ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ತಲೆಬಾಗದ ಜನ’

ಬನಶಂಕರ ಆರಾಧ್ಯ

ಚಾಮರಾಜನಗರದಂಥ ಊರುಗಳಲ್ಲಿ ಹವ್ಯಾಸಿ ತಂಡಗಳ ನಾಟಕಗಳಿಗೆ ಜನ ಬರುವುದು ಕಡಿಮೆ ಎಂಬುದನ್ನು, ಮೊನ್ನೆ ನಡೆದ ‘ತಲೆಬಾಗದ ಜನ’ ಪ್ರಯೋಗ ಸುಳ್ಳು ಮಾಡಿತು. ಚಾಮರಾಜನಗರದ ಜೆ ಎಚ್ ಪಟೇಲ್ ಸಭಾಂಗಣ ತುಂಬಿಸುವುದು ಕಷ್ಟ. ಕೆಲವು ಸರ್ಕಾರಿ ಕಾರ್ಯಕ್ರಮ ಆದಾಗ ಸಭಾಂಗಣ ತುಂಬಿಸಲು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಬಿಡಿಸಿ ಕರೆತರಲಾಗುತ್ತದೆ. ಹೀಗಿರುವಾಗ ಈಸೂರು ಸ್ವಾತಂತ್ರ್ಯ ಸಂಗ್ರಾಮ ಕುರಿತ, ಗಂಭೀರ ವಸ್ತುವಿನ ಈ ನಾಟಕ ನೋಡಲು ಇಷ್ಟೊಂದು ಜನರು ಸೇರಿದ್ದು ಸ್ವತಃ ನಾಟಕ ತಂಡವೂ ಸೇರಿದಂತೆ ಹಲವರಲ್ಲಿ ಅಚ್ಚರಿ ಮೂಡಿಸಿತು.

ಕೆ. ವೆಂಕಟರಾಜು ಈ ನಾಟಕವನ್ನು ರಚಿಸಿದ್ದಾರೆ. 30 ವರ್ಷಗಳ ಹಿಂದೆ ‘ಶಾಂತಲಾ ಕಲಾವಿದರು’ ಮೂಲಕ ಪ್ರಥಮ ಬಾರಿಗೆ ಇದು ರಂಗ ಪ್ರಯೋಗ ಕಂಡಿತು. ಆ ಸಂದರ್ಭದಲ್ಲಿ ಅನೇಕ ಪ್ರಯೋಗಗಳನ್ನು ಕಂಡಿತು. ಆ ಪ್ರಯೋಗಗಳಲ್ಲಿ ನಾನು ಸಹ ಒಂದು ಪಾತ್ರ ಮಾಡಿದ್ದೆ. ನನ್ನ ತಮ್ಮ ಫಾಲನೂ ನಟಿಸಿದ್ದ.

ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ನಾಟಕ‌ ಸ್ಪರ್ಧೆಯಲ್ಲೂ ಭಾಗವಹಿಸಿದ್ದೆವು. ಆಗ ಬಾಲಕ ಜಯಪ್ಪನಾಗಿದ್ದ ಚೀನಿ (ವಿ.‌ಶ್ರೀನಿವಾಸ್) ಈಗ ಹೈಕೋರ್ಟ್ ವಕೀಲನಾಗಿದ್ದಾನೆ. ಮದುವೆಯೂ ಆಗಿದೆ! ಇದೇ ನಾಟಕವನ್ನು ಬೇರೆ ಬೇರೆ ತಂಡಗಳು ಪ್ರಯೋಗ ಮಾಡಿವೆ.‌ ಜೆ ಎಸ್ ಎಸ್ ರಂಗ ತಂಡವೂ ಈ ನಾಟಕ ಪ್ರಯೋಗ ಮಾಡಿದೆ.

ಈಗ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ‘ಶಾಂತಲಾ ಕಲಾವಿದರು’ ತಂಡ ಮತ್ತೊಮ್ಮೆ ನವ ಕಲಾವಿದರಿಂದ ನಾಟಕ ಪ್ರಯೋಗಿಸಿತು. ಈ ಪ್ರಯೋಗದ ವಿಶೇಷವೆಂದರೆ ನಾಟಕ ರಚಿಸಿದ ಕೆ. ವೆಂಕಟರಾಜು ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು.! ಮೊದಲ ಪ್ರಯೋಗದಲ್ಲಿ ನಾ.‌ಶ್ರೀನಿವಾಸ್ ನಿರ್ದೇಶನ ಇತ್ತು. ಆಗ ಕೆಲವು ಪ್ರಯೋಗಗಳಲ್ಲಿ ಬಾಲಕ ಜಯಪ್ಪನ ಪಾತ್ರ ನಿರ್ವಹಿಸಿದ್ದ ವಿ. ಚಿತ್ರಾ ಈಗಿನ ಪ್ರಯೋಗಕ್ಕೆ ನಿರ್ದೇಶಕಿ! ಸಿನಿಮಾ, ಸೀರಿಯಲ್, ಮೊಬೈಲ್ ಅಬ್ಬರದ ನಡುವೆಯೂ ನಾಟಕಕ್ಕೆ ಜನ ಬರುತ್ತಿದ್ದಾರೆಂದರೆ ರಂಗಭೂಮಿ ನಿರಂತರ ಅನಿಸಿತು.

‍ಲೇಖಕರು Admin

27 October, 2021

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading