ಜಿ ಪಿ ಬಸವರಾಜು
ಬಂದರವರು ರಂಗಕೆ, ಬಣ್ಣ ಬಳಿದು ಮುಖಕೆ
ಗಂಡು ಹೆಣ್ಣು ಕೃಷ್ಣ ರಾಧೆ ಇಬ್ಬರಲ್ಲ ಇಬ್ಬರು
ಕಣ್ಣು ತೆರೆದು ಕುಳಿತ ಮಂದಿ ನೂರು ನೂರು
ನುಡಿದುದೆಲ್ಲ ಕೃಷ್ಣ ಕೊಳಲು, ನಡೆದಲ್ಲೆಲ್ಲ ರಾಧೆ
ಗೆಜ್ಜೆ ನಾದ. ಬಳುಕು ಬಾಗು ನವಿಲ ನೃತ್ಯ, ರಾಗ ತಬ್ಬಿ
ಮಬ್ಬು ಮಬ್ಬು ಲೋಕ, ಹೂವು ಗಂಧ, ಕಾಯಿ ಒಗರು
ಹಣ್ಣು ಮಾಗುತ್ತಿತ್ತು ತೂಗಿ ತೂಗಿ ಕೊನೆಯ ಕ್ಷಣಕೆ
ತೊಟ್ಟ ತೊಡುಗೆ ಉಟ್ಟ ಬಟ್ಟೆ ಕುಕ್ಕುತ್ತಿತ್ತು ಕಣ್ಣು
ಎಲ್ಲಿ ರಾಧ ಎಲ್ಲಿ ಕೃಷ್ಣ ತೆರೆದ ಕಂಗಳಲ್ಲಿ ಹೊಳೆ
ಹೊಳೆಯುತ್ತಿದ್ದ ಬಿಂಬ; ಜೀವ ಜೀವ ಕೂಡಿ ಹಾಡಿ
ಇಳಿಯುತ್ತಿತ್ತು ಬಾನ ನೀಲಿ ಬುವಿಗೆ, ತೆರೆದ ಎದೆಗೆ

ಕಪ್ಪು ಬಿಳುಪು ಹಗಲು ರಾತ್ರಿ ರಾಧ ಕೃಷ್ಣ ಎಂಥ
ಮೋಡಿ, ಒಂದರೊಳಗೆ ಒಂದು, ಕೂಡಿದಂಥ ಬಾಳು
ಬೆಳೆದು ಚಾಚಿಕೊಂಡು ನಾಳೆ, ಬೆನ್ನ ಮೇಲೆ ಇತ್ತು
ಹೊತ್ತು ತಂದ ನಿನ್ನೆಯು, ತೆರೆದೆ ಇತ್ತು ಇಂದು
ಬಣ್ಣ ಬೇರೆ ಉಡುಪು ಬೇರೆ, ಗಂಡಿಗೊಂದು ರೂಪ
ಹೆಣ್ಣಿಗೊಂದು ಅಂದ, ಬೇರೆಯಲ್ಲ ಹಾಡು ಕುಣಿತ
ಹೆಜ್ಜೆಗಿತ್ತು ಹುರುಪು, ಕಣ್ಣ ಬೆಳಕು ದಾರಿ ತೋರಿ
ಹಿಗ್ಗು ಹಬ್ಬುತ್ತಿತ್ತು ದಾರಿಯಲ್ಲಿ ಹೆಜ್ಜೆ ಮೂಡಿ
ಎರಡು ಜೀವ ಒಂದೆ ಭಾವ ಎರಡು ರೂಪ ಎರಡು ಬಣ್ಣ
ಒಂದರಲ್ಲಿ ಒಂದು ಬೆರೆತು ಎಂಥ ಮಾಯೆ, ರಾಧೆ ಎಲ್ಲೊ
ಕೃಷ್ಣನೆಲ್ಲೊ ಕಾಣದಲ್ಲ ಬೇರೆ ಬೇರೆ, ಕಣ್ಣಿನಲ್ಲಿ ಬಿಂಬ
ಕುಣಿದು, ಮನದ ತುಂಬ ಉಳಿದರಲ್ಲ ರಾಧೆ-ಕೃಷ್ಣ ಎಲ್ಲರಲ್ಲು






0 Comments