ಶ್ಯಾಮಲಾ ಮಾಧವ
ತುಂಬು ಚಂದಿರನ ತಂಪಿನಂತೆ, ಮೋಹಕ ಪ್ರಭೆಯಂತೆ ನೋಡುಗರ ಮನಕ್ಕೆ ಆಹ್ಲಾದವನ್ನಿತ್ತ ಚಿತ್ರ, “ನಿಲಾವುಂಡೆ ಬೆಳಿ”.
ಚಿತ್ರಕಥೆ ಬರೆದು, ನಿರ್ಮಾಣಕ್ಕಿಳಿದು, ನಿರ್ದೇಶಿಸಿ ಯಶಸ್ವಿಯಾದ ಅಪ್ಚಟ ಕಲಾವಿದ ಚಿದಾನಂದ ಎನ್.ಉದ್ಯಾವರ್ ಅವರ ಶ್ರಧ್ಧೆಯ ದ್ಯೋತಕ.
ನಮ್ಮ ಕರಾವಳಿಯ ಜನಜೀವನದ ಸಾಮಾಜಿಕ ಚಿತ್ರಣವನ್ನು ನವಿರು ಹಾಸ್ಯದ ಧಾಟಿಯಲ್ಲಿ ಬಿಡಿಸಿಟ್ಟ, ಜೊತೆಗೆ ಸಂಸಾರ ಮಂಥನದಲ್ಲಿ ಆಚಾರ- ವಿಚಾರ, ನೀತಿ- ಅನೀತಿ, ಪ್ರೇಮ- ದ್ವೇಷಗಳನ್ನು ಒರೆಗೆ ಹಚ್ಚುವ ಕಥೆಯನ್ನು ಹೆಣೆದು, ಚಲನಚಿತ್ರವಾಗಿ ರೂಪಿಸಿದ ಕಲಾವಿದನ ಕೌಶಲ, “ನಿಲಾವುಂಡೆ ಬೆಳಿ.”
ಕೇವಲ ಎರಡೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿತವಾದ ಎರಡೂವರೆ ಗಂಟೆಗಳ ಈ ಸಿನಿಮಾದಲ್ಲಿ ಛಾಯಾ ಚಿತ್ರಣ ಚಿತ್ರದ ಮಕುಟಮಣಿ. ಸುಶ್ರಾವ್ಯ ಸಂಗೀತಕ್ಕೆ ದನಿಯಾದ ತೃಪ್ತಿ ಉಚ್ಚಿಲ್ ಅವರ ಸುಮಧುರ ಕಂಠದ ಹಾಡುಗಳು ಆಸ್ವಾದಿಸುವಂತಿವೆ.
ಚಂದ್ರಜ್ಜನ ಪಾತ್ರದಲ್ಲಿ ಚಂದ್ರಕಾಂತ ವಿ.ಮುಟ್ಟ ಸಹಜ ಅಮೋಘ ಅಭಿನಯ, ಕಥಾನಾಯಕಿ ಕಾವ್ಯಳ ಪಾತ್ರದಲ್ಲಿ ಪ್ರೀತಿ ವಾಮಂಜೂರ್ ಪ್ರಬುದ್ಧ ಅಭಿನಯ, ತಂಗಿ ದಿಯಾ ಆಗಿ ಅನುಷಾಳ ಹಾಸ್ಯಮಯ ಪಾತ್ರ ನಿರ್ವಹಣೆ, ಕಾವ್ಯಳ ಗೆಳೆಯನಾಗಿ ಆಕಾಶ್ ನ ಸರಳ, ಸುಂದರ ಅಭಿನಯ, ಅವನಮ್ಮನಾಗಿ ಶಾಲಿನಿ ಬೆಂಗರೆಯ ಸಹಜ ಅಭಿನಯ, ಪೊಲೀಸ್ ಇನ್ಸ್ಪೆಕ್ಟರ್ ಆಗಿ ಸತ್ಯಾ ಜೀವನ್ ಹಾಗೂ ಅಭಿಲಾಷ್ ಅವರ ದಕ್ಷ ಅಭಿನಯ , ಡ್ರಗ್ ಮಾಫಿಯಾದ ಖದೀಮರು, ಮಾಧ್ಯಮಗಳ ಯಥಾಚಿತ್ರವಾಗಿ ನ್ಯೂಸ್ ರೀಡರ್ ಪಾತ್ರದಲ್ಲಿ ಪೂರ್ಣಿಮಾ ಉಚ್ಚಿಲ್ ಹೀಗೆ ಮನದಲ್ಲಿ ಅಚ್ಚೊತ್ತಿದ ಪಾತ್ರಗಳು ಹಲವು.
ಚಿತ್ರದಲ್ಲಿ ರಾಮಶರಣ ಶಾಸ್ತ್ರಿಗಳ ಕಿರು ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಂಡು ತಮ್ಮ ಸಹಜ, ಸರಳ ನುಡಿಗಳಿಂದ ಚಿತ್ರದ ಘನತೆಯನ್ನು ಹೆಚ್ಚಿಸಿದವರು, ಬೆಂಗಳೂರಿನ ಸರ್ಫಾಕೋಟ್ಸ್ ಸಂಸ್ಥೆಯ ಯಶೋಧರ ಯು. ಆರಂಭದಿಂದಲೂ ಚಿತ್ರದ ಬಗ್ಗೆ ಅಪಾರ ಆಸಕ್ತಿ ತೋರಿ ಎಲ್ಲ ರೀತಿಯ ಪ್ರೋತ್ಸಾಹವನ್ನಿತ್ತವರು.
ಚಿತ್ರದ ಅಂತ್ಯಕ್ಕೆ ಮುನ್ನ ಬಂದ ಸಮಾಜ ಸಂಸ್ಕೃತಿಯ ಥೀಮ್ ಸಾಂಗ್ ಅಪ್ಯಾಯಮಾನವಾಗಿ ಮೈ ನವಿರೇಳಿಸಿತು. ಕಡಲ ದೋಣಿಗಳು ಕರೆ ಹತ್ತುವ ದೃಶ್ಯ ಹಾಗೂ ದಡದ ಬಲೆ ನಿರ್ಮಾಣದ ಚಿತ್ರಗಳಿಗೆ ಮಾರು ಹೋಗದಿರುವುದೆಂತು?
ಸಮಾಜದ ಒಳಿತನ್ನೇ ದೃಷ್ಟಿಯಲ್ಲಿಟ್ಟುಕೊಂಡು, ನಮ್ಮ ಜನರು ಎಲ್ಲ ಕೆಡುಕುಗಳಿಂದ ಮುಕ್ತರಾಗಿ ಪ್ರೀತಿ, ಸಾಮರಸ್ಯದಿಂದ ಶ್ರೇಯೋಭಿಲಾಷಿಗಳಾಗಿ ಬಾಳುವಂತಾಗಲೆಂದು ಸದಾ ಆಶಿಸುತ್ತಾ ಕಾರ್ಯಪ್ರವೃತ್ತನಾಗುವ ಚಿದಾನಂದ ಸಮಾಜಕ್ಕೆ ಭೂಷಣಪ್ರಾಯನಾದ ಮಾಣಿಕ್ಯವೇ ಸರಿ.
ಊರು ಪರವೂರುಗಳಲ್ಲಿ ಸ್ನೇಹ ಸೌಹಾರ್ದದ ಹೌಸ್ ಫುಲ್ ಪ್ರದರ್ಶನಗಳ ಬಳಿಕ ಇದೀಗ ಯೂ ಟ್ಯೂಬ್ ನಲ್ಲಿ ಚಿತ್ರ ಲಭ್ಯವಿದೆ. “ನಿಲಾವುಂಡೆ ಬೆಳಿ” ಸಂಪೂರ್ಣ ತಂಡಕ್ಕೆ ಪ್ರೀತ್ಯಭಿಮಾನ ತುಂಬಿದ ಶುಭಾಶಯಗಳು.







0 Comments