ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪಾ ಗೋನಾಳ ಹೊಸ ಕವಿತೆ- ಮನವು ಫ್ರೆಶ್ಶಿರುವಾಗಲೇ…

ದೀಪಾ ಗೋನಾಳ

ಮೀನು ಮಾರುಕಟ್ಟೆಯಲಿ
ನಿಂತು,
ತಬ್ಬಿಬ್ಬಾಗುತ್ತೇನೆ
ಯಾವುದನ್ನು ಆಯ್ದು-ಕೊಳ್ಳುವುದು
ಎಷ್ಟೊಂದು ವಿಧ!
ಥೇಟ್ ಮನುಷ್ಯರ ಸಂತೆಯೆ!!

ಕರಾವಳಿ ಸ್ನೇಹಿತರ ಕಂಡಾಗ
ಹೊಟ್ಟೆಕಿಚ್ಚಾಗುತ್ತದೆ
ಬರೀ ಮೀನಿನ ಕಾರಣಕ್ಕಲ್ಲ,
ಒಂದೇ ತಿರುವಿನಲಿ ತಿರುಗಿದರೆ
ಎದುರಾಗುವ
ಕಡಲತೀರದ ಕುರಿತು –
-ತೀರದ ಮೋಹವಿದೆ
ನೀರಿಗಾಗಿ ಅಲ್ಲ!
ಇಲ್ಲೂ ನೀರು ಯಥೇಚ್ಛ
ಮೀಟರು ಲೆಕ್ಕದಲ್ಲಿ,
ಸ್ತುತಿಸುತ್ತಿರುವುದು ಕಡಲನ್ನ..

ಕಡಲಿಗೆ ಕಡಲೆ
ತುಡಿತುಡಿದು
ಅಡಿಬಂದು ಕಚಗುಳಿ‌
ಇಡುವಾಗ
ಕಡಲಿಗೆ ಕಡಲೆ ನೀಲಿ!!

ನಿಂತಿರುವುದು ನೀಲಾಗಸದಲ್ಲೊ!?
ನೀರಾಗಸದಲ್ಲೊ!?
ಎರಡರ ಆಳ ಅಗಲ
ಒಂದೇ!?

ಅದು ಘನ
ಇದು ದ್ರವ
ಆದರೂ
ಕಡಲೇ
ಮೇಲು
ಯಾಕೆ ಹೇಳು

ಕಡಲಲ್ಲಿ ಮೀನು-
ಮುತ್ತು ಇವೆ
ಮನಸ್ಸು ತಕ್ಕಡಿ
ಹಿಡಿದು ವ್ಯಾಪಾರೀಕರಣಕ್ಕೆ
ನಿಂತುಬಿಡುವುದು ಸರಿಯೆ!?
ಅರೆ ಆಗಸದಲ್ಲು
ಮುತ್ತಿವೆ,
ಸ್ವಾತಿ ಮುತ್ತುಮಳೆ
ಕಡಲ ಚಿಪ್ಪೆದೆಗೆ ಸುರಿದರಲ್ಲವೆ
ಸಾಗರದ ಸಿರಿವಂತಿಕೆ;

ಅರೆ ಮೀನು!?
ಹಾ!!

ಮತ್ತದೆ,
ಮೀನಿನಂಗಡಿ,
ಬಗೆಬಗೆಯ ಮೀನು
ಪಕ್ಕದಲ್ಲಿ ನಿಂತಾತ ಕೇಳುತ್ತಾನೆ
ಫ್ರೆಶ್ಶುಂಟಾ!?
ಸತ್ತ ಮೀನು
ಫ್ರೆಶ್ಶು !!
ಕೊಳ್ಳುವವನ‌ ಮನಸ್ಸೆ ಹಳಸು,
ಕಡಲೆ ;
ಮೊಗೆಮೊಗೆದು
ಕೊಡುವ ಮನಸು ಕೊಡು
ಮನವು ಫ್ರೆಶ್ಶಿರುವಾಗಲೇ..

‍ಲೇಖಕರು Admin

5 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading