ದಾಕ್ಷಾಯಣಿ ನಾಗರಾಜ
**
ಎದೆಯ ಚೂರುಗಳು ಅಲ್ಲಿಲ್ಲಿ ಬಿದ್ದಿದ್ದವು
ಹಿಂದೆ ಮುಂದೆ ಎಡ ಬಲ ಸುತ್ತಲೂ!
ತುಸು ಗಾಬರಿಯಿಂದಲೇ ಮೆಲ್ಲನೆ
ಅಲ್ಲೇ ಇದ್ದ ಎದೆಯ ಚೂರನ್ನು ಮುಟ್ಟಲೆತ್ನಿಸಿದೆ
ನನ್ನೆದೆ ಚೂರಾಗುವ ಮುನ್ನ ಅದೆಷ್ಟು
ಮನುಷ್ಯರು ನನ್ನನ್ನು ದೂರವೇ ಇಟ್ಟಿದ್ದರು
ಬರೀ ದೈಹಿಕವಾಗಿಯಲ್ಲ,ಮನಸ್ಸಿನಲ್ಲಿ ಕೂಡ
ಮುಖವಾಡ ಹಾಕಿಕೊಂಡು
ನೀನೇಕೆ ಈಗ ಮುಟ್ಟುತ್ತಿರುವೆ?
ಮನುಷ್ಯರೆಲ್ಲರೂ ಒಂದೇ ವಿಧದ ಮಾಂಸಮುದ್ದೆಗಳಲ್ಲವೇ?
ಎಂದು ಕೇಳಿದಂತಾಗಿ ಹೃದಯ ಹಿಂಡಿತು ನೋವಿನಿಂದ
ಹಿಂದೆ ನೋಡಿದರೆ ನಜ್ಜುಗುಜ್ಜಾದ ಮತ್ತೊಂದು
ಎದೆಯ ಚೂರು ಮುಗ್ಧವಾಗಿ ನೆಲಕ್ಕಂಟಿತ್ತು
ಥೇಟ್ ಅಮ್ಮನ್ನು ತಬ್ಬಿದ ಮಗುವಿನಂತೆ
ಮಮತೆ ಉಕ್ಕಿ ಕೈ ನೀಡಲೆತ್ನಿಸಿದೆ
ಮುಟ್ಟದಿರು ಎಂದು ಚೀರುತ್ತಾ
ನೋಡಲ್ಲಿ!
ಅದೆಷ್ಟು ಕಿತ್ತಿದ, ಎಳೆದ ಕಚ್ಚಿದ ಗಾಯಗಳಿವೆ
ನನ್ನ ಕನಸುಗಳನ್ನು ಚಿಗುರನ್ನು ಚಿವಿಟಿದಂತೆ
ಹೊಸೆದು ಹಾಕಿದರು,ಮುಗ್ಧ ಮಗು ಎನ್ನುತ್ತಲೇ
ಎಷ್ಟು ಜನರಿದ್ದರು, ಲೆಕ್ಕ ಹಾಕುವಷ್ಟರಲ್ಲೇ
ನನ್ನದೇ ನೂರು ಚೂರಾಗಿತ್ತು.
ಮುಟ್ಟದಿರು ಮುಟ್ಟದಿರು ಎಂದು ಕೇಳಿದಂತಾಗಿ
ಹೃದಯ ಕಣ್ಣೀರಿಟ್ಟಿತು
ಎದೆಯ ಚೂರುಗಳು
ಎಲ್ಲೆಲ್ಲೂ ಬಿದ್ದಿದ್ದವು
ಒಂದೊಂದು ಕಥೆ ಹೇಳುತ್ತಾ
ಮಾತಿನ ಬಾಣಗಳ ಎದೆಗೆ ನಾಟಿಸುತ್ತಾ
ಧರ್ಮ ,ಜಾತಿ, ಲಿಂಗ, ಸ್ವಾರ್ಥಗಳ ಅಸ್ತಿತ್ವಕ್ಕೆ
ಬಲಿಯಾದ ಎದೆಯ ಚೂರುಗಳು
ಮತ್ತೆ ಮತ್ತೆ ತಿವಿಯುತ್ತಿವೆ.
0 ಪ್ರತಿಕ್ರಿಯೆಗಳು