‘ತಿಥಿ’ ಸಿನೆಮಾದಲ್ಲಿ ಒಂದು ರೀತಿಯಲಿ ಎಲ್ಲರನ್ನೂ ಕಾಡುವುದು ಕುರಿ ಕಾಯುವವರ ಕಥೆ.
ಎಲ್ಲಿಂದ ಎಲ್ಲಿಗೋ ಕುರಿ ಮೇಯಿಸುತ್ತಾ ಹೋಗುವವರ ಬದುಕು.
ಅದಿರಲಿ ಕುರಿಗಳ ಕಾರಣದಿಂದಾಗಿಯೇ ಊರಿಗೆ ಕೀರ್ತಿ ಬರುವ ಈ ಬರಹ ಓದಿ
ಬಿ ಕೆ ನರಸಿಂಹರಾಜು
ಸಿರಾ ಸೀಮೆಯೆಂದರೆ ಸಾಕು ಅಲ್ಲಿನ ಜನ ಏನ್ ಕೆಲಸ ಮಾಡ್ತಾರೆ ಅಂತ ಯಾರನ್ನ ಕೇಳಿದ್ರೂ ಥಟ್ ಅಂತ ಬರೋ ಉತ್ತರ ರೈತಾಪಿ ಜನ ಒಂದು ಕಡೆಯಾದರೆ , ಪಶುಪಾಲನೆ ಮಾಡೋ ಜನ ಇನ್ನೊಂದು ಕಡೆ ಅನ್ನೋದು ಸಾಮಾನ್ಯವಾದ ಉತ್ತರ.
ಹೌದು ನಮ್ಮ ಸಿರಾ ಸೀಮೆ ಹೆಸರಾಗಿದ್ದೆ ಇಲ್ಲಿ. ಬರದ ನಾಡಾದರೂ ರೈತರು ಕುಗ್ಗದೇ ತಮ್ಮ ಜಮೀನಲ್ಲಿ ಬೆಳೆ ಬೆಳೆಯೋದರ ಜೊತೆಗೆ ಹೆಚ್ಚಾಗಿ ಪಶುಪಾಲನೆಗೆ ತಮ್ಮ ಪ್ರಾಮುಖ್ಯತೆಯನ್ನು ನೀಡ್ತಾರೆ. ಬಹುಶಃ ಅದಕ್ಕೆ ಇರಬೇಕು ಸಿರಾ ಸೀಮೆ ಇಂದಿಗೂ ಕುರಿ ಸಾಕಾಣಿಕೆಯಲ್ಲಿ ರಾಜ್ಯದಲ್ಲೇ ಹೆಸರು ಮಾಡಿದ ತಾಲ್ಲೂಕು ಅನ್ನೋ ಹೆಗ್ಗಳಿಕಿಗೆ ಪಾತ್ರವಾಗಿದ್ದು.
ನಮ್ಮೂರು ಇದೇ ತಾಲ್ಲೂಕಿನ ಬೇವಿನಹಳ್ಳಿ. ಕುರಿ ಸಾಕಾಣಿಕೆಗೆ ಹೆಸರಾದ ಗ್ರಾಮ. ಕಾಡುಗೊಲ್ಲ ಸಮುದಾಯದ ಪ್ರತಿಯೊಬ್ಬರ ಮನೆಯಲ್ಲೂ ಕುರಿ ಸಾಕಾಣಿಕೆ ಮೂಲ ವೃತ್ತಿ. ಜೊತೆಗೆ ಕುರುಬ ಸಮಾಜದ ಮನೆಗಳಲ್ಲಿಯೂ ಕುರಿ ಸಾಕಾಣಿಕೆ ಮುಖ್ಯ ಕಸುಬು.
ನೀವು ನಂಬೋಕು ಕಷ್ಟ ಆಗಬಹುದು ಒಂದೊಂದು ಮನೆಯಲ್ಲಿ ಐದುನೂರುರಿಂದ ಸಾವಿರ-ಎರಡು ಸಾವಿರಗಟ್ಟಲೆ ಕುರಿಗಳನ್ನು ಸಾಕಿದ ಊರು ನಮ್ಮದು.
ಕುರಿ ದೊಡ್ಡಜ್ಜಿ ಅಂದರೆ ಇಡೀ ರಾಜ್ಯಕ್ಕೆ ಹೆಸರು ಮಾಡಿದ ಕುರಿ ಸಾಕಾಣಿಕೆ ಮಾಡಿದ ತಾಯಿ ನಮ್ಮೂರಿನಾಕೆ.
ಒಮ್ಮೆ ಗೆಳೆಯನೊಟ್ಟಿಗೆ ಮಾತನಾಡುವಾಗ ನಮ್ಮೂರ ಜನರ ಕುರಿ ಸಾಕಾಣಿಕೆ ಬಗ್ಗೆ ಮಾತಾಡ್ತಿದ್ದೆ.
ಒಂದೊಂದು ಮನೆಗಳಲ್ಲಿ ಸಾವಿರಗಟ್ಟಲೆ ಕುರಿಗಳಿಗೆ ಎಂದ ತಕ್ಷಣ ಅವನು ಮೊಬೈಲ್ ತೆಗೆದು ಕ್ಯಾಲ್ಯುಕಲೇಟರ್ ಓಪನ್ ಮಾಡಿ 1000 ಕ್ಕೆ ರೂ.3000/- ಅಂದರೂ ರೂ.3000000/- ಅಂತ ಲೆಕ್ಕ ಹಾಕಿ “ಏನೋ ನಿಮ್ಮೂರಲ್ಲಿ ಎಲ್ಲರೂ ಲಕ್ಷಾದಿಪತಿಗಳೇ ಅಂದ”.
ಒಂದು ಕ್ಷಣ ನನಗೂ ಆಶ್ಚರ್ಯ ಆಯ್ತು. ನನ್ನೂರಲ್ಲಿ ಗುಡಿಸಲೂ ಅರಮನೆ ಎರಡೂ ಇವೆ ಆದರೆ ಕುರಿಗಾಹಿಗಳ ಸಂಕಷ್ಟಗಳನ್ನು ಅಪ್ಪ ಹೇಳಿದ ಮೇಲೆ ಗೊತ್ತಾಗಿದ್ದು.
ಗೊಲ್ಲರಹಟ್ಟಿಗಳಲ್ಲಿ ಹಿಂದಿನಿಂದಲೂ ಕೈವಾಡ ಅನ್ನೋದು ರೂಡಿ. ಕೈವಾಡ ಅಂದರೆ ಆ ಗ್ರಾಮದ ದೇವರ ಕೆಲಸ ಮಾಡುವ ಪ್ರತಿಯೊಬ್ಬರನ್ನು ಒಂದೊಂದು ಜಾತಿಗನುಗುಣವಾಗಿ 12 ಮಂದಿ ಕೈವಾಡ ಅಂತ ವರ್ಗೀಕರಣ ಮಾಡೀರ್ತಾರೆ. ಹಿಂದೆ ಬಾರಾಬಲೂತಿ ಅಂತ ಕರೆಯುತ್ತಿದ್ದರು. ಅಪ್ಪ ಅರೆವಾದ್ಯ ನುಡಿಸುತ್ತಿದ್ದರಿಂದ ಒಂದು ಗೊಲ್ಲರ ಹಟ್ಟಿಗೆ ವರ್ಷಕ್ಕೆ ಒಂದು ಕುರಿಯನ್ನು ಉಚಿತವಾಗಿ ಕೊಡೋದು ವಾಡಿಕೆ. ಹೀಗೆ ಉಚಿತವಾಗಿ ಕೊಡೋ ಕುರಿಯನ್ನು ತಗೋಳೋಕೆ ವಲಸೆ ಹೋಗಿರುವ ಕುರಿಗಳು ಇರೋ ಕಡೆಗೆ ಹೋಗಿ ತರಬೇಕು.
ನಮ್ಮ ಸಿರಾದಲ್ಲಿ ಅಷ್ಟೊಂದು ಕುರಿಗಳಿಗೆ ಮೇವು ಸಿಗದ ಕಾರಣ ನಮ್ಮ ಭಾಗದ ಜನ ಮೇವು ಯತೇಚ್ಚವಾಗಿ ಇರುವ ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಈ ಭಾಗಕ್ಕೆ ವಲಸೆ ಹೋಗೋದು ರೂಡಿ.
ಇಲ್ಲಿ ಅಪ್ಪ ಅನುಭವಿಸಿದ ಕಷ್ಟಗಳನ್ನು ಕೇಳಿ ಪಶುಪಾಲನೆ ಎಷ್ಟು ಕಷ್ಟ ಅನ್ನೋದು ನಮಗೂ ತಿಳಿಯಿತು.
ಹೀಗೆ ಒಮ್ಮೆ ಅಪ್ಪ ಕುರಿ ತರೋಕೆ ಅಂತಾನೇ ಹುಡುಕಿಕೊಂಡು ಮೈಸೂರಿನ ಕಡೆ ಹೋದಾಗ ಈಗಿನ ಹಾಗೆ ಮೊಬೈಲ್ ಬಳಕೆ ಇರಲಿಲ್ಲ.
ಹೋಗೋಕು ಮೊದಲೇ ಆ ಮನೆಯವರಿಂದ ವಿಳಾಸ ಬರೆಸಿಕೊಂಡು ಹೋಗ್ಬೇಕಿತ್ತು. ಆ ವಿಳಾಸದ ಊರಿಗೆ ಹೋದಾಗ ಕುರಿಗಾಹಿಗಳು ಸಾಮಾನ್ಯವಾಗಿ ಊರಲ್ಲಿ ಇರಲ್ಲ ಕಾಡುಗಳಲ್ಲಿ ಇರ್ತಾರೆ ಹುಡುಕೋದು ಬಹಳ ಕಷ್ಟ. ಕೊನೆಗೂ ಹುಡುಕಿಕೊಂಡು ಹೋದರಂತೆ. ಅಪ್ಪ ಅಪರೂಪಕ್ಕೆ ಬಂದಿದಾನೆ ಅಂತ ಒಂದು ಮರಿ ಕಡಿದು ಮಟನ್ ಊಟ ಮಾಡಿಸಿ ಊಟಕ್ಕೆ ಇಟ್ಟು ಒಂದು ಕಂಬಳಿ ಕೊಟ್ರಂತೆ ಇವತ್ತು ಇಲ್ಲೇ ಇದ್ದು ಬೆಳಗ್ಗೆ ಬಿಸಿ ಮುದ್ದೆ ತಂಗಳು ಸಾರು ಉಂಡೋಗಿವೆಯಂತೆ ಅಂತ ಹೇಳಿ ಅಲ್ಲೇ ಉಳಿಸಿಕೊಂಡರಂತೆ. ರಾತ್ರಿ ಪೂರ ಮಳೆ ಬರ್ತಿದ್ರಿಂದ ಅಪ್ಪನಿಗೆ ಇಂತಹ ಅನುಭವ ಹೊಸದು ಹಾಗಾಗಿ ಇಡೀ ರಾತ್ರಿ ಜಾಗರಣೆ ಮಾಡೊವಾಗ ಕುರಿ ನಾಯಿಗಳು ಜೋರಾಗಿ ಬೊಗಳಿದ ಶಬ್ದ ಆಗಿ ನೋಡಿದ್ರೆ ಕುರಿ ಕದಿಯೋ ಕಳ್ಳರು ಆಕಡೆಯಿಂದ ಜೋರಾಗಿ ಕಲ್ಲು ಬೀಸ್ತಾ ಕುರಿ ಹಟ್ಟಿ ಕಡೆ ಬರ್ತಿದ್ರಂತೆ.
ಕಲ್ಲು ನಾಯಿಗಳಿಗೆ ತಗುಲಿ ಅವುಗಳೂ ಹೆದರಿ ಸುಮ್ಮನಾದವಂತೆ. ಆಮೇಲೆ ಎಲ್ಲರೂ “ಎದ್ದಳ್ರೋ ಕಳ್ಳರು ಬಂದವ್ರೆ” ಅಂತ ಕವಣೆ ಕಲ್ಲು ರೋಟಿ
ಕುಡುಗೋಲುಗಳನ್ನು ಬೀಸೋಕೆ ಶುರು ಮಾಡಿ ಕಳ್ಳರನ್ನು ವಾಪಸ್ಸು ಬೆದರಿಸಿ ಕಳಿಸೋದ್ರಲ್ಲಿ ಯಶಸ್ಸು ಕಂಡರಂತೆ. ಆದರೆ ಕಳ್ಳರು ಬೀಸಿದ ಕಲ್ಲು ಕುರಿಗಾಹಿಯ ಕಾಲಿಗೆ ಬಿದ್ದು ರಕ್ತ ಬರ್ತಿರೋದನ್ನ ನೋಡಿ ಅಪ್ಪ “ಹೆಂಗಾದರೂ ಇರ್ತೀರ ನೀವು ಇಲ್ಲಿ” ಅಂತ ಕೇಳಿದಕ್ಕೆ ಕುರಿಗಾಹಿ ಹೇಳಿದ್ರಂತೆ “ಇದೆಲ್ಲಾ ಇಲ್ಲಿ ಸಾಮಾನ್ಯ” ಅಂದ್ರಂತೆ.
ಸ್ವಲ್ಪ ಹರಿಶಿಣ ಗಿಡಮೂಲಿಕೆ ಹಾಕಿ ಆತನ ಕಾಲಿನಲ್ಲಿ ಬರ್ತಿದ್ದ ರಕ್ತನ ನಿಲ್ಲಿಸಿದರಂತೆ.
ಆಮೇಲೆ ಎಲ್ಲರೂ ಮಲಗಿದರಂತೆ. ಮತ್ತೆ ಸ್ವಲ್ಪಹೊತ್ತಿಗೆ ಕಿರುಬವೊಂದು ಕುರಿಹಟ್ಟಿಗೆ ನುಗ್ಗಿ ಕುರಿ ಹೊತ್ತುಕೊಂಡು ಹೋಗಿದ್ದನ್ನ ಕಣ್ಣಾರೆ ಕಂಡ ಅಪ್ಪನಿಗೆ ರಾತ್ರಿ ಪೂರ ನಿದ್ದೆ ಇಲ್ಲದೇ ಬೆಳಗ್ಗೆ ಎದ್ದು ಕುರಿ ಮಾಲೀಕನಿಗೆ ಹೊರಡುವುದಾಗಿ ಹೇಳಿ ಹೊರಟರಂತೆ ತಂಗಳ ಕುರಿಸಾರು ಬಿಸಿ ಮುದ್ದೆ ಊಟ ಮಾಡಿ ಹೊರಟ ಅಪ್ಪನಿಗೆ ಒಂದು ಕುರಿ ಕೊಟ್ಟು ಕಳಿಸಿದರಂತೆ.
ಮನೆಗೆ ಬಂದಾಗ ಅಪ್ಪ ಇಷ್ಟೆಲ್ಲ ಹೇಳಿದ ಮೇಲೆ ನಮ್ಮ ಲೆಕ್ಕಚಾರ ತಪ್ಪು ಅಂತ ಗೊತ್ತಾಗಿತ್ತು.
ವರ್ಷಕ್ಕೆ ಒಮ್ಮೆ ಬರೋ ಯುಗಾದಿಗೂ ಬರದಂಗೆ ಕುರಿ ಸಾಕೋ ಮಂದಿಗೆ ಕುರಿಯಿಂದ ಬರೋ ಲಾಭಕ್ಕಿಂತ ಪಶುಪಾಲನೆಯಲ್ಲಿರೋ ಖುಷಿನೋಡಿ ನಮಗೂ ಖುಷಿಯಾಯ್ತು.





Sundra baraha b k raju
Super kanri