ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತನ್ನ ಬಿಚ್ಚಿಟ್ಟ ರಾತ್ರಿಯ ಎದುರು

ಅನ್ವಯ

ನಗರದೊಳಗಿಂದ ಹಾದು ಹೋಗುವ ಟ್ರಕ್ಕುಗಳ ಸದ್ದಿನಲ್ಲಿ ನೆತ್ತರ ನಡೆ ಕದಡದಿರುವಂತೆ ನೋಡಿಕೊಳ್ಳುವುದು ಎಷ್ಟೊಂದು ಕಷ್ಟ!
ಬಂಡಿಯನ್ನೆಳೆವ ಜಾನುವಾರುಗಳು ವಿಚಲಿತಗೊಳ್ಳದಂತೆ ಮಾಡುವುದು ಎಷ್ಟೊಂದು ಕಷ್ಟ!
ಯಾವ ಪ್ರೇರಣೆ, ಯಾವ ಭರವಸೆ, ಯಾವ ರುಷುವತ್ತು, ಯಾವ ಬೆದರಿಕೆ ಶಾಂತವಾಗಿರಿಸೀತು ಅವನ್ನು?
ಆದರೆ ಅವು ಶಾಂತವಾಗಿವೆ.

ಕಮಾನು ದಾರಿಯ ಕೆಳಗಿನ ನಿರುಪಯುಕ್ತ ಕಲ್ಲು ಬೆಳದಿಂಗಳನ್ನು ಉಸಿರಾಡುತ್ತಿದೆ.
ಸಾಣೆಗಾರನ ದುರ್ಬಲ ದೇಹ ಬಾಗಿದೆ, ಬಿದಿಗೆ ಚಂದ್ರನ ಹಾಗೆ.
ನಿತ್ರಾಣಗೊಂಡಿದ್ದಾನೆ ಅವನು; ಆದರೆ ನಿದ್ರಿಸಲು ಹೋಗುತ್ತಿಲ್ಲ.
ನಿದ್ರೆಯಿಂದೆಚ್ಚರಿಸಿ ಹಕ್ಕಿಗಳನ್ನು ಸೇತುವೆಯಂಚಿಗೆ ಕರೆಯಲು ಸಿಳ್ಳೆ ಹಾಕುತ್ತಿದ್ದಾನೆ.
ಆದರೆ ಅವನು ಮರೆತಿದ್ದಾನೆ:
ಚಂದ್ರನಂತೆ ಬೆಳ್ಳಗಿರುವ ಕಡಿದಾದ ಬಂಡೆಯ ಮೇಲೆ ಯಾರ ಆರೈಕೆಯೂ ಇಲ್ಲದ ಗರ್ಭಿಣಿ ಚಿರತೆಯೊಂದಿದೆ.

ರಾಜಕಟ್ಟಳೆಯನ್ನುಲ್ಲಂಘಿಸಿ ಜೋಡೆತ್ತಿನ ಬಂಡಿ ದಾರಿಯಿಚ್ಛೆಯ ಮೀರಿ ನಡೆದಿದೆ.
ಸೂರ್ಯಕಾಂತಿಯ ಹೊಲದಲ್ಲಿ ಸೂರಿಲ್ಲಾ ಲಾಂಧ್ರಗಳಿಗೆ.

ಬರಬೇಕಿದ್ದ ಯಾರೋ ಬಾಗಿಲು ತಟ್ಟುತ್ತಿದ್ದಾರೆ.
ಕಾಣಿಸಿಕೊಳ್ಳಬೇಕಿದ್ದ ಕುರಿಗಳು ಮುಳ್ಳುಕಂಟಿಯ ಬೆಟ್ಟದಲ್ಲೆಲ್ಲೋ ಅಲೆಯುತ್ತಿವೆ.
ಗಾಳಿ ತನ್ನ ಕನಸುಗಳಲ್ಲೆಂದೂ ಬಂದಿರದ ಪೇರಲ ಹಣ್ಣುಗಳ ಮೇಲೆ ತೀಡುತ್ತಿದೆ.
ತಳಮನೆಯಲ್ಲಿ ತರುಣನೊಬ್ಬ ಹಾಡುತ್ತಿದ್ದಾನೆ, ತನ್ನನ್ನೇ ಮೀರಿಸಿ…
ಹೇಳಬೇಕಾದ ಜರೂರಿಲ್ಲ. ಇದು ರಾತ್ರಿ. ನೆನಪು ಹೊಚ್ಚ ಹೊಸ ಸಂಗತಿಗಳನ್ನು ಸೃಷ್ಟಿಸಬಲ್ಲದು.

ಎಷ್ಟೊಂದು ವಿಶಾಲವಾಗಿದೆ ಆಕಾಶ, ನೆನಪಿಗೂ ಮಿಗಿಲಾಗಿ!
ದೂರ ನೋಡಲು ಏರು ಮೇಲೆ. ಚೇತನಕ್ಕೆ ಎಲ್ಲೆಯಿಲ್ಲ.
ಸದಾ ಉರಿಯುತ್ತಿರುವ ಎರಡು ಅಥವಾ ಮೂರು ಲಾಂಧ್ರಗಳು ಗುರುತು ಸಿಕ್ಕದವರಂತೆ ಕಾಣಿಸುತ್ತಿವೆ.
ನಿದ್ರಿಸದ ಆತ್ಮಕ್ಕಾಗಿ ಕಾವ್ಯವಿಲ್ಲ.

‍ಲೇಖಕರು avadhi

13 June, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading