
ಸಂವರ್ತ ‘ಸಾಹಿಲ್’
ಬಡವರೆಲ್ಲರೂ
ಆರ್ಥಿಕ ಸ್ಥಿರತೆಯನ್ನು
ಆನ್ಲೈನ್ ಬುಕ್ ಮಾಡಿದರೆ
ತಕ್ಷಣ ಡೆಲಿವೆರಿ ಮಾಡಲಾಗುವುದು
ಎಂದು ಜಾಹಿರಾತು ಸಾರುತ್ತಿದೆ.
ಎಚ್.ಡಿ. ಟಿವಿಯಲ್ಲಿ
ಭವಿಷ್ಯ
ತುಂಬಾ ಸ್ಪಷ್ಟವಾಗಿ
ನಿಷ್ಕಳಂಕವಾಗಿ
ಕಾಣಿಸುತ್ತಿದೆ.
“ಒಂದಾನೊಂದು ಕಾಲದಲ್ಲಿ”
ಎಂದು ಕತೆ ಆರಂಭವಾಗುತ್ತಿದ್ದದ್ದು
ಒಂದಾನೊಂದು ಕಾಲದಲ್ಲಿ.
ಈಗೇನಿದ್ದರೂ
“ಮುಂದೊಂದು ದಿನ…”
ಎಂದು ಆರಂಭವಾಗುತ್ತದೆ
ಕತೆಗಳೆಲ್ಲವೂ.
ಕಾಲ ಬದಲಾಗಿದೆ.
ಕಥನವೂ ಬದಲಾಗಿದೆ.
ಭೂತವನ್ನು ಬಿಟ್ಟು
ವರ್ತಮಾನವನ್ನು ಬಿಟ್ಟು
ಭೂತ-ವರ್ತಮಾನದ
ಕಗ್ಗಂಟನ್ನು ಬಿಟ್ಟು
ಸಾಗುತ್ತಿದೆ, ಓಡುತ್ತಿದೆ
ದಾಪುಗಾಲಿಡುತ್ತಿದೆ
ಇಡೀ ಪ್ರಪಂಚವೇ.
ಇಲ್ಲಾ, ನಾನು
ನಿರಾಶಾವಾದಿಯಲ್ಲ.
ಆಪ್ ರೂಪದಲ್ಲಿ
ಪರಾನುಭೂತಿ ದೊರಕಿದರೆ
ಉಳ್ಳವರು ಡೌನ್ಲೋಡ್
ಮಾಡಿಕೊಳ್ಳುತ್ತಾರೆ ಎಂಬ
ಭರವಸೆ ನಾನಗಿದೆ.





0 Comments