ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಣ್ಣು ಮತ್ತು ಬೊಮ್ಮ

ಸರೋಜಿನಿ ಪಡಸಲಗಿ

ಬೊಮ್ಮ ಬರೆದನೆ ಹೆಣ್ಣ ಹಣೆಬರಹ
ಆಳವಾಗಿ ತಿವಿಯುವ ಮೊನೆಯಿಂದ
ಅಳಿಸದಿರಲಿ ಕಲೆಸಿ ಹೋಗದಿರಲಿ ಎಂದಿಗೂ
ಜಿನುಗುತಿರಲಿ ಅನುಗಾಲ ಎದೆಗೂಡ ಸಂದು

ಬೊಮ್ಮ ಪೇಳ್ದ ಕಂದ ಅಂದದ ಹೂ ನೀನು
ನಿನ್ನ ಮನದ ತುಂಬ ಆ ಹೂದಳದ ರಂಗೋಲಿ
ಆ ರಂಗೋಲಿ ನಿನ್ನ ದಾರಿ ಬೆಳಕು ಕಂದ
ಮಂದವಾಗಿ ಬೆಳಗಲಿ ನಂದದಿರಲಿ ಎಂದೂ
ನಿನ್ನ ನೀ ಮರೆತರೂ ಆ ಬೆಳಕ ಕಾಪಿಡಲು
ನಿನ್ನೆದೆಯ ಗೂಡು ಅನುಗಾಲ ಜಿನುಗಲಿ

ಕಂದ ಪೇಳ್ವರೆಲ್ಲ ಹೆಣ್ಣು ಜಗದ ಕಣ್ಣೆಂದು
ನಿನ್ನ ಕಣ್ತಂಪಲಿಟ್ಟು ಕಾಯಬೇಕು ಹಾಗ್ಹೇಳ್ದವರನ
ತಣ್ಣೆಳಲು ಹರಡಬೇಕು ಸುತ್ತ ಸಂದು ಬಿಡದಂತೆ
ಅದಕೆಂದೇ ಇಹುದು ಆ ತಂಪಿಗೊಂದು ಗಟ್ಟಿ ಬಂಧ
ಬಂಧ ಬಿರುಕು ಬಿಡದಂತೆ ತೇವವಾಗಿಸಲು ನಿನ್ನೆದೆಯ ಗೂಡು ಅನುಗಾಲ ಜಿನುಗಲಿ

ಕಂದ ನಿನ್ನೆದೆಯಲಿರಿಸಿಹೆ ನಾ ಅಗಮ್ಯ ಬಯಲು
ಜೊತೆಗಿರಿಸಿಹೆ ಅಗಾಧ ಕುಸುರಿ ನಕ್ಷೆಗಳ ಹೊನಲು
ದಿನ ದಿನಕೂ ಒಂದೊಂದು ಚಿತ್ರ ಬಿಡಿಸು ಅಲ್ಲಿ
ಅದರ ರೂಪ ವಿರೂಪ ಚೆಲುವು ನಿನ್ನದೇ ಸೊತ್ತು
ಪೋಷಿಸಲು ಆ ಚಿತ್ತಾರಗಳ ಚದುರದಂತೆ ಅತ್ತಿತ್ತ
ನಿನ್ನೆದೆಯ ಗೂಡು ಅನುಗಾಲ ಜಿನುಗಲಿ

ನೀಳ ಉಸಿರೆಳೆದು ಬೊಮ್ಮ ಅವಳ ತಟ್ಟಿ ಹೇಳ್ದ
ಕಂದ ನನ್ನ ಸೃಷ್ಟಿಯ ಅತಿ ಸೂಕ್ಷ್ಮ ಕಲಾಕೃತಿ ನೀನು
ಅದಕೇ ಹೊದಿಸಿದೆ ನಿನಗೆ ನವಿರು ಬಲೆಯೊಂದನ
ಎಲ್ಲೇ ಹೋದರೂ ಏನಾದರೂ ತುಂಡಾಗದುದನ
ಅನುಗಾಲ ಜಿನುಗಿದರೂ ನಿನ್ನೆದೆಯ ಗೂಡು
ನೆನೆದು ಮಿದುವಾಗದದರ ಹೆಣಿಗೆಯ ನೂಲು
ಆದರೆ ತಾಯೇ ಕೇಳು ನನ್ನೆದೆಯೂ ಜಿನುಗುವುದು ಜೊತೆಗೆ

‍ಲೇಖಕರು Avadhi

17 February, 2021

2 Comments

  1. Amita Ravikirana

    ನಿಮ್ಮ ಬರವಣಿಗೆ ನನಗೆ ತುಂಬಾ ಇಷ್ಟ.
    ನೀವು ಪದ ಪ್ರಯೋಗ ಮಾಡುವ ಶೈಲಿ ತುಂಬಾ ವಿಶಿಷ್ಟ. ಒಳ್ಳೆಯ ಕವಿತೆ ಓದಲು ಒಡಗಿಸಿದ್ದಕ್ಕೆ ಧನ್ಯವಾದಗಳು.

  2. Sarojini Padasalgi

    ಧನ್ಯವಾದಗಳು ಅಮಿತಾ.ನನಗೆ ಆ ಅವಕಾಶ ಒದಗಿಸಿದೆ ಅವಧಿಗೆ ಧನ್ಯವಾದಗಳು. ಅಮಿತಾ ನಿಮಗೆ ಕವನ ಇಷ್ಟ ಆದದ್ದು ಖುಷಿ ನಂಗೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading