ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿನ್ಕಕೊಂದು ಜಿಪಿ ಕವಿತೆ- ದಿನದ ಉರುಳು…

ಜಿ ಪಿ ಬಸವರಾಜು

ಆಳದ ನೀರಲ್ಲಿದ್ದ ಮೊಸಳೆಗಳು ಮೇಲೆದ್ದು
ತೆರೆ ತೆರೆಯಲ್ಲಿ ಮೆರೆಯುತ್ತಿದ್ದ ಕಿರಣಗಳ
ನುಂಗಿ ಮತ್ತೆ ಕತ್ತಲೆಯ ಆಳಕ್ಕೆ ತೆರಳುವವು

ಆಕಾಶ ಹೆತ್ತ ಬಣ್ಣಗಳು ಗರಿಕೆದರಿ ನವಿಲು
ನರ್ತನಕ್ಕಿಳಿದರೆ ಕೆಂಬೂತ ಮೈದೆರೆದು
ಕುಣಿಯುವುದು ಲೋಕ ನೋಡುವುದೆಂದು

ನಡುರಾತ್ರಿ ಕಡೆದ ಹಾಡುಗಳೆಲ್ಲ ಕರಗಿ
ರಸರಸವು ಉಕ್ಕಿದಾಗ ನಿದ್ದೆಗಣ್ಣಿನ ಹಕ್ಕಿ
ಕುಡಿದು ಹಾಡುವುದು ಲೋಕ ಮೈಮರೆವಂತೆ

ಮೈಭಾರದ ತಂಗಾಳಿ ಗಜ ಗಮನದಲ್ಲಿ ಬಂದು
ತೀರದ ಪ್ರೇಮಿಗಳ ಪಿಸುಮಾತುಗಳ ಹೆಕ್ಕಿ ಹೆಕ್ಕಿ
ಬುಟ್ಟಿಯಲಿ ತುಂಬಿಕೊಳ್ಳುವುದು ನಾಳೆಗಾಗಿ

ನದಿಯ ಒಡಲಲ್ಲಾಡುವ ಮೀನುಗಳು ನೆಗೆ-
ಯುತ್ತ ನಲಿಯುತ್ತ ಉಲ್ಲಾಸ ಚೆಲ್ಲಾಡುವುದು
ಬಲೆ ಹಿಡಿದ ಬೆಸ್ತ ಬರೆಯುತ್ತಾನೆ ಸಾವಿನ ಬರಹ

ಸುಡುವ ಮಧ್ಯಾಹ್ನ ಕಾದಿದೆ ತನ್ನ ಸರದಿಗೆ
ದಡಕ್ಕೆ ಬಿದ್ದ ಮೀನುಗಳ ಪರದಾಡುತ್ತಿವೆ
ಕ್ಷಣಕ್ಷಣದ ಉಸಿರಿಗಾಗಿ ಮತ್ತೆ ನೀರಿಗಾಗಿ

ತುಂಡು ಮೋಡಗಳು ತೇಪೆ ಹೆಣೆಯುತ್ತಿವೆ
ನೀಲಿ ನಭಕ್ಕೆ, ನಗುತ್ತ ಬರುತ್ತಾನೆ ತುಂಟು
ಹುಡುಗ ಬುಟ್ಟಿ ಹಿಡಿದು ಸಾವ ತುಂಬಲು

ಗಾಳ ಎಸೆದು ನೆರಳಲ್ಲಿ ಕುಳಿತವನು
ಬೀಡಿ ಹಚ್ಚಿ ಹೊಗೆ ಉಗುಳುತ್ತಾನೆ
ಗಾಳಿ ಮುಖಕ್ಕೆ ಸುಮ್ಮನೇ ನಗುತ್ತ

ತಡಬಡಿಸುತ್ತಿದೆ ದಾರಿ ಉಬ್ಬಸದ
ಲಾರಿ ಓಡುತ್ತಿದೆ ಹೊಗೆಯ ಕಾರುತ್ತ
ಸುರಿಯುತ್ತಿದೆ ಬೆವರು ನದಿಯ ನೀರಿಗೆ

ಒದ್ದೆ ಹೆಜ್ಜೆಗಳ ನೀರ ಹೀರುತ್ತಿದೆ ನೆಲ
ದೂರದಲ್ಲಿ ಕಾಯುತ್ತಿದೆ ಬಕ
ನೀರಿಗೆ ಕೊಕ್ಕು ಇಳಿಸಿ ತನ್ನ ತುತ್ತಿಗಾಗಿ

‍ಲೇಖಕರು avadhi

15 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading