ವೈದೇಹಿ ಬರೆಯುತ್ತಾರೆ: ದೀಪ ಆರಿದ ಕತ್ತಲಲ್ಲಿ

ವೈದೇಹಿ

ಅದದೇ ಸುದ್ದಿ, ದಿನದಿನಕ್ಕೆ ಹೆಚ್ಚುವ ಅದೇ ಮತ್ತು ಅದೇ. ಮೊನ್ನೆ ಕುಗ್ರಾಮವೊಂದರಲಿ, ನಿನ್ನೆ ದೆಹಲಿಯಂಥಲ್ಲಿ, ಇಂದು ಇನ್ನೊಂದೇ ಕಡೆ. ಹೆಣ್ಣು ಮತ್ತು ಅತ್ಯಾಚಾರ. ಒಮ್ಮೆ ಬೊಬ್ಬೆ ಏಳುತ್ತದೆ. ನಿಧಾನ ಸುದ್ದಿ ಮಾಸುತ್ತದೆ. ಇಂಥದೇ ಮತ್ತೊಂದು ಸುದ್ದಿ ಬರುವವರೆಗೂ ‘ವಾತಾವರಣ ತಿಳಿಯಾಗಿದೆ, ಸಹಜಕ್ಕೆ ಮರಳಿದೆ’.
‘ಹೆಣ್ಣು ಹೆರಲು ಭಯ. ಮಗು ಹೆಣ್ಣಾದರೆ, ಬೇಡಪ್ಪ, ತೆಗೆದು ಬಿಡಿ.’ ಹೊಸತೇ ಕಾರಣವೊಂದು ಭ್ರೂಣಹತ್ಯೆಯ ಪರವಾಗಿದೆ.
ಹಿಂಸ್ರಮೃಗಗಳು ಕಾಡಿನಲ್ಲಿರುತ್ತವೆ ಅಂತ ಎಣಿಸಿದ್ದೆವು. ಅದೀಗ ತಪ್ಪು ಗ್ರಹಿಕೆ. ನಾಡಿನಲ್ಲೇ ಅತ್ತ ಇತ್ತ ಸನಿಹದಲ್ಲೇ ಸುಳಿವೇ ಹತ್ತದಂತೆ ಇವೆ ಅವು, ಹೆಣ್ಣುಮಕ್ಕಳ ಬೇಟೆಯಾಡುತ್ತಿವೆ.
ಒಂದೆಡೆ ಪುಂಡಪೋಕರಿಗಳು ಇನ್ನೊಂದೆಡೆ ಸಂಸ್ಕೃತಿಯ ಗುತ್ತೇದಾರರು. ಈ ಎಲ್ಲದರ ನಡುವೆ ಕಡೆಗೂ ನಲುಗುವವಳು ಹೆಣ್ಣು. ಸ್ವಚ್ಛಂದ ಬದುಕನ್ನು ಆಯ್ದುಕೊಂಡ ಯುವಕ ಯುವತಿಯರಲ್ಲಿಯೂ ಪರಿಣಾಮ ಎದುರಿಸಬೇಕಾದವಳು ಕೊನೆಗೂ ಹೆಣ್ಣೇ. ಸಮಾಜದ ರಚನೆಯೇ ಹಾಗಿದೆ. ಮತ್ತವಳು ತಲೆ ಎತ್ತದಂತೆ ನೂರಾರು ಹೀನೈಕೆಗಳು ಆಕೆಯನ್ನು ಜೀವನದುದ್ದಕ್ಕೂ ಮನೆಯೊಳಗೂ ಹೊರಗೂ ಬೆನ್ನಟ್ಟಿಕೊಂಡೇ ಇರುತ್ತವೆ. ಅವಳ ಕುಸಿದ ಆತ್ಮವಿಶ್ವಾಸವನ್ನು ಮರಳಿ ತರುವ ಹೊಣೆ ನಿಭಾಯಿಸುವುದು ಸುಲಭವೇನು?
ವಿದ್ಯೆ ಬುದ್ಧಿ ಉದ್ಯೋಗ, ಸ್ವಾವಲಂಬನೆ, ಆತ್ಮವಿಶ್ವಾಸ ಏನೇನು ಇದ್ದರೂ ಆಕೆ- ಒಬ್ಬ ಅಪಾಪೋಲಿ ಗಂಡು ಮನಸ್ಸಿಗೆ (ಆತ ಪೋಕರಿಯಿರಲಿ, ಅಧಿಕಾರಿಯಿರಲಿ, ಮಂತ್ರಿಯಿರಲಿ, ಶಿಕ್ಷಿತ ಅಶಿಕ್ಷಿತ ಯಾವ ಪುಳುಕನೇ ಆಗಿರಲಿ) ಕಾಣಿಸುವುದು ಹೆಣ್ಣಾಗಿ, ಅದರಲ್ಲಿಯೂ ಅವಳ ಅಂಗಾಂಗಗಳಾಗಿ ಮಾತ್ರ ಎಂಬುದೇ ಸ್ವತಂತ್ರ ಭಾರತದ ಹಣೆಬರಹ ಆಗಿ ಬಿಟ್ಟಿತೆ!
ಇಂದು ಹೆಣ್ಣನ್ನು ಸದಾ ಮರಮರಳಿ ಆಳುತ್ತಿರುವುದು ಒಂದೇ- ಭಯ. ನಿರಂತರ ಭಯ. ಅವ್ಯಕ್ತ ಭಯ. ಸಂಜೆ ಹೊತ್ತಾಗಿ ಬರಲು ಭಯ, ಬರುವವರಿಗೆ ಧೈರ್ಯವಿದ್ದರೂ ಮನೆ ಮಂದಿಗೆ ‘ಯಾಕಿನ್ನೂ ಬಂದಿಲ್ಲ?’ ಎಂಬ ಭಯ, ‘ಹೇಳಿಕೊಳ್ಳಲು’ ಹೇಳಿಕೊಳ್ಳಲಾರದಂಥ ಭಯವೇ ಎಷ್ಟೋ ಸಲ ಇನ್ನಿತರ ಭಯಗಳಿಗೆ ಮೂಲ ಕಾರಣವೂ ಆಗಿಬಿಡುವ ಅವಸ್ಥೆ. ಭಯ ಭಕ್ತಿ ಎಂಬ ಒಂದು ಜೋಡು ಶಬ್ದವಿದೆಯಲ್ಲ, ಅವುಗಳಂತಲ್ಲ ಇವು. ಒಳ ಚೇತನವನ್ನೇ ಹನನ ಮಾಡಿಬಿಡುವಂಥ ಹಿಂದೆಮುಂದಿಲ್ಲದ ಭಯ.
ವಿದ್ಯೆ ಉದ್ಯೋಗ ಅಧಿಕಾರ ಹುದ್ದೆ ಆತ್ಮವಿಶ್ವಾಸ ಎಲ್ಲವಿದ್ದೂ ಇವತ್ತಿಗೂ ಈ ಮಾದರಿ ಭಯದ ಉಚ್ಚಾಟನೆ ಮಾತ್ರ ಸಾಧ್ಯವಾಗಿಲ್ಲ. ಕೆಲಸ ಮುಗಿಯಿತೆಂದು ನಿಭರ್ಿಡೆಯಿಂದ ಆಕೆ ಮನೆಗೆ ಒಬ್ಬಳೇ ಹೊರಡುವಂತಿಲ್ಲ. ಕೆಲಸದ ಸಮಯಕ್ಕೆ ಸರಿಯಾಗಿ ಮನೆಯಿಂದ ನಿಸೂರಾಗಿ ಹೊರಡುವಂತಿಲ್ಲ. ನೈಸಗರ್ಿಕ ಉಲ್ಲಾಸವನ್ನೇ ಚಿವುಟಿ ಹಾಕುವ ಭಯದ ಹವೆಯಲ್ಲಿ ಸಂಜೆಮುಂದಿನ ವಿಹಾರ, ಕಾಲೇಜು ಪ್ರವಾಸ ಇತ್ಯಾದಿಗಳೆಲ್ಲ ಬಿಡಿ, ದಿನನಿತ್ಯದ ಸಿಟಿ ಬಸ್ಸಿನ ಪ್ರಯಾಣವೂ, ಕಾಲ್ನಡೆಯ ಸಮಯವೂ ದುಗುಡದ ಕ್ಷಣಗಳಾಗಿ ಮಾರ್ಪಟ್ಟಿವೆ. ಮಯರ್ಾದೆಗೆ ಹೆದರಿ ಎಷ್ಟು ಮಂದಿ ಹೆಣ್ಣುಮಕ್ಕಳು ಆತ್ಮಹತ್ಯೆಗೆ ಶರಣಾಗಿವೆ. ಮಯರ್ಾದೆಗೆ ಹೆದರುವುದೇ ನಮ್ಮ ‘ದುರ್ಬಲಬಿಂದು’ ಆಗುವ ವಿಚಿತ್ರ ದುರಂತವಲ್ಲವೆ ಇದು?
ಹೊರಗೆ ಹೋದ ಹೆಣ್ಣುಮಗಳು-ವಯಸ್ಸಿನ ಗಣನೆಯೇ ಇಲ್ಲದೆ- ಮನೆಗೆ ಬರುವ ತನಕ ಆತಂಕ. ಸಮಯದೊಳಗೆ ಬರದಿದ್ದರೆ ಮನೆಯೊಳಗೆ ಮೌನವಾಗಿ ಕವಿಯುವ ಭಯ. ತುಸು ತಡವಾದರೂ ಆವರಿಸುವ ಕೆಟ್ಟ ಕಲ್ಪನೆಗಳು. ಇಂಡಿಯಾ ಯಾಕೆ ಹೀಗಾಯಿತು? ಒಬ್ಬಳೇ ಎಂಬ ಪದವೇ ಭಯದ್ದಾಗಿ ಬಿಟ್ಟಿತೆ! ಯಾರ ಭಯವದು?
ಈಗಂತೂ ‘ಮಗೂ ಜೋಪಾನ’ ಎನ್ನುವುದು ತಂದೆ ತಾಯಿಯರ ನಿತ್ಯ ಮಂತ್ರವಾಗಿದೆ. ಯಾರ ಬಗ್ಗೆ? ಪ್ರಶ್ನೆ ಕೇಳುವುದಿಲ್ಲ ಆಕೆ. ಅದವಳಿಗೆ ತಿಳಿದಿರುವುದೇ. ತೆರೆದ ಬಾಗಿಲು ತೆರೆದಂತೆ ಕಾಣುವುದು ಮಾತ್ರ. ಆಚೆ ಬದಿ ಅದು ಮುಚ್ಚಿದೆ, ಒಳಹೋದವಳಿಗೆ ದಿಗ್ಬಂಧ ಮಾಡಿದಂತೆ.
ತೀರ ಇತ್ತೀಚೆಗಷ್ಟೆ ಗೆಳತಿಯೊಬ್ಬಳು ಸ್ರ್ತೀ ಪ್ರಪಂಚದ ಕುರಿತು ಅಧ್ಯಯನ ಅಧ್ಯಾಪನ ಮಾಡಿದವಳು, ಸಖತ್ ಆತ್ಮವಿಶ್ವಾಸದವಳು ತಾನು ಪಯಣಿಸುತ್ತಿದ್ದ ಬಸ್ಸು ಹಳ್ಳಿ ಹಾದಿಯಲ್ಲಿ ಕೆಟ್ಟುಹೋಗಿ ರಾತ್ರಿಯಿಡೀ ರಸ್ತೆಬದಿಯಲ್ಲಿ ಗಂಟೆಗಳ ಕಾಲ ಮೊಬೈಲಿಗೆ ಸಿಗ್ನಲ್ ಕೂಡ ಸಿಗದೆ ಅನಿವಾರ್ಯವಾಗಿ ಸುಮ್ಮನೆ ನಿಲ್ಲಬೇಕಾಗಿ ಬಂದ ಕತೆ ಹೇಳುತ್ತ ಆಗ ತನಗಾದ ಭಯದ ಅನುಭವವನ್ನು ವಿವರಿಸಿದಳು. ಕೊನೆಗೆ ‘ಕೆಲಭಯಗಳು ಮನುಷ್ಯರೆಲ್ಲರಲ್ಲೂ ಇರುವುದೇ. ಆದರೆ ಕೆಲವುಂಟಲ್ಲ, ಅದು ನಮಗೆ, ಹೆಣ್ಣುಮಕ್ಕಳಿಗೆ ಮಾತ್ರವೆ ಎಂಬಂತೆ ಆಕ್ಷಣಕ್ಕೆ ಉದ್ಭವವಾಗುತ್ತವೆ. ಸಮಾಜದ ವ್ಯವಸ್ಥೆಯೊಂದಿಗೆ ವಿಕೃತ ಮಾತ್ರವಲ್ಲ, ಸಾತ್ವಿಕ ಮನಸ್ಸುಗಳೂ ಹುಟ್ಟು ಹಾಕಿದ ‘ಕೇಸ್ ಹಿಸ್ಟರಿ’ಗಳು ಐನ್ ಟೈಮಿನಲ್ಲಿ ಹೇಗೆ ಎದ್ದು ಭಯೋತ್ಪಾದನೆ ಮಾಡುತ್ತವೆ ಅಂತ ನನಗರ್ಥವಾಗಿದ್ದು ಆಗಲೇ. ಎಂಥ ಸೋಜಿಗ ನೋಡು, ಇರುಳಲ್ಲಿ ಕರೆಂಟ್ ಹೋಯಿತೆಂದರೆ ನಾವು ಹೆಂಗಸರು ಮನೆಯಲ್ಲಿ ಒಬ್ಬರೇ ಇದ್ದೇವೆಂದರೆ ಪರಾವರ್ತನ ಪ್ರತಿಕ್ರಿಯೆಯಂತೆ ಮೊದಲು ಮಾಡುವ ಕೆಲಸ ಮುಂದಿನ ಮತ್ತು ಹಿಂದಿನ ಬಾಗಿಲು ಹಾಕಿದೆಯ ಅಂತ ನೋಡುವುದು, ಹಾಕಿಲ್ಲವಾದರೆ ತಕ್ಷಣ ಹಾಕುವುದು. ಪ್ರತಿಸಲವೂ ಯಾರೋ ದುಷ್ಟರು ಒಳನುಗ್ಗಿಯಾರೆಂಬುದೇ ಕಾರಣವಾಗಿರುವುದಿಲ್ಲ. ನಮ್ಮೊಳಗೇ ಹೆಣೆದು ಕೊಂಡ ಅಭದ್ರತೆಯ ಒಂದು ಸ್ವರೂಪವೂ ಹೌದು ಅದು. ಎಲ್ಲಿಯವರೆಗೆ ಈ ಅಭದ್ರತೆಯ ಭೂತ ಕತ್ತಲುಗಳಲ್ಲಿ ನಿರ್ಜನ ರಸ್ತೆಗಳಲ್ಲಿ ಕಾಡುತ್ತಿರುವುದೋ ಅಲ್ಲಿಯವರೆಗೆ ಯಾವ ದೇಶ ಏನು ಸಾಧಿಸಿದರೂ ಫಲವೇನು? ಹೆಸರಿಸಲಾರದ ಆ ಭಯ ಮನೆಯಲ್ಲಿ ಇತರರೂ ಇದ್ದಾರೆಂದರೆ ಎಲ್ಲಿ ಮಾಯವಾಗುತ್ತದೆ?’
‘ಹೆಣ್ಣು ಇಂದು ವೈದ್ಯೆ ವಿಜ್ಞಾನಿ ತಂತ್ರಜ್ಞಾನಿ ಬಾಹ್ಯಾಕಾಶ ಯಾನಿ ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ರಾಷ್ಟ್ರಪತಿ ಏನೆಲ್ಲ. ಅತ್ಯಂತ ಕನಿಷ್ಠ ಕೆಲಸಕ್ಕೂ ಸರಿಯೆ ಆಕೆ, ಗರಿಷ್ಠ ಹುದ್ದೆಗೂ ಸರಿಯೆ ಎಂದು ಸೈಸೈ ಅನಿಸಿಕೊಂಡವಳು’ ಅಂತೆಲ್ಲ ಮನೆಯಲ್ಲಿ ಶಾಲೆಯಲ್ಲಿ ಚಚರ್ಾಕೂಟದಲ್ಲಿ ಭಾಷಣದಲ್ಲಿ ಉದಾಹರಣೆ ಸಮೇತ ಮೇಜು ಕುಟ್ಟಿ ಹೇಳುತ್ತಿದ್ದಂತೆ, ಪ್ರತಿದಿನದ ಛಿಲ್ಲೆನಿಸುವ ಸುದ್ದಿಗಳು. ಹಸುಬಾಲೆಮಗು, ವೃದ್ಧೆ, ತರುಣಿ, ನಡುವಯಸ್ಸು -ಅತ್ಯಾಚಾರ. ವಿಚಾರಣೆ, ಅಪರಾಧಿಯ ಬಿಡುಗಡೆ.
‘ಅವಳು ಯಾಕೆ ಅಲ್ಲಿ ಹೋಗಬೇಕಿತ್ತು? ಅಷ್ಟು ಸಿಂಗರಿಸಿ ಕಾರು ಯಾಕೆ ಹತ್ತಬೇಕಿತ್ತು?’
‘ಯಾಕೆ ರಾತ್ರಿಯ ಬಸ್ಸು ಹಿಡಿಯಬೇಕಿತ್ತು? ಕೆರಳಿಸುವ ವೇಷಭೂಷಣ ಯಾಕೆ ಬೇಕಿತ್ತು?’
‘ಹೆಣ್ಣು ಮಕ್ಕಳು ತುಸು ಹಿಂದಿದ್ದರೇನೆ ಕ್ಷೇಮ. ಬಾಯಿ ಇದೆಯೆಂದು ಅಷ್ಟೆಲ್ಲ ಕಾನೂನು ಮಾಡುವುದೆ? ಯಾಕೆ ಬೇಕಿತ್ತು ಅವಳಿಗೆ?’
‘ಅವಳೇ ತಂದುಕೊಂಡ ದುರಂತ ಇದು. ಅನುಭವಿಸಲಿ. . .’ -ಹೀಗಂತ ಹೇಳುವವರು ‘ವಿಚಾರಿಸಿಕೊಳ್ಳುವ’ವರು ಮತ್ತೆ ಯಾರಲ್ಲ, ಗಂಡು ಮತ್ತು ಹೆಣ್ಣು ‘ವೇಷ’ ದಲ್ಲಿರುವವರು.
ಅತಂತ್ರದಿಂದ ನಮ್ಮನ್ನು ಕಾಪಾಡಿಕೊಳ್ಳುವ ಸಕಲಾತಿಸಕಲ ಮಾರ್ಗಗಳನ್ನೂ ತಂತ್ರಗಳನ್ನೂ ತಂತ್ರಜ್ಞಾನಗಳನ್ನೂ ಕುರಿತು ಆಳಚಿಂತಿಸುವ ಅಳವಡಿಸುವ ಕಾಲ ಇನ್ನು ಬೇರೆಯಿಲ್ಲ, ಇದುವೇ
ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವದಲ್ಲಿ ಎಂಬ ಯಾವ ಭೇದವಿಲ್ಲದೆ, ಹುಟ್ಟಿನಿಂದಲೇ ಸ್ರ್ತೀಪುರುಷರು ಸಮಾನರು. ಸಮಾನರೆಂದರೆ ಸಮಾನರೇ. ಎರಡು ಮಾತೇ ಇಲ್ಲ. ನಾವೂ ಈ ಭೂಮಿಗಿಳಿದು ಬಂದ ಜೀವಿಗಳೇ ಎಂದ ಮೇಲೆ ಜಗತ್ತು ಕೇವಲ ಪುರುಷರದು ಮಾತ್ರ ಹೇಗೆ? ನಮ್ಮದೂ ಹೌದಷ್ಟೆ? ನಾವು ಎರಡನೆಯ ದಜರ್ೆ ಹೇಗೆ? ರಾತ್ರಿ ಮತ್ತು ಹಗಲುಗಳು ಪುರುಷರಿಗೆ ಮಾತ್ರ ಮೀಸಲೋ? ಯಾರು ಹೇಳಿದರು? ಹಾಗೆ ಹೇಳಲಾದರೂ ಅವರು ಯಾರು?
*
ಒಟ್ಟಿನಲ್ಲಿ
ಮನೆ ಮತ್ತು ಶಾಲೆಯ ನಡುವಿನ ಕಾಡುದಾರಿ, ಕತ್ತಲದಾರಿ, ಹಗಲುಹೊತ್ತಿನ ನಿರ್ಜನ ದಾರಿ, ಒಂಟಿ ಓಡಾಟದ ದಾರಿ, ಒಂಟಿ ಜೀವನದ ಹಾದಿ ಎಲ್ಲವೂ ಒಂದಿಷ್ಟೂ ಬದಲಾಗದೆ ಇಂದಿಗೂ ಮಹಿಳೆಯ ಸತತ ಭಯದ ದಾರಿಗಳೇ ಆಗಿವೆ. ಮೂರ್ತ ದೇಹದ ಮೂಲಕ ಅಮೂರ್ತ ಮನಸ್ಸಿನ ಮೇಲೆ ಮಾಡುವ ಆಕ್ರಮಣಗಳು, ಕುರಿತಾಗಿ ಅವಳ ಚೇತನವನ್ನೆ ಸುಡುವ ದಿನನಿತ್ಯದ ದಾರುಣ ಸುದ್ದಿಗಳಾಗಿ ಪತ್ರಿಕೆಗಳಲ್ಲಿ ‘ಪ್ರತ್ಯೇಕವಾಗಿ’ ‘ಸೇರಿ’ ಹೋಗುತ್ತವೆ.
 
ಕಾನೂನುಗಳು ಎಷ್ಟೇ ಸುಧಾರಿಸಿದಂತೆ, ಮಹಿಳಾಪರವಾಗಿರುವಂತೆ ಕಂಡರೂ ಅದು ಕಾಣುವುದು ಮಾತ್ರ. ಇನ್ನು ಅವುಗಳ ನಿರ್ವಚನಗಳೋ; ಎಷ್ಟೋ ಬಾರಿ ಎತ್ತಿದವರ ಕೈಗೂಸುಗಳು. ಹೇಗೆ ಅಂದರೆ ಹಾಗೆ ತಿರುಗುವ ತಿರುಗುಕುಚರ್ಿಗಳು. ಬುಗುರಿಯಂತೆ ತಿರುಗುಣದ ನುಡಿಗಟ್ಟುಗಳು. ಅವು ಅಡಗಿರುವುದೆ ಶಬ್ದಗಳೆೆಂಬೊ ಕೋಶದಲ್ಲಿ. ಅವನ್ನು ಹೇಗೆ ಬೇಕಾದರೂ ತಿರುಚುವ ವಿದ್ಯೆಯೂ ಅವುಗಳ ಜೊತೆಗೇ ಹೊಳೆಯುತ್ತದಷ್ಟೆ? ಹೇಳಿಕೇಳಿ ಶಬ್ದಕೋಶಕ್ಕೆ ಯಾವತ್ತೂ ಒಂದೇ ಬಾಗಿಲಲ್ಲ, ತೆರೆವ ಚಾಲಾಕು ಬಲ್ಲವರ ಮುಷ್ಟಿಗೆ ಅದು ಸಿಕ್ಕಿತೆಂದರೆ ಇಲ್ಲಿ ತೆರೆದರೆ ಈ ಅರ್ಥ ಅಲ್ಲಿ ತೆರೆದರೆ ಆ ಅರ್ಥವೆಂಬ ಬಹ್ವರ್ಥಗಳ ಭಂಡಾರವದು. ಹೀಗಾಗಿ ತ್ರಸ್ತ ಮಹಿಳಾ ಬದುಕು ನರಳುತ್ತಲೇ ಇರುತ್ತದೆ. ಉತ್ತರಿಸಿದಷ್ಟೂ ಮತ್ತೆ ಅವೇ ಪ್ರಶ್ನೆಗಳು, ಅವೇ ತನಿಖೆಗಳು ಅಂತ್ಯದಲ್ಲಿ ತಾನೇ ಅಪರಾಧಿಯೊ ಹೇಗೆ? ಎಂದು ಆಕೆಗನಿಸಬೇಕು, ತನಿಖಾಕ್ರಮಕ್ಕೆ ಹೆದರಿ ಅವಳ ಬಾಯಿ ಮಾತು ಕಳೆಯಬೇಕು ಹಾಗೆ. . .ಯಾರಿಂದ ಏನಾಯಿತು? ಬಲಾತ್ಕಾರವೆ? ಹೇಗಾಯಿತು? ಮತ್ತೆ? ಇನ್ನೂ ವಿವರ ಹೇಳಮ್ಮ – ಮಹಿಳೆಗಾಗಿ ಮಹಿಳೆಯರಿಂದ ಕಾನೂನುರಚನೆಯ ಆಶಯ ಚಿಗುರೊಡೆಯುವುದು ಇಂಥ ಕಾರಣಗಳಿಂದಲೇ. ಇನ್ನು ಪ್ರಕರಣಗಳನ್ನು ಕೇಳಿ ತಮ್ಮದೇ ತೀಮರ್ಾನ ಹೇಳುವವರು ಸೃಷ್ಟಿಸುವ ಸಾಮಾಜಿಕ, ವಾಚಿಕ ಹಿಂಸೆಯ ಹಾಗೂ ಆಕ್ರಮಣದ ಪುಟಗಳೋ!
ಆಧುನಿಕತೆಯ ವ್ಯಾಖ್ಯಾನದ ಕರಾಳ ಮಗ್ಗುಲುಗಳಿವು.
ಆಧುನಿಕ ಎನ್ನಲೇಕೆ?
ಯುಗಯುಗಗಳಿಂದಲೂ ಸಾಗಿ ಬಂದ ಕಥೆ, ಕಥಾನಕ, ಕಥಾಪ್ರಸಂಗ, ಇತಿಹಾಸಗಳನ್ನು ಒಮ್ಮೆ ಹಾದು ಬಂದರೂ ಸಾಕು, ಕಾಮುಕರ ಕೀಚಕರ ದಂಡೇ ಎದುರಾಗುತ್ತದೆ. ಹೆಣ್ಣಿನ ಮನಸ್ಸನ್ನು ಇರಿದು, ಘಾಸಿಗೊಳಿಸಿ ಅಧೀನಗೊಳಿಸುವ ಉಪಕರಣಗಳಾಗಿ ಅವಳ ರೂಪ ಕೇಶ ಉಡುಗೆ ಚರಿತ್ರ ಶೀಲಗಳು ಧಮರ್ಾರ್ಥ ಒದಗಿಬಿಟ್ಟಿರುವುದು ಢಾಳಾಗಿ ಎದ್ದು ರಾಚುತ್ತದೆ. ಹೆಣ್ಣಿನ ಮೇಲೆ ‘ಭುಜಬಲದ ಪರಾಕ್ರಮ’ದ ಹೇಡಿತನವನ್ನಷ್ಟೇ ಅಲ್ಲ, ತಮ್ಮ ಬುದ್ಧಿ-ಕೇಡಿತನವನ್ನೂ ಮೆರೆವ ಮೃಗೀಯ ಗಂಡುಗಳಿಂದಾಗಿ ಉದ್ದಕ್ಕೂ ಅವಮಾನ ಅನುಭವಿಸಿದ ಪುರುಷರು ತಲೆತಗ್ಗಿಸಿದ್ದಾರೆ. ಆದರೆ ಅವರು ತಲೆತಗ್ಗಿಸಿ ಕುಳಿತರಷ್ಟೇ ಸಾಕೆ?
ಯುಗಧರ್ಮಗಳೇ ಹಾಗೆ ಎನ್ನುತ್ತಾರೆ.
ಧರೆಯನ್ನೇ ಹೊತ್ತಿಸಿ ಆ ಉರಿಯಲ್ಲಿ ಮೈಕಾಯಿಸುವಂಥವು. ಧರೆ ಹೊತ್ತಿ ಉರಿದರೆ ಉರಿಸಿದವರೂ ಉರಿದುಹೋಗುತ್ತಾರೆ ಎಂಬುದು ಮತ್ತೆಮತ್ತೆ ದೃಢವಾದರೂ ಅದು ವಿಸ್ಮರಣೆಗೆ ಸಂದು ಮತ್ತೆಮತ್ತೆ ಹೊಸವೇಷ ಪರಿಕರದಲ್ಲಿ ಮರುಕೊಳಿಸುವ ಕ್ರಮ.
‘ನಡೆದು ಬಂದ ದಾರಿಯನ್ನು ತಿರುಗಿ ನೋಡಬೇಡ’ ವೆಂದರೂ ನಿತ್ಯ ಏಳುವ ಪ್ರಸಂಗಗಳು ಆ ದಾರಿ ಮಸಳಿಸದ ಹಾಗೆ ಸ್ಮೃತಿಪಟಲದಲ್ಲಿ ತಿರುತಿರುಗಿ ಅಚ್ಚೊತ್ತುತ್ತಲೇ ಇರುತ್ತವೆ.
*
ಆಕೆ, ಆ ಎಳೆಯ ಕದಿರು, ಕನಸುಗಣ್ಣಿನ ಹುಡುಗಿ, ತಂದೆತಾಯಿಯರು ಮುತ್ತಿಟ್ಟು ತುತ್ತಿಟ್ಟು ತಮ್ಮ ಜೀವನದ ಸಾರಸರ್ವಸ್ವವೆಂಬಂತೆ ಸಾಕಿಸಲಹಿ ಬೆಳೆಸಿದ ಮಗಳು, ಈ ಕೊಳಕು ಜಗತ್ತಿನಿಂದ ಹೊರಬಿದ್ದು ಹೊರಟೇ ಹೋದ ಎದೆಯೊಡೆಯುವ ಸುದ್ದಿ ಪ್ರಸಾರವಾಗುತ್ತ ಇದೆ. ಇನ್ನು ಏನೇ ಮಾಡಿದರೂ ಅವಳ ತಂದೆತಾಯಿಯ ಮಡಿಲಲ್ಲಿ ಮತ್ತೆ ಅವಳನ್ನು ಕೂರಿಸಲು ಸಾಧ್ಯವೆ? ಅವಳ ನಗೆ ಮತ್ತು ಕನಸನ್ನು ತಿರುಗಿ ತರಲು ಸಾಧ್ಯವೆ? ದೀಪ ಬಲವಂತವಾಗಿ ಆರಿಹೋಗಿದೆ. ಮತ್ತೆ ಉರಿಸಲು ಸಾಧ್ಯವೇ ಆಗದಂತೆ ಕಮರಿದೆ.
ಇಂತಹ ಕರಾಳ ಪ್ರಕರಣಗಳಲ್ಲಾದರೂ ಸಾಕ್ಷಿ ಪುರಾವೆ ಅಂತ ಕಾಯದೆ ತಕ್ಷಣದ ತೀಪರ್ು ಹೊರಬೀಳಲಿ. ವಿಳಂಬವೆಂದರೆ ನ್ಯಾಯ ತನ್ನ ಅಸ್ತಿತ್ವವನ್ನು ತಾನೇ ಪ್ರಶ್ನಿಸಿಕೊಂಡಂತೆ. ತನ್ನನ್ನೇ ತಾನು ದಯನೀಯವಾಗಿ ಅಲ್ಲಗಳೆದಂತೆ. ತನ್ನನ್ನೇ ಕೊಂದುಕೊಂಡಂತೆ. ಹೊಸವರ್ಷದಲ್ಲಾದರೂ ನಾಗರಿಕ ಪ್ರಪಂಚದಲ್ಲಿ ಬದುಕಲು ಖಂಡಿತವಾಗಿಯೂ ಅನರ್ಹರಾದ ಅತ್ಯಾಚಾರಿಗಳು, ನರಾಧಮರು, ಸಶ್ರಮ ಶಿಕ್ಷೆ ಅನುಭವಿಸುತ್ತ ಎಲ್ಲಿರಬೇಕೋ ಅಲ್ಲಿರಲಿ. ಪಶ್ಚಾತ್ತಾಪದಲಿ ಬೆಂದು ಬಡವಾಗಿ ಕರಗಲಿ. ಅವರನ್ನು ಹೊರಬಿಡಲು ದೇಶದ ಪ್ರಥಮ ಪ್ರಜೆಗೂ ಯಾವಯಾವತ್ತೂ ಆಗದಿರಲಿ.
ಘೋರ ಸುದ್ದಿ ಪ್ರಸಾರವಾಗುವ ಅಲ್ಲೇ ಆಚೆ ಛಾನಲ್ಗಳಲ್ಲಿ ಯಥಾಪ್ರಕಾರದ ಮೋಜು ಮೇಜವಾನಿಯ ಕುಣಿತ ನಡೆಯುತ್ತಿದೆ. ಅದು ಯಾವ ಆಘಾತಕಾರಿ ಸುದ್ದಿಗೂ ಒಂದು ಕ್ಷಣವೂ ಸ್ತಬ್ಧವಾಗುತ್ತಿಲ್ಲ. ಬದಲು ಟಿ. ಆರ್. ಪಿ. ಪಿಪಾಸೆಯಲ್ಲಿ, ನಡೆದ ಈ ಘಟನೆಯನ್ನೇ ಕಥೆ ಮಾಡಿ ಹಂಚುವ ದರಿದ್ರಗಳೂ ಹೆಚ್ಚುತ್ತಿವೆ. ನಾವು ಸೃಷ್ಟಿಸುತ್ತಿರುವ ಪ್ರಪಂಚ ಇದು. ಕೆಡವಿ ಮರುಕಟ್ಟುವ ಕಲ್ಪನೆಯೂ ಅಸಾಧ್ಯವೆಂಬಂತೆ ಅದರ ಹುಚ್ಚು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ.
ಆದರೂ ಹಂಬಲ ಬಿಡುವಂತಿಲ್ಲ. ನಾಳಿನ ವರ್ಷ ಬೆಳಕಿನಲಿ ಕಣ್ತೆರೆಯಲಿ. ಲೋಕದಲಿ ಹೆಣ್ಣುಸೂಕ್ಷ್ಮದ ಗಂಡುಗಳ ಸಂಖ್ಯೆ ವೃದ್ಧಿಸಲಿ.
ಮುಂಬರುವ ವರ್ಷದಲಿ ಗಂಡುಹುಡುಗರಲಿ
ಹೆಂಗರುಳ ಸಂವೇದ ಹೆಚ್ಚಲಿ.
ಹೆಂಗರುಳ ಸಂವೇದ ಹೆಚ್ಚಿಕೊಳ್ಳಲಿ ಅವರು
‘ಬುದ್ಧಿಯಲಿ ತನು ಮನವ ತಿದ್ದಿಕೊಳಲಿ’
ಬುದ್ಧಿಯಲಿ ತನುಮನವ ತಿದ್ದಿಕೊಳ್ಳುತ ಲೋಕ
ಸುಮ್ಮಾನದಲಿ ಬದುಕ ಕಲಿಯಲಿ.
ನೊಂದವರ ಹಾರೈಕೆ ಹುಸಿಯಾಗದಿರಲಿ
ನಿಜದಲ್ಲಿ ನಿಜ ಫಲಿಸಲಿ.
(ತಾ.30.12.12 ರ ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ)
 

‍ಲೇಖಕರು G

January 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ನಾ ಕಂಡಷ್ಟು...

    ಮುಂಬರುವ ವರ್ಷದಲಿ ಗಂಡುಹುಡುಗರಲಿ ಹೆಂಗರುಳ ಸಂವೇದ ಹೆಚ್ಚಲಿ.
    ನನ್ನ, ನಮ್ಮೆಲ್ಲರ ಆಶಯವೂ ಇದೆನೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: