‘ದಿಲ್ಲಿ: ಬಾಜಾರುಗಳ ತವರು’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ನಮ್ಮ ಅವಶ್ಯಕತೆಗಳನ್ನು ನಿರ್ಧರಿಸುವುದು ಯಾರು?

ಹೀಗೊಂದು ತೂಕದ ಪ್ರಶ್ನೆಯನ್ನು ಲೇಖಕ ಮಾರ್ಕ್ ಎಡ್ವರ್ಡ್ಸ್ ಒಂದು ಕಡೆ ಎತ್ತುತ್ತಾರೆ. ಈ ಬಗ್ಗೆ ಅವರು ನೀಡುವ ಉದಾಹರಣೆಯೊಂದು ಸೊಗಸಾಗಿದೆ. ಹಳೇ ಮಾಡೆಲ್ಲಿನ ಕಾರುಗಳಲ್ಲಿ ಕಿಟಕಿಯ ಗಾಜನ್ನು ಇಳಿಸಲು ಅಥವಾ ಏರಿಸಲು ತಿರುಗಿಸುವ ಹ್ಯಾಂಡಲ್ಲಿನಂತಹ ವ್ಯವಸ್ಥೆಯೊಂದು ಇರುತ್ತಿತ್ತು. ನಂತರ ಬಂದ ಕಾರುಗಳಲ್ಲಿ ಈ ಹ್ಯಾಂಡಲ್ ವ್ಯವಸ್ಥೆಯು ಮಾಯವಾಗಿ ಬಟನ್ ವ್ಯವಸ್ಥೆ ಆರಂಭವಾಯಿತು. ಇಂದು ಕೂತಲ್ಲೇ ಗುಂಡಿ ಒತ್ತಿದರೆ ಸಾಕು. ಕಿಟಕಿಯ ಗಾಜು ಮೇಲಕ್ಕೋ, ಕೆಳಕ್ಕೋ ನಮ್ಮ ಅಗತ್ಯಕ್ಕೆ ತಕ್ಕಂತೆ ಏರಿಳಿಯುತ್ತದೆ.

ಅಂದಹಾಗೆ ಈ ಬಟನ್ ವ್ಯವಸ್ಥೆಯ ಅವಶ್ಯಕತೆಯು ನಮಗಿದೆಯೇ ಎಂದು ಕಂಪೆನಿಗಳು ಗ್ರಾಹಕರ ಬಳಿ ಕೇಳಲಿಲ್ಲ. ಆದರೂ ಅದನ್ನು ಪರಿಚಯಿಸಿ, ಜನಪ್ರಿಯಗೊಳಿಸಲಾಯಿತು. ಒಟ್ಟಿನಲ್ಲಿ ಎಡ್ವರ್ಡ್ಸ್ ಹೇಳುವಂತೆ ನಾವು ಕಾರಿನ ಕಿಟಕಿಯ ಗಾಜನ್ನು ಇಳಿಸಲು ಅಥವಾ ಏರಿಸಲು ಕೆಲ ಸೆಕೆಂಡುಗಳ ಕಾಲ ಹ್ಯಾಂಡಲ್ ತಿರುಗಿಸುವುದಕ್ಕೂ ನಾಲಾಯಕ್ಕುಗಳು. ಅವರ ಪ್ರಕಾರ ಜಗತ್ತಿನ ಹಲವು ದೈತ್ಯ ಕಂಪೆನಿಗಳು ನಮಗಿಂದು ಅಗತ್ಯವಿಲ್ಲದ ಹಲವು ಅವಶ್ಯಕತೆಗಳನ್ನು ಕೃತಕವಾಗಿ ಸೃಷ್ಟಿಸಿ, ಅವುಗಳು ನಿಜಕ್ಕೂ ನಮ್ಮ ಅವಶ್ಯಕತೆಗಳೆಂದು ಬಿಂಬಿಸಿ ನಮ್ಮನ್ನು ಯಾಮಾರಿಸುತ್ತಿವೆ. ಕಂಫರ್ಟ್ ಹೆಸರಿನಲ್ಲಿ ಇಂದು ನಮಗೆ ನೀಡಲಾಗುವ ಬಹುತೇಕ ಉತ್ಪನ್ನಗಳು ಈ ಬಗೆಯವುಗಳೇ.

ಇದಕ್ಕೆ ಮತ್ತೊಂದು ಉದಾಹರಣೆಯನ್ನೂ ನೀಡಬಹುದು. ಹಿಂದಿನ ಕಾಲದ ಮನೆಯಲ್ಲಿ ಕಿಟಕಿಗಳು ಮಾತ್ರ ಇದ್ದವು. ಹೆಚ್ಚೆಂದರೆ ಕಿಟಕಿ ಮುಚ್ಚಲೊಂದು ಜೋಡಿಬಾಗಿಲು. ನಂತರ ಗಾಳಿಯಾಡಲೂ ಅನುಕೂಲವೆಂಬಂತೆ ಕಿಟಕಿಗಳನ್ನು ಮುಚ್ಚಲು ಪರದೆಗಳು ಬಂದವು. ಮುಂದೆ ಕೋಣೆಯ ಒಳಗೋಡೆಯ ಬಣ್ಣಕ್ಕೆ ಹೊಂದುವಂತಹ ಸೊಗಸಾದ ಕರ್ಟನ್ನುಗಳನ್ನು ಹಾಕಿಸುವ ರೂಢಿಯು ಶುರುವಾಯಿತು.

ಇಂಟೀರಿಯರ್ ಡಿಸೈನಿಂಗ್ ಎಂಬ ಫ್ಯಾನ್ಸಿ ಹೆಸರು ಕೂಡ ಅದಕ್ಕೆ ಸಿಕ್ಕಿತು. ಒಟ್ಟಿನಲ್ಲಿ ತಮ್ಮ ಮನೆಯ ಕಿಟಕಿಯ ಪರದೆಗಳನ್ನು ಸ್ವತಃ ಮುಚ್ಚುವ ಅಥವಾ ತೆರೆಯುವ ಅಭ್ಯಾಸವಾದರೂ ಜನರಿಗೆ ಒಂದು ಮಟ್ಟಿಗಿತ್ತು. ಈಗಿನ ಕಾಲದ ಐಷಾರಾಮಿ ಅಪಾರ್ಟ್ ಮೆಂಟುಗಳಲ್ಲಿ ಇದನ್ನೂ ಕೂಡ ಸ್ವಿಚ್ ವ್ಯವಸ್ಥೆಗೆ ಅಳವಡಿಸಲಾಗಿದೆ. ಗುಂಡಿ ಒತ್ತಿದೊಡನೆ ಎಲ್ಲವೂ ಆಟೋಮ್ಯಾಟಿಕ್.

ಈ ಬಗೆಯ ಆರಾಮದಾಯಕ ತಂತ್ರಜ್ಞಾನಗಳು ಇಂದು ಒಂದೆರಡು ಉತ್ಪನ್ನಗಳಿಗೆ ಮಾತ್ರ ಸೀಮಿತವೇನಲ್ಲ. ಇಂದು ಒಂದು ಕ್ಲಿಕ್ ಮಾತ್ರದಲ್ಲಿ ಮನೆಬಾಗಿಲಿಗೆ ಕ್ಯಾಬ್ ಬಂದುಬಿಡುತ್ತದೆ. ಸಂಬಂಧಿ ಆಪ್ ಇದ್ದರೆ ಬೇಕಿರುವ ರೆಸ್ಟೊರೆಂಟಿನಿಂದ, ಬೇಕಿರುವ ಖಾದ್ಯವು ಕೆಲವೇ ನಿಮಿಷಗಳಲ್ಲಿ ಲಭ್ಯ. ಎಡಕ್ಕೂ, ಬಲಕ್ಕೂ ಸ್ವೈಪ್ ಮಾಡಿದರೆ ಗೆಳೆತನ, ಸಂಬಂಧಗಳು ಕುದುರುತ್ತವೆ. ದಕ್ಕಿದ್ದು ಬೇಡವೆನಿಸಿದರೆ ಬಿಸಾಕಲು ಡಿಲೀಟ್ ಆಯ್ಕೆಯು ಇದ್ದೇ ಇದೆ. ಸಾಲ ತೆಗೊಳ್ಳಿ ಪ್ಲೀಸ್ ಎಂದು ಸ್ವತಃ ಬ್ಯಾಂಕುಗಳೇ ದುಂಬಾಲು ಬೀಳುತ್ತವೆ. ಬಹುತೇಕ ಎಲ್ಲವೂ ಈ ಪರಿಯ ವೇಗದಲ್ಲಿ ನಮ್ಮದಾಗುವುದು ನಮಗೆ ಬೇಕಿದೆಯೋ ಇಲ್ಲವೋ ಎಂಬುದು ಬೇರೆ ವಿಷಯ. ಆದರೆ ಇವೆಲ್ಲವೂ ನಮಗೆ ಸಿಕ್ಕಿಯಾಗಿದೆ ಮತ್ತು ಇಂದು ನಮ್ಮ ಜೀವನಶೈಲಿಯ ಅವಿಭಾಜ್ಯ ಭಾಗವಾಗಿದೆ ಅನ್ನುವುದಂತೂ ಸತ್ಯ.

ನಮ್ಮ ಬದುಕಿನ ನೈಜ ಅವಶ್ಯಕತೆಗಳನ್ನು ಮತ್ತು ನಮ್ಮೊಳಗಿರುವ ಕೊಳ್ಳುಬಾಕತನದ ನಡುವಿರುವ ತೆಳುಗೆರೆಯನ್ನು ತೆರೆದಿಡಲು, ಲೇಖಕ ಎಡ್ವರ್ಡ್ಸ್ ಈ ಬಗ್ಗೆ ಸೂಕ್ಷ್ಮವಾಗಿ ಹೇಳುವ ಕೆಲ ಅಂಶಗಳನ್ನು ಇಲ್ಲಿ ಪೀಠಿಕೆಯ ಧಾಟಿಯಲ್ಲಿ ದಾಖಲಿಸಬೇಕಾಯಿತು. ವೇಗವಾಗಿ ಬೆಳೆಯುತ್ತಿರುವ ಮಹಾನಗರಿಗಳಲ್ಲಿ ಜನರಿಗೆ ಶಾಪಿಂಗ್ ಬಗೆಗಿರುವ ಮೋಹವು ಸಹಜ. ಅದರಲ್ಲೂ ದಿಲ್ಲಿಯಂತಹ ನಗರಿಯಲ್ಲಿ ಶಾಪಿಂಗಿಗೆ ವಿಶೇಷವಾದ ಸ್ಥಾನವಿದೆ. ದಿಲ್ಲಿಗೆ ಬರುವ ಪ್ರವಾಸಿಗರಷ್ಟೇ ಅಲ್ಲದೆ, ಇಲ್ಲಿ ನೆಲೆಸಿರುವ ಸ್ಥಳೀಯರಿಗೂ ಕೂಡ ಖರೀದಿಯ ಬಗ್ಗೆ ವಿಶೇಷವಾದ ಒಲವಿದೆ. ಹಲವು ಕಾರಣಗಳಿಂದಾಗಿ ಜನಸಾಮಾನ್ಯರಿಂದ ದಿಲ್ಲಿಯಲ್ಲಿ ಮಾಡಲಾಗುವ ಖರೀದಿಗಳು, ದೇಶದ ಇತರ ಭಾಗಗಳಲ್ಲಿ ಮಾಡಲಾಗುವ ಶಾಪಿಂಗಿಗಿಂತ ಸಾಕಷ್ಟು ಭಿನ್ನ.

ಇದಕ್ಕೊಂದು ಕಾರಣವೂ ಇದೆ. ಅದೇನೆಂದರೆ ದಿಲ್ಲಿಯ ಮಾರುಕಟ್ಟೆಗಳಿಗಿರುವ ಅಪ್ಪಟ ದೇಸಿತನ. ಜಾಗತೀಕರಣವು ಭಾರತಕ್ಕೆ ಕಾಲಿಟ್ಟ ನಂತರ ಜಾಗತಿಕ ಮಟ್ಟದ ಬಹುತೇಕ ಪ್ರತಿಷ್ಠಿತ ಬ್ರಾಂಡುಗಳು ನಮ್ಮಲ್ಲೂ ಕಾಲಿಟ್ಟು ದಶಕವೇ ಕಳೆದಿದೆ. ಹೀಗಾಗಿ ವಿದೇಶಿ ಉತ್ಪನ್ನಗಳ ಬಗ್ಗೆ ಭಾರತೀಯರಿಗೆ ಹಿಂದೆ ಇದ್ದ ಕುತೂಹಲವು ಈಗ ಉಳಿದಿಲ್ಲ.

ಇನ್ನು ಪ್ರತಿಷ್ಠಿತ ಕಂಪೆನಿಗಳ ಉತ್ಪನ್ನಗಳನ್ನು ಮಾರುವ ಮಳಿಗೆಗಳ ವಿನ್ಯಾಸದಿಂದ ಹಿಡಿದು ಖರೀದಿಸುವ ಅನುಭವದವರೆಗೂ ಬಹುತೇಕ ಎಲ್ಲವೂ ಸೇಮ್-ಟು-ಸೇಮ್. ಮೆಕ್-ಡೊನಾಲ್ಡ್ ಬರ್ಗರನ್ನು ಅಮೆರಿಕಾದಲ್ಲಿ ತಿಂದರೂ, ದುಬೈ ಏರ್-ಪೋರ್ಟಿನಲ್ಲಿ ತಿಂದರೂ, ಉಡುಪಿಯಲ್ಲಿ ತಿಂದರೂ ಹೆಚ್ಚಿನ ವ್ಯತ್ಯಾಸವೇನಿಲ್ಲ. ಲೆವಿಸ್ ಜೀನ್ಸು ಟಿಂಬಕ್ಟುವಿನಲ್ಲೂ ಅದೇ, ಕುಂದಾಪುರದಲ್ಲೂ ಅದೇ.

ಹೀಗಾಗಿ ಒಂದೇ ದೇಸಿ ಮಾರ್ಕೆಟ್ಟಿಗೆ ಹತ್ತು ಬಾರಿ ಹೋಗಿಬರುವ ಅನುಭವಕ್ಕೂ, ಖ್ಯಾತ ಬ್ರಾಂಡ್ ಒಂದರ ಹತ್ತು ಫ್ರಾಚೈಸಿ ಮಳಿಗೆಗಳಿಗೆ ಹೋಗಿ ಸಿಗುವ ಬಹುತೇಕ ಒಂದೇ ಅನುಭವಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಶಾಪಿಂಗ್ ಮಾಲ್ ಗಳು ಬೇಡವೆಂದರೂ ನಮ್ಮಲ್ಲಿ ವಿಚಿತ್ರವಾದ ಕೃತಕತೆಯೊಂದನ್ನು ಬೇಡುತ್ತವೆ. ವಿದೇಶಿ ಭಾಷೆ, ಉಡುಗೆತೊಡುಗೆ, ರೂಢಿಗಳನ್ನು ಒತ್ತಾಯಪೂರ್ವಕವಾಗಿ ಹೇರಿಕೊಳ್ಳುವಂತೆ ಮಾಡುತ್ತವೆ. ಹೊಸಬರಿಗೆ ಇವೆಲ್ಲಾ ಬಹಳ ಕಷ್ಟ. ಆದರೆ ಲೋಕಲ್ ಜಾತ್ರೆಗಳಲ್ಲಾಗಲಿ, ಮಾರ್ಕೆಟ್ಟುಗಳಲ್ಲಾಗಲಿ ಅಂಥಾ ಸಮಸ್ಯೆಗಳ ಭಾರವಿರುವುದಿಲ್ಲ. ಇತ್ತ ಜೇಬಿಗೂ ಆರಾಮ. ವಿದೇಶಿ ವೈಭವವು ಹೆಚ್ಚೆಂದರೆ ನಮ್ಮನ್ನು ಬೆರಗಾಗಿಸಬಲ್ಲದು. ಆದರೆ ದೇಸಿ ಸಂಗತಿಗಳಲ್ಲಿ ಅನುಭವಕ್ಕೆ ಬರುವ ತನ್ನತನವು ಬೆಲೆಕಟ್ಟುವಂಥದ್ದಲ್ಲ.

ದಿಲ್ಲಿಯ ಮಾರ್ಕೆಟ್ಟುಗಳು ಹೃದಯಕ್ಕೆ ಹತ್ತಿರವಾಗುವುದು ಈ ಕಾರಣಕ್ಕಾಗಿಯೇ. ದಿಲ್ಲಿಯ ಜನಮಾನಸದಲ್ಲಿ ಬಟ್ಟೆಗಳ ಖರೀದಿಗೆ ಖ್ಯಾತಿಯನ್ನು ಗಳಿಸಿರುವ ಸರೋಜಿನಿ ನಗರ ಮಾರ್ಕೆಟ್, ಜನಪಥ್ ಮಾರ್ಕೆಟ್, ಕರೋಲ್ ಬಾಗ್ ಮಾರ್ಕೆಟ್, ಗ್ರೇಟರ್ ಕೈಲಾಶ್ ಮಾರ್ಕೆಟ್ಟುಗಳು ಇದಕ್ಕೊಂದು ಉತ್ತಮ ಉದಾಹರಣೆ. ಕಡಿಮೆ ದರದಲ್ಲಿ, ಸಾಕಷ್ಟು ಬಟ್ಟೆಗಳ ಆಯ್ಕೆಗಳನ್ನು ಹೊಂದಿರುವ ಈ ಮಾರುಕಟ್ಟೆಗಳು ಪಕ್ಕಾ ಅರ್ಥದಲ್ಲಿ ದಿಲ್ಲಿಯ ಲೋಕಲ್ ಬಾಜಾರುಗಳು. ವಾರಾಂತ್ಯದ ದಿನಗಳಲ್ಲಿ ಇಲ್ಲಿ ಸೇರುವ ಜನಜಂಗುಳಿಯು ಅಕ್ಷರಶಃ ಉಸಿರುಗಟ್ಟುವಂತಿರುವುದು ಇಲ್ಲಿ ಕಾಣುವ ಸಾಮಾನ್ಯ ದೃಶ್ಯಗಳಲ್ಲೊಂದು. ಹಾಗೆಂದು ಕಾಲಿಡಲೂ ಆಗದಷ್ಟಿನ ಜನಸಂದಣಿಯು ಇಲ್ಲಿಯ ಶಾಪಿಂಗ್ ಮೋಹವನ್ನೆಂದೂ ದಿಲ್ಲಿ ನಿವಾಸಿಗಳಲ್ಲಿ ತಗ್ಗಿಸಿಲ್ಲ. ಬದಲಾಗಿ ಮತ್ತಷ್ಟು ಹೆಚ್ಚಿಸಿದೆ.

ದಿಲ್ಲಿಯ ಹೃದಯದಂತಿನ ಕನ್ನಾಟ್ ಪ್ಲೇಸಿನಲ್ಲಿರುವ ಪಾಲಿಕಾ ಬಾಜಾರ್, ಹಳೇದಿಲ್ಲಿಯ ಪಹಾಡ್ ಗಂಜ್ ಮಾರ್ಕೆಟ್, ಕಮಲಾ ನಗರ್ ಮಾರ್ಕೆಟ್ ಗಳದ್ದೂ ಬಹುತೇಕ ಇದೇ ಕತೆ. ಶಹರದ ಬಹುಪಾಲು ಜನತೆಯನ್ನು ಈ ಮಾರುಕಟ್ಟೆಗಳು ಆಕರ್ಷಿಸುವುದು ಇಲ್ಲೆಲ್ಲಾ ಭರ್ಜರಿಯಾಗಿರುವ ಚೌಕಾಶಿ ವ್ಯವಹಾರಕ್ಕೆ. ಈ ನಿಟ್ಟಿನಲ್ಲಿ ದಿಲ್ಲಿಯಲ್ಲಿ ನನ್ನ ಆರಂಭದ ದಿನಗಳು ಸ್ವಾರಸ್ಯಕರವಾಗಿದ್ದವು. ಒಮ್ಮೆ ಪಾಲಿಕಾ ಬಾಜಾರಿನಲ್ಲಿ ಐನೂರು ರೂಪಾಯಿಯದ್ದೆಂದು ತೋರಿಸಲಾಗುತ್ತಿದ್ದ ಬೆಲ್ಟ್ ಒಂದನ್ನು ನನ್ನ ಮಿತ್ರನೊಬ್ಬ ಎಪ್ಪತ್ತು ರೂಪಾಯಿಗೆ ಕೇಳಿದಾಗ, ನನಗಾದ ಬೆರಗಿಗೆ ಮಾತೇ ಹೊರಟಿರಲಿಲ್ಲ. ಹೀಗೆ ಅಲ್ಲಿ ಶುರುವಾದ ಚರ್ಚೆಯು ಸಾಮಾನ್ಯದ್ದಲ್ಲ. ಕೊನೆಗೂ ಆ ಬೆಲ್ಟ್ ಅಂದು ತೊಂಭತ್ತು ರೂಪಾಯಿಗೆ ಬಿಕರಿಯಾಗಿತ್ತು.

ಚೌಕಾಶಿಯ ಲೋಕದಲ್ಲಿ ಮತ್ತೊಂದು ಬಗೆಯ ಗ್ರಾಹಕರ ವರ್ಗವೂ ಇದೆ. ಈ ವರ್ಗವು ತನ್ನ ದರವನ್ನೊಂದು ಹೇಳಿ ಅಲ್ಲೇ ಝಾಂಡಾ ಊರಿಬಿಡುತ್ತದೆ. ಥೇಟು ಸತ್ಯಾಗ್ರಹಕ್ಕೆ ಕೂತಂತೆ. ರಚ್ಚೆ ಹಿಡಿದು ಕೂರುವ ಮಗುವಿನಂತೆ. ಹಳೇದಿಲ್ಲಿಯಲ್ಲಿ ಸಗಟಿನಲ್ಲಿ ನಡೆಯುತ್ತಿದ್ದ ಕೆಲ ಉತ್ಪನ್ನಗಳ ಬಿಕರಿಯಲ್ಲಿ ಇಂಥವರನ್ನು ನಾನು ನೋಡಿದ್ದೆ. ಚೌಕಾಶಿಗಿಳಿದುಬಿಟ್ಟರೆ ಪಟ್ಟು ಬಿಡದ ಈ ಗ್ರಾಹಕರು ಅದ್ಯಾವ ಮಟ್ಟಿನ ಪರಿಣತರೆಂದರೆ, ಉತ್ಪನ್ನವು ಕೊನೆಗೆ ಅರ್ಧಕ್ಕರ್ಧ ಬೆಲೆಯಲ್ಲಿ ಬಿಕರಿಯಾಗಿರುತ್ತದೆ. ಭಾರತೀಯರಿಗಿರುವ ಚೌಕಾಶಿಯ ಅದ್ಭುತ ಕೌಶಲಗಳನ್ನು ಕಾಣಬೇಕಾದರೆ ನಿಜಕ್ಕೂ ಇಂತಹ ಸ್ಥಳಗಳಲ್ಲಿ ಬಂದು ಕೂರಬೇಕು.

ಹಾಗೆ ನೋಡಿದರೆ ಈ ಚೌಕಾಶಿ ಚೌಚೌ ಬಾತ್ ಸಂತೆಯ ಮಧ್ಯೆ ಇರುವ ವಿದೇಶೀಯರಿಗೆ ಇವೆಲ್ಲಾ ಒಂಥರಾ ಅಚ್ಚರಿಯ ವಿಷಯಗಳೇ ಹೌದು. ಆದರೆ ತರಹೇವಾರಿ ಕಾರಣಗಳಿಂದಾಗಿ ದಿಲ್ಲಿಗೆ ಸಾಕಷ್ಟು ಬಾರಿ ಬಂದು ಹೋಗುವ ಹಲವು ವಿದೇಶೀಯರು ಇವೆಲ್ಲವನ್ನು ಕಂಡು ತಾವೂ ಚೌಕಾಶಿಯ ವಿದ್ಯೆಯನ್ನು ಕಲಿತುಕೊಳ್ಳುವುದುಂಟು.

ಹೀಗೆ ಆಟೋ ಚಾರ್ಜಿನಿಂದ ಹಿಡಿದು ಆಲೂಗಡ್ಡೆ ಖರೀದಿಯವರೆಗೆ, ಹೂವು-ಹಣ್ಣುಗಳಿಂದ ಹಿಡಿದು ಹಾಟ್ ಟ್ರೆಂಡಿಂಗ್ ದಿರಿಸುಗಳವರೆಗೆ ಭಾರತೀಯರನ್ನು ಅನುಕರಿಸುತ್ತಾ ಇವರೂ ಚೌಕಾಶಿ ಮಾಡಿ ಯಶಸ್ವಿಯಾಗುತ್ತಾರೆ. ದಿಲ್ಲಿಯು ಎಂತೆಂಥವರನ್ನೂ ದೇಸಿ ಮಾಡಬಲ್ಲದು ಎಂಬುದಕ್ಕೆ ಇದಕ್ಕಿಂತ ಸೊಗಸಾದ ನಿದರ್ಶನವು ಬೇಕಿಲ್ಲ.

ಅಸಲಿಗೆ ದಿಲ್ಲಿಯಲ್ಲಿರುವ ಬಹುತೇಕ ಬಾಜಾರುಗಳಿಗೆ ‘ದೇಸಿ’ ರೂಪವನ್ನು ತರುವ ಅಂಶವೇ ಇದು. ಪ್ರತಿಷ್ಠಿತ ಬ್ರಾಂಡುಗಳೆಡೆಗೆ ತಮಗಿರುವ ಆರಾಧನಾಭಾವವನ್ನು ಇಟ್ಟುಕೊಂಡೇ ಅದರ ಜುಜುಬಿ ನಕಲುಗಳಿಗೆ ಹಾತೊರೆಯುವ ಮಂದಿ, ಏನೋ ಖರೀದಿಸಲೆಂದು ಬಂದು ಮತ್ತೇನೋ ಖರೀದಿಸಿ ಜೇಬು ಖಾಲಿ ಮಾಡಿ ಹೋಗುವ ಗೊಂದಲದ ಮಂದಿ, ವರ್ಷಕ್ಕೆ-ಆರು ತಿಂಗಳಿಗೆ ಸಾಕೆಂದು ಒಂದೇ ಏಟಿಗೆ ಭರ್ಜರಿ ಶಾಪಿಂಗ್ ಮುಗಿಸಿ ಮತ್ತೆ ಅತ್ತ ತಲೆ ಹಾಕದ ಮಂದಿ, ವಾರಕ್ಕೊಮ್ಮೆ ಹೋದರೂ ಮತ್ತಷ್ಟು ಬೇಕೆನ್ನುವ ಶಾಪಾಹಾಲಿಕ್ ಮಂದಿ… ಹೀಗೆ ಇಲ್ಲಿಯ ಜಗತ್ತೇ ವಿಭಿನ್ನ. ಸಂಪೂರ್ಣವಾಗಿ ಕಮರ್ಶಿಯಲ್ ಕೋನವನ್ನು ಕಾದಿಟ್ಟುಕೊಂಡೇ, ಭಾರತದ ದೇಸಿ ಜೀವನಶೈಲಿಯ ನೋಟಗಳನ್ನು ವಿಶಿಷ್ಟ ಬಗೆಯಲ್ಲಿ ತಮ್ಮ ನರನಾಡಿಗಳಲ್ಲಿ ಉಳಿಸಿಕೊಂಡಿರುವ ಬಾಜಾರುಗಳು ನಮಗೆ ಮುಖ್ಯವಾಗುವುದು ಹೀಗೆ.

ಹಾಗಂತ ದಿಲ್ಲಿಯ ದೇಸಿ ಬಾಜಾರುಗಳು ಬಟ್ಟೆಗಳಿಗಷ್ಟೇ ಸೀಮಿತವಲ್ಲ. ಮಸಾಲೆ ಪದಾರ್ಥಗಳಿಗೆ ಖರಿ ಬಾವ್ಲೀ, ಎಲೆಕ್ಟಾçನಿಕ್ಸ್ ವಸ್ತುಗಳಿಗೆ ಗಫರ್ ಮಾರ್ಕೆಟ್-ನೆಹರೂ ಪ್ಲೇಸ್ ಮಾರ್ಕೆಟ್, ಕ್ಯಾಮೆರಾಗಳಿಗೆ ಫೋಟೋ ಮಾರ್ಕೆಟ್, ಬೆಳ್ಳಿಗೆ ದರಿಬಾ ಕಲನ್, ಮದುವೆ ಸಂಬಂಧಿ ಶಾಪಿಂಗಿಗೆ ಕಿನಾರಿ ಬಜಾರ್, ಜವಳಿಗೆ ಶಂಕರ್ ಮಾರ್ಕೆಟ್, ಆಂಟಿಕ್ ವಸ್ತುಗಳಿಗೆ ಸುಂದರ್ ನಗರ್ ಮಾರ್ಕೆಟ್, ಹೂವಿಗೆ ಗಾಝಿಪುರ್ ಫೂಲ್ ಮಂಡಿ, ಮಣ್ಣಿನ ಕಲಾಕೃತಿಗಳಿಗೆ ಮಟ್ಕಾ ಮಾರ್ಕೆಟ್, ಪುಸ್ತಕಗಳಿಗೆ ದರಿಯಾಗಂಜ್, ಐತಿಹಾಸಿಕ ಹಿನ್ನೆಲೆಯುಳ್ಳ ಮೀನಾ ಬಜಾರ್, ಚಾವಡಿ ಬಜಾರ್… ಹೀಗೆ ಎಲ್ಲವೂ ಒಂದಕ್ಕಿಂತ ಒಂದು ವೈವಿಧ್ಯಮಯ. ಶಹರವೊಂದರಲ್ಲಿ ಶಾಪಿಂಗಿಗೆಂದೇ ಇರುವ ಇಷ್ಟು ಬಗೆಯ ವೈವಿಧ್ಯಗಳು ಬಹುಷಃ ದಿಲ್ಲಿ ಬಿಟ್ಟು ಬೇರೆಲ್ಲೂ ಇರಲಾರವು.

ದಿಲ್ಲಿಯ ಖರಿ ಬಾವ್ಲಿ ಮಾರುಕಟ್ಟೆಯು ಏಷ್ಯಾದಲ್ಲೇ ಅತ್ಯಂತ ದೊಡ್ಡದಾದ, ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುವ ದೈತ್ಯ ಮಾರುಕಟ್ಟೆ. ಖ್ಯಾತ ಕೆಂಪುಕೋಟೆಗೆ ಹೊಂದಿಕೊಂಡೇ ಇರುವ ಮೀನಾ ಬಜಾರು ಮೊಘಲರ ಕಾಲದ ರಾಜಮನೆತನದ ಸದಸ್ಯರ ಶಾಪಿಂಗಿಗೆಂದೇ ವಿಶೇಷವಾಗಿ ನಿರ್ಮಿಸಲ್ಪಟ್ಟಿದ್ದು. ಹಳೇದಿಲ್ಲಿಯ ಭಾಗವಾಗಿರುವ ಖ್ಯಾತ ಚಾಂದನೀಚೌಕ್ ಸ್ವತಃ ಮೋತಿ ಬಜಾರ್, ಚೋರ್ ಬಜಾರ್, ಪರಾಠೇವಾಲೀ ಗಲೀಗಳನ್ನು ತನ್ನೊಡಲಿನಲ್ಲಿ ಇಟ್ಟುಕೊಂಡು ಬೀಗುತ್ತಿದೆ. ಇಲ್ಲಿನ ಪರಾಠಾವಾಲೀ ಗಲೀ ಎಂಬ ಗಲ್ಲಿಯಲ್ಲಿ ಸಿಗುವ ರುಚಿಕರ ಪರಾಠಾಗಳ ಖ್ಯಾತಿಯು ಬರೀ ದಿಲ್ಲಿಗಷ್ಟೇ ಸೀಮಿತವಲ್ಲ. ಅದು ಈ ದೇಶದ ಹಳ್ಳಿಗಳಿಗೂ ಗೊತ್ತು.

ದಿಲ್ಲಿಯಂತಹ ಮಹಾನಗರಿಯಲ್ಲಿ ಜನಸಾಮಾನ್ಯರಿಗೇ ಇಷ್ಟೊಂದು ಮಾರ್ಕೆಟ್ಟುಗಳಿದ್ದರೆ ಇನ್ನು ಸಿರಿವಂತರಿಗೇನು ಕಮ್ಮಿಯೇ? ಖಂಡಿತ ಇಲ್ಲ. ದಿಲ್ಲಿ ಹಾಟ್ ನಂತಹ ಮಿನಿ ಮಾರ್ಕೆಟ್ಟುಗಳು ದಿಲ್ಲಿಯ ಸಾಂಪ್ರದಾಯಿಕ ಬಾಜಾರುಗಳಿಗಿಂತ ಕೊಂಚ ದೊಡ್ಡ ಮಟ್ಟಿನವು. ಹೀಗಾಗಿ ಇಲ್ಲಿಯ ದರಗಳು ಕೊಂಚ ದುಬಾರಿ. ಇನ್ನು ದಿಲ್ಲಿಯ ಖಾನ್ ಮಾರ್ಕೆಟ್ ಇಡೀ ಏಷ್ಯಾದ ದುಬಾರಿ ಮಾರ್ಕೆಟ್ಟುಗಳ ಪಟ್ಟಿಯಲ್ಲಿ ಬರುವ ಮಾರುಕಟ್ಟೆಗಳಲ್ಲೊಂದು. ಪ್ರತಿಷ್ಠಿತ, ದುಬಾರಿ ಬ್ರಾಂಡ್ ಗಳನ್ನಷ್ಟೇ ಇಷ್ಟಪಡುವ ಮಂದಿಗೆ ಖಾನ್ ಮಾರ್ಕೆಟ್ ಎಂದಿನಂತೆ ನೆಚ್ಚಿನ ತಾಣ. ಒಳ್ಳೊಳ್ಳೆಯ ಪುಸ್ತಕ ಮಳಿಗೆಗಳು ಖಾನ್ ಮಾರ್ಕೆಟ್ಟಿನ ಇತರ ವಿಶಿಷ್ಟತೆಗಳಲ್ಲೊಂದು.

ಇನ್ನುಳಿದಂತೆ ಖರೀದಿ, ಊಟೋಪಚಾರ, ವಿಹಾರ ಎಲ್ಲವೂ ಜುಮ್ಮನೆ, ಒಂದೇ ಕಡೆ ಆಗಬೇಕೆಂದಿದ್ದರೆ ದಿಲ್ಲಿಯ ಕನ್ನಾಟ್ ಪ್ಲೇಸಿಗೆ ಬರಬೇಕು. ಇದೊಂಥರಾ ದೇಸಿ-ವಿದೇಶಿಗಳ ಹದವಾದ ಮಿಶ್ರಣ. ಇಲ್ಲಿ ಬಾಂಬೇ ಮಿಠಾಯಿ, ಪಾನಿಪುರಿ, ಕಡಲೆಕಾಯಿ ಸಿಗುವಷ್ಟೇ ಸುಲಭವಾಗಿ ಪಿಜ್ಜಾ-ಬರ್ಗರುಗಳೂ ಸಿಗುತ್ತವೆ. ಒಂದು ಕಡೆ ಲೆವಿಸ್-ಲೀ ಕೂಪರ್ ಬ್ರಾಂಡಿನ ದಿರಿಸುಗಳು ನಮ್ಮನ್ನು ಆಕರ್ಷಿಸಿದರೆ, ಪಕ್ಕದಲ್ಲೇ ಇರುವ ಪಾಲಿಕಾ ಬಜಾರಿನಲ್ಲಿ ದೇಸಿ ಉತ್ಪನ್ನಗಳ ಪುಟಾಣಿ ಗುಡ್ಡಗಳು ಕಣ್ಣಿಗೆ ರಾಚುತ್ತವೆ. ಹೀಗಾಗಿ ಶಾಪಿಂಗ್ ಗೀಳಿರುವವರ ಹೊರತಾಗಿಯೂ, ಕನ್ನಾಟ್ ಪ್ಲೇಸ್ ಎಂದರೆ ಎಲ್ಲರಿಗೂ ಇಷ್ಟ.

ದಿಲ್ಲಿಯ ಬಗ್ಗೆ ದಾಖಲಿಸುವಾಗ ದಿಲ್ಲಿಯ ಬಾಜಾರುಗಳ ಬಗ್ಗೆ ಬರೆಯದಿರುವುದು ಕಷ್ಟ. ಬಾಜಾರುಗಳು ಇಲ್ಲಿಯ ವಾಣಿಜ್ಯ ಕೇಂದ್ರಗಳಷ್ಟೇ ಆಗದೆ, ಶಹರದ ಇತಿಹಾಸ ಮತ್ತು ಸಂಸ್ಕೃತಿಯ ಭಾಗವೂ ಆಗಿಹೋಗಿವೆ. ದ ತಾವೋ ಆಫ್ ಬೋವಿ ಖ್ಯಾತಿಯ ಲೇಖಕ ಮಾರ್ಕ್ ಎಡ್ವರ್ಡ್ಸ್ ಆಧುನಿಕ ಯುಗದ ಕೊಳ್ಳುಬಾಕತನದ ಬಗ್ಗೆ ಸೊಗಸಾಗಿ ಬರೆಯುತ್ತಾರೆ. ಹೀಗಿರುವಾಗ ದಿಲ್ಲಿಯಂತಹ ಅಪ್ಪಟ ಬಾಜಾರುಗಳ ಶಹರದಲ್ಲಿ ನೆಲೆಸುವ ಕಷ್ಟ-ಸುಖಗಳನ್ನು ಅವರ ಬಳಿಯೂ ಒಮ್ಮೆ ಹೇಳಿ ನೋಡಬೇಕು. ಶಾಪಿಂಗಿನಂತಹ ಆಧುನಿಕ ಗೀಳುಗಳ ಬಗ್ಗೆ ಸಾಂಸ್ಕೃತಿಕ ನೆಲೆಯಲ್ಲೂ ಅರಿಯಲು ಸಾಧ್ಯವೇ ಎಂಬುದನ್ನು ಅವಲೋಕಿಸಬೇಕು.

ಇಂತಹ ಶಹರಗಳಲ್ಲಿ ನೆಲೆಯೂರುವ ಜನರ ಮನೋಭಾವಗಳನ್ನು, ವ್ಯಾಪಾರಿ ಲೆಕ್ಕಾಚಾರಗಳ ಹಿಂದಿರಬಹುದಾದ ಸೂಕ್ಷ್ಮ ಹೊಳಹುಗಳನ್ನು ಅವರು ಸಮರ್ಥವಾಗಿ ಡಿ-ಕೋಡ್ ಮಾಡಬಲ್ಲರೇನೋ ಎಂಬ ಅಚ್ಚರಿ ಸಹಿತವಾದ ಕುತೂಹಲ ನನ್ನದು.

‍ಲೇಖಕರು Avadhi

June 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: