ಡಾ ಸುರೇಶ ನೆಗಳಗುಳಿ
ಮಂಗಳೂರಿನಲ್ಲಿ ಶಸ್ತ್ರ ಚಿಕಿತ್ಸಕ ಮಿಶ್ರ ಪದ್ಧತಿ ವೈದ್ಯ ಪ್ರಾಧ್ಯಾಪಕ ಮತ್ತು ಬರಹಗಾರರು. ಏಳು ಸಂಕಲನಗಳ ಪ್ರಕಟ.
ಸುಡುವ ಬಿಸಿಲಿನ ಝಳಕೆ ನೆರಳ ನೀಡುವ ಕೊಡೆಯು ಬೇಕಾಗಿದೆ
ಬಿಸಿಯುಸಿರ ತನಿಗೊಳಿಸಿ ಮುದ ಕೊಡುವ ಹನಿಯು ಬೇಕಾಗಿದೆ
ರವಿಯನ್ನು ತಡೆಯಲು ಗಗನವನು ಮುತ್ತಿದ ಮುಗಿಲಿಗೆ ಸಾಧ್ಯವೇನು
ಮನವನಾವರಿಸಿದ ದುಗುಡವ ಕಳೆವ ಒಲವಿನ ಸೆರೆಯು ಬೇಕಾಗಿದೆ
ಭ್ರಮರಕ್ಕೆ ಸಿಹಿಯುಣಿಸಲು ಮೊಗ್ಗರಳಿದ ಹೂವು ನಗುವುದೇನು ತಾನು
ಬೆಸೆದು ಹೊಸೆಯುತ ಒಲಿದು ನಲಿಯಲು ಪ್ರೇಮದ ಕರೆಯು ಬೇಕಾಗಿದೆ
ದಡವನ್ನು ಬಡಿಯುತ್ತ ಕಡಲೇನು ಮರಳ ರಾಶಿಯ ನುಂಗಿಯೇ ಬಿಡುವುದೇ
ಸುಖದಿ ಕುಣಿಯಲು ಜೊತೆಗಿರುವ ನಲ್ಲೆಯ ಸೊಗದ ನೆಲೆಯು ಬೇಕಾಗಿದೆ
ಚಂದಿರಗೆ ಕೊರಗೇನು ತಾರೆ ಸಾವಿರ ಮಿನುಗುತಿರಲು ಬಾನಿನುದ್ದಗಲ
ಕಣ್ಣು ಹೊಳೆಯುತಲಿರಲು ಮನ ಸೆಳೆದವಳ ಕಿಲಕಿಲ ನಗೆಯು ಬೇಕಾಗಿದೆ
ವರ್ಷಧಾರೆಗೆ ತೇವಗೊಳ್ಳುವ ಸಫಲ ಬಯಕೆ ಬುವಿಗೆ ಇರುವುದು ಮಿಥ್ಯವೇ
ಜಿನುಗಿದೆದೆಗೆ ನಲ್ಮೆತುಂಬಿ ಹರಿವ ಸರಾಗ ಒರತೆಯ ಸೆಲೆಯು ಬೇಕಾಗಿದೆ
ಎಲೆಯ ಮೇಲಿರುವ ಹಿಮದ ಹನಿ ಮುತ್ತಾಗ ಬಹುದೇ ‘ಸುರೇಶ’ ಹೇಳು
ಒಲುಮೆ ಬಯಸಿದ ತೇಗೊಂಡ ಅಧರಕೆ ಪ್ರೀತಿಯ ಸವಿಯು ಬೇಕಾಗಿದೆ
0 ಪ್ರತಿಕ್ರಿಯೆಗಳು