
ಕೃಷ್ಣ ಶ್ರೀಕಾಂತ ದೇವಾಂಗಮಠ
ಪ್ರತಿಮೆಗಳೆಬ್ಬಿಸಿ ಮಂದಿರ ಮಸೀದಿ
ಕಟ್ಟದೇ ಸುಮ್ಮನಿದ್ದಿರಿ
ಕಾಲ ಕಳೆದಂತೆಲ್ಲ ನಾನು ರೂಪಗಳಿಂದ
ರೂಪಾಂತರಗೊಂಡು ದೈವವಾಗಿ
ಮಾರ್ಪಟ್ಟಾಗ ಧರ್ಮ ಸುತ್ತುವರಿದು ವಸ್ತ್ರವಾಯ್ತು
ಈಗ ಏಸುವಿನ ಮುಳ್ಳು ಕಿರೀಟ ನೆತ್ತರು ಬಸಿಯುತ್ತದೆ
ರಕ್ತಕ್ಕೆ ಕಾದು ಕೂತ ನಾಲಿಗೆಗಳು ಊರುದ್ದ ಚಾಚಿಕೊಳ್ಳುತ್ತವೆ
ಬಣ್ಣವನ್ನೂ ಸೇರಿಸಿ ಖರೀದಿಸಿದ್ದಾಗಿದೆ
ಕೇಸರಿ ಬಿಳಿ ಹಸಿರು
ಉಟ್ಟ ಬಟ್ಟೆಗಳಿಗೂ ಧರ್ಮ ಸಂಕಟ
ಹೆಸರು ಸಂತ ಪಾದ್ರಿ ಫಕೀರ
ಧರ್ಮದ ಗೋಡೆಗಳನ್ನ ನುಣುಪಾಗಿ ನಾಜೂಕಾಗಿ ನಿರ್ಮಿಸಿದ್ದಾರೆ
ಒಂದರಿಂದ ಮತ್ತೊಂದಕ್ಕೆ ಸಲೀಸಾಗಿ ಜಾರಿಕೊಳ್ಳಲು ಮತ್ತು ಜಾರಿಸಿಕೊಳ್ಳಲು
ಒಳಗೆ ಅರ್ಥವಿಲ್ಲದ ಗೊಡ್ಡು
ಚೂಪಾದ ಹತಾರಗಳು
ವಿಷ ಉಣ್ಣಿಸುವ ಮೊಲೆ
ಕೇವಲ ಪೂಜೆಗಾಗಿ ತೋರಿಕೆಗಾಗಿ
ಓದುವ ಸಹಸ್ರ ಪುಟಗಳ ಗ್ರಂಥ
ಗಾಳಿಯಿದ್ದೂ ಉಸಿರು ಆಡುವುದಿಲ್ಲ ಅಲ್ಲಿ
ಪ್ರಾಣ ವಶಕ್ಕೆ ತೂಗು ಬಿಟ್ಟ ಕತ್ತಿ
ಬಾಯಿಗೆ ರಕ್ತ ಅಂಟಿಸಿಕೊಂಡು
ಸದಾ ನೇತಾಡುತ್ತದೆ





0 Comments