ಆಶಾ ರಘು ಓದಿದ ‘ಕಾಂಚನಸೀತ’

ಆಶಾ ರಘು

ಕೃಷ್ಣಮೂರ್ತಿ ಚಂದರ್ ಅವರ ಕಾದಂಬರಿ ‘ಕಾಂಚನಸೀತ’- ಒಂದು ಸಹೃದಯ ಪ್ರತಿಕ್ರಿಯೆ

ಟೊರೆಂಟೂ ನಗರದ ಗೆರಾರ್ಡ್ ಸ್ಟ್ರೀಟ್ ನಲ್ಲಿನ ಸಿನೆಮಾ ಥಿಯೇಟರ್ ಮುಂದಿನ ಪೋಸ್ಟರ್ ನೋಡುತ್ತಿದ್ದ ಹಾಗೇ ಕಾದಂಬರಿಯ ನಾಯಕ ವೆಂಕಟಸುಬ್ಬರಾಯರ ನೆನಪು ತಾವು ಚಿಕ್ಕವರಾಗಿದ್ದಾಗ ಚಾಮರಾಜನಗರದ ಭ್ರಮರಾಂಬ ಥಿಯೇಟರಿನ ಮುಂದಿನ ಪೋಸ್ಟರ್ ನೋಡುತ್ತಿದ್ದ ದಿನಗಳಿಗೆ ಕರೆದೊಯ್ದು ಬಿಡುತ್ತದೆ.

ಗೆರಾರ್ಡ್ ಸ್ಟ್ರೀಟಿನ ಸಮೀಪದ ಕೆಫೆಟೇರಿಯಾದಲ್ಲಿ ಚನ್ನಬತೂರ ತಿನ್ನುವಾಗ ಬಾಲ್ಯದ ಆಪ್ತಗೆಳತಿ ಕಾಂಚನಳ ನೆನಪು ಸುಳಿಯುತ್ತದೆ. ತಾವಿರುವ ಸ್ಥಳವನ್ನೇ ಮರೆತು ಅವಳು ಎದುರಿಗಿದ್ದಂತೆ ಭಾಸವಾಗಿ ಗಟ್ಟಿಯಾಗಿ ಅವರ ಹೆಸರನ್ನು ಉದ್ಗರಿಸಿ ಮುಜುಗರಕ್ಕೆ ಈಡಾಗುತ್ತಾರೆ. ಕಾಂಚನಳನ್ನು ಕಾಣಲೇಬೇಕೆಂಬ ಇಚ್ಛೆ ಬಲವತ್ತರವಾಗಿ ಅಮೇರಿಕಾದಲ್ಲಿಯೇ ಬೇರೆಬೇರೆಯಾಗಿ ನೆಲೆಸಿರುವ ತಮ್ಮ ಇಬ್ಬರು ಮಕ್ಕಳಿಗೂ ತಿಳಿಸಿ, ಅವಳನ್ನು ಹುಡುಕಿಕೊಂಡು ಭಾರತಕ್ಕೆ ಹೊರಟುಬಿಡುತ್ತಾರೆ.

ಬಾಲ್ಯಗೆಳತಿಯ ನೆಲೆಯ ಜಾಡನ್ನು ಹುಡುಕುತ್ತಾ ಸಾಗುವುದೇ ಇಡೀ ಕಾದಂಬರಿಯನ್ನು ವ್ಯಾಪಿಸಿರುವ ಕಥಾನಕ. ಆರಂಭದ ರೈಲು ಪ್ರಯಾಣದಲ್ಲಿಯೇ ಸಿಗುವ ಸತ್ಯ ಎನ್ನುವ ವ್ಯಕ್ತಿ, ಸುಬ್ಬರಾಯರ ಹುಡುಕಾಟದ ಉದ್ದಕ್ಕೂ ಜೊತೆಗೆ ನಿಲ್ಲುತ್ತಾನೆ. ಅವನ ಮಾತುಗಾರಿಕೆಯಿಂದಲೇ ಕಾದಂಬರಿಯ ಏಕತಾನತೆ ಕಳೆದು ಲವಲವಿಕೆ ಮೂಡುತ್ತದೆ. ಚಾಮರಾಜನಗರ, ಚಂದಕವಾಡಿ, ಬಿಳಿಗಿರಿರಂಗನಬೆಟ್ಟ, ಬೆಟ್ಟದ ತಪ್ಪಲಿನ ದೊಡ್ಡ ಸಂಪಿಗೆಮರದ ಸಮೀಪ.. ಹೀಗೆ ಹುಡುಕುತ್ತಾ ಸಾಗಿ, ಕಡೆಗೆ ಅವಳ ಸಾನಿಧ್ಯ ಸಿಕ್ಕಿತು ಎನ್ನುವಾಗ, ಸುಬ್ಬರಾಯರ ನಿರ್ಧಾರ ಬದಲಾಗಿ, ಅವಳನ್ನು ಕಾಣದೆಯೇ ಹೊರಟುಬಿಡುತ್ತಾರೆ.

ಹುಡುಕಾಟದ ಪ್ರಯಾಣದ ಹಾದಿಯಲ್ಲಿ ಆಗಾಗ ಸುಬ್ಬರಾಯರು ತಮ್ಮ ಬಾಲ್ಯದ ನೆನಪಿಗೆ ಜಾರುವ, ಮರಳಿ ವಾಸ್ತವಕ್ಕೆ ಬರುವ ಪರಿಯ ನೇಯ್ಗೆ ಚೆನ್ನಾಗಿದೆ. ಭಾಷಾ ಪ್ರಯೋಗ, ನಿರೂಪಣಾ ಶೈಲಿ ಸೊಗಸಾಗಿದೆ. ಅಷ್ಟು ಆರ್ದ್ರವಾಗಿ ಬಾಲ್ಯಗೆಳತಿಯ ನೆನಪನ್ನು ಸ್ಮರಿಸುವ, ಅವಳನ್ನು ಕಾಣಲೇಬೇಕೆಂದು ಹುಡುಕಿಕೊಂಡು ದೇಶದಿಂದ ದೇಶಕ್ಕೆ ಸಂಚರಿಸಿ, ಊರೂರು ಅಲೆದ ಸುಬ್ಬರಾಯರಿಗೆ ಅಂತಿಮವಾಗಿ ಅವಳನ್ನು ಭೇಟಿಯಾಗದೆ, ಹಿಂದಿರುಗಿ ಹೊರಟುಬಿಡಬೇಕೆಂದು ಅನಿಸುವುದು ಓದುಗರ ಅಚ್ಚರಿಗೆ ಕಾರಣವಾಗುತ್ತದೆ. ಒಟ್ಟಾರೆ ಇದೊಂದು ಓದಿನ ಸುಖ ಕೊಡುವ ನವಿರಾದ ಕಾದಂಬರಿ!

‍ಲೇಖಕರು Admin

October 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: