ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಂಗಾಳಿಯಾಗುವಳು ಬೆಂಗಾಡ ಬದುಕಿಗೆ!

savitri m hatti

ಸಾವಿತ್ರಿ ವೆಂ ಹಟ್ಟಿ 

ಈ ರಣ ರಣ ಬಿಸಿಲು, ಬೀಸುವ ಬಿಸಿಗಾಳಿ ಅವ್ವ ಹೇಳಿದ ಸತ್ಯ ಕಥೆಯೊಂದನ್ನು ಬರೆಯಲು ಪ್ರೇರೇಪಿಸಿತು…

ಆ ಹೊಲದಲ್ಲೊಂದು ಕಡೆ ತ್ರಿಕೋನದಾಕಾರದಲ್ಲಿ ಮೂರು ದಂಟುಗಳ ನಿಲ್ಲಿಸಿ,
ಅದಕ್ಕೆ ತನ್ನದೆ ಹಳೆ ಸೀರಿ ಸುತ್ತಿ ಪುಟ್ಟ ಗುಡಿಸಲು ಮಾಡುತ್ತಿದ್ದಳು ಅವ್ವ!
ಇನ್ನೊಂದು ಹರಿದ ಪಟಗಿ ಮಡಚಿ ಹಾಸಿ,
droughtಹಾಸಿಗೆ ಮೆತ್ತಗಿದೆಯೇ ಎಂದು ಕೈಒತ್ತಿ ನೋಡಿ,
ಅಲ್ಲಿ ಮಲಗಿಸುತ್ತಿದ್ದಳು ಮತ್ತೊಂದ ಹಳೆ ಸೀರೆಯ ತುಂಡೊಂದನು ಹೊದಿಸಿ,

ಹಣೆಗೊಂದು ಹೂಮುತ್ತನಿತ್ತು ಹೊರಡುತ್ತಿದ್ದಳು ಕಾಯಕಕ್ಕೆ
ನನ್ನ ಬಿಟ್ಟು ಮನಸ್ಸಿಲ್ಲದ ಮನಸ್ಸಿನಿಂದ!

ಸುತ್ತಲೂ ಸುರಿಯುವ ಉರಿಬಿಸಿಲು, ಬೀಸಿ ಬರುವ ಬಿಸಿಗಾಳಿ!
ಎಳೆಯ ಮೈ ಕೈಗೆ ಇರಬಿ ಕಡಿದಾಗ ಕಿರುಚಲೂ ಕೂಡ ಆಗದೆ
ಬಿದ್ದಿರುತ್ತಿದ್ದೆ ಹಾಗೆ ಸುಮ್ಮನೆ ಹುಂಬನಂತೆ!
ಅನತಿ ದೂರದಲಿ ಅವ್ವ ಬಿಗಿಯುವ ಎದೆಯನ್ನು ಒತ್ತೊತ್ತಿಕೊಂಡು,
ಭುವಿಯೊಡಲ ಗೆಬರಿ ಹುಡುಕುವಳು ಸೇಂಗಾ!
ಸಂಜೆಗೆ ಗಂಜಿ ಕಾಯಿಸಲು, ಬುಡ್ಡಿ ದೀಪ ಬೆಳಗಿಸಲು
ಬೇಕಾದ ರೊಕ್ಕವ ಹೊಂದಿಸಲು!

ಆಗೀಗ ಸನಿಹ ಬಂದು ಇಣುಕುವಳು
ಬಿಸಿಲಲಿ ಬೆಂದು, ಬೆವರಲಿ ಮಿಂದ ಅವ್ವ!
ಸೋರುವ ಅಮೃತವನುಣಿಸಿ ನನ್ನ ಹಸಿವ ನೀಗಿಸಲು,
ತನ್ನ ನೋವ ಶಮನಿಸಲು!
ಆದರೆ ನಾನು ಮಲಗಿಯೇ ಇರುವೆನು,
ಸುತ್ತ ಸುರಿಯುವ ಬಿಸಿಲಿಗೆ, ಉಗ್ಗುವ ಬಿಸಿ ಗಾಳಿಗೆ ಸಿಕ್ಕು,
ಕಾಯ್ದು ಹಂಚಾದ ಭುವಿಯೊಡಲಲ್ಲಿ,
ಕಣ್ಬಿಟ್ಟು ನೋಡಲಾಗದೆ, ಕಿರುಚಿ ಅಳಲಾಗದೆ!

ಕೊನೆಗೆ ಅವ್ವ ಸೇಂಗಾ ಗೆಬರುವ ಕೆರಕ ಎಸೆದು,
ಎತ್ತಿಕೊಂಡೇ ಬಿಡುವಳು, ತಂಗಾಳಿಯಂತೆ ಮೈದಡವಿ ಎಬ್ಬಿಸುವಳು!
ಹೂಮಡಿಲ ಮೆತ್ತೆಯಲಿ ನಾನು ಅಮೃತ ಹೀರುತ್ತಿದ್ದರೆ
ಧನ್ಯವಾಗುವುದು ತಾಯಿ ಭಾವ!
ಆ ಕ್ಷಣಕ್ಕೆ ಸು(ಹು)ರಿಯುವ ಬಿಸಿಲನ್ನು ಸೋಲಿಸಿ
ತಣ್ಣನೆಯ ನೆಳ್ಳಾಗುವಳು ಅವ್ವ!
ತಂಗಾಳಿಯಾಗುವಳು ಬೆಂಗಾಡ ಬದುಕಿಗೆ!

‍ಲೇಖಕರು admin

27 April, 2016

2 Comments

  1. Paramesh

    Thayi preethi mundhe berenu doddadhala…tumba chennagide nimma kavithe…

  2. ಟಿ.ಕೆ.ಗಂಗಾಧರ ಪತ್ತಾರ.

    “ತಾರೆ ಸಾವಿರಾ ಸೇರೆ ಚಂದಿರಗೆ ಸಾಟಿಯೇ!
    ತಾಯಿ ಎಂಬ ದೈವಕೆ ಬೇರಾರು ಸಾಟಿಯೇ!!….”

    ಒಲವಿನ ಒಡಲು
    ಕರುಣೆಯ ಕಡಲು
    ಮಮತೆಯ ಮಡಿಲು…. ಅದು ತಾಯಿಯಲ್ಲದೇ ಇನ್ನಾರು ಆಗಲು ಸಾಧ್ಯ?!

    ಸಾವಿರ ಮಂದ್ಯಾಗ/ ತಾಯವ್ನ ಯಾರು ಹೋಲ್ಯಾರು//
    ಸಾವಿರ ಕೊಳ್ಳಿ ಒಲಿಯಾಗ ಉರಿದರೂ
    ಜ್ಯೋತಿ ನಿನ್ಯಾರು ಹೋಲ್ಯಾರು//

    ತಾಯಿ! ತಾಯಿ!! ತಾಯಿ!!! … … … … … … … … … … … … …

    ಸಾವಿತ್ರಿ ವೆಂ ಹಟ್ಟಿ… ತಂಗೀ ಇದು ಕಥೆಯಲ್ಲ! ಜೀವನದ ಕಟು ವಾಸ್ತವದ ಸತ್ಯಕ್ಕೆ ಕಥೆ ಎಂಬುದು ಒಂದು ವಿಶೇಷಣ ಮಾತ್ರ. ನಿನ್ನದು ಕಥೆಯಲ್ಲ ತಂಗಿ ವಸ್ತುಸ್ಥಿತಿ ಅನುಭವಾಮೃತದ ಬಿಂದು.

    ಈ ರಣ ರಣ ಬಿಸಿಲು… ಬೀಸುವ ಬಿಸಿಗಾಳಿ… ಬಿಸಿಗಾಳಿಯೇನು ಬಿರುಗಾಳಿಗೂ ಎದೆಯೊಡ್ಡ ಬಲ್ಲ ಸಹನಾಶೀಲ ಚೈತನ್ಯ ತಾಯಿಯಲ್ಲಿರಲು ಮಾತ್ರ ಸಾಧ್ಯ.

    ಅದಕ್ಕೇ ಹಿರೇರು ಹೇಳ್ತಾರ, ಎಲ್ಲಾ ಕಡೆಗೂ ಇರೋಕೆ ಆಗೊಲ್ಲಾಂತ ದೇವರು ತಾಯಿಯನ್ನು ಸೃಷ್ಟಿಸಿದನಂತೆ. ನಿನ್ನ ಅನುಭವ ಬರಿತಾ ಇರು ಸಾವಿತ್ರಮ್ಮಾ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading