ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತುಸು ಹೆಚ್ಚೇ ನಾಚಿಕೊಳ್ಳುತ್ತೇನೆ ನಾನು..

ಹೊದ್ದು ಮಲಗುವ ಛಳಿ ಹೊಕ್ಕುಳಿಗೆ ತಂದೊಡ್ಡುತ್ತಾರೆ

ರೇಣುಕಾ ರಮಾನಂದ

ಅಂಕೋಲಾ

 

ಎದೆಯ ರೋಮಾಂಚನ ಬಣ್ಣಿಸುವ ಶಬ್ದಗಳು ಬಜಾರುಗಳಲ್ಲಿ ಮಾರಾಟಕ್ಕಿಲ್ಲ

ತಮ್ಮ ಪಾಡಿಗೆ ಅವು ಅವನೊಳಗೆ ಇದ್ದು
ನನ್ನ ಸತಾಯಿಸುತ್ತವೆ
ಕಾಡ ಕಾಲುಹಾದಿಯ ಮುಂದೆಲ್ಲೋ
ಜುಳುಜುಳು ಎದುರಾಗುವ ಕಿರುತೊರೆಯ
ಬೆಳ್ಳಿ ಮೀನುಗಳಂತೆ ಹೊರಳಿ ಜಾರುತ್ತವೆ
ಹಿಡಿವ ಬಯಕೆಯ ಕುಪ್ಪಳಿಸಿ ಕರೆದು
ಒದ್ದೆ ಮೈಯ ಇಣುಕಿಣುಕಿ ನೋಡುತ್ತವೆ
ಹೊಕ್ಕುಳ ಕುಳಿಯಲ್ಲಿ ಹೊಕ್ಕು ಹೊರಬಿದ್ದು
ಕಚಗುಳಿ ಇಡುತ್ತವೆ
ಮತ್ತೆ
‘ನಿನ್ನ ಇಷ್ಟು ಹಚ್ಚಿಕೊಂಡಿದ್ದೇನೆ ನೋಡು’ಎಂದೆಲ್ಲ ಹೇಳಿ
ಎದೆಬಿಚ್ಚಿ ತೋರಿಸಿ ಪೇಚಿಗೆ ಸಿಲುಕಿಸುತ್ತವೆ

ಎಲ್ಲೋ ಇದೆ ಗಮ್ಯ
ತುಸು ತಡವಾಗಿದೆ ಹೊರಟಿದ್ದು
ಇನ್ಯಾರೂ ಬರಬಾರದ ಕಾಡಹಾದಿಯನ್ನೇ
ಆಯ್ಕೆಯಾಗಿಸಿ
ಮುದುಕನಾಗಲು ಬರೇ ಐದಾರು ದಿನ ಬಾಕಿ
ಇರುವ ಆತ ದಟ್ಟ ಮರಗಳ ಮರೆಯಿಂದ
“ಮುದ್ದು”ಎಂದು ಕರೆವ ಅಮಲಿಗೆ
ಕಿವಿಯಾಗಿಸಿಕೊಂಡು
ಕಣ್ಣಿಗೆ ಕಾಣದ ಅವನು ಯಕ್ಷಪ್ರಶ್ನೆಯಲ್ಲ ಎಂದೂ……

 

ಬಹಳಷ್ಟು ಸಲ ಹೀಗಾಗುತ್ತದೆ
ಎದೆಯೊಳಗಿದ್ದವರು ಎದುರಾಗದಿದ್ದರೂ
ನೆತ್ತಿಗೆ ಖಾಯಂ ಒತ್ತಿ ನಿಂತಿರುತ್ತಾರೆ
ಸಣ್ಣಗೆ ಜ್ವರ ತರಿಸುತ್ತಾರೆ
ಇಂಥ ಬಿರುಬೇಸಿಗೆಯಲ್ಲೂ ಹೊದ್ದು
ಮಲಗುವ ಛಳಿ ಹೊಕ್ಕುಳಿಗೆ
ತಂದೊಡ್ಡುತ್ತಾರೆ

“ನಿನ್ನ ಕಣ್ಣಿಗೆ ನಿಲುಕದ ನಿನ್ನದೇ ಬೆನ್ನು
ನನ್ನ ಎದೆಗಂಟಿ
ಆವರಿಸಿ ಬೇರುಬಿಟ್ಟಿದೆ ನೋಡು”-
ನೆಟ್ವಕ್೯ ಸಿಗದ ಊರಲ್ಲಿ
ಗುಡ್ಡವೇರಿದರೆ ಮಾತ್ರ ಬರುವ
‘ಟಿವ್’ ಎನ್ನುವ ಒಂದೇ ಒಂದು ನೋಟಿಫಿಕೇಷನ್-
ತುಸು ಹೆಚ್ಚೇ ನಾಚಿಕೊಳ್ಳುತ್ತೇನೆ ನಾನು
ಪ್ರೇಮಿಸುವವರಾದರೆ ಕಲ್ಪಿಸಿಕೊಳ್ಳಿ
ಎಂಥ ಸುಖವಿದೆ ಇದರಲ್ಲಿ
ಪ್ರಾಕ್ಟಿಕಲ್ ಅಲ್ಲದ ಮೈ ಜುಂ ಎನ್ನಿಸುವ
ತಾಜಾ ಹಸೀ ಸುಳ್ಳಿನಲ್ಲಿ
ವಿಪರೀತ ವಿರಾಮವಿರುವ ಇಲ್ಲಿಗೂ
ಚೂರೂ ಪುರುಸೊತ್ತಿಲ್ಲದ ಅಲ್ಲಿಗೂ
ಹೊಂದಾಣಿಕೆ ಹೇಗೆ..!
ಬಿಸಿಬಿಸಿ ಚಚೆ೯ ಊರ ಅಶ್ವತ್ಥ ಕಟ್ಟೆಯಲ್ಲಿ
ಸೆರಗು ಗಾಳಿಗೆ ಬಿಟ್ಟುಕೊಂಡು ನಾನು
ಹಾಯ್ದು ಹೋಗುವಾಗಲಷ್ಟೇ ಸುಮ್ಮನಿರುತ್ತಾರೆ ಅವರು
ತರುವಾಯ ಮುಂದುವರಿಸುತ್ತಾರೆ
ಬುರುಗು ಬುರುಗು
ಕಂಪಿಸುವ ಕ್ರಿಯೆಯನ್ನು

ಹೇಳುತ್ತೇನೆ ಕೇಳೀಗ
ನಿನ್ನ ನೆನಪಿನೂರಲ್ಲಿ ಈಗ
‘ಹೊಕ್ಕುಳಲ್ಲಿ ಹೂವಿಲ್ಲ ‘
ರಾತ್ರಿ ಮೂರನೇ ಜಾವಕ್ಕೆ ಮುದ್ದಿಟ್ಟು ಹೋದ
ದುಂಬಿಯ ಹೇಳಿ ಮಾಡಿಸಿದ ಹೆಜ್ಜೆಗುರುತಿದೆ
ಮತ್ತದರ ಮೇಲೆಲ್ಲ ನನ್ನ ಸಂಭಾಳಿಸುವ ನಿನ್ನದೇ ಹಸಿಹಸಿಯ
ಹೆಸರಿದೆ
ಬಿಸಿ ಉಸಿರಿದೆ

‍ಲೇಖಕರು admin

28 March, 2017

5 Comments

  1. Nagraj Harapanahalli

    ಜಾರುವ ಯೌವ್ವನ, ಮುಪ್ಪು ಸಮೀಪಿಸುವ ಮುನ್ನವೂ ಎದೆ ಝೆಲ್ಲ ಎನ್ನುವ ನವಿರು ಪ್ರೇಮವನ್ನು, ಪ್ರೀತಿಯ ಉತ್ಕಟತೆಯನ್ನು ಏಕ ಕಾಲಕ್ಕೆ ಹಿಡಿದು ಕೊಡುವ ಕವಿತೆ ಇದು. ಪ್ರೇಮಿಸುವುದು ಮತ್ತು ಅದನ್ನು ಭಾವಿಸಿಕೊಳ್ಳುವುದೇ ಅತ್ಯಂತ ರೋಚಕ ಕ್ಷಣ ಎಂಬುದನ್ನು ಹೇಳುವ ಕವಿತೆ ಮುಪ್ಪಿನಲ್ಲಿ ಅಶ್ವಥ ಕಟ್ಟೆಯ ಮುಪ್ಪಾನು ಮುದುಕರು ಸೆರಗ ಶೃಂಗಾರ ಚಪಲಿಸುವ ಸೊಗಸು ಬದುಕಿನ ಭಾಗವೇ ಆಗಿದೆ ಎಂದು ಸಹ ಧ್ವನಿಸುತ್ತದೆ ಕವಿತೆ.

    • Anonymous

      ದೀಘ೯ ನೋಟ
      ಧನ್ಯವಾದಗಳು ಇಬ್ಬನಿ ಸರ್

  2. Mmshaik

    Tumba chendada kavite…

  3. Kavya Kadame

    Intense poem Akka, liked it:)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading