉರಿಯಿಂದ ಕೆಳಗಿರಿಸಿ, ಬೊಗಸೆಯಷ್ಟು ಹಲಸಿನ ಬೀಜವ ಸುಟ್ಟು ತಿನ್ನಲಿಡುವಳು.
ರಾಟೆಯ ಹಗ್ಗವ ಜಡಿದು ಹಿಡಿದೆಳೆದು ಹಂಡೆಗುಂಡಿಗಳ ನೀರು ತುಂಬುವಳು ಆಡುವ ಮಕ್ಕಳ ಗದರದೇ ಮತ್ತೆ ತುಂಬುವಳು
ಕತ್ತಲು ಕವರಿ ಚಂದಿರ ಮಾಮ ಬಂದರೂ ಮಲಗದ ಮಕ್ಕಳಿಗೆ ದೂರಿ ಹಾಡುವಳು
ದೂರೀ ದೂರಿ ದೂರೀ ದೂರಿ
ದೂರೀ ದೂರೀ ದೂರಮ್ಮಾ ದೂರಿ
ಯಾವೂರು ನಿಂದು ದೂರೀ ದೂರಿ
ಹೊಳೆಯ ಕೋಟೆ ಕೊಡವತ್ತಿ ದೂರೀ
ಯಾಕೆ ಬಂದಯೋ ದೂರೀ ದೂರಿ
ತೇರಿನಬ್ಬಕೆ ಬಂದೆ ದೂರೀ ದೂರಿ
ತೇರೆಳೆವೆಯೇನೋ ದೂರೀ ದೂರಿ
ದಪ್ಪ ಹಗ್ಗ ಹಿಡಿಲಾರೆ ದೂರೀ ದೂರಿ
ಮತ್ತೆನುಮಾಡುವೆ ದೂರೀ ದೂರಿ
ಹೂ ದವನ ಎಸೆವೆನು ದೂರೀ ದೂರಿ
ದೂರೀ ದೂರೀ ದೂರಮ್ಮಾ ದೂರಿ.

‍ಲೇಖಕರು avadhi

16 May, 2017

3 Comments

  1. ರಘುನಾಥ

    ನಮ್ಮಗರತಿಯರದೈನಿಕದಅನಾವರಣ

  2. Girijashastry

    Very nice

  3. H.R.sujatha

    Chennagide maga

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading