ಅವ್ವ- ನನ್ನವ್ವ
-ಕೆ ಮಹಾಂತೇಶ

ತನ್ನೊಡಲ ಸದಾ
ಹಸಿವಾಗಿರಿಸಿಕೊಂಡು
ಹಡೆದ ಕುಡಿಗಳ
ಕರಳು ತುಂಬಿಸಿದಾಕೆ-ನನ್ನವ್ವ
ಬಿಸಿಲ ಮಳೆಗೆ ಬದುಕು ಸವೆಸಿ
ಬಯಲೊಳಿದ್ದ ನಮಗೆ
ಅಪ್ಪನೊಡಗೂಡಿ ನೆರಳ ಮಾಡಿ
ನೆಮ್ಮದಿಯ ನೀಡಿದಾಕೆ-ನನ್ನವ್ವ
ನಸುಕಲೆದ್ದು ಪ್ಯಾಟಿ ತಿರುಗಿ
ಸಿಕ್ಕಲಾಭಕೆ ಹಣ್ಣು ಮಾರಿ
ರಾತ್ರಿಯೆಂಬ ರಾತ್ರಿಯಲ್ಲೇ
ತುತ್ತಮಾಡಿ ಉಣಿಸಿದಾಕೆ-ನನವ್ವ
ನಿತ್ಯ ಹಸಿವೆಯೆಂಬ ಮನೆಯಲಿದ್ರು
ಪರರ ಆಸ್ತಿಗೆ ಕನ್ನಹಾಕ್ದೆ
ಶ್ರಮವಪಟ್ಟೇ ಬದುಕಬೇಕು ಎಂಬ
ಕಾಯಕ ಪಾಠವ ಹೇಳಿದಾಕೆ-ನನ್ನವ್ವ
ಶ್ರಮದ ಜೊತೆಗೆ ಅಕ್ಷರ ಕಲಿತು
ಅಕ್ಷರದೊಂದಿಗೆ ಅರಿವ ಪಡೆದು
ಮಕ್ಕಳಿಗೆಲ್ಲಾ ಸಾಲಿ ಕಲಿಸಿ ನಮ್ಮ
ಬದುಕ ರೂಪಿಸಿದಾಕೆ-ನನ್ನವ್ವ
ಸ್ವಂತ ಬದುಕ ಬಿಟ್ಟು ಕೊಟ್ಟು
ಊರಿನ ಉಸಾಬರಿ ಹೊತ್ತ ನನಗೆ
ಸಂಬಂಧಿಗಳೆಂಬರು ಮೂದಲಿಸಿದಾಗ
ನನ್ನ ಬೆನ್ನಿಗೆ ನಿಂತು ಬೆಂಬಲಿಸಿದಾಕೆ-ನನ್ನವ್ವ
ಕ್ಯಾನ್ಸರ್ಗೆ ಬಿದ್ದು ನರಳಿದಾಗ ನನ್ನ
ಆರೈಕೆಯಲ್ಲಿ ಮಗುವಾದಾಗ
ತೊಡೆಯ ಮೇಲೆಯೇ ಕಣ್ಣು ಮುಚ್ಚುವ
ಕನವರಿಕೆಯಲ್ಲೆ ಕಾಲವಾದಾಕೆ
…………..
ನನ್ನ ತೊಡೆಯ ಮೇಲೆಯೇ ಕಣ್ಣು ಮುಚ್ಚುವ
ಕನವರಿಕೆಯಲ್ಲೆ ಕಾಲವಾದಾಕೆ-ನನ್ನವ್ವ





chanda ide nimma avvana nenapisuva kavite.
Ammana kuritu eshtu kavanagalu bandaroo matte ondu kavite huttisuva shabda Amma. chennaagide