ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಾದಿ

ಸುನೀತಾ ರಾವ್

ವೃತ್ತಿಯಿಂದ ಪತ್ರಕರ್ತೆ. ಕಳೆದ ಹನ್ನೆರಡು ವರ್ಷಗಳಿಂದ ರಾಷ್ಟ್ರ ಮಟ್ಟದ ದಿನಪತ್ರಿಕೆಗಳಲ್ಲಿ ಕೆಲಸ. ಮೂಲ ಶಿವಮೊಗ್ಗ. ಬಾಲ್ಯ ಮತ್ತು ಪದವಿವರೆಗಿನ ವ್ಯಾಸಂಗ ಪೂರೈಸಿದ್ದು ಅಲ್ಲೇ. ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಕಲಿತದ್ದು ಬೆಂಗಳೂರಿನಲ್ಲಿ. ಸಾಹಿತ್ಯ, ಭಾಷಾಂತರದಲ್ಲಿ ಆಸಕ್ತಿ. ದಿನ ನಿತ್ಯದ ಪತ್ರಿಕಾ ವರದಿ, ವಿಶ್ಲೇಷಣೆಗಳಿಂದ ಮನಸು ಬಿಡುವು ಬೇಡಿದಾಗ ಕಾವ್ಯಕೃಷಿ.

“ಎಷ್ಟು ಕೇಸು” ಎಂದವಗೆ
ನಾವೆಷ್ಟು ಮಂದಿಯೆಂದು
ಕೇಳಿಯೇ ಗೊತ್ತಿಲ್ಲ.
1:10 ಎನ್ನಲೇ?

ಮುಖಗವಸ ಸರಿಸಿ
ಒಮ್ಮೆ ಬೆವರ ವರೆಸಿ
ಉಸಿರು ಬಗೆವಾಸೆ.
ಇಲ್ಲ, ಮುಟ್ಟಲಾರೆ.

ಕಣ್ಣು ಮಸುಕು,
ಬೆರಳು ತಾವೇ ತಡಕಾಡುತ್ತಿವೆ
ನರವೊಂದಕ್ಕೆ.
ಅವಳ “ಆ..” ಉದ್ಗಾರಕ್ಕೆ
ಸೂಜಿ ಬುಟ್ಟಿಗೆ.

ಆಪಾದಮಸ್ತಕ ಪಿಪಿಇ
ಪ್ರತಿ ಉಸಿರೂ ನಿಟ್ಟಿಸುರೇ.
ಆಕೆಗೂ, ತನಗೂ..
ಯಾರಿಗೂ ಕಾಣದ ಕರೋನ
ಪ್ರತೀ ಮನೆಯ ರೋದನ.

ಮುಟ್ಟಿ, ಮಾತಾಡಿಸಿ
ಸೈರಿಸಿ, ಸಂತೈಸಿ
ನೋವ ಮರೆಸುವ
ಆ ಪರಿ ಇನ್ನೆಲ್ಲಿ..

ಒಣ ತುಟಿಗೆ ನೀರ ನೆನಕೆ
ಗಡಿಯಾರದಪ್ಪಣೆ ಇನ್ನಾರು ತಾಸಿಗೆ.
ಹಸಿವು, ಶೌಚ ಮರೆವಿಗೆ.

ನನ್ನ ಗಟ್ಟಿ ದನಿಯೂ
ಮುಸುಕಿನೊಳಗೆ ಕ್ಷೀಣ.
ಎದೆಯೊಳಗೆ ಕುಣಿವ
ಕ್ರಿಮಿಗೆ ಅಬ್ಬರಿಸಿ,
ಬೆದರಿಸಿ, ಓಡಿಸಿ
ಜಾಲ ಹೆಣೆಯುವ
ಸಂಜೀವಿನಿ
ಕಾಣದಷ್ಟು ದೂರ.

ಸ್ಪರ್ಶ, ಭೇಟಿ ಕಾಣದ ಜಗಕೆ
ವಿಡಿಯೋ ಕಾಲ್ ಆಸರೆ.
“She is fine, don’t worry”
ಎಂಬ ಒಂದೇ ಸಾಲಿಗೆ
ಎಷ್ಟು ಕೋಟಿ ಬೆಲೆ.

ಕೈಬೆರಳ ತುದಿಗೆ
ಪ್ರಾಣವಾಯುವಿನ ಷರಾ
87 % ಈಗ 92 %
ಅವಳ ನಗು, ನನ್ನ ಬಯಕೆ.

ಮನೆಯ ಹಾದಿಯಲ್ಲಿ
ಮತ್ತೆ ಜನಮಿಲನ,
ಕ್ರಿಮಿಯ ನರ್ತನ.
ಪ್ರತಿ ಬೀದಿಯಲ್ಲಿ
ಮಡಿಕೆ, ಬೆಂಕಿ ಕಿಡಿ.

ಕಾದು, ರೋಸಿ “ಅಮ್ಮಾ..”
ಎಂದು ಎದ್ದೋಡಿ
ಬಂದ ಮಗಳ ಮುಟ್ಟಲಾರೆ.
ನಾ, ಕಿಸಾಗೋತಮಿಯಾಗಲಾರೆ.

‍ಲೇಖಕರು Avadhi

13 November, 2020

1 Comment

  1. ಸಂಧ್ಯಾ

    ಅರ್ಥ ಪೂರ್ಣ ಹೃದಯ ಸ್ಪರ್ಷಿ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading