ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಮ್ಮನಂಥ ನೀನು…

ಕಿರಣ ಭಟ್

ಆರ್.ವಿ ಸರ್ ನೆರಳಿನಿಂದ
ಕಂದೀಲು ಹಿಡಿದು ಬಂದವನು
ನನ್ನ ಜೊತೆಯಾದವನು
ಅಂಟಿಕೊಂಡವನು
ನೀನು

ಅಜ್ಜನ ಮನೆಯ ಅಟ್ಟದಲ್ಲಿ
‘ಹೆಣದ ಬಟ್ಟೆ’ಯ ತಾಲೀಮಿನಲ್ಲಿ
ನಾಟಕದ ಪಾತ್ರವಾದವನು
ನಟನಾದವನು
ನೀನು

ಸಾಕ್ಷರತೆಯ ಕನಸಿನಲ್ಲಿ
ಬೀದಿ ಬದಿಯ ನಾಟಕಗಳಲ್ಲಿ.
ಹೊರಳು ಹೊರಳಿ ಹೊರಳಾಡಿದವನು
ಧೂಳಾದವನು
ನೀನು

ಶಿರಸಿಯ ಅಡುಗೆಯ ಮನೆಯಲ್ಲಿ
ಆಯಿಯ ದೋಸೆಯ ಘಮಘಮದಲ್ಲಿ
ಪಂಕ್ತಿಯ ಮೊದಲಿಗನಾದವನು
ಮೊದಲ ದೋಸೆ ತಿಂದವನು
ನೀನು

ಕ್ವಾರ್ಟರ್ಸ್ ಟೆರೇಸಿನ ಚರ್ಚೆಗಳಲ್ಲಿ
ಜೋರು ಮಾತುಗಳ ಬಿಸಿ ಬಿಸಿಯಲ್ಲಿ
ತಣ್ಣಗೆ ಬೀಸಿದ ಗಾಳಿಯಾದವನು
ತಂಪ ತಂದವನು
ನೀನು

‘ಪಂಡಿತ ಲೈಬ್ರರಿ’ ಮಾಳಿಗೆಯಲ್ಲಿ
ಹಳೆಯ ಮೆಟ್ಟಿಲುಗಳ ಏರಿಕೆಯಲ್ಲಿ
ಹೆಜ್ಜೆಗೆ ಹೆಜ್ಜೆಯಾದವನು
ಸದ್ದು ಮಾಡಿದವನು
ನೀನು

‘ಚಿಂತನ’ ದ ತಿಂಗಳ ಬೈಠಕ್ನಲ್ಲಿ
ಹೊಸ ಹೊಸ ಹುರುಪಿನ ಚರ್ಚೆಗಳಲ್ಲಿ
ಮಾತಾಡುತ್ತಲೇ ಬೆಳೆದವನು
ಚಿಂತಕನಾದವನು
ನೀನು

‘ಪುಸ್ತಕ ಮಳಿಗೆ ‘ಯ ಪುಸ್ತಕದಲ್ಲಿ
ಅಡಗಿದ ಮಡಚಿದ ಚೀಟಿಗಳೊಳಗೆ
ಪುಟ್ಟ ಪುಟ್ಟ ಸಾಲುಗಳಲ್ಲಿ
ನೀಲಿಯ ಅಕ್ಷರ
ನೀನು

ಬಸ್ ನೊಳಗಿನ ಭಾಷಣದಲ್ಲಿ
ಕಿರು ಪುಸ್ತಕಗಳ ಮಾರಾಟದಲ್ಲಿ
ಎರಡು ರೂಪಾಯಿಯ ನೋಟ ತೋಯಿಸಿದ
ಒದ್ದೆ ಬೆವರು
ನೀನು

‘ಮಕ್ಕಳ ರೆಪರ್ಟರಿ’ಯ ಆಟಗಳಲ್ಲಿ
ಊರೂರು ಸುತ್ತುವ ಓಡಾಟದಲ್ಲಿ
ಗಾಡಿಗಳಿಗೆಲ್ಲ ಗಾಲಿಯಾದವನು
ಗಾಳಿಯಾದವನು
ನೀನು

‘ಸಹಯಾನ’ ದ ಅಂಗಳದಲ್ಲಿ
ಶಿಬಿರದ ಮಕ್ಕಳ ಗೌಜಿಯಲ್ಲಿ
ಜೊತೆ ಜೊತೆಗೇ ಮಗುವಾದವನು
ನಗುವಾದವನು
ನೀನು

ಉದ್ದಾನುದ್ದ ಹಾದಿಯುದ್ದ
ಕೈ ಕೈ ಹಿಡಿದು ನಡೆದವನು
ತಮ್ಮನಂತಹ ಗೆಳೆಯ
ನನ್ನೊಳಗೆ
ನೀನು

‍ಲೇಖಕರು Avadhi

13 May, 2021

2 Comments

  1. ನೂತನ ದೋಶೆಟ್ಟಿ

    ಪದಗಳು ನೆನಪಿಸಿದ ಬಹುಮಾನ…

  2. ನೂತನ ದೋಶೆಟ್ಟಿ

    ಪದಗಳು ನೆನಪಿಸಿದ ಸಹಯಾನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading