ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ವಸು ಕಂಡಂತೆ ಕಾರ್ಪೋರೇಟ್ ಜಗತ್ತಿನಲ್ಲಿ ಕನ್ನಡ ಸಂಸ್ಕೃತಿ

ಡಾ.ಎಂ.ವಿ.ವಸು

ಕನ್ನಡ ಸಂಸ್ಕೃತಿ ಅನ್ನುವುದು ಇದೆಯಾ? ಕನ್ನಡ ಸಂಸ್ಕೃತಿ ಅಂದರೆ ಯಾವುದನ್ನು ಹೇಳುತ್ತೀರಿ? ಅನ್ನುವ ಎರಡು ಪ್ರಶ್ನೆಗಳು ಇಲ್ಲಿ ಉದ್ಭವಿಸುತ್ತವೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸಂಸ್ಕೃತಿಯ ಪದ ಬಳಕೆಯಾಯಿತು. ಭಾಷೆ, ಉಡುಗೆ, ತೊಡುಗೆ, ಬದುಕುವ ಕ್ರಮ, ಆಚಾರ-ವಿಚಾರ ಇವುಗಳನ್ನು ಒಟ್ಟಾಗಿ ಸಂಸ್ಕ್ರತಿ ಎಂದು ಹೇಳುತ್ತೇವೆ. ಕನ್ನಡ ಸಂಸ್ಕ್ರತಿ ಎಂದಾಗ ಬರುವುದು ಕರ್ನಾಟಕ ರಾಜ್ಯದ ಸೀಮೆಯೊಳಗೆ ಮಾತ್ರ ಅನ್ನುವ ಅರ್ಥ ಪಡೆಯುತ್ತದೆ. ಕರ್ನಾಟಕದಲ್ಲಿ ಎಲ್ಲಾ ಭಾಷೆಯ ಜನರಿದ್ದಾರೆ. ಹಾಗಾಗಿ ಎಲ್ಲಾ ಕನ್ನಡದ ಉಳಿದ ಭಾಷೆಗಳು , ಸಂಸ್ಕೃತಿಗಳು ಸೇರಿ ಕನ್ನಡ ಸಂಸ್ಕೃತಿ ಎಂದು ಕರೆದಾಗ ಅದು ವಿಸ್ತಾರವಾದ ಅರ್ಥ ಪಡೆದುಕೊಳ್ಳುತ್ತದೆ. ಕನ್ನಡ ಭಾಷೆಯಲ್ಲಿ ಬೇರೆ ಬೇರೆ ಪ್ರಬೇಧಗಳಿರುವುದರಿಂದ ಕನ್ನಡ ಮಾತನಾಡುವ ಜನರು ಇರುವ ಎಲ್ಲಾ ಪ್ರದೇಶಗಳನ್ನು ಸೇರಿಸಿ ಒಂದು ಕನ್ನಡ ಸಂಸ್ಕೃತಿ ಎಂದು ಕರೆಯುವುದಾದರೆ ಕನ್ನಡ ಸಂಸ್ಕೃತಿ ಒಂದು ನಿರ್ದಿಷ್ಟ ಅನ್ನುವುದು ತಪ್ಪಾಗುತ್ತದೆ.

ಕನ್ನಡ ಭಾಷೆಯಲ್ಲಿ ಹಲವು ವಿಧಗಳಿವೆ . ಪ್ರತಿಯೊಂದು ಪ್ರಬೇಧವನ್ನು ನಾವು ಗೌರವಿಸಬೇಕು. ಒಂದು ಸಂಸ್ಕೃತಿ ಅನ್ನುವುದೇ ಬಹಳ ಅಪಾಯದ ಪದ. ಆದರೆ ಅದರ ಅಸ್ತಿತ್ವದ ಪ್ರಶ್ನೆ ಬಂದಾಗ ಎರಡೂ ಕಡೆ ನಿಂತು ನಾವು ನೋಡಬೇಕಾಗುತ್ತದೆ.
ಒಂದು ವಿಷಯವನ್ನು ತೆಗೆದುಕೊಂಡು ಅದನ್ನು ಸಂಸ್ಕೃತಿ ಎನ್ನುವುದಕ್ಕಾಗುವುದಿಲ್ಲ. ವೈವಿದ್ಯತೆಯೇ ಸಂಸ್ಕೃತಿಯ ಸೌಂದರ್ಯ. ಹಿಂದೆ ರಾಜ್ಯದ ರಾಜರುಗಳ ಆಳ್ವಿಕೆಯ ನೆಲೆಯಲ್ಲಿ ಸಾಮ್ರಾಜ್ಯದ ನೆಲೆಯಲ್ಲಿ ಇರುವಾಗ ಅದು ನಮ್ಮ ಸಂಸ್ಕೃತಿ ಎಂದು ಹೇಳಿಕೊಂಡು ಬಂದರು. ಆಲೂರರ ನಂತರ ಅದನ್ನು ಗತ ವೈಬವ ಎಂದು ಕರೆದರು. ಕನ್ನಡ ಎನ್ನುವುದು ಭೌಗೋಳಿಕ ಪ್ರದೇಶ.ಜನ ತಮ್ಮ ಸಂಸ್ಕೃತಿಯನ್ನು ರಾಜತ್ವದ ನೆಲೆಯಲ್ಲಿ ಹುಡುಕಿಕೊಳ್ಳುವುದಕ್ಕೆ ಶುರು ಮಾಡಿದರು.
ಆಧುನಿಕತೆಯಿಂದ ಧಕ್ಕೆ ಬಂದಾಗ ನಮ್ಮ ಸಂಸ್ಕೃತಿ ಇದು ಎಂದು ನಾವು ತಿಳಿದುಕೊಳ್ಳುತ್ತೇವೆ. ಬದಲಾವಣೆಯನ್ನು ಎದುರಿಸುವಾಗ ಸಂಸ್ಕೃತಿಯನ್ನು ಹುಡುಕುವುದಕ್ಕೆ ಪ್ರಾರಂಭ ಮಾಡುತ್ತೇವೆ. ಜನಪದ ನೃತ್ಯವನ್ನು ಈಗ ಜನಪದರೇ ಮಾಡುತ್ತಿಲ್ಲ. ಅದರ ಬದಲಾಗಿ ಇನ್ನು ಯಾರೋ ಮಾಡುತ್ತಿದಾರೆ. ಹಾಗಿದ್ದರೆ ನಿಜವಾದ ಜನಪದರನ್ನು ವೇದಿಕೆ ಮೇಲೆ ತರುವುದಕ್ಕೆ ಸಾಧ್ಯವಾಗುತ್ತಿದೆಯಾ?. ಹಿಂದಿನ ಕಾಲದಲ್ಲಿ ಭರತನಾಟ್ಯವನ್ನು ದೇವದಾಸಿಗಳು ಮಾಡುತ್ತಿದ್ದರು. ಅದು ಊಳಿಗಮಾನ್ಯ ಪದ್ದತಿಯಿಂದಲೇ ಬೆಳೆದು ಬಂತು. ಒಂದು ಕಾಲದಲ್ಲಿ ಶೋಷಣೆಯ ನೆಲೆಯ ಕಲೆಯಾಗಿತ್ತು. ಆದರೆ ಆಕೆ ಅದನ್ನು ಕಲೆಯಾಗಿ ಉಳಿಸಿಕೊಂಡು ಬಂದಿದ್ದಾಳೆ. ಈಗ ಅದನ್ನು ನಮ್ಮ ಸಂಸ್ಕೃತಿ ಎಂದು ತೆಗೆದುಕೊಳ್ಳುವಾಗ.ಅದನ್ನು ದೇವದಾಸಿಗಳಲ್ಲದವರು ಅದನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಆದರೆ ಯಾಕೆ ಆ ನೃತ್ಯ ಬೆಳೆದು ಬಂತು ಅನ್ನುವುದನ್ನು ನೋಡದೆ ಅದರಿಂದಾಗಿ ಬರುವ ಆರ್ಥಿಕತೆಯನ್ನು ಮಾತ್ರ ನಾವು ನೋಡುತ್ತಿದ್ದೇವೆ. ಜನಪದರು ತಮ್ಮ ಸಂತೋಷಕ್ಕಾಗಿ ನೃತ್ಯ ಮಾಡುತ್ತಿದ್ದರು.ಆದರೆ ಈಗ ಜನರು ನೃತ್ಯ ಮಾಡುವುದು ನೂರು ಜನರನ್ನು ಸಂತೋಷಗೊಳಿಸುವುದಕ್ಕೆ. ಆದರೆ ಈ ಕಲೆಗಳನ್ನು ಕಾರ್ಪೊರೇಟ್ ಸೆಕ್ಟಾರ್ ಆಳುತ್ತಿರುತ್ತದೆ. ಇದು ನಮ್ಮ ಸಂಸ್ಕೃತಿ ಎಂದು ತೋರಿಸುವ ಕಾರ್ಪೊರೇಟ್ ಜಗತ್ತು ನಮ್ಮ ಸಂಸ್ಕೃತಿಯನ್ನು ಎಲ್ಲೋ ಒಂದು ಕಡೆ ವ್ಯಂಗ್ಯ ಮಾಡುತ್ತಿದೆ ಅನ್ನಿಸುತ್ತಿದೆ. ಸಂಗೀತವನ್ನು ತೆಗೆದುಕೊಂಡಾಗ ಯಾವತ್ತು ಕೇಳದ ಧ್ವನಿಗಳು ಇಂದು ಸಿ.ಡಿ.ಯಾಗಿ ಹೊರಬರುತ್ತಿದೆ. ಜಾನಪದದ ಮೂಲ ಮಟ್ಟುಗಳನ್ನು ಆಧುನಿಕತೆಯ ರೀತಿಯಲ್ಲಿ ನೋಡುವುದು ಹಾಗಾದಾಗ ಕಾರ್ಪೊರೇಟ್ ಜಗತ್ತಿನಲ್ಲೂ ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
 
 
 

‍ಲೇಖಕರು G

1 January, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading