ಜಿ ಪಿ ಬಸವರಾಜು
ಮರಳಿ ಬಾ ತಿಮ್ಮಣ್ಣ- ಇಡೀ ರಾಜ್ಯದ ಜನತೆ ಪ್ರಾರ್ಥಿಸಿದ್ದು ಈ ತಿಮ್ಮಣ್ಣನಿಗಾಗಿ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಸೋಳಿಕೇರಿಯಲ್ಲಿ ಭಾನುವಾರ ತೆರೆದ ಕೊಳವೆ ಬಾವಿಗೆ ಬಿದ್ದ ಆರು ವರ್ಷದ ಬಾಲಕ ತಿಮ್ಮಣ್ಣ ಹನುಮಂತ ಹಟ್ಟಿ ಈ ದುರಂತದಿಂದ ಪಾರಾಗಿ ಬರಲೆಂದು ಆಶಿಸಿದ ಹೃದಯಗಳು ಲಕ್ಷಾಂತರ. ಹಗಲಿರುಳೆನ್ನದೆ ಸ್ಥಳದಲ್ಲಿಯೇ ಬೀಡುಬಿಟ್ಟು ಕ್ಷಣಕ್ಷಣದ ಚಿತ್ರವನ್ನು ಕಣ್ಮುಂದೆ ತಂದ ನಮ್ಮ ಕನ್ನಡ ವಾಹಿನಿಗಳು ಜನ ಮರುಗುವಂತೆ ಮಾಡಿದವು; ಪ್ರಾರ್ಥಿಸುವಂತೆ ಮಾಡಿದವು. ಶಾಲೆಗಳಲ್ಲಿ ಮಕ್ಕಳು ಕೈಜೋಡಿಸಿ ಪ್ರಾರ್ಥಿಸಿದರು; ದೇವಾಲಯಗಳಲ್ಲಿ ವಿಶೇಷ ಪೂಜೆ, ಚರ್ಚು ಮಸೀದಿಗಳಲ್ಲಿ ಪ್ರಾರ್ಥನೆ. ಟಿವಿಗಳ ಮುಂದೆ ಕಾತರಿಸಿ ಕುಳಿತವರು ಸಾವಿರಾರು ಮಂದಿ. ಚುನಾವಣೆಯ ಫಲಿತಾಂಶವನ್ನು ನೋಡುವಂತೆ, ಕ್ರಿಕೆಟ್, ಫುಟ್ಬಾಲ್ ಆಟವನ್ನು ಕಾತರದಿಂದ ವೀಕ್ಷಿಸುವಂತೆ ಈ ದುರಂತವನ್ನೂ ಜನ ನೋಡಿದರು. ಏನಾದರೂ ತಿಮ್ಮಣ್ಣ ಮರಳಿ ಬರಲಿಲ್ಲ; ಬರುವ ಸ್ಥಿತಿಯಲ್ಲಿಯೂ ಇರಲಿಲ್ಲ. 160 ಅಡಿ ಆಳದಲ್ಲಿದ್ದ ಆ ಪುಟ್ಟ ಮಗುವಿನ ಗತಿ ಏನಾಗಿರಬೇಡ.
ಸುದ್ದಿಗೆ ಕಣ್ಣುನೆಟ್ಟಿದ್ದ ಒಂದು ವಾಹಿನಿಯವರು ಕೊಳವಿ ಬಾವಿಯೊಳಕ್ಕೆ ಕ್ಯಾಮರಾ ಇಳಿಸಿ ಮೊದಲು ಪಡೆದ ಚಿತ್ರ ಮಗುವಿನ ಕೈಯಿಯದು. ಆ ಕೈ ನಿಶ್ಚಲವಾಗಿತ್ತು; ಅದರ ಮೇಲೆ ಮಣ್ಣುಬಿದ್ದಂತೆಯೂ ಕಾಣಿಸುತ್ತಿತ್ತು. ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಿರಬಹುದು. ಕೊಳವೆ ಬಾವಿಯ ಬಳಿ ಗುಂಡಿತೋಡುವ ಕೆಲಸವನ್ನು ಜೆಬಿಸಿ ಯಂತ್ರಗಳು ಆರಂಭಿಸಿದವು. ಸಾಂಗ್ಲಿಯಿಂದ ಬಂದ ತಂಡ, ಹಟ್ಟಿ ಚಿನ್ನದ ಗಣಿಯಿಂದ ಬಂದ ತಂಡ, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹೀಗೆ ಅನೇಕ ತಂಡಗಳು ಬಂದು ಕಾರ್ಯಾಚರಣೆಯಲ್ಲಿ ಮುಳುಗಿದವು. ಆದಷ್ಟು ಬೇಗ ಮಗುವಿನ ಆಳಕ್ಕೆ ಹೋಗಿ ಮಗುವನ್ನು ಉಳಿಸಿಬಿಡಬೇಕೆಂಬ ಕಾಳಜಿ ಈ ಎಲ್ಲ ಪ್ರಯತ್ನಗಳ ಹಿಂದೆ ಇದ್ದವು. ಈ ಮಧ್ಯೆ ಕೆ.ಆರ್.ಪೇಟೆಯ ಮಂಜೇಗೌಡರು ತಾವು ತಯಾರಿಸಿದ್ದ ರೋಬೋ ಯಂತ್ರವನ್ನು ತೆಗೆದುಕೊಂಡು ಬಾಗಿಲಕೋಟೆಯ ದಿಕ್ಕು ಹಿಡಿದರು. 60 ಅಡಿ ಆಳದಲ್ಲಿದ್ದ ಮಗು 160 ಅಡಿ ಆಳಕ್ಕೆ ಜಾರಿತು ಎಂಬ ವರದಿಗಳೂ ಬಂದವು. ಎಷ್ಟೇ ಕಾಳಜಿ ತೋರಿಸಿದರೂ, ಎಂಥ ತುರ್ತನ್ನು ಮಾಡಿದರೂ ಕಾಲ ನಿಧಾನಕ್ಕೆ ಸರಿದು ಹೋಗುತ್ತಿತ್ತು. ಕಾಲದ ಜೊತೆಗೆ ಮಗು ಮರಳಿಬರಬಹುದೆಂಬ ಭರವಸೆಯೂ ಕರಗುತ್ತಿತ್ತು. ಮಂಜೇಗೌಡರ ರೋಬೋ 145 ಅಡಿ ಆಳಕ್ಕೆ ಹೊಗಿ ಮುಂದೆ ಸಾಗಲಾರದೆ ನಿಂತುಬಿಟ್ಟಿತು. ರೋಬೋ ನುಸುಳಲಾರದಷ್ಟು ಕೊಳವೆ ಕಿರಿದಾಗಿತ್ತು. ಈ ಮಧ್ಯೆ ಅಲ್ಲಿ ಕಲ್ಲೊಂದು ಗೋಚರಿಸಿ ಅದು ಒಂದು ಇಂಚು ಮುಂದಕ್ಕೂ ಬಂದುಬಿಟ್ಟಿತು. ಅದು ಕೆಳಗೆ ಬಿದ್ದರೆ ಮಗುವಿನ ಜೀವಕ್ಕೆ ಅಪಾಯ ಎಂದು ರೋಬೋ ಕಾರ್ಯಾಚರಣೆ ನಿಂತುಬಿಟ್ಟಿತು.
ಕ್ಯಾಮೆರಾಗಳು ಸಂಗ್ರಹಿಸಿದ ಚಿತ್ರಗಳು ಮಗುವಿನ ಮೇಲೆ ಮಣ್ಣುಬಿದ್ದಿರುವುದನ್ನು ತೋರಿಸಿದವು. ಆ ಮಣ್ಣನ್ನು ತೆಗೆಯಬೇಕು, ನಂತರ ಮಗುವನ್ನು ಹೊರತರಬೇಕು. ಯಂತ್ರಗಳು ಗುಂಡಿತೋಡಿದ್ದು 80 ಅಡಿ ಆಳಕ್ಕೆ. ಇಷ್ಟು ಹೊತ್ತಿಗೆ ಮೂರು ದಿನಗಳು ಕಳೆದುಹೋಗಿದ್ದವು. ಮಗು ಬದುಕಿರಬಹುದೇ ಎಂಬ ಬಗ್ಗೆ ಅನುಮಾನಗಳು ತೇಲಾಡತೊಡಗಿದವು.

ಇಡೀ ಪ್ರಕರಣದಲ್ಲಿ ಮಾಧ್ಯಮಗಳು ತೋರಿದ ಕಾಳಜಿ, ಮೆಚ್ಚುಗೆ ಮತ್ತು ಟೀಕೆ ಎರಡನ್ನೂ ಪಡೆದುಕೊಂಡಿತು. ಮಾಧ್ಯಮಗಳು, ವಿಶೇಷವಾಗಿ ನಮ್ಮ ಟಿವಿ ವಾಹಿನಿಗಳು ನೀಡಿದ ಚಿತ್ರಗಳ ಹಿಂದಿನ ಪರಿಶ್ರಮ ಮೆಚ್ಚುವಂಥದ್ದೇ. ಆದರೆ ಸುದ್ದಿಗಾಗಿ ಈ ವಾಹಿನಿಗಳು ನಡೆದುಕೊಂಡ ರೀತಿ ಮೇಲುನೋಟಕ್ಕೆ ಕ್ರೂರವಾಗಿ ಕಾಣುವಂತಿರಲಿಲ್ಲ. ಸೂಕ್ಷ್ಮವಾಗಿ ಗಮನಿಸಿದವರಿಗೆ ಅವುಗಳ ಕ್ರೌರ್ಯ ಕಾಣುವಂತಿತ್ತು. ಮಗುವನ್ನು ಕಳೆದುಕೊಳ್ಳುವ ಹಂತದಲ್ಲಿದ್ದ ಕುಟುಂಬದವರನ್ನು ಮಾತನಾಡಿಸುತ್ತ, ಅವರೊಂದಿಗೆ ವರ್ತಿಸಿದ ರೀತಿ ಕ್ರೌರ್ಯದ ಒಂದು ಮುಖವನ್ನು ತೋರಿಸುತ್ತಿತ್ತು. ಈ ಪುಟ್ಟ ಬಾಲಕನ ಇಬ್ಬರು ಅಕ್ಕಂದಿರು ದೊಡ್ಡವರೇನಲ್ಲ; ಅವೂ ಮಕ್ಕಳೇ. ಅವುಗಳಿಗೆ ಅನೇಕ ಪ್ರಶ್ನೆಗಳನ್ನು ಹಾಕಿ ಉತ್ತರ ಕಂಡುಕೊಳ್ಳಲು ನೋಡಿದ್ದು, ಇವತ್ತು ನಮ್ಮ ವಾಹಿನಿಗಳು ಹೃದಯಗಳನ್ನು ಕಳೆದುಕೊಂಡಿರುವುದರ ಸೂಚನೆಗಳಾಗಿದ್ದವು. ಅಳುತ್ತಿದ್ದ, ನೋಯುತ್ತಿದ್ದ, ಒಡಲ ಬೆಂಕಿಯಲ್ಲಿ ಬೆಂದುಹೋಗುತ್ತಿದ್ದ ತಾಯಿ, ತಂದೆ, ಬಂಧುಗಳ ಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದದ್ದು ಹೃದಯಹೀನ ವರ್ತನೆಯಲ್ಲದೆ ಬೇರೆ ಏನಾಗಲು ಸಾಧ್ಯ. ಅಂಥ ಹೊತ್ತಿನಲ್ಲಿ ಅವರನ್ನು ಮಾತನಾಡಿಸುತ್ತ, ತಮ್ಮ ಉದ್ದೇಶವನ್ನು ಈಡೇರಿಸಿಕೊಂಡದ್ದೂ ನಾಚಿಕೆಗೇಡಿನ ವರ್ತನೆಯೇ.
ಈ ವಾಹಿನಿಗಳು ತಮ್ಮ ಹೊಣೆಗೇಡಿ ವರ್ತನೆಯನ್ನೂ ಈ ಪ್ರಕರಣದಲ್ಲಿ ತೋರಿಸಿದವು. ಒಂದು ವಾಹಿನಿ, ‘ತಿಮ್ಮಣ್ಣ, ಮರಳಿ ಬಾ’ ಎನ್ನುವ ಸಂದೇಶವನ್ನು ತಮಗೆ ಕಳುಹಿಸಿಕೊಡಿ ಎಂದು ವೀಕ್ಷಕರಿಗೆ ಸೂಚಿಸಿತು. ಇಂಥ ಸೂಚನೆಗೇ ಕಾದು ಕುಳಿತಂತಿದ್ದ ವೀಕ್ಷಕರು ಸಂದೇಶಗಳ ಮಳೆ ಸುರಿಸಿದರು. ನಂತರ ಪ್ರಾರ್ಥಿಸಲು ಸಲಹೆ. ಪ್ರಾರ್ಥನೆ, ಪೂಜೆ, ಮಂಗಳಾರತಿ ಇತ್ಯಾದಿ ಎಲ್ಲವೂ ನಡೆದವು. ಎಲ್ಲದಕ್ಕೂ ಅದ್ಧೂರಿಯ ಪ್ರಚಾರ. ನಾವು ನಗುವುದಕ್ಕೂ ನಮಗೆ ಪ್ರಚಾರ ಬೇಕು; ಅಳುವುದಕ್ಕೂ ಬೇಕು; ಸಿಹಿ ತಿನ್ನುವುದಕ್ಕೂ ಬೇಕು. ಇನ್ನೊಬ್ಬರ ಬಾಯಿಗೆ ಸಿಹಿ ಇಡುವುದು ಕ್ಯಾಮರಾ ಫೋಕಸ್ ಆದಾಗಲೇ. ಇಂಥ ಹುಚ್ಚಾಟಕ್ಕೆ ನಾವೇ ಸಿದ್ಧವಾಗುತ್ತೇವೆಯೋ, ವಾಹಿನಿಯವರೇ ನಮ್ಮನ್ನು ಸಿದ್ಧಗೊಳಿಸುತ್ತಾರೋ ಹೇಳುವುದು ಕಷ್ಟ.
ಅಂತೂ ಪ್ರಾರ್ಥನೆಯಿಂದ ತಿಮ್ಮಣ್ಣ ಮರಳಿ ಬರಬೇಕಾಗಿತ್ತು. ಪ್ರಾರ್ಥನೆಯನ್ನು ಒಂದು ಮೌಢ್ಯದಂತೆ, ಸಮೂಹ ಸನ್ನಿಯಂತೆ ಹುಟ್ಟುಹಾಕಿ ಬೆಳೆಸುವ ಮಾಧ್ಯಮಗಳಿಗೆ ತಮ್ಮ ಹೊಣೆಗಾರಿಕೆಯೇ ಮರೆತುಹೋದರೆ. ವೈಜ್ಞಾನಿಕ ಮನೋಧರ್ಮ ಎನ್ನುವುದು ನಮ್ಮ ಸಂವಿಧಾನದಲ್ಲಿ ಮಾತ್ರವೇ? ಈ ಮನೋಧರ್ಮವನ್ನು ಬೆಳೆಸುವ ಜವಾಬ್ದಾರಿ ನಮ್ಮ ಮಾಧ್ಯಮಗಳಿಗೆ ಇಲ್ಲವೇ. ಲೋಕ ಶಿಕ್ಷಣವೆಂದರೆ ಅರ್ಥವೇನು? ಅದನ್ನು ನೀಡಬೇಕಾದವರು ಯಾರು?
ಹಿಂದೆ ಕೆಲವು ಸಂದರ್ಭಗಳಲ್ಲಿ ಈ ವಾಹಿನಿಗಳು, ‘ಮತ್ತೊಮ್ಮೆ ಹುಟ್ಟಿ ಬಾ’ ಎನ್ನುವ ಸಂದೇಶವನ್ನು ಬಿತ್ತಿದ್ದವು. ವಿವೇಚನೆಯನ್ನು ಕಳೆದುಕೊಂಡವರಂತೆ ಜನರೂ ‘ಮತ್ತೊಮ್ಮೆ ಹುಟ್ಟಿ ಬಾ’ ಎನ್ನುವ ಮಾತನ್ನು ಬಿತ್ತಿಬೆಳೆದರು. ಜನ್ಮ ಪುನರ್ಜನ್ಮಗಳ ಚರ್ಚೆಗಿಂತ ಪುನರ್ಜನ್ಮದ ನಂಬಿಕೆಯೇ ಉಳಿದುಹೋಯಿತು.
ನಿಜಕ್ಕೂ ಮಾಧ್ಯಮಗಳು, ವಿಶೇಷವಾಗಿ ವಾಹಿನಿಗಳು ಮಾಡಬೇಕಾಗಿದ್ದ ಕೆಲಸಗಳು ಬೇರೆಯೇ ಇದ್ದವು. ಬೆಂಗಳೂರಿನಿಂದ ಹೊರಟ ವಿಶೇಷ ತಂಡವನ್ನು ಹೆಲಿಕಾಪ್ಟರ್ನಲ್ಲಿ ಕಳುಹಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬಹುದಾಗಿತ್ತು. ಮಂಜೇಗೌಡರು ಅಥವಾ ಮಧುರೈನಿಂದ ಹೊರಟ ಮಣಿಕಂಠನ್ ತಂಡವನ್ನು ಹೆಲಿಕಾಪ್ಟರ್ನಲ್ಲಿ ಕರೆದುತರಲು ಸಾಧ್ಯವಿರಲಿಲ್ಲವೇ? ಇಂಥ ವಿಪತ್ತಿನಿಂದ ಪಾರುಮಾಡಲು ಸಾಧ್ಯವಿರುವ ವ್ಯಕ್ತಿಗಳನ್ನು, ತಂಡಗಳನ್ನು ಹುಡುಕಿ ತೋರಿಸುವುದು, ಪರಿಣತರ ಅಭಿಪ್ರಾಯಗಳನ್ನು ಪಡೆಯುವುದು, ಮುಖ್ಯಮಂತ್ರಿಗಳನ್ನು ಮಾತನಾಡಿಸುವುದು ಇತ್ಯಾದಿ ಹಲವಾರು ಕೆಲಸಗಳಲ್ಲಿ ತೊಡಗಬೇಕಾಗಿದ್ದ ವಾಹಿನಿಗಳು ಮೌಢ್ಯವನ್ನು ಬಿತ್ತಲು ಹವಣಿಸಿದ್ದು ದೊಡ್ಡ ದುರಂತ.
ಇವೇ ವಾಹಿನಿಗಳು ಜ್ಯೋತಿಷಿಗಳನ್ನು ವೈಭವೀಕರಿಸುತ್ತಿವೆ; ಅವರಿಂದ ನಿತ್ಯವೂ ಪ್ರವಚನ ಹೇಳಿಸುತ್ತಿವೆ; ಇಂಥವೇ ಕೆಲಸಗಳಲ್ಲಿ ತೊಡಗಿರುತ್ತವೆ. ವಾಸ್ತು, ಜ್ಯೋತಿಷ್ಯ, ಅಡಿಗೆ, ಪ್ರವಾಸ, ದುರಂತ, ದುಃಖ, ಧಾರಾವಾಹಿ, ಕ್ರೀಡೆ ಎಲ್ಲವನ್ನೂ ಏಕರೀತಿಯಲ್ಲಿ ನೋಡುವ, ಅದನ್ನೇ ತೋರಿಸುತ್ತ ಜನರನ್ನು, ಅವರ ಬುದ್ಧಿ ಹೃದಯಗಳನ್ನು ಇದೇ ಶ್ರುತಿಗೆ ತರುವ ಮಾಧ್ಯಮಗಳು ಇದೇ ತಮ್ಮ ಸಂವಿಧಾನಾತ್ಮಕ ಹೊಣೆಗಾರಿಕೆ ಎಂದು ಭಾವಿಸಿವೆ. ಇಂಥ ಪ್ರಯತ್ನಗಳಿಂದಲೇ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಮತ್ತು ಆ ಮೂಲಕ ಜಾಹೀರಾತನ್ನು ಕೊಳ್ಳೆಹೊಡೆಯುವ ಕೆಲಸವನ್ನು ಪರಮ ಶ್ರದ್ಧೆಯಿಂದ ಮಾಡುವ ಮಾಧ್ಯಮಗಳನ್ನು ಯಾರು ನಿಯಂತ್ರಿಸಬೇಕು, ಹೇಗೆ ನಿಯಂತ್ರಿಸಬೇಕು. ಮಾಧ್ಯಮಗಳು ಸೃಷ್ಟಿಸುವ ಇಂಥ ಕೊಳವೆ ಬಾವಿಗಳಿಗೆ ಇಡೀ ಸಮಾಜವೇ ಬಿದ್ದು ಮೇಲೇಳಲಾಗದ ಸ್ಥಿತಿ ಉಂಟಾದರೆ ಈ ದುರಂತದಿಂದ ಯಾರು ಯಾರನ್ನು ಪಾರುಮಾಡಬೇಕು?
ಇಂಥ ಹಿನ್ನೆಲೆಯಲ್ಲಾದರೂ ನಮ್ಮ ಮಾಧ್ಯಮಗಳ ಹೊಣೆಗಾರಿಕೆಯ ಬಗ್ಗೆ ಸಾರ್ವಜನಿಕ ಸಂವಾದ ನಡೆಯಬೇಕಾದ ಅಗತ್ಯವಿದೆ. ಈ ಸಂವಾದ ಮುಕ್ತ ಮನಸ್ಸಿನಿಂದ ನಡೆಯಬೇಕು. ಆರೋಗ್ಯಪೂರ್ಣ ಸಮಾಜವನ್ನು ಕಟ್ಟುವ ಕಾಳಜಿಯಿಂದ ನಡೆಯಬೇಕು. ಇಲ್ಲವಾದರೆ ನಾವು ಎಲ್ಲಿಗೆ ತಲುಪಬಹುದು, ಎಂಥ ದುರಂತದ ತುದಿಗೆ ಹೋಗಿ ಮುಟ್ಟಬಹುದು? ಊಹಿಸುವುದು ಕಷ್ಟ. ಹಣವೊಂದನ್ನೇ ಪರಮ ಗುರಿಯನ್ನಾಗಿ ಇಟ್ಟುಕೊಂಡು ಎಲ್ಲರೂ ಆ ದಿಕ್ಕಿನಲ್ಲಿ ಓಡುತ್ತಿದ್ದರೆ, ನಮ್ಮನ್ನು ತಡೆದುನಿಲ್ಲಿಸಿ, ನಮ್ಮ ನಿಜವಾದ ಗುರಿಯತ್ತ ಬೆರಳು ತೋರಿಸುವವರಾದರೂ ಎಲ್ಲಿ ಸಿಗಲು ಸಾಧ್ಯ?
ಜಗತ್ತಿನ ನಡೆಯೇ ಹಾಗಿರುವಾಗ ಭಾರತ ಇಂಥ ದುರಂತದಿಂದ ತಪ್ಪಿಸಿಕೊಳ್ಳುವುದು ಹೇಗೆ ಸಾಧ್ಯ? ಸಾಧ್ಯವೇ ಇಲ್ಲವೇ?
ಸೌಜನ್ಯ: ಸಂಯುಕ್ತ ಕರ್ನಾಟಕ



0 Comments