ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಾದಾಪೀರ್‌ ಜೈಮನ್‌ ಹೊಸ ಕವಿತೆ- ಯುದ್ಧಕಾಲ

ದಾದಾಪೀರ್‌ ಜೈಮನ್‌

——


ಅಪ್ಪ ಒಳಗೆ ಬರುತ್ತಾನೆ
ಡೈನಿಂಗ್‌ ಟೇಬಲ್ಲಿನಲ್ಲಿ ಕೂತ ಕೂಸು
ಅಳುತ್ತಿದೆ ಸೂರು ಹಾರಿಹೋಗುವಂತೆ!
ಎದುರಾಳಿ ದೇಶದ ಆಸ್ಪತ್ರೆಯ ಮೇಲೆ ಬಾಂಬು ಬಿದ್ದಿದೆ
ಅವಶೇಷಗಳೊಳಗೆ ಸಿಕ್ಕಿಬಿದ್ದ ಕೂಸುಗಳು ರೋದಿಸುತ್ತಿವೆ
ಟೀವಿಯಲ್ಲಿ ಬಿತ್ತರವಾಗುವ ವಾರ್ತೆಯ ದೃಶ್ಯಗಳಲ್ಲಿ…

ಕೂಸುಗಳ ಅಳುಗಳು ಬೇರೆಯಾಗಿರಲು ಹೇಗೆ ಸಾಧ್ಯ?

ಇತ್ತ ಅಡುಗೆ ಬಡಿಸುವ ಅಮ್ಮನ ಕಣ್ಣಲ್ಲೂ ನೀರು ತುಂಬಿಕೊಂಡಿದೆ
ಅನ್ನವಿದೆ ತಟ್ಟೆಯಲ್ಲಿ
ತುತ್ತು ಬಾಯಿ ಮುಟ್ಟುತ್ತಿಲ್ಲ
ಅಪ್ಪನ ಕೈ ಅದುರುತ್ತಿದೆ
ಅವನು ಅದೆ ಸ್ವಲ್ಪ ಹೊತ್ತಿಗೆ ಮುಂಚೆ
ಮತ್ತಷ್ಟು ಬಾಂಬು ಮಳೆ ಸುರಿಸಲು
ಅನುಮತಿ ಕೊಟ್ಟುಬಂದಿದ್ದಾನೆ!

ಮಕ್ಕಳು ಅಳುತ್ತಿವೆ
ಅಮ್ಮಂದಿರ ಕಣ್ಣಲ್ಲಿ ಕಣ್ಣೀರು
ಶಾಪ ಹಾಕಲೂ ಅವರಿಗೆ ಮನಸು ಬರುವುದಿಲ್ಲ
ಅವರಿಗೆ ಗೊತ್ತು
ಬೆಂಕಿಗೆ ಬಾಂಬಿಗೆ ಬುದ್ದಿಯಿಲ್ಲ
ಅದು ಎಲ್ಲರನ್ನೂ ಆಪೋಶನ ತೆಗೆದುಕೊಳ್ಳುತ್ತದೆ
ಕೊನೆಗೆ ಉಳಿಯುವುದು ಬೂದಿ ಮಾತ್ರ
ಅಳು ತಾರಕ್ಕೇರುತ್ತಿದೆ
ಅಳಬೇಡ ಎಂದು ಹೇಳಲು ಬಾಯಿಯಿಲ್ಲ
ಅಪ್ಪ ಇನ್ನೇನು ಟೀವಿ ಆರಿಸುತ್ತಾನೆ
ನಿದ್ದೆಯೂ ಹಾರಿಹೋಗುತ್ತದೆ
ಜೀವದ ಪ್ರಶ್ನೆ ಕೇಳಲೇಬೇಡಿ
ಅಳು ನಿಲ್ಲುವುದಿಲ್ಲ…
ಯುದ್ದ ನಿಲ್ಲುವವರೆಗೂ
ಅಳು ನಿಲ್ಲುವುದಿಲ್ಲ…

ಬರುವ ಹೊಸ ವಸಂತಗಳು
ಅನಾಥವಾಗುತ್ತವೆ
ಯುದ್ಧ ನಿಲ್ಲದಿದ್ದರೆ
ಕಳೆದುಹೋದ ಕಂದಮ್ಮಗಳ ನೆನಪುಗಳು ಕಾಡುತ್ತವೆ ಅವಕ್ಕೆ
ಯುದ್ದ ನಿಲ್ಲದಿದ್ದರೆ
ಕವಿ ಬರೆಯುತ್ತಾನೆ
ಯುದ್ದವಿರೋಧಿ ಕವಿತೆಗಳನ್ನು
ಮತ್ತೆ ಮತ್ತೆ
ಈ ಎಲ್ಲದಕ್ಕೊಂದು ವಿರಾಮವನ್ನಾದರೂ ಹಾಕಿ
ಮಕ್ಕಳು ಅಳುವುದನ್ನು ನಿಲ್ಲಿಸಿ
ತುತ್ತು ಊಟವನ್ನಾದರೂ ಮಾಡಿಕೊಳ್ಳಲಿ

‍ಲೇಖಕರು avadhi

25 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading