
ಸುಪ್ತದೀಪ್ತಿ
ಬೆಳಚುಕ್ಕಿಮರಿ
ಕಿಟಕಿಯಗಲದ ಆಕಾಶ
ಭೇದಿಸುವ ಸೂರುಚೂರು
ಕಂಡದ್ದೇ ಸುಳ್ಳೆನಿಸುವ ಮೊನೆಮಿನುಗು
ನಗ್ನದರ್ಶನಕೆ ಮುಖ ಕಿವುಚುವ ಹೊರಳುದೀಪ
ಕುರುಡಾಗದು ಮನವೆನ್ನುವ ಭರವಸೆ
ಅವಲಂಬನ ಚಳಿಚುಂಬನ
ಏಕಾಂತದ ಕಾಂತಚಾದರ
ಅದೋ ಬಿತ್ತು ಬಿತ್ತು
ಕಾದು ತಪಿಸಿದ ಮುಹೂರ್ತಫಲ
ಕಿಟಕಿಯಾಚೆಗೂ ಆಗಸ ಇರಲೇಬೇಕೆಂಬ
ಊಹೆ ರೆಕ್ಕೆಯ ಬಲ
ಕತ್ತರಿಸಿ ಧೊಪ್ಪನೆ ಉದುರಿದ
ನೂರಾರು ಬೆಳಚುಕ್ಕಿಮರಿ
ಬಾಲಸಹಿತ ನೇತಾಡಿ ಕಾಣೆಯಾದ
ಕಿಟಕಿಯಗಲದ ಆಕಾಶ
ಕಾದೇ ಕಾದಿದ್ದೆ ಬರವಿಗೆ
ಸುರಿಸುರಿದು ಇಳಿವ ಹೊನಲಿಗೆ
ಮಹಾಪೂರದಲ್ಲಿ ಕೊಚ್ಚಿಕಳೆದು
ಇಲ್ಲವಾಗುವ ಬಯಕೆಕುಡಿಯ ಪೋಷಿಸುತ್ತಾ
ಇರದುದರ ನೆರಳಿನಲ್ಲಿ ಬೇಯುತ್ತಾ
ಇಳಿದು ಬರುವ ಬೆಳಚುಕ್ಕಿಮರಿಗಳಿಗೆ
ಹೆಸರ ಹುಡುಕುತ್ತಾ
ಹುಡುಕುತ್ತಾ ಕಾದೆ
ಕರಕಲಾಗಿ ಕತ್ತಲಲ್ಲಿ.
ಮತ್ತೊಂದು ಮಗದೊಂದು
ಹೊರಳುದೀಪದರ್ಶನ
ಗಾಲಿಗಳ ಸಾಲು
ಇರುವ ಚೌಕಟ್ಟಿಗೇ ಬಂಗಾರಲೇಪ
ಕಾಗೆಕೂಗಿಗೂ ತಾಳಲಯದ ಆರೋಪ
ನನ್ನ ಕಿಟಕಿಯಾಚೆ
ಜ್ವಲಂತ ಜಗವಿದೆಯೆಂದು
ಹೇಳಿದವರಾರು?
ಜಗ ನನ್ನ ಕಿಟಕಿಯೊಳಗೆ,
ನನ್ನೊಳಗೆ.
ಕಂಡೂಕಾಣದ ಬೆಳಚುಕ್ಕಿಮರಿ
ಕಣ್ಣರೆಪ್ಪೆಯ ನಡುವೆ
ಸೀಮಿತ, ಸುರಕ್ಷಿತ.
ಎದೆಯ ಪುರವಣಿ
ತೆರೆದು ನೋಡು, ಒಮ್ಮೆ ಒಳಪುಟಗಳನ್ನು
ಮೇಲುಮೇಲಿನ ದಪ್ಪಕ್ಷರಗಳನ್ನು
ದಾಟಿ ಮುನ್ನಡೆದು ಸರಿಸಿಬಿಡು
ಅಬ್ಬರದ ಹೊರಪದರಗಳನ್ನು
ಅಂಗಾತ ತೆರೆದುಕೊಳಲಿ ಒಳವಿಚಾರಗಳು
ದೊಡ್ಡ ಸುದ್ದಿಯಾಗದ ಸುವಿಷಯಗಳು
ಅಜರಾಮರನೇನಲ್ಲ ನಾನು
ನನ್ನ ಸಾವಿಗೆ ಮೀಸಲಿಡಬೇಡ
ನಿನ್ನ ಸುಪುಷ್ಟ ಅಕ್ಷರಗಳನ್ನು
ಈಗಲೇ ಚೆಲ್ಲಿಬಿಡು ನನ್ನ ಹೆಣಕ್ಕಾಗಿ
ಕಾದಿರಿಸಿರುವ ನುಡಿನಮನಗಳನ್ನು
ಜೊತೆಗೆ ನನ್ನದೇ ಸುಖದ ಭಾಷ್ಪಗಳನ್ನೂ
ಹರಿದುಹೋಗಲಿ, ಏನಂತೆ ಈಗ!
ಹೊಸನೀರು ಬಂದಾಗ ವಾಸನೆಯಿಲ್ಲ
ಕೊಚ್ಚಿ ಹೋಗುವುದಿಲ್ಲ ನಾನು
ನಿನ್ನ ಮೇಲುದುಃಖದ ನೆರೆಯಲ್ಲಿ
ಪ್ರೀತಿಯ ಅಮಲಷ್ಟೇ ತೇಲಿಸಬಲ್ಲದು
ನಿನ್ನೆದೆಯ ಒಳಪುಟದ ಪದರಗಳಲ್ಲಿ
ಜಾಗವಿದೆಯಾದರೆ ಹೇಳು, ನಾಗರಿಕ,
ಮತ್ತೊಮ್ಮೆ ಹುಟ್ಟಿಬರುವೆ
ಇದೇ ಅಮ್ಮನ ಕಂದನಾಗಿ
ಅವಳ ಮೈಯ ರಕ್ಷೆಗಾಗಿ





ಏಕಾಂತದ ಕಾಂತಚಾದರ…. ವ್ಹಾವ್ ತುಂಬಾ ಕಾಡುವ ಸಾಲುಗಳು..ಕಾರ್ತಿಕದ ಸಾಲು ಸಾಲು ಹಣತೆ ಸಣ್ಣಗೇ ಹೊತ್ತಿಕೊಂಡಂತಿದೆ ಕವಿತೆ…