ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪಾ ಗೋನಾಳ ಕವಿತೆ – ಕಾರ್ತೀಕದ ಈ ಇಳಿಸಂಜೆಗೆ…

ದೀಪಾ ಗೋನಾಳ

ಕಾರ್ತೀಕದ ಈ ಇಳಿಸಂಜೆಗೆ
ನೀನು ಕಳಿಸಿದ
ಪುಟ್ಟ ಪುಟ್ಟ ಬಾಟಲಿಗಳು
ಬಂದು ತಲುಪಿವೆ

ಬಿರಡೆ ಬಿಚ್ಚಲು
ನಾನು ಮಾಡಿದ ಸಾಹಸ
ಈ ಅಕ್ಷರಗಳ ಲೆಕ್ಕದಲ್ಲಿ
ಸಿಗಲಾರದು
ಆದರೂ ಹೇಳುವೆ
ಕೇಳು
ಒಲ್ಲದ ನಲ್ಲೆಯ
ತುಟಿಯಾದರೂ ಬಿಚ್ಚಿಬಿಡಬಹುದಿತ್ತು
ಇಷ್ಟು ಸಮಯದಲಿ

ಅದಾವ ಗಳಿಗೆಯಲಿ
ಮುಚ್ಚಿದೆ
ನಿಜ ಹೇಳು

ಇದಕ್ಕೆ ಕಂಪನಿಯವರ
ಸೀಲಿಲ್ಲ
ತುಸು ಕುಡಿದು
ಕಳಿಸಿದ
ಪುರಾವೆಯು ದಕ್ಕಿದೆ
ತುಟಿಗೆಂಪು
ಅಂಟಿದೆ
ಬಾಟಲಿಯ ಬಾಯಿಗೆ

ಹೇಗಿದ್ದರೂ ನಾನು
ಇದನ್ನೇ ಕುಡಿದು
ಸಾಯಬೇಕು
ಈ ರಾತ್ರಿಗಂತು
ನಾನು ಸಾಯಲಾರೆ
ನೀನು ಇತ್ತ ಬಂದಾಗಲೆ
ಬಿರಡೆ ಬಿಚ್ಚಿ
ಕುಡಿಸಿಬಿಡು
ಬಾಯಿಂದ ಬಾಯಿಗೆ
ವಿಷವಾದರೂ ಸರಿ
ಅಧರಾಮೃತದ ಕಳಶದಿಂದ
ಸಿಗುವ ಸಾವಿಗೆ ಸ್ವರ್ಗದ
ಸ್ಪರ್ಶವಿದೆ
ಈ ಭೂಮಿಯಲಿ

‍ಲೇಖಕರು Admin

4 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading