ಸುಧಾ ಆಡುಕಳ
ಮದುವೆಯಾಗಿ ಕಳೆಯಿತು ವರ್ಷ ಇಪ್ಪತ್ತೈದು
ಯಾರಿಗಿದೆ ವ್ಯವಧಾನ ಪೂರ್ತಿ ಕೇಳಿಸಿಕೊಳ್ಳುವಷ್ಟು?
ಒಮ್ಮೆ ಮೊದಲನೆಯ ಪದ, ಇನ್ನೊಮ್ಮೆ ಕೊನೆಯದು
ಕೇಳಿಸಿಕೊಳ್ಳುತ್ತಲೇ ಸಾಗುತ್ತದೆ ಸಂಭಾಷಣೆ ಇಬ್ಬರದೂ
ಅವನು ಹೇಳಿದ, “ನಿನಗೀಗ ನಲವತ್ತೇಳು”
ಅವಳೆಂದಳು, “ಹಾಂ, ಸ್ವಾತಂತ್ರ್ಯ ಸಿಕ್ಕಿತು”
“ಆರೋಗ್ಯ ಸರಿಯಿಲ್ಲ, ಒಮ್ಮೆ ಪರೀಕ್ಷಿಸಬೇಕು”
“ವ್ಯವಸ್ಥೆ ಹದಗೆಟ್ಟಿದೆ, ಸರಿಪಡಿಸಲಾರದಷ್ಟು”
“ಸುಖಾಸುಮ್ಮನೆ ಕೋಪಿಸಿಕೊಳ್ಳುವೆ” ಆರೋಪಿಸಿದ
“ಅಂಥದ್ದೇ ನಡೆಯುತ್ತಿದೆ, ಏನು ಮಾಡಲಾಗುತ್ತದೆ?”
“ಬಿ. ಪಿ., ಶುಗರು ಎಲ್ಲವೂ ಹೆಚ್ಚಾಗಿರಬೇಕು”

“ಹೌದೌದು, ಎಲ್ಲ ದಿನಸಿಯ ಬೆಲೆ ಗಗನಮುಖಿಯೆ”
“ಕಷ್ಟದಲ್ಲಿರುವಂತಿದೆ, ಮನೆಗೆಲಸಕ್ಕೂ ಏದುಸಿರು ಬಿಡುವೆ”
“ಹೌದಪ್ಪ, ಯಾರಿಗೂ ಇಲ್ಲ ಲೋಕದ ಕಷ್ಟದ ಗೊಡವೆ”
“ದೇಹದ ತೂಕ ಬೇರೆ ಒಂದೇ ಸಮ ಇಳಿಯುತ್ತಿದೆ”
“ಸದ್ಯ ಇಳಿಮುಖವಾಗುತ್ತಿದೆಯಲ್ಲ ರೋಗಿಗಳ ಸಂಖ್ಯೆ”
“ಏನೇನೋ ಹೇಳುವುದೂ ಖಾಯಿಲೆಯ ಲಕ್ಷಣವೆ”
“ಬಾಯಿಪಾಠದ ಭಾಷಣ ಇರುವುದೇ ಹಾಗೆ”
“ಆಸ್ಪತ್ರೆಗೆ ಯಾವಾಗ ಹೋಗುವುದು ಅಂತ?”
“ಹೊಸವರ್ಷದಲ್ಲಿಯಾದರೂ ಕೊರೊನಾ ಹೋದರೆ ಸಾಕಪ್ಪ”
ಅವನ ಮಾತುಗಳೆಲ್ಲ ಅವಳ ಆರೋಗ್ಯದತ್ತ
ಅವಳು ಸುತ್ತುವುದು ಪ್ರಚಲಿತ ವಿದ್ಯಮಾನದತ್ತ






0 Comments