ಪ್ರತಿಭಟನೆಯ ಪಾಠಗಳು
ವಿನಯ ಒಕ್ಕುಂದ
1
ದಳದಳದಳ ತೊತ್ತಳದುಳಿವ ಬಿಸಿಲು
ಮೈ ಮೈಯೆಲ್ಲ ಬಿರಿತು ನಿಂತಿದೆ ಮಾವು
ಯಾವ ಜೀವಸೆಲೆ ಮೀಟು?
ನವಿರು ಒಗರು ಅಂಟು ಜಿಗುಟಿನ
ನೂರು ನೂರು ಹೂ ಹೆತ್ತು ಬಿಮ್ಮನಸಿಯಾಗಿದೆ
2
ಬಂಡೆ ಬಿಸಿಲ ಕಾವಲಿ
ಅದರ ನೆರಳೆಂಬೋ ಧಗೆಯಲ್ಲಿ
ಎರಡೇ ಎರಡು ಎಸಳು ಬಿಟ್ಟು ಕಣ್ಣೆತ್ತುತ್ತಿದೆ
ಎಂಥದೋ ಹೇಲುಗಲಸಿ ಬಿದ್ದ ಬೀಜ
ಜೀವಯಾನದ ಆದಿಮಾಯೆಯ ರೂಹು
3
ತಬ್ಬಿದ್ದು ಬಲೆ
ನೀರಿಂದೆತ್ತುವ ಹೊತ್ತು ಮರಿಮೀನು ಮಿಡುಕಿತು
ಆ ಬಾಗು ಆ ಬಳಕು ಆ ಮಣಿತ
ಕಡೆಯ ಹೆಜ್ಜೆಗೆ ಮಾತ್ರ
ಸೂರ್ಯ ಲಾಂದ್ರಗಂಬದ ಹಾಗೆ
ಹಿಣಜು ಹಿಣಜನ್ನೂ ವಜ್ರದಂತೆ ಬೆಳಗಿಸಿದ
ಬಲೆಗಾರನ ಕಣ್ಣು ಸೌಂದರ್ಯಕೆ ನಮಿಸಿತು
ಅರೆ, ಒಂದು ಕ್ಷಣವಾದರೂ ಸರಿ
ಸಂಬಂಧವಿಲ್ಲಿ ಬದಲಾಯಿತು
4
ಹಾಳು ಮುಳ್ಳು ಕಂಟಿ ಪೊದೆ
ಮಧ್ಯ ಹೇಗೋ ಉಳಿದಿದೆ ಜೇಟಿಗೆ
ಈಗ, ಅದರ ನವಿಲ ರಂಗಿನ ಹೂಗಳನ್ನ
ಮುಳ್ಳುಪೊದೆ ಕಾಯುತ್ತಿದೆ
5
ಕಡಿದು ಉರುಳಿಸಿ ಕಚಕಚ ಕೊಚ್ಚಿದ ಮರದ ತುಂಡು
ಹಸಿರ ಚಿಮ್ಮಿ ಚಿಗುರಿ ತೊನೆಯುತ್ತಿದೆ
ಬಿದ್ದ ಕೊರಡಿನಂಥ ಮೈ ಗೆದ್ದಲಿಗೆ ಮುದ್ದೆಯಾಗುವಾಗೆಲ್ಲ
ಆ ಎಳಸು ಎಲೆ ಕನಸಾಗಿ ಕಾಡುತ್ತಿದೆ
ಮನಸ್ಸು ಪಲಕುತ್ತಿದೆ
6
ನೀರವ ರಾತ್ರಿ, ನಾಯಿ ಊಳಿಡುತ್ತಿದೆ
ಕೊರಳ ನರನರವೂ ಉಬ್ಬಿ
ತಿಳಿಯುತ್ತಿದೆ ನನಗೂ
ಬಟ್ಟಲು ನೀರು, ರೊಟ್ಟಿ, ಗೋಣಿತಟ್ಟು
ಇಷ್ಟಕ್ಕೇ ಬಿಮ್ಮಗಿರಬೇಕೆಂದರೆ…






ಆ ಎಳಸು ಎಲೆ ಕನಸಾಗಿ ಕಾಡುತ್ತಿದೆ!!ಮನಸ್ಸು ಪಲಕುತ್ತಿದೆ!!,,really superrr