ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪಾ‌ ಗೋನಾಳ ಹೊಸ ಕವಿತೆ – ನನ್ನ ಹೆಜ್ಜೆ ಗುರುತುಗಳಿವೆ…

ದೀಪಾ‌ ಗೋನಾಳ

ಅವಳು ನಿನ್ನ ತಲೆಗೂದಲಲ್ಲಿ
ಬೆರಳಾಡಿಸುವಾಗ,
ಅಲ್ಲೆಲ್ಲ ನನ್ನ‌ ಎದೆಬೆವರಿನ ಘಮವಿದೆ
ಫ್ಯಾನ್ ಗಾಳಿ‌ ಹೆಚ್ಚಿಡು

ಕಂಗಳಿಗೆ ಕಣ್ಣು ಬೆಸೆದಾಗ,
ನಾವಿಬ್ಬರು ಕೂಡಿ ಕಟ್ಟಿದ
ಕನಸುಗಳ ಮೂಟೆ ಬಿಚ್ಚಿಕೊಂಡೀತು,
ಜೋಪಾನದಿ ಮುಚ್ಚಿಡು

ನಿನ್ನ ಬೆರಳುಗಳೊಂದಿಗೆ
ಬೆರಳು ಹೊಸೆಯುವಾಗ,
ನಾ ತೊಡಿಸಿದ‌ ಉಂಗುರವಿದೆ
ಬಚ್ಚಿಡು

ಅವಳು‌ ನಿನ್ನ ಎದೆ
ಕವಾಟುಗಳಲಿ‌ ನಡೆದಾಡುವಾಗ,
ನನ್ನ ಹೆಜ್ಜೆ ಗುರುತುಗಳಿವೆ
ರಕ್ತ ಪರಿಚಲನೆ ತುಸು‌
ಜೋರಿಡು

ಕೋಣೆಗೆ ಬಂದವಳು
ಬೆನ್ನ ಸವರುವುದು
ತಡವಾಗುವುದಿಲ್ಲ
ನಿನ್ನ ಬೆನ್ನ ಮೇಲೆ
ನನ್ನ‌ಉಗುರ ಗೀರುಗಳಿವೆ
ಕೋಣೆದೀಪ ನಂದಿಸಿಬಿಡು

ಸರಸ ಮುಗಿದಾಗ
ವಿರಮಿಸುವಳು ತೋಳಲ್ಲಿ
ತಲೆಯಿಟ್ಟು,
ನನ್ನ ಹಲ್ಲಿನ ಗುರುತಿವೆ
ನೀಡದಿರು ಎಡ ತೋಳು

ಕೋಣೆದಾಟಿ ಸ್ನಾನಕ್ಕೆ
ಜೊತೆ ನಿಂತಾಗ,
ನನ್ನ ಬಿಟ್ಟಿರಲಾರೆ ಎಂದು
ಕೊಯ್ದುಕೊಂಡ ನರದ
ಕಲೆಯಿದೆ
ಬಿಚ್ಚದಿರು ವಾಚು

ಸುಖ ಮುಗಿಸಿ ಮಲಗಿದಾಗ,
ಅಪ್ಪಬಹುದವಳು
ನಿನ್ನೆದೆ
ನಿದ್ದೆ ಮಂಪರಲಿ
ಬಡಬಡಿಸದಿರು ನನ್ನೆಸರು

ಅವಳದೆ ಹಂಗಿನೊಳಗೆ
ಸಿಕ್ಕು ನಿನ್ನ ನೀ ಮಾರಿಕೊಂಡಾಗ,
ನಮ್ಮ ಒಲವ ಬಚ್ಚಿಡಲು
ಇಷ್ಟಾದರು ಮಾಡು

‍ಲೇಖಕರು Admin

14 May, 2022

1 Comment

  1. ಡಾ.ಸುಜಾತ ಲಕ್ಷ್ಮೀಪುರ

    ತುಂಬಾ ಸೊಗಸಾದ ಕವಿತೆ ದೀಪಾ..ಮತ್ತೊಬ್ಬಳ ತೆಕ್ಕೆಗೆ ಬಿದ್ದವಂಗೆ ಪ್ರೀಯಿಯಲ್ಲೆ ನೀಡುವ ಕಿವಿಮಾತುಗಳು ಮನ ಕಲಕುತ್ತವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading