‘ದಿಲ್ಲಿಗೊಂದು ಡೆಡ್ಲೈನ್ ಅಲರ್ಟ್’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ದಿಲ್ಲಿಗೆ ಬರಬೇಕಾದರೆ ಡ್ರೆಸ್ ಕೋಡ್ ಬೇಕು ಎಂಬುದು ನಾವೆಲ್ಲಾ ಸಿಡಿಸುತ್ತಿದ್ದ ಪುರಾತನ ಜೋಕುಗಳಲ್ಲೊಂದು. 

ಇಂದಿಗೂ ದಿಲ್ಲಿಯಿಂದ ದೂರವಿರುವ ನನ್ನ ಮಿತ್ರರು ಇಲ್ಲಿಗೆ ಬರುವುದಾದರೆ ಶಹರದ ಹವಾಮಾನ ಹೇಗಿದೆ ಎಂದು ಕೇಳುತ್ತಾರೆ. ಒಮ್ಮೆಯಂತೂ ಇಲ್ಲಿಯ ಹವಾಮಾನದ ಮಾಹಿತಿಯನ್ನು ನೀಡುವುದು ನನಗೆ ಅದೆಷ್ಟು ಅಭ್ಯಾಸವಾಗಿತ್ತೆಂದರೆ ಹಲವರು ಕೇಳದಿದ್ದರೂ ಬಿಟ್ಟಿ ಉಪದೇಶದಂತೆ ಧಾರಾಳವಾಗಿ ನೀಡುತ್ತಿದ್ದೆ.

ಚಳಿಗಾಲವಾಗಿದ್ದರೆ ಸ್ವೆಟರ್ರು, ಗ್ಲೌಸು, ಮಂಕಿ ಕ್ಯಾಪುಗಳನ್ನೆಲ್ಲಾ ಮರೆಯದೆ ತನ್ನಿ ಎಂದು ಬರುವವರಿಗೆ ಹೇಳುವುದು. ಬೇಸಿಗೆಯಾಗಿದ್ದರೆ ಸರಳವಾದ ನಾಲ್ಕೈದು ಜೊತೆ ಬಟ್ಟೆಗಳಿದ್ದರೆ ಸಾಕು ಎನ್ನುವ ಕಿವಿಮಾತು. ದಿಲ್ಲಿಯ ಚಂಚಲ ಹವೆಯ ಹಿನ್ನೆಲೆಯಲ್ಲಿ ಇಲ್ಲಿರುವ ಎಲ್ಲರೂ ಹವಾಮಾನ ತಜ್ಞರೇ. 

ದಿಲ್ಲಿಗೆ ಬರುವುದೆಂದರೆ ಸುಮ್ಮನೆ ಎದ್ದು ಬರುವುದಲ್ಲ. ಹೀಗೆ ತಾವಿರುವ ಸ್ಥಳದಿಂದ ದಿಲ್ಲಿಗೆ ಮನಬಂದಾಗ ಎದ್ದು ಬರುವುದು ನಮ್ಮ ಪುಡಾರಿಗಳು ಮತ್ತು ವಿಲಾಸಿಗಳು ಮಾತ್ರ. ಏಕೆಂದರೆ ಸಕಲ ಸವಲತ್ತುಗಳೂ ಕೂಡ ದಿಲ್ಲಿಯಲ್ಲಿ ಅವರಿಗಾಗಿ ಕಾಯುತ್ತಿರುತ್ತವೆ. ಆದರೆ ಸಾಮಾನ್ಯನೊಬ್ಬನ ಮಾತು ಹಾಗಲ್ಲವಲ್ಲ! ಸಾಮಾನ್ಯನೊಬ್ಬ ದಿಲ್ಲಿಗೆ ಬರುವುದೆಂದರೆ ಶಹರದ ಬೇರೆ ಯಾವುದರ ಬಗ್ಗೆ ಮಾಹಿತಿಯಿಲ್ಲದಿದ್ದರೂ, ಇಲ್ಲಿಯ ಹವಾಮಾನದ ಬಗ್ಗೆ ತಕ್ಕಮಟ್ಟಿನ ಮಾಹಿತಿಯಿರಲೇಬೇಕು. ಇಲ್ಲದಿದ್ದರೆ ಅತಿಥೇಯ-ಅತಿಥಿಗಳಿಬ್ಬರಿಗೂ ಫಜೀತಿಯಾಗುವುದು ಖಚಿತ. ಹೀಗಾಗಿ ಇದು ನಮ್ಮ-ನಿಮ್ಮಗಳ ಮಾತೇ ಅಲ್ಲ. ಸ್ವತಃ ಮಹಾನಗರಿಯೇ ಬರುವವರಿಂದ ಒಂದು ಬಗೆಯ ಡ್ರೆಸ್ ಕೋಡ್ ಅನ್ನು ಬೇಡುತ್ತದೆ. 

ಒಮ್ಮೆ ಮಂಗಳೂರಿನಿಂದ ಬಂದಿದ್ದ ನನ್ನ ಹಿರಿಯ ಸಂಬಂಧಿಕರೊಬ್ಬರು ತೆಳುವಾದ ಸ್ವೆಟರ್ ಒಂದನ್ನು ಹಿಡಿದುಕೊಂಡು, ಮರಗಟ್ಟುವ ದಿಲ್ಲಿಯ ಚಳಿಯಲ್ಲಿ ಗಡಗಡನೆ ನಡುಗುತ್ತಿದ್ದರು. ದಿಲ್ಲಿಯ ಚಳಿಯ ಬಗ್ಗೆ ನಿಮಗೆ ಮೊದಲೇ ಹೇಳಿದ್ದೆನಲ್ವಾ ಎಂದರೆ, ಚಳಿ ಇಷ್ಟಿರಬಹುದೆಂದು ಯೋಚಿಸಿಯೇ ಇರಲಿಲ್ಲವೆಂಬ ಮುಗ್ಧ ಉತ್ತರ ಅವರದ್ದು. ಕೊನೆಗೆ ನಾನು ಧರಿಸಿದ್ದ ಭಾರದ ಜಾಕೆಟ್ಟನ್ನೇ ಅವರಿಗೆ ನೀಡಿ ತಾತ್ಕಾಲಿಕ ವ್ಯವಸ್ಥೆಯೊಂದನ್ನು ಮಾಡಿದ್ದೆ. ‘ಪಡೋಸಿ ಕೀ ಚೂಲೇ ಸೇ ಆಗ್ ಲೈಲೇ’, ಎಂಬ ಗುಲ್ಝಾರ್ ಸಾಲುಗಳು ನನಗೆ ಇಂತಹ ಸಂದರ್ಭಗಳಲ್ಲೆಲ್ಲಾ ತಮಾಷೆಯಾಗಿ ನೆನಪಾಗುವುದುಂಟು.  

ಕನಿಷ್ಠ ಸಂಪನ್ಮೂಲಗಳನ್ನು ಬಳಸಿಕೊಂಡು ಬದುಕುತ್ತಿದ್ದ ನಮ್ಮ ಬ್ಯಾಚುಲರ್ ದಿನಗಳಲ್ಲಿ ಇಂಥವುಗಳೆಲ್ಲಾ ತಾಪತ್ರಯದ ಸಂಗತಿಗಳಾಗಿದ್ದವು. ಉದಾಹರಣೆಗೆ ಬೇಸಿಗೆಯಲ್ಲಿ ಸಾಗುತ್ತಿದ್ದಷ್ಟು ಮಿತ್ರವೃಂದದ ಗೋಷ್ಠಿಗಳು ಚಳಿಗಾಲಗಳಲ್ಲಿ ನಡೆಯುತ್ತಿರಲಿಲ್ಲ. ಏಕೆಂದರೆ ನಾವು ಒಂದಷ್ಟು ಹುಡುಗರು ಸೇರಿಕೊಂಡು ತಾಸುಗಟ್ಟಲೆ ಹರಟುತ್ತಾ, ಊಟ ಮಾಡಿ, ಚಾಪೆ ಹಿಡಿದು ಒಂದೊಂದು ಮೂಲೆ ಸೇರುವುದು ದಿಲ್ಲಿಯ ಬೇಸಿಗೆಯ ಋತುವಿನಲ್ಲಿ ಸಾಮಾನ್ಯವಾಗಿತ್ತು. ಅದರಲ್ಲೂ ಹಲವು ಬಾರಿ ನಾವುಗಳು ತಾರಸಿಯಲ್ಲೇ ಮಲಗುತ್ತಿದ್ದ ದಿನಗಳಿರುತ್ತಿದ್ದವು. ದಿಲ್ಲಿಯ ಬೇಸಿಗೆಯ ಝಳಕ್ಕೆ ಅಂದು ನಮ್ಮಲ್ಲಿದ್ದ ಅತ್ಯುತ್ತಮ ಪರಿಹಾರವೊಂದರೆ ಇದೊಂದೇ. ಮುಂಜಾನೆ ಬೇಗನೆ ಮೂಡುತ್ತಿದ್ದ ಸೂರ್ಯದೇವ ನಮ್ಮನ್ನೂ ಎಬ್ಬಿಸಿ ಕೆಲಸಕ್ಕೆ ಹಚ್ಚುತ್ತಿದ್ದ.     

ಆದರೆ ದಿಲ್ಲಿಯ ಬೇಸಿಗೆಯು ನಮಗೆ ನೀಡುತ್ತಿದ್ದ ಈ ಬಗೆಯ ಆರಾಮವು ಚಳಿಗಾಲದ ದಿನಗಳಲ್ಲಿರುತ್ತಿರಲಿಲ್ಲ. ಇನ್ನು ಉಳಿದುಕೊಳ್ಳುವ ವ್ಯವಸ್ಥೆಗಂತೂ ಚಳಿಗಾಲದಲ್ಲಿ ಅವಕಾಶವೇ ಇರಲಿಲ್ಲ. ಅಂದಿನ ಬ್ಯಾಚುಲರ್ ದಿನಗಳಲ್ಲಿ ನಮ್ಮ ಬಳಿಯಿದ್ದ ಬಹುದೊಡ್ಡ ಆಸ್ತಿಯೆಂದರೆ ಸಿಂಗಲ್ ಬೆಡ್ ಮತ್ತು ಒಂದು ಜೊತೆ ಮೇಲ್ಹೊದಿಕೆ ಮಾತ್ರ. ಹೀಗಿರುವಾಗ ಚಳಿಗಾಲದಲ್ಲಿ ಇವುಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವುದಿರಲಿ; ಅದರ ಕಲ್ಪನೆಯೇ ನಮ್ಮ ನರನಾಡಿಗಳಲ್ಲಿ ಚಳಿಜ್ವರಗಳನ್ನು ಹುಟ್ಟಿಸುತ್ತಿತ್ತು. 

ಕೊರೋನಾ ನಂತರದ ಕಾಲಾವಧಿಯಲ್ಲಿ ನಮ್ಮ ಬದುಕಿನ ಬಹುದೊಡ್ಡ ಅಂಗವಾಗಿಬಿಟ್ಟಿರುವುದು ಮುಖಕ್ಕೆ ಧರಿಸುವ ಮಾಸ್ಕ್ ಗಳು. ಆದರೆ ಈ ಮಾಸ್ಕ್ ಗಳು ಕೊರೋನಾ ಮಹಮ್ಮಾರಿಯು ಬಂದಪ್ಪಳಿಸುವ ನಾಲ್ಕೈದು ವರ್ಷಗಳ ಮುನ್ನವೇ ದಿಲ್ಲಿಯಲ್ಲಿ ಬಂದು ನೆಲೆಯೂರಿಯಾಗಿತ್ತು.

ದಿಲ್ಲಿಯ ವಾಯುಮಾಲಿನ್ಯವು ಜಾಗತಿಕ ಮಟ್ಟಿನಲ್ಲಿ ದೊಡ್ಡ ಸುದ್ದಿಯಾದ ನಂತರ ಸಾವಿರಾರು ಮಂದಿ ಸ್ವಇಚ್ಛೆಯಿಂದ ಮಾಸ್ಕ್ ಧರಿಸಿಕೊಂಡು ಓಡಾಡುತ್ತಿರುವ ದೃಶ್ಯಗಳು ಇಲ್ಲಿ ಸಾಮಾನ್ಯವಾಗತೊಡಗಿದ್ದವು. ಬಹುಷಃ ಸಾರ್ಸ್ ರೋಗಪತ್ತೆಯ ತರುವಾಯ ಜನರು ಈ ಮಟ್ಟಿನ ಕಾಳಜಿಯನ್ನು ತೆಗೆದುಕೊಂಡು ಮಾಸ್ಕ್ ಧರಿಸುತ್ತಿದ್ದಿದ್ದು ದಿಲ್ಲಿಯಲ್ಲೇ.  

ದಿಲ್ಲಿಯ ವಾಯುಮಾಲಿನ್ಯವು ಅಪಾಯದ ಮಟ್ಟವನ್ನು ತಲುಪಿದ ಸುದ್ದಿಯು ಎಲ್ಲೆಡೆ ಹರಡುತ್ತಿದ್ದಂತೆ ಸರಕಾರವೂ ಎಚ್ಚೆತ್ತುಕೊಂಡಿದ್ದು ಸತ್ಯ. ಸಮ ಮತ್ತು ಬೆಸ ಸಂಖ್ಯೆಯ ವಾಹನಗಳನ್ನು ಒಂದೊಂದು ದಿನಗಳ ಅಂತರದಲ್ಲಿ ಸಂಚಾರಕ್ಕೆ ಬಿಡುವಂತಹ ಹೆಜ್ಜೆಯೊಂದು, ಕೆಲ ವರ್ಷಗಳ ಹಿಂದೆ ಪ್ರಯೋಗಾತ್ಮಕ ನೆಲೆಯಲ್ಲಿ ಹುಟ್ಟಿಕೊಂಡಿದ್ದು ಇದೇ ಕಾಳಜಿಯ ಭಾಗವಾಗಿ. ಈ ನಿಟ್ಟಿನಲ್ಲಿ ಈಗಿರುವ ಸಿಟಿಗಳನ್ನು ಸ್ಮಾರ್ಟ್-ಸಿಟಿಗಳನ್ನಾಗಿ ಮಾಡಲು ಹೊರಟಿರುವ ಸರಕಾರಗಳಿಗೆ ಮಹಾನಗರಿಯ ಈ ಹೆಜ್ಜೆಗುರುತುಗಳು ಪಾಠವಾಗಲಿವೆ. 

ಡಿಸ್ಕವರಿ ಪ್ಲಸ್ ವಾಹಿನಿಯಲ್ಲಿ ಪ್ರಸಾರವಾಗಿದ್ದ ‘ಇಂಡಿಯಾ 2050’ ಎಂಬ ಹೆಸರಿನ ಸಾಕ್ಷ್ಯಚಿತ್ರವೊಂದು ದಿಲ್ಲಿ, ಮುಂಬೈ, ಕೋಲ್ಕತ್ತಾ ಮತ್ತು ಪಂಜಾಬ್ ಸೇರಿದಂತೆ ಭಾರತದ ಹಲವು ನಗರಗಳು ಮಾಲಿನ್ಯಕ್ಕೆ ಬಲಿಯಾಗುತ್ತಿರುವ ಸಂಕಷ್ಟದ ಹಾದಿಯತ್ತ ಸೂಕ್ಷ್ಮವಾಗಿ ಬೆಳಕು ಚೆಲ್ಲಿತ್ತು. ಇವರು ಹೇಳುವ ಪ್ರಕಾರ ದಿಲ್ಲಿಯಲ್ಲಾಗುವ ಇಪ್ಪತ್ತನಾಲ್ಕು ತಾಸುಗಳ ವಾಯುಮಾಲಿನ್ಯವು ವ್ಯಕ್ತಿಯೊಬ್ಬ ದಿನಕ್ಕೆ ನಲವತ್ತೈದರಿಂದ ಐವತ್ತು ಸಿಗರೇಟು ಸೇದುವುದಕ್ಕೆ ಸರಿಸಮಾನ.

ಇಲ್ಲಿ ತೋರಿಸಿರುವ ಒಂದು ಕಲ್ಪನೆಯ ಪ್ರಕಾರ 2050 ರ ದಿಲ್ಲಿ ನಿವಾಸಿಗಳು ಬಿಸಿಲ ರಾಕ್ಷಸಧಗೆಯಿಂದ ತಪ್ಪಿಸಿಕೊಳ್ಳಲು ಕ್ರಮೇಣ ಅಂಡರ್ ಗ್ರೌಂಡ್ (ಭೂಗತ) ನಿರ್ಮಾಣ ವ್ಯವಸ್ಥೆಯ ಮನೆಗಳಲ್ಲಿ ನೆಲೆಸತೊಡಗುತ್ತಾರೆ. ತಡೆಯಲಾಗದ ತಾಪಮಾನದ ನಿಟ್ಟಿನಲ್ಲಿ ನಿತ್ಯದ ಓಡಾಟಗಳು ಹಗಲಿನ ಬದಲಾಗಿ ರಾತ್ರಿಗಷ್ಟೇ ಸೀಮಿತವಾಗುತ್ತವೆ. ಹೀಗೆ ಮಹಾನಗರಿಯ ಮಂದಿ ಕ್ರಮೇಣ ಪೂರ್ಣಾವಧಿಯ ನಿಶಾಚರಿಗಳಾಗಿಬಿಡುತ್ತಾರೆ.     

ಈ ವಿವರಣೆಗಳು ಇಂದು ಮಕ್ಕಳ ಕಾಮಿಕ್ಸ್ ಪುಸ್ತಕಗಳಲ್ಲಿ ಬರುವ ರೋಚಕ ಕತೆಗಳಂತೆ ಕಂಡರೂ, ಇಲ್ಲಿ ಪ್ರಸ್ತುತಪಡಿಸಿರುವ ವಿಚಾರಗಳನ್ನು ತಳ್ಳಿಹಾಕುವ ಹಾಗೇನಿಲ್ಲ. ಹಿಂದೆ ಪತ್ರಿಕೆಗಳಲ್ಲಷ್ಟೇ ಕಾಣಸಿಗುತ್ತಿದ್ದ ವರದಿಗಳು ಈಗ ಅಕ್ಷರಶಃ ಸಾವಿನ ರೂಪದಲ್ಲಿ ಬಂದು ಕದ ತಟ್ಟುತ್ತಿವೆ. ‘ದಿಲ್ಲಿಯ ವಾಯುಮಾಲಿನ್ಯದ ಬಗ್ಗೆ ನಮಗೆ ಮೊದಲೇ ತಿಳಿದಿತ್ತು. ಆದರೆ ನನ್ನ ಮಗನೇ ನೇರವಾಗಿ ಇದರ ಗುರಿಯಾಗುತ್ತಾನೆ ಎಂಬುದನ್ನು ಮಾತ್ರ ಯಾವತ್ತೂ ಊಹಿಸಿರಲಿಲ್ಲ,’ ಎಂದು ಸಾಕ್ಷ್ಯಚಿತ್ರದಲ್ಲಿ ದಿಲ್ಲಿ ನಿವಾಸಿಯಾಗಿರುವ ತಾಯಿಯೊಬ್ಬಳು ಹೇಳುತ್ತಾಳೆ.

ಆಕೆಯ ಪುಟ್ಟ ಮಗು ಉಸಿರಾಟದ ಸಮಸ್ಯೆಯಿಂದಾಗಿ ಈಗಾಗಲೇ ಹಲವು ಬಾರಿ ಸಾವು-ಬದುಕುಗಳ ನಡುವೆ ಉಯ್ಯಾಲೆಯಾಟವನ್ನು ಆಡಿದೆ. ಉಸಿರಾಟದ ತೀವ್ರ ಸಮಸ್ಯೆಯಿಂದಾಗಿ ಈ ಮಗುವಿಗೆ ಉಳಿದ ಮಕ್ಕಳಂತೆ ಶಾಲೆಗೆ ಹೋಗುವ, ಆಟವಾಡುವ ಮತ್ತು ತನ್ನ ಸಹಪಾಠಿಗಳೊಂದಿಗೆ ಬೆರೆಯುವ ಭಾಗ್ಯವೇ ಇಲ್ಲದಂತಾಗಿದೆ. 

ಇದು ಒಂದು ಮಗುವಿನ ಅಥವಾ ಒಂದು ವರದಿಯ ಮಾತಲ್ಲ. ಇಂದು ದಿಲ್ಲಿ ಸೇರಿದಂತೆ ಭಾರತದ ಬಹುತೇಕ ಎಲ್ಲಾ ಮಹಾನಗರಿಗಳದ್ದು ಇದೇ ಕತೆ. ದಿಲ್ಲಿಯನ್ನು ಪ್ರತ್ಯೇಕವಾಗಿ ಪರಿಗಣಿಸಿದರೂ ಮಕ್ಕಳು, ಮಧ್ಯವಯಸ್ಕರು ಮತ್ತು ಹಿರಿಯರನ್ನು ಸೇರಿದಂತೆ ಸಾವಿರಾರು ಮಂದಿ ಇಂದು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಆಟಿಸಂ, ಎ.ಡಿ.ಎಚ್.ಡಿ (ಅಟೆನ್ಷನ್ ಡಿಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್) ನಂತಹ ರೋಗಗಳು ಪುಟ್ಟ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿವೆ. 

2020 ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ‘ದ ಹಿಂದೂ’ ಪತ್ರಿಕೆಗೆ ನೀಡಿದ್ದ ಅಧಿಕೃತ ಹೇಳಿಕೆಯ ಪ್ರಕಾರ ದಿಲ್ಲಿ, ಗುರುಗ್ರಾಮ ಮತ್ತು ನೋಯ್ಡಾದಂತಹ ಮಹಾನಗರಗಳಲ್ಲಿ ತೀವ್ರವಾಗಿ ಹದಗೆಟ್ಟ ಹವೆಯ ಪರಿಣಾಮವು ಆರೋಗ್ಯವಂತರನ್ನು ರೋಗಿಗಳಾಗಿ ಪರಿವರ್ತಿಸುವುದಲ್ಲದೆ, ಈಗಾಗಲೇ ಚಿಕ್ಕಪುಟ್ಟ ರೋಗಗಳಿಂದ ಬಳಲುತ್ತಿರುವವರ ಆರೋಗ್ಯವನ್ನು ಮತ್ತಷ್ಟು ಹದಗೆಡಿಸಲಿದೆ ಎಂದಿತ್ತು.

ಸದ್ಯ ದಿಲ್ಲಿಯಲ್ಲಷ್ಟೇ ಸುದ್ದಿಯಾಗುತ್ತಿರುವ ವಾಯುಮಾಲಿನ್ಯವು ನಿಧಾನವಾಗಿ ತನ್ನ ಕಬಂಧಬಾಹುಗಳನ್ನು ನೆರೆಯ ರಾಜ್ಯಗಳಾದ ಉತ್ತರಪ್ರದೇಶ, ಹರಿಯಾಣಾ, ಪಂಜಾಬ್ ಮತ್ತು ರಾಜಸ್ಥಾನಗಳತ್ತ ಹಬ್ಬಿಸುತ್ತಿರುವುದಕ್ಕೆ ಈ ಅಂಕಿಅಂಶಗಳು ಸಾಕ್ಷಿ. ಇಂದು ದಿಲ್ಲಿಯ ನಿವಾಸಿಗಳು ನಿತ್ಯವೂ ಏರಿಳಿಯುವ ಶೇರು ಮಾರುಕಟ್ಟೆಯ ಸೂಚ್ಯಂಕದ ಮಾದರಿಯಲ್ಲಿ, ಹವೆಯ ಗುಣಮಟ್ಟದ ಸೂಚ್ಯಂಕಗಳನ್ನು (ಏರ್ ಕ್ವಾಲಿಟಿ ಇಂಡೆಕ್ಸ್) ಸೂಕ್ಷ್ಮವಾಗಿ ಗಮನಿಸುತ್ತಿರುವುದು ಮುಂಬರುವ ದಿನಗಳ ಭೀಕರತೆಗೊಂದು ದಿಕ್ಸೂಚಿಯಿದ್ದಂತೆ.  

2021 ರ ಜೂನ್ ತಿಂಗಳ ಕೊನೆಯ ವಾರದಲ್ಲಿ ದಿಲ್ಲಿಯ ಬೇಸಿಗೆಯ ಧಗೆಯು ಬರೋಬ್ಬರಿ 44 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕಣ್ಣಿಗೆ ಕಾಣದ ದೈತ್ಯ ಯಂತ್ರವೊಂದು ಬಿಸಿ ಗಾಳಿಯನ್ನೇ ಎತ್ತಿ ಅಪ್ಪಳಿಸುವಂತೆ ‘ಹೀಟ್ ವೇವ್’ ಎಂದು ಕರೆಯಲಾಗುವ ಉಷ್ಣಹವೆಯ ಹೊಡೆತವು ಜನಸಾಮಾನ್ಯರನ್ನು ಕಂಗಾಲಾಗಿಸಿದೆ.

ಇನ್ನೇನು ಪ್ರಳಯವಾಗಲಿದೆ ಎಂದನ್ನಿಸುವಂತೆ ಹಾಡಹಗಲಿನಲ್ಲೇ ಕಪ್ಪಾಗಿಬಿಡುವ ಆಕಾಶ, ಕಣ್ಣು-ಮೂಗು-ಬಾಯಿಗಳೆಂದು ನೋಡದೆ ಎಲ್ಲೆಲ್ಲೂ ಧೂಳು ಸೇರಿಕೊಂಡು ನಮ್ಮ ಚಟುವಟಿಕೆಗಳನ್ನೆಲ್ಲಾ ಏಕಾಏಕಿ ಬುಡಮೇಲಾಗಿಸುವ ಧೂಳಿನ ಸುಂಟರಗಾಳಿಗಳು, ಅಕ್ಷರಶಃ ಹೊಗೆ ತುಂಬಿದ ಕೋಣೆಯಂತೆ ಆಗಾಗ ಬದಲಾಗಿಬಿಡುವ ಮಹಾನಗರಿ, ಅಕಾಲಿಕ ಮಳೆ… ಇತ್ಯಾದಿಗಳೆಲ್ಲಾ ದಿಲ್ಲಿ ನಿವಾಸಿಗಳಿಗೆ ಸಾಮಾನ್ಯವಾಗಿಬಿಟ್ಟಿರುವುದು ಗಾಬರಿಯ ಸಂಗತಿ. 

ಹವಾಮಾನವೊಂದನ್ನು ಹೊರತುಪಡಿಸಿ ದಿಲ್ಲಿಯಲ್ಲಿ ಎಲ್ಲವೂ ಚಂದವೇ ಎಂದು ದಕ್ಷಿಣಭಾರತದಿಂದ ವಲಸೆ ಬಂದಿರುವ ನನ್ನಂತಹ ಮಂದಿ, ಇಲ್ಲಿರುವ ಸ್ಥಳೀಯರಲ್ಲಿ ಒಮ್ಮೆಯಾದರೂ ಹೇಳಿರುತ್ತಾರೆ. ಶಹರದ ಬಗೆಗಿರುವ ಅತೀ ಸಾಮಾನ್ಯ ದೂರುಗಳಲ್ಲಿ ಇದೂ ಒಂದು. ಏಕೆಂದರೆ ಚಳಿಗಾಲದಲ್ಲಿ ದಿಲ್ಲಿಯು ದೊಡ್ಡದೊಂದು ಫ್ರಿಡ್ಜ್ ಆಗಿಬಿಟ್ಟರೆ, ಬೇಸಿಗೆಯಲ್ಲಿ ಅಕ್ಷರಶಃ ಕುದಿಯುತ್ತಿರುವ ಬಾಣಲೆಯಂತಾಗಿಬಿಡುತ್ತದೆ. ದಿಲ್ಲಿಯ ನಿರ್ದಯಿ ಹವಾಮಾನವು ಬಲಿ ತೆಗೆದುಕೊಂಡ ಬಡಜೀವಗಳ ಬಗ್ಗೆ ಬರೆಯುತ್ತಾ ಹೋದರೆ ಅದರದ್ದೇ ಒಂದು ದೊಡ್ಡ ಪುರಾಣವಾಗುವುದು ಖಚಿತ. 

ಹಾಗೆ ನೋಡಿದರೆ ವ್ಯಕ್ತಿಯೊಬ್ಬನಿಗೆ ಹೊತ್ತಿಗೊಂದು ಊಟ, ತಲೆಯ ಮೇಲೊಂದು ಸೂರು ಮತ್ತು ಹೊದ್ದುಕೊಳ್ಳಲೊಂದು ಬಟ್ಟೆಗಳು ನಿಜವಾದ ಅರ್ಥದಲ್ಲಿ, ಮೂಲಭೂತ ಅವಶ್ಯಕತೆಗಳಾಗಿ ಬೇಕಾಗುವುದು ದಿಲ್ಲಿಯಂತಹ ಶಹರಗಳಲ್ಲಿ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಏಕೆಂದರೆ ಇಂತಹ ತೀವ್ರ ಹವಾಮಾನಗಳಲ್ಲಿ ಉಳಿವೇ ಒಂದು ಸವಾಲು. ನಮ್ಮ ಹಿಂದಿನ ತಲೆಮಾರಿನವರು ಬಿತ್ತ ಬೀಜಗಳು ಹೆಮ್ಮರಗಳಾಗಿ ನಮಗಿಂದು ನೆರಳನ್ನು ನೀಡುತ್ತಿವೆ. ಅವರ ಶ್ರಮದ ಫಲಗಳನ್ನು ಅವರಿಲ್ಲದ ಸಮಯದಲ್ಲಿ ನಾವಿಂದು ಹಾಯಾಗಿ ಉಣ್ಣುತ್ತಿದ್ದೇವೆ. ಮುಂಬಲಿರುವ ಪೀಳಿಗೆಯ ಬಗ್ಗೆ, ಅವರಿಗಾಗಿ ನಾವು ಉಳಿಸಿಹೋಗಲಿರುವ ದಿಲ್ಲಿಯ ಬಗ್ಗೆ ಇಂತಹ ಪ್ರಾಮಾಣಿಕ ಕಾಳಜಿಯೊಂದು ನಮ್ಮಲ್ಲಿದೆಯೇ ಎಂಬುದು ಆತ್ಮಾವಲೋಕನಕ್ಕೆ ಅರ್ಹವಾದ ಸಂಗತಿ.     

ಲೇಖನದ ಆರಂಭದಲ್ಲಿ ದಿಲ್ಲಿಗೊಂದು ಡ್ರೆಸ್ ಕೋಡ್ ಬೇಕು ಎಂದು ಬರೆದಿದ್ದೆ. ಜೀವಜಗತ್ತಿನ ಉಳಿವಿನ ಆಯಾಮದಲ್ಲಿ ನೋಡಿದರೆ ಇದು ಶೋಕಿಯದ್ದೂ ಅಲ್ಲ, ಜೋಕಿನದ್ದೂ ಅಲ್ಲ. ಬದಲಾಗಿ ಅಸ್ತಿತ್ವದ ಪ್ರಶ್ನೆ!

‍ಲೇಖಕರು Admin

July 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: