ಸಂಕರದ ಹಾದಿ
ಆರನಕಟ್ಟೆ ರಂಗನಾಥ
ಮುಲುಕುವ ತೊಗಲಿನುಂಡೆಗಳ
ತೂರಾಟಕ್ಕೆ ಗುಂಡಿಗೆಯ ನಾಡಿ
ಬೆವರಿಳಿಸಿವೆ ಗೃಹದೊಳಗೆ
ಪರದೆಯೊಳಗೆ ಭಿತ್ತರಿಸಿದ ವರ್ಣತಂತು
ಲಿಂಗದ ಕುರುಹುಗಳಿರದೆ
ಮಾಂಸದ ಕಣಗಳಿಗೆ ಉಸಿರಾಗಿ
ಅಂಡಾಶಯದೊಳಗೆ ಸುಳಿದಾಡಿ
ಉಬ್ಬರದ ನೇವರಿಕೆಗೆ ಉಲ್ಲಾಸಿತ
ರೋಮದ ಭ್ರಮಿತ ಅಂಗಾಂಗಗಳ
ಮೂಡಿಸದ ಜೀವಕಣಗಳ ಮೂಸೆ ತಿರುವಿದೆ.

ಜೀವದಾಣವುಂಡ ನೋವ
ಕೊಯ್ದು ಬಿಡಿಸಿದ ಬಳ್ಳಿಯ
ಸೆತ್ತೆಯ ಚಿತ್ತಾರ
ಕೈ ಕರುಳಬಳ್ಳಿ ಹರಿದು
ಕೊರಳ ಸುತ್ತ ಹೆಣೆದ
ಮಡಿಲ ಕಂಪನ ಎದೆಯೊಳಗೆ
ಜಿನುಗುವ ಜೀವ ದ್ರಾವಕದ ಪಸೆ
ಉಣಿಸಿದ ಅರವಳಿಕೆಯ ಜೋಮು
ದೇಹದ ಮೂಲೆ ಮೂಲೆಗಳಲ್ಲಿ
ಉಳಿದಿದೆ ಊನ ಲಿಂಗವಾಗಿ
ತೊಟ್ಟಿಕ್ಕಿದ ಜೀವಾಣುಗಳು ಜಾರಿ
ಕರಂಕಡಗಳಲ್ಲಿ ಉದಿಸದ
ನೆತ್ತರ ಹೊದ್ದು ಕಣ್ಬಿರಿದ
ಬೀದಿಬದಿಯ ಕಳ್ಳೇ ಹೂಗಳೆ
ಒಡಲೊಳಗೆ
ಸಂಕರದ ಹೆಸರಿಟ್ಟು ಕುಂತಿದೆ
ಲಿಂಗಗಳ ಹಾದಿಗೆ






Kavitheyalli hosabageya usiru honkariside
oLLeya taazatanada kavite..