ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ ಆಶಾದೇವಿ ಅವರ ಟೀಕೆಗೆ ಪ್ರತಿಭಾ ನಂದಕುಮಾರ್ ಪ್ರತಿಕ್ರಿಯೆ

ಹಳಗನ್ನಡ ಕಾವ್ಯ ಕೃತಿಗಳು ಹೆಣ್ಣಿನ ಭಾವಲೋಕ

ಹಾಗೂ ವ್ಯಕ್ತಿತ್ವವನ್ನು ಚಿತ್ರಿಸುವುದಿಲ್ಲವೇ?

ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ ಆಶಾದೇವಿ ಅವರು ಸ್ತ್ರೀ ಲೋಕ ದೃಷ್ಟಿಯಿಂದ ಹಳಗನ್ನಡ ಕಾವ್ಯಗಳನ್ನು ಪರಿಗಣಿಸಿ ಉಪನ್ಯಾಸ ನೀಡುವಾಗ-

“ಹೆಣ್ಣಿನ ದೇಹದ ಬಗ್ಗೆ ಹಳಗನ್ನಡ ಕಾವ್ಯ ಕೃತಿಗಳು ತೋರುವ ಉತ್ಸಾಹವನ್ನು ಅವಳ ಭಾವಲೋಕ ಹಾಗೂ ವ್ಯಕ್ತಿತ್ವವನ್ನು ಚಿತ್ರಿಸುವ ನಿಟ್ಟಿನಲ್ಲಿ ತೋರಿಸುವುದಿಲ್ಲ. ಹೆಣ್ಣು ಭೋಗಕ್ಕೆ ಆಕರ ಅಥವಾ ವೈರಾಗ್ಯಕ್ಕೆ ಪರಿಕರ ಎನ್ನುವ ಎರಡು ಮನೋಭಾವಗಳನ್ನು ಕಾವ್ಯಗಳು ಉಂಟು ಮಾಡುತ್ತವೆ. ಇವುಗಳ ಹೊರತಾಗಿ, ಸಾಕಾರ ಎಂದು ಕರೆಯಬಹುದಾದ ಆಕಾರವೊಂದು ಹೆಣ್ಣಿಗಿದೆ ಎನ್ನುವ ಭಾವನೆ ಹಳಗನ್ನಡ ಕಾವ್ಯಗಳನ್ನು ಓದಿದಾಗ ಉಂಟಾಗುವುದಿಲ್ಲ…. ಇವೆಲ್ಲ ಬಣ್ಣನೆಗಳು ಕಟ್ಟಿಕೊಡುವ ಹೆಣ್ಣಿನ ಚಿತ್ರಣ ಯಾವ ಬಗೆಯದು ಎಂದವರು ಪ್ರಶ್ನಿಸಿದರು”

-ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.  ಇದಕ್ಕೆ ಪ್ರತಿಕ್ರಿಯೆಯಾಗಿ ಈ ಬರಹ.

ಆಶಾದೇವಿ ಅವರು ನೀಡಿದ ಇತರ ಉದಾಹರಣೆಗಳು (ಜನ್ನ ಮತ್ತು ಕುಮಾರವ್ಯಾಸನಿಂದ ಕೂಡಾ ಕೆಲವು ಪದ್ಯಗಳನ್ನು ಉದಾಹರಿಸಿದ್ದಾಗಿ ಕೆಲವರು ಹೇಳಿದರು ಕೂಡಾ) ಯಾವುವು ಎಂದು ತಿಳಿದಿಲ್ಲದ ಕಾರಣ, ವಿಶೇಷವಾಗಿ ಆದಿಪುರಾಣದಲ್ಲಿ ವಜ್ರದಂತ ರಾಜನು ತನ್ನ ಮಗಳು ಶ್ರೀಮತಿಯ ಬಗ್ಗೆ  ಅಂದುಕೊಂಡುದನ್ನು

“ಆದಿಪುರಾಣ’ದಲ್ಲಿ ಗಂಡನನ್ನು ಕಳೆದುಕೊಂಡು ಎದುರು ನಿಲ್ಲುವ ಮಗಳಲ್ಲಿ ಅಪ್ಪನಿಗೆ ಲೈಂಗಿಕ ವ್ಯಕ್ತಿತ್ವದ ಕುರಿತು ಬೇರೇನೂ ಕಾಣಿಸುವುದಿಲ್ಲ”

ಎಂದು ಹೇಳಿದ ಬಗ್ಗೆ ಈ ಲೇಖನ ಚರ್ಚಿಸುತ್ತದೆ.

ಆದಿಕವಿ ಪಂಪನ “ಆದಿಪುರಾಣ” ಕಾವ್ಯದ ಮೂರನೇ ಆಶ್ವಾಸದಲ್ಲಿ ವಜ್ರದಂತ ರಾಜ ತನ್ನ ಮಗಳು ಶ್ರೀಮತಿ ಯಾವುದೋ ಸಂಕಟದಿಂದ ಅಂತಃಪುರದಲ್ಲಿ ಮೂರ್ಚಿತಳಾಗಿದ್ದನ್ನು ಸೇವಕಿಯರು ಬಂದು ವರದಿ ನೀಡಿದಾಗ ಅವನು ಮತ್ತು ರಾಣಿ ಲಕ್ಷ್ಮೀಮತಿ ಅವಳನ್ನು ನೋಡಲು ಅವಸರದಲ್ಲಿ ಬಂದು “ಯಾಕೆ ಆಯಿತು ನೋವು? ನಮ್ಮ ದೆಸೆಯಿಂದಲೋ ಅಥವಾ ಸಖಿಯರ ದೆಸೆಯಿಂದಲೋ ಅಥವಾ ಬಂಧುಜನಗಳಿಂದಲೋ ಅಥವಾ ಹೊರಜನಗಳಿಂದಲೋ ಇನ್ನೆಲ್ಲಿಂದ ಆಯಿತು, ಇದೇನಿದು ವಿಸ್ಮಯ ಹೇಳು ಹೇಳು” ಎಂದಾಗ ಅವಳು ಒಂದೇ ಒಂದು ಮಾತನಾಡದೇ ಸುಮ್ಮನಿರುತ್ತಾಳೆ. ಮತ್ತೆ ಪರಿಪರಿಯಾಗಿ ಕೇಳುತ್ತಾ ತಾಂಬೂಲವನ್ನೂ ಸೇವಿಸದೇ ಕಂದಿ ಕಳಾಹೀನಳಾಗಿರುವೆ, ನಿನ್ನ ಅಬ್ಬೆಗೂ ನನಗು ನೀನೇ ಜೀವ, ಹೇಳು ಹೇಳು ಎಂದಾಗಲೂ ಅವಳು ಮಾತಾಡದೆ ಅಳುತ್ತಿದುದನ್ನು ನೋಡಿ ಅಂತಃಪುರ ಪಂಡಿತೆ ಎನ್ನುವ ಸಖಿಯನ್ನು ಕರೆದು “ನೀನು ಈಕೆಯನ್ನು ಚೆನ್ನಾಗಿ ಬಲ್ಲೆ, ಅವಳ ಮನಸ್ಸನ್ನು ಕಾಡುತ್ತಿರುವ ಸಂಗತಿ ಯಾವುದು ಎಂದು ನಯವಾಗಿ ಕೇಳಿ ತಿಳಿದುಕೊಂಡು ಹೇಳು” ಎಂದು ಒಪ್ಪಿಸುತ್ತಾನೆ.

ಅದಾಗಿ ವಜ್ರದಂತನ ಶಸ್ತ್ರಾಗಾರದಲ್ಲಿ ಚಕ್ರ ಹುಟ್ಟಿ, ಅದಕ್ಕೆ ಪೂಜೆ ಮಾಡಿ ರೂಢಿಯಂತೆ ದಿಗ್ವಿಜಯಕ್ಕೆ ಹೊರಟುಹೋಗುತ್ತಾನೆ. ಇತ್ತ ಪಂಡಿತೆ ಶ್ರೀಮಾತೆಯನ್ನು ಉಪಾಯವಾಗಿ ಮಾತನಾಡಿಸಿದಾಗ ಅವಳು ತನ್ನ ಹಿಂದಿನ ಜನ್ಮವನ್ನು ಸ್ಮರಿಸಿಕೊಂಡು ತಾನು ಲಲಿತಾಂಗನನ್ನು ವರಿಸಿ ಮದುವೆಯಾದ ಸಂಗತಿ ಮತ್ತು ಅವನು ಮದುವೆಯಾದ ಆರೇ ತಿಂಗಳಲ್ಲಿ ಮರಣಹೊಂದಿದುದು ತಾನೂ ಸಹ ಸತ್ತು ನಂತರ ಈಗ ವಜ್ರದಂತ ಮತ್ತು ಮಹಾದೇವಿಯರಿಗೆ ಮಗಳಾಗಿ ಹುಟ್ಟಿದ ಸಂಗತಿಯನ್ನು ಹೇಳುತ್ತಾಳೆ.

ಅತ್ತ ದಿಗ್ವಿಜಯದಲ್ಲಿ ಗೆದ್ದು ಸಾರ್ವಭೌಮನಾದ ವಜ್ರದಂತ ಮುನಿಗಳ ದಯೆಯಿಂದ ಅವಧಿ ಜ್ಞಾನ ಉದಯವಾಗಿ   ತನ್ನ ಪೂರ್ವಜನ್ಮ ರಹಸ್ಯವನ್ನು ತಿಳಿದುಕೊಂಡಿರುತ್ತಾನೆ.  ರಾಜಧಾನಿಗೆ ಹಿಂದಿರುಗಿ ಮಗಳನ್ನು ಕರೆಸುತ್ತಾನೆ.  ಆಗ ಪಂಪ ಮಾಡಿದ ವರ್ಣನೆಯ ಬಗ್ಗೆಯೇ ಡಾ ಆಶಾದೇವಿ ಆಕ್ಷೇಪ ಎತ್ತಿರುವುದು. ಅದನ್ನು ವಿವರವಾಗಿ ನೋಡೋಣಾ.

ಶ್ರೀಮತಿ ಬಂದ ರೀತಿಯನ್ನು ಕವಿ ಹೀಗೆ ವರ್ಣಿಸುತ್ತಾನೆ –

ವನಿತಾ ರೂಪದ ಕಲ್ಪಲತೆಯೋ ಅಥವಾ ಹೆಣ್ಣಿನ ರೂಪದ ಅಬ್ಜಿನಿಯೋ, ಅಥವಾ ಲಲನಾ ಸ್ವರೂಪದ ತನುಶ್ರೀ ರೂಪವೋ ಬರುವಂತೆ ಮೆಲ್ಲಗೆ ಬಂದು ತಂದೆಯ ಕಾಲಿಗೆರಗಿ ನಿಲ್ಲುತ್ತಾಳೆ.

ಹಾಗೆ ಕಾಲಿಗೆರಗಿದ ಮಗಳನ್ನು “ಕಲ್ಯಾಣಭೋಗಭಾಗಿಯಾಗು” ಎಂದು ಹರಸುತ್ತಾನೆ ವಜ್ರದಂತ.

ನಂತರ “ತರ್ಕಯಿಸಿಕೊಂಡು” ಅಂದರೆ ತನ್ನೊಳಗೇ ತರ್ಕ ಮಾಡುತ್ತಾನೆ, ಏನೆಂದರೆ –

ಒದವಿದ ನೂಲ ತೊಂಗಲುಲಿಯಿಲ್ಲದೆ ಪೀನನಿತಂಬಮಾರಮಿ

ಲ್ಲದೆ ಕುಚಮಂಡಳಂ ಪಲವುಮಂದದ ಚಂದದ ಚಿನ್ನಪೂಗಳಿ

ಲ್ಲದೆ ಲುಳಿತಾಳಕಂ ಕ್ವಣಿತನೂಪುರಮಿಲ್ಲದೆ ಪಾದಪದ್ಮಮೊ

ಪ್ಪಿದಪುದು ನೋಡ ರೂಪಿನಿತು ಬೇಸರೊಳಂ ಸೊಗಯಿಪ್ಪುದೀಕೆಯಾ

ಎಂದು ಮನದೊಳೆ ಬಗೆದು ಮಗಳ ಮೊಗವಂ ಮುಗುಳ್ನಗೆವೆರಸು ನೋಡಿದಾಗಳ್

ಅಂದರೆ ಅವಳು ಒಳ್ಳೆಯ ವಸ್ತ್ರಗಳನ್ನು ತೊಟ್ಟಿಲ್ಲದೇ, ಜಘನ ಹಾರವಿಲ್ಲದೇ (ಬಾಡಿಲ್ಲದೆ), ಎದೆಯ ಮೇಲೆ ಚಂದದ ಚಿನ್ನದ ಹೂಗಳಿಲ್ಲದೇ , ಪಾದಗಳಲ್ಲಿ  ಲುಳಿ, ತಾಳಕ, ಕ್ವಣಿತ, ನೂಪುರ ಎನ್ನುವ ಒಡವೆಗಳಿಲ್ಲದೆ ಬೇಸರದಲ್ಲೂ ಎಷ್ಟು ಸುಂದರವಾಗಿದ್ದಾಳೆ ಎಂದುಕೊಳ್ಳುತ್ತಾನೆ.

ನಂತರ ಅವನು ಹೇಳುತ್ತಾನೆ.

ಮಗಳೇ ಮನಸ್ತವಂ ನಿನಗಿದೀಗಳೇ ಪಿಂಗುಗೆ ಕುಂಕುಮದ್ರವಂ

ನಗೆಮೊಗದೊಳ್ ಕನತ್ಕನಕಮೇಖಳೆ  ಪೀನನಿತಂಬದೊಳ್ ಲಯಂ

ನೆಗಳ್ದಿರೆ ನೂಪುರಂ ಪದಪಯೋರುಹದೊಳ್ ನೆಲೆಗೊಳ್ಗೆ ಕೂಡುವೈ

ಬಗೆಗೊಳೆ ನಾಳೆ ನಾಡಿದು ಮಹೋತ್ಸವದಿಂ ನಿಜಜೀವಿತೇಶನೊಳ್

ಅಂದರೆ ಮಗಳೇ, ನಿನ್ನ ಮನಸ್ಸಿನ ದುಃಖ/ಕ್ಲೇಶ ಈಗಲೇ ಹಿಂಗಲಿ, ನಿನ್ನ ನಗುವ ಮುಖದಲ್ಲಿ ಕುಂಕುಮ, ಸೊಂಟದಲ್ಲಿ ಚಿನ್ನದ ಮೇಖಲೆ (ವಡ್ಯಾಣ)  ರಾರಾಜಿಸಿ, ಪಾದಗಳಲ್ಲಿ ನೂಪುರ ಅಲಂಕರಿಸಿ, ನಾಳೆ ನಾಡಿದ್ದು ಮಹಾ ಉತ್ಸವದಲ್ಲಿ ನಿನ್ನ ನಿಜ ಪ್ರಾಣೇಶನನ್ನು ನೀನು ಕೂಡುವೆ.  ಹಾಗೆ ಹೇಳಿ ಎರಡು ದಿನಗಳಲ್ಲಿ ಅವಳ ಮದುವೆ ಮಾಡುತ್ತಾನೆ.

ಡಾ ಆಶಾದೇವಿಯವರ ಆಕ್ಷೇಪಣೆ ತಂದೆ ತನ್ನ ಮಗಳ ದೈಹಿಕ ಸ್ಥಿತಿಯನ್ನು ಗಮನಿಸಿರುವುದರ ರೀತಿಯ ಬಗ್ಗೆ ಇರಬೇಕು. ಇಲ್ಲಿ ವಜ್ರದಂತ ಮಗಳನ್ನು ನೋಡಿದ್ದರ ವರ್ಣನೆ ಕಾಮುಕತನದಿಂದ ಕೂಡಿದೆಯೇ ಎಂದು ಪರಿಶೀಲಿಸಿದರೆ ಕವಿಗೆ ಆ ಉದ್ದೇಶವಿರಲಿಲ್ಲ ಎನ್ನುವುದು ಮೇಲುನೋಟಕ್ಕೇ ಗೊತ್ತಾಗುತ್ತದೆ. ಅದಕ್ಕೇ  ಅವನು ಮೊದಲು “ಕಲ್ಯಾಣಭೋಗಭಾಗಿಯಾಗು” ಎಂದು ಹರಸುವುದು.  ಸಾಮಾನ್ಯವಾಗಿ ಆಶೀರ್ವದಿಸುವ ಹಾಗೆ   ಚಿರಂಜೀವಿಯಾಗು, ದೀರ್ಘ ಸುಮಂಗಲಿಯಾಗು ಇತ್ಯಾದಿ ಹೇಳದೆ “ಕಲ್ಯಾಣ ಭೋಗಭಾಗಿಯಾಗು” ಎಂದು ಆಶೀರ್ವದಿಸಿ ಅವಳು ತನ್ನ ಹಿಂದಿನ ಜನ್ಮದ ಪತಿ/ಪ್ರಿಯನನ್ನು ಬೇಗನೆ ಕೂಡಲಿ ಎಂದು ಆಶಿಸುತ್ತಾನೆ.  ಅದರ ಮುಂದುವರಿಕೆಯಾಗಿ ಬೆಳೆದ ಮಗಳ ಸೌಂದರ್ಯ ಅವಳು ಬೇಸರದಲ್ಲಿದ್ದರೂ ಹೊಳೆಯುತ್ತಿದೆಯಲ್ಲಾ ಎಂದು ಗಮನಿಸುತ್ತಾನೆ. ಏಕೆಂದರೆ ಕಥೆಯ ಹಿಂದಿನ ಮತ್ತು ಮುಂದಿನ ಭಾಗಗಳನ್ನು ನೋಡಿದರೆ ಅವನಿಗೆ ಮಗಳ ಮನಸ್ಥಿತಿ ಚೆನ್ನಾಗಿ ಗೊತ್ತಾಗಿದೆ. ಶ್ರೀಮತಿ ಗಂಡನನ್ನು ಕಳೆದುಕೊಂಡಿದ್ದು ಹಿಂದಿನ ಜನ್ಮದಲ್ಲಿ  ಅನ್ನುವುದನ್ನು ಹೇಳದೇ, ಇದನ್ನು ಸನ್ನಿವೇಶದಿಂದ ಬೇರ್ಪಡಿಸಿ ನೋಡಿದರೆ ಮಾತ್ರ ಲೈಂಗಿಕತೆಯ ನೋಟ ಸಾಧ್ಯವೇ ಹೊರತು ಒಟ್ಟಾರೆ ಕಾವ್ಯದ ಚೌಕಟ್ಟಿನಲ್ಲಿ ನೋಡಿದರೆ ಅದು ಸಾಧ್ಯವಿಲ್ಲ.

ವಜ್ರದಂತ ಮಗಳನ್ನು ಕೇವಲ ಲೈಂಗಿಕತೆಯ ದೃಷ್ಟಿಯಿಂದ ನೋಡಿದ್ದಾನೆ ಎಂದು ಪರಿಭಾವಿಸುವುದು ಅಂದಿನ ಕಾಲಧರ್ಮಕ್ಕೆ ಕೂಡಾ ವಿರುದ್ಧವಾದುದು. ಏಕೆಂದರೆ ಹೆಣ್ಣು ಸಂತೋಷವಾಗಿದ್ದಾಳೆ ಎಂದರೆ ಅಲಂಕೃತಳಾಗಿರುತ್ತಾಳೆ ಎನ್ನುವುದು ಮತ್ತು ಅವಳು ದುಃಖಿತಳು  ಅಥವಾ ಕೋಪೋದ್ರಿಕ್ತಳು ಎಂದಾಗ ಅಲಂಕಾರ ಒಡವೆಗಳನ್ನು ಕಿತ್ತೆಸೆದು ಕೂದಲು ಬಿರುಹುಯ್ದುಕೊಂಡು, ಒಮ್ಮೊಮ್ಮೆ ರಾಮಾಯಣದಲ್ಲಿ ಕೈಕೇಯಿ ಮಾಡಿದ ಹಾಗೆ ಕೋಪಗೃಹವನ್ನು ಹೋಗುವುದು ಅಂದಿನ ವಾಡಿಕೆ.  ಅದರ ತೆಳು ಶ್ಲೇಷವಾಗಿ ಈಗಲೂ ಕೂಡಾ ಹೆಂಗಸರು ಬೇಜಾರಿನಲ್ಲಿದ್ದರೆ ಅಲಂಕಾರ ಮಾಡಿಕೊಳ್ಳದೆ ಹೇಗೇಗೋ ಇರುವುದು ನಿಜ.  ಮಗಳನ್ನು ನೋಡಿ ವಜ್ರದಂತ ಅವಳು ದುಃಖ ಕಾರಣ ಅಲಂಕಾರ ಮಾಡಿಕೊಂಡಿಲ್ಲ ಎನ್ನುವುದನ್ನು ಗಮನಿಸುತ್ತಲೇ, ಓದುಗರಿಗೂ ಕವಿ ಅದನ್ನು ಮನದಟ್ಟು ಮಾಡುತ್ತಲೇ, ಆದರೂ ತನ್ನ ಮಗಳು ನಿರಾಭರಣ ಸುಂದರಿ ಎನ್ನುವುದನ್ನು ಕೂಡಾ ಒತ್ತಿ ಹೇಳುತ್ತಲೇ, ತಕ್ಷಣ ಪ್ರಸ್ತುತ ತನ್ನ ಮುಂದಿರುವ ಸಮಸ್ಯೆಯತ್ತ ಗಮನ ಹರಿಸಿ, ಅಂದರೆ ತನ್ನಲ್ಲಿ “ತರ್ಕಯಿಸಿಕೊಂಡು” ಅವಳನ್ನು ಸಮಾಧಾನ ಪಡಿಸುತ್ತಾ “ಮೊದಲು ಹೋಗಿ ಅಲಂಕಾರ ಮಾಡಿಕೊ ನಾಳೆ ನಾಡಿದ್ದು ನೀನು ನಿನ್ನ ಜೀವಿತೇಶನನ್ನು ಕೂಡುವೆ” ಎಂದು ಹೇಳುವಲ್ಲಿ ಒಬ್ಬಳು ಬೆಳೆದ ಮಗಳ ಬಗ್ಗೆ (ಅವಳ ಲೈಂಗಿಕತೆಯನ್ನೂ ಒಳಗೊಂಡು ಅದರ ಬಗ್ಗೆಯೂ ಕೂಡಾ) ಕಕ್ಕುಲತೆ ಇರುವ ತಂದೆಯಾಗಿ ವಜ್ರದಂತ ಕಂಡುಬರುತ್ತಾನೆಯೇ ಹೊರತು ಅವಳನ್ನು ಲೈಂಗಿಕ ಗೊಂಬೆಯಾಗಿ ನೋಡಿದ್ದಾನೆ ಅನ್ನಿಸುವುದಿಲ್ಲ.

ಈ ಪ್ರಕರಣವನ್ನು ಒಟ್ಟಾರೆ ಕ್ಯಾನ್ವಾಸ್ಸಿನಲ್ಲಿ ನೋಡಿದರೆ ಇದು ಭವಾವಳಿಗಳ ಅತಿ ಮಾನುಷ ಕಥೆ.  ಪಾತ್ರಗಳಿಗೆ ಹಿಂದಿನ ಮತ್ತು ಮುಂದಿನ ಜನ್ಮಗಳ ನೆನಪಾಗುವುದು, ಹಿಂದಿನ ಜನ್ಮದ ಪ್ರಿಯಕರನಿಗಾಗಿ ಹಂಬಲಿಸುವುದು ಇತ್ಯಾದಿ ಮಾಯಾಲೋಕವಿದೆ ಇಲ್ಲಿ.  ನಿರ್ದಿಷ್ಟವಾಗಿ ಶ್ರೀಮತಿ ಮತ್ತು ಲಲಿತಾಂಗ ಹಾಗು ವಜ್ರದಂತನ ಸಂಬಂಧದಲ್ಲಿ ಎಲ್ಲರೂ ಪೂರ್ವಜನ್ಮದ ಸಂಗತಿಗಳಿಗೆ ಸ್ಪಂದಿಸುತ್ತಾ ಇದ್ದಾರೆ. ಏಕೆಂದರೆ ಈ ಕಥೆ ಇಷ್ಟಕ್ಕೆ ಮುಗಿಯುವುದಿಲ್ಲ. ಮುಂದೆ ಶ್ರೀಮತಿಯ ಪಾತ್ರ ಪರಿಪೂರ್ಣತೆಯ ಕಡೆಗೆ ಸಾಗುತ್ತ, “ಸಾಕಾರ” ಎಂದು ಕರೆಯಬಹುದಾದ ಪಾತ್ರವಾಗುತ್ತದೆ. ಶ್ರೀಮತಿಯನ್ನು ಪಂಪ ವರ್ಣಿಸುವುದೇ “ಪರಮಪಂಡಿತೆ” ಎಂದು.  ಆ ಕಥೆಯ ಚೌಕಟ್ಟಿನೊಳಗೇ ಅವಳ ಪಾತ್ರ ಔಚಿತ್ಯಪೂರ್ಣವಾಗಿಯೇ ಇದೆ. ಇದೊಂದು ಸಂದರ್ಭದಲ್ಲಿ ಅವನು ಮಗಳ ದೈಹಿಕ ಸ್ಥಿತಿಯ ಬಗ್ಗೆ ಗಮನ ಕೊಡುತ್ತಾನೆಯೇ ಹೊರತು ಬೇರೆಲ್ಲೂ ಇಲ್ಲ. ಒಂದು ವೇಳೆ ವಜ್ರದಂತ ಮಗಳ ದೇಹಸಿರಿಯನ್ನು ಲೈಂಗಿಕ ದೃಷ್ಟಿಯಿಂದ ನೋಡಿದ ಎನ್ನುವುದನ್ನೇ ಪಂಪ ವರ್ಣಿಸಲು ಉದ್ದೇಶಿಸುತ್ತಿದ್ದರೆ ಅದನ್ನೇ ಸುದೀರ್ಘವಾಗಿ ಲಂಬಿಸುತ್ತಿದ್ದ ಹೊರತು ಒಂದೇ ಒಂದು  “ಸ್ಟ್ರೆ” ವೃತ್ತದಲ್ಲಿ ಮುಗಿಸುತ್ತಿರಲಿಲ್ಲ.

ಒಂದು ಕೃತಿಯನ್ನು ಬೇರೆ ಬೇರೆ ಆಯಾಮಗಳ ಓದುವಿಕೆಗೆ ಒಡ್ಡಬೇಕು ಅನ್ನುವುದು ನಿರ್ವಿವಾದ. ಹಳೆಯ ಗ್ರಂಥಗಳನ್ನು ಸ್ತ್ರೀವಾದಿ ದೃಷ್ಟಿಯಿಂದ ಓದುವುದು ಈಗಾಗಲೇ ನಡೆಯುತ್ತಿದೆ.  ಆದರೆ ಸ್ತ್ರೀವಾದಿ ನೆಲೆಯ ವಿಭಿನ್ನ ಆಯಾಮಗಳನ್ನೂ ಸಹ ಮರೆಯುವಂತಿಲ್ಲ. ಸ್ತ್ರೀವಾದ ಎನ್ನುವುದು ಹೆಣ್ತನದ ನಿರಾಕರಣೆಯಲ್ಲ ಬದಲಿಗೆ ಅದರ ಸ್ವೀಕರಣೆ ಮತ್ತು ಅದನ್ನು ತನ್ನ ಶಕ್ತಿಯನ್ನಾಗಿ ಬಳಸಿಕೊಳ್ಳುವ ಬುದ್ಧಿವಂತಿಕೆ.  ಭೋಗ, ವೈರಾಗ್ಯ, ವೈಚಾರಿಕತೆ, ಎಲ್ಲವೂ ಅದರ ಚೌಕಟ್ಟಿನೊಳಗೆ ಬರುತ್ತದೆ.  ಪಂಪ ಅಂಬೆಯ ಪಾತ್ರವನ್ನು ಚಿತ್ರಿಸುವಾಗ ಅವಳ ಆತ್ಮಸ್ಥೈರ್ಯ, ಧೈರ್ಯ, ವೀರಾವೇಶ, ವಿವೇಚನೆ, ಸತತ ಪ್ರಯತ್ನ ಇತ್ಯಾದಿ ಗುಣಗಳ ಕಡೆಗೆ ಗಮನ ಹರಿಸದ್ದಾನೆ ಹೊರತು ಅವಳ  ಹೆಣ್ತನದ ಕಡೆಗಲ್ಲ.  ಅಲ್ಲಿ ಅಂಬೆಯ “ಭಾವಲೋಕ ಮತ್ತು ವ್ಯಕ್ತಿತ್ವ ಚಿತ್ರಣವನ್ನು” ಅವನು ಸುಂದರ, ಸಮರ್ಥ ರೀತಿಯಲ್ಲಿ ವರ್ಣಿಸುವುದರಲ್ಲಿ ಯಾವುದೇ ಲೋಪ ಮಾಡಿಲ್ಲ. ಆದರೆ ನಿಜವಾದ ಸ್ತ್ರೀವಾದಿ ನೆಲೆಯಲ್ಲಿ ಯಾವುದೇ ಹೆಣ್ಣಿನ ಈ ಎಲ್ಲ ಗುಣಗಳನ್ನು ಪರಿಗಣಿಸುವಾಗ ಅವಳ ಹೆಣ್ತನವನ್ನು ಕಡೆಗಣಿಸಿದಲ್ಲಿ ಅದು ದೊಡ್ಡ ಲೋಪವೆಂದೇ ಪರಿಗಣಿಸಬೇಕು.  ಹೆಣ್ತನ ಅಂದರೆ ಇಲ್ಲಿ ಪ್ರಧಾನವಾಗಿ ದೇಹ.

ಪಂಪ ಹೆಣ್ಣನ್ನು ಕೇವಲ ದೇಹಸಿರಿ ಮಾತ್ರ ಅಥವಾ ವೈರಾಗ್ಯಕ್ಕೆ  ಪರಿಕರ ಮಾತ್ರ ಎಂದು ನೋಡುತ್ತಾನೆ ಎಂದು ತೀರ್ಮಾನಿಸುವುದು ಕಷ್ಟ. ಏಕೆಂದರೆ ಅವನೇ ವರ್ಣಿಸುವ  ಹಾಗೆ ಆದಿ ತೀರ್ಥಂಕರ ವೃಷಭದೇವನಿಗೆ ಇಬ್ಬರು ಹೆಣ್ಣು ಮಕ್ಕಳು. ಅವನು ವಿದ್ಯೆಯನ್ನು ಗಂಡುಮಕ್ಕಳಿಗೆ ಕೊಡದೆ ತನ್ನ ಮಗಳು ಬ್ರಹ್ಮಿ ಗೆ ಕೊಡುತ್ತಾನೆ. ಅದಕ್ಕೇ ಬ್ರಾಹ್ಮಿ ಲಿಪಿ ಎನ್ನುವ ಹೆಸರು ಬಂದಿದ್ದು. ಅವನು ಗಣಿತ ವಿದ್ಯೆಯನ್ನು ತನ್ನ ಇನ್ನೊಬ್ಬಳು ಮಗಳು ಸುಂದರಿಗೆ ಕೊಡುತ್ತಾನೆ. ಗಂಡುಮಕ್ಕಳಿಗಲ್ಲ.  ಇದನ್ನು ಹೇಗೆ ಪರಿಗಣಿಸಬೇಕು?

ವಿದ್ವಾಂಸರಾದ  ಡಾ ಹಂಪ ನಾಗರಾಜಯ್ಯ ಅವರು ಹೇಳುವ ಹಾಗೆ ” ಕವಿ ಸೂಚಿಸದೆ ಇರುವ ವ್ಯಾಖ್ಯಾನ, ಆರೋಪ ಸಮರ್ಥನೀಯವಲ್ಲ ಮತ್ತು ಅದು ಕವಿಗೆ ಮಾಡುವ ಅಪಚಾರ. ರನ್ನ ಅತ್ತಿಮಬ್ಬೆಯ ವ್ಯಕ್ತಿತ್ವವನ್ನು ಕಟ್ಟಿಕೊಡುವಾಗ ಎಲ್ಲಿಯೂ ಅವಳ ದೇಹವನ್ನು ವರ್ಣಿಸುವುದಿಲ್ಲ. ಅವಳ ವಿಸ್ತಾರ ಕಾರ್ಯಗಳು, ಜೀವಪರ ಕಾಳಜಿಗಳು, ಆಧ್ಯಾತ್ಮ ಚಿಂತನೆ, ಸಮಾಜಮುಖಿ  ಕಾಳಜಿಗಳು ಇತ್ಯಾದಿಗಳ ಬಗ್ಗೆ ವರ್ಣಿಸುತ್ತಾನೆ.  ಇದನ್ನು ಕೇವಲ ವೈರಾಗ್ಯಕ್ಕೆ ಪರಿಕರ ಎಂದು ಮಾತ್ರ ಪರಿಗಣಿಸಿಲ್ಲ ಅವನು.”

ಯಾವುದೇ ಕ್ಲಾಸಿಕ್ ಕಾವ್ಯ ಸಾರ್ವಕಾಲಿಕ ಮೌಲ್ಯಗಳನ್ನು ಪ್ರಸ್ತುತಪಡಿಸಬೇಕು ಎನ್ನುವ ವಾದವಿದೆ.  ಅದನ್ನು ಒಪ್ಪುತ್ತಲೇ, ಕೆಲವು ಕಾಲಧರ್ಮಕ್ಕೆ ಸಂಬಂಧಪಟ್ಟ ಸಂಗತಿಗಳನ್ನು ಅದರ  ಚಾರಿತ್ರಿಕ ನೆಲೆಯಲ್ಲೇ ಪರಿಗಣಿಸಬೇಕಾಗುತ್ತದೆ.  ಉದಾಹರಣೆಗೆ ಹತ್ತನೇ ಶತಮಾನದ ಕಾವ್ಯದಲ್ಲಿ ರಾಜನೊಬ್ಬ ತನ್ನ ರಾಣಿಯನ್ನು ಎಷ್ಟು ದಿನಗಳಿಗೊಮ್ಮೆ ಕೂಡುತ್ತಿದ್ದ ಅನ್ನುವ ಸಂಗತಿ. ಭರತ ಚಕ್ರವರ್ತಿಯ ಭೋಗ ವರ್ಣನೆಯಲ್ಲಿ ಸಾವಿರಾರು ಹೆಂಡತಿಯರು ಅಲಂಕರಿಸಿಕೊಂಡು ಕಾಯುತ್ತಿದ್ದರು, “ಅಂತಃಪುರ ಸುಂದರವಾದ ಜೈಲು” ಎಂದು ಪರಿಗಣಿಸಿ ಹಳಗನ್ನಡ ಕಾವ್ಯ ಕೇವಲ ಹೆಣ್ಣನ್ನು ಭೋಗವಸ್ತುವಾಗಿ ನೋಡಿದೆ ಅದರಲ್ಲಿ ಅವರ ವ್ಯಕ್ತಿತ್ವ ವರ್ಣನೆ ಇಲ್ಲ ಎಂದು ತೀರ್ಮಾನಿಸಿದರೆ ಗ್ರಂಥವನ್ನು ಓದುವ ಪರಿಕ್ರಮದಲ್ಲಿ ತಪ್ಪಿದೆ ಎಂದರ್ಥ.  ಅತಿ ಕಾಮಾತುರತೆ ಮತ್ತು ಅತಿ ವೈರಾಗ್ಯ ನಿರ್ಲಿಪ್ತತೆ ಇವುಗಳ ನಡುವಿನ ವೈರುಧ್ಯವನ್ನು ಪರಿಣಾಮಕಾರಿಯಾಗಿ ಚಿತ್ರಿಸಲು ಕವಿ ಈ ಎಲ್ಲ “ಪರಿಕರ”ಗಳನ್ನೂ ಬಳಸುತ್ತಾನೆ.  ಅಲ್ಲಿ ಅತಿಶಯೋಕ್ತಿಯನ್ನು ಬಳಸಿಕೊಂಡಿದ್ದಾನೆ. ಇಸ್ಲಾಮಿನಲ್ಲಿ ಸತ್ತ ಮೇಲೆ ಜನ್ನತ್ ನಲ್ಲಿ ಲಕ್ಷ ಸುಂದರಿಯರು ಸಿಗುತ್ತಾರೆ ಅನ್ನುವ ಪರಿಕಲ್ಪನೆಯ ಥರ.  ವಾಸ್ತವವಾಗಿ  ಭೋಗದ ವರ್ಣನೆಯಲ್ಲಿ ಅತೀ ರಂಜಕತೆ ಕವಿಗಿರುವ ಸ್ವಾತಂತ್ರ್ಯ.  ಕೃಷ್ಣನಿಗೆ ಹದಿನಾರು ಸಾವಿರ ಹೆಂಡತಿಯರು ಇದ್ದರು ಎನ್ನುವುದು ಉತ್ಪ್ರೇಕ್ಷೆ. ಅದನ್ನು ಇವತ್ತಿನ ಸ್ತ್ರೀವಾದಿ ನೆಲೆಯಲ್ಲಿ ವಿಮರ್ಶಿಸುವಾಗ ಎಲ್ಲವನ್ನೂ ಅಕ್ಷರಶಃ ಎಂದು ವಾದಿಸಲು ಹೋದರೆ ಸಾಹಿತ್ಯದ ಮಾಂತ್ರಿಕತೆಯನ್ನೇ ಪ್ರಶ್ನಿಸಿದಂತೆ. ಇವತ್ತಿನ ಸೂಪರ್ ಸ್ಟಾರ್ ಗಳಿಗೆ ಸಾವಿರಾರು ಹೆಣ್ಣು ಫ್ಯಾನ್ ಗಳಿರುವಂತೆ ಅಂದುಕೊಂಡು ಮುಂದೆ ಸಾಗಬೇಕು.   ಪು ತಿ ನ ಅವರು ಕೃಷ್ಣನ ಕೊರಳಿನ ಕರೆಗೆ ಗೋಪಿಕೆಯರು ಹೇಗೆ ಮನೆಗೆಲಸ, ಪತಿ, ಹಸುಗೂಸುಗಳನ್ನೂ ಬಿಟ್ಟು ಧಾವಿಸಿದರು ಅನ್ನುವುದನ್ನು ಭಕ್ತಿಯ ನೆಲೆಯಲ್ಲಿ ಹೇಳಿದರೆ ಹೊರತು ಲೈಂಗಿಕತೆಯ ನೆಲೆಯಲ್ಲಿ ಅಲ್ಲ. ಅದನ್ನು ನಾವು ಸ್ತ್ರೀವಾದಿ ನೆಲೆಯಲ್ಲಿ ಮರು ಓದಿಗೆ ಅಳವಡಿಸಿ ಲೈಂಗಿಕತೆಯ ದೃಷ್ಟಿಯಲ್ಲಿ ಪ್ರತಿಪಾದಿಸಿ ಅವರು ಸ್ವೇಚ್ಛೆಯನ್ನು ಹೊಂದಿದ್ದರು ಎಂದು ಮೆಚ್ಚಿಕೊಂಡರೆ ಅದನ್ನು ಹೆಣ್ಣಿನ ಸಾಕಾರ ವ್ಯಕ್ತಿತ್ವ ಎಂದು ಭಾವಿಸಿದಂತೆಯೋ ಅಥವಾ ಅಲ್ಲಿ ಬೌದ್ಧಿಕತೆಯನ್ನು ಪರಿಗಣಿಸದ ಕಾರಣ ಹೆಣ್ಣನ್ನು ಭೋಗ ಮತ್ತು ವೈರಾಗ್ಯದ ಪರಿಕರ ಎಂದು ಭಾವಿಸಬೇಕೋ?  ಲೈಂಗಿಕತೆ ಹೆಣ್ತನದ ಅವಿಭಾಜ್ಯ ಅಂಗವಾದುದರಿಂದ ಅದರ ನಿರಾಕರಣೆಯಿಂದ ಹೆಣ್ಣನ್ನು “ಪರಿಪೂರ್ಣವಾಗಿ” ಚಿತ್ರಿಸಲು ಹೊರಟರೆ ತೊಡಕಾಗುತ್ತದೆ.

ಎಸ್ ವಿ ರಂಗಣ್ಣನವರ ಅಭಿನಂದನಾ ಗ್ರಂಥ “ಬಾಗಿನ” ದಲ್ಲಿ ಕುವೆಂಪು ಅವರು ಬರೆದ  “ಯಶೋಧರ ಚರಿತೆಯಲ್ಲಿ ಕಾಮವಿಕಾರ ನಿರೂಪಣೆಯ ಉದ್ದೇಶ” ಎನ್ನುವ ಲೇಖನದಲ್ಲಿ ಪೀಠಿಕೆಯಲ್ಲೇ ಒಂದು ವಿಷಯವನ್ನು ಸ್ಪಷ್ಠಪಡಿಸುತ್ತಾರೆ : “ಭಾರತೀಯ ಕಾವ್ಯ ಕಲೆಗಾಗಿ ಕಲೆ, ರಸಕ್ಕಾಗಿ ರಸ ಎನ್ನುವ ಮಾತನ್ನು ಹೇಳಿಕೊಂಡಿಲ್ಲ. ಕಲೆ ಬದುಕಿನ ಒಂದು ಅಂಗ. ಬದುಕು ಕಲೆಗಿಂತ ದೊಡ್ಡದು, ಬದುಕು ಸಾಧಿಸಬೇಕಾದ ಪರಮ ಗುರಿಯೊಂದಿದೆ, ಆ ಗುರಿಯನ್ನು ಸಾಧಿಸಲು ಕಲೆ ಒಂದು ಮಾರ್ಗ, ವಿಶಾಲವಾದ ಜನಪ್ರಿಯ ಮಾರ್ಗ…. ಕೃತಿ ರಸಾನ್ವಿತವಾಗಿರಬೇಕೆನ್ನುವುದನ್ನು ಒಪ್ಪಿಕೊಂಡು ಕೃತಿಯ ಪರಮ ಪ್ರಯೋಜನ ಧರ್ಮಾರ್ಥ ಕಾಮ ಮೋಕ್ಷಗಳಾದ ಪುರುಷಾರ್ಥಗಳು ಮತ್ತು ಪರಮ ಪುರುಷಾರ್ಥ ಎಂದು ಹೇಳುತ್ತಾರೆ. ಕಾವ್ಯ ಪ್ರಯೋಜನ ಆಧ್ಯಾತ್ಮಿಕವಾದುದು ಮೋಕ್ಷದಾಯಕವಾದುದು ಎನ್ನುವ ಉದ್ದೇಶದಲ್ಲಿಯೇ ಅದು ರಸಾತ್ಮಕವಾದುದೆಂಬುದರ ಸೂಚನೆಯು ಇದೆ” ಎನ್ನುತ್ತಾರೆ. ಪಂಪನ ಉದ್ದೇಶ ಇದಕ್ಕಿಂತ ಭಿನ್ನವಾದುದೇನೂ ಅಲ್ಲ.  ಸಹಜವಾಗಿ ಪಂಪನ ಕಾವ್ಯ, ಜೊತೆಗೆ ಆ ಕಾಲದ ಹಳಗನ್ನಡದ ಎಲ್ಲಾ ಕಾವ್ಯ, ಈ ಉದ್ದೇಶದಿಂದಲೇ ರಚನೆಯಾದವು.  ನಾವು ಇವತ್ತಿನ ಕಾಲದ ಮರುಓದಿನಲ್ಲಿ  ಪುರುಷಾರ್ಥಗಳನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸಿದರೆ ಯಾವುದನ್ನು ಬದಲಿಸಬಹುದು?

ಇನ್ನೊಂದು ಮಾತು. ಒಂದು ಕಾಲಕ್ಕೆ ಹೆಣ್ಣು ಎಂದರೆ ಅವಳ ದೇಹ  – ವುಮನ್ ಈಸ್  ಹರ್ ಬಾಡಿ – ಎನ್ನುವ ವ್ಯಾಖ್ಯಾನವನ್ನು ಮೀರುವ ದಿಕ್ಕಿನಲ್ಲಿ ತೀವ್ರ ಸ್ತ್ರೀವಾದಿ ಹೋರಾಟ ನಡೆಯಿತು. ಹೆಣ್ಣನ್ನು ಅವಳ ದೇಹದಿಂದ ಹೊರತುಪಡಿಸಿ ನೋಡಲಾಗುವುದಿಲ್ಲ. ಆದರೆ ಹೆಣ್ಣನ್ನು ಅವಳ ಲೈಂಗಿಕತೆಗೆ  ಮಾತ್ರ ಮೀಸಲಾಗಿಸುವುದನ್ನು ಘೋರವಾಗಿ  ಖಂಡಿಸಲಾಯಿತು. ಈ ನಿರಾಕರಣೆ ಅತಿರೇಕಕ್ಕೂ ಹೋಯಿತು. ನಂತರ ಎರಡನೇ ಹಂತದ ಹೋರಾಟದಲ್ಲಿ ಹೆಣ್ಣು ಅವಳ ದೇಹ, ಸರಿ, ಆದರೆ ಹೆಣ್ಣು ತನ್ನ ದೇಹದ ಮೇಲೆ ಸಂಪೂರ್ಣ ಹಕ್ಕು ಪಡೆದಿದ್ದಾಳೆ /ಪಡೆಯಬೇಕು ಎಂದು ಪ್ರತಿಪಾದಿಸಲಾಯಿತು.  ಮೂರನೇ ಹಂತದಲ್ಲಿ ಹೆಣ್ಣು ತನ್ನ ದೇಹ ಮತ್ತು ಲೈಂಗಿಕತೆಯನ್ನು ಒಪ್ಪಿಕೊಂಡು “ನನ್ನ ದೇಹ, ನನ್ನಿಷ್ಟ” ಎನ್ನುವ ವಾದ ಮುಂದಕ್ಕೆ ಬಂದಿತು.  ಸ್ತ್ರೀವಾದವು ಹೆಣ್ಣು ತನ್ನ ದೇಹವನ್ನು ವಿಜೃಂಭಿಸುವುದನ್ನು – ಸೆಲಿಬ್ರೇಟ್ ಮಾಡುವುದನ್ನು – ಪ್ರತಿಪಾದಿಸುತ್ತದೆ. ಹಾಗಾಗಿ ಅವಳ ಲೈಂಗಿಕತೆ, ದೇಹಸಿರಿ, ಬೌದ್ಧಿಕತೆ, ನೈತಿಕತೆ ಎಲ್ಲವನ್ನೂ ಪ್ಯಾಕೇಜಿನಂತೆ ಪರಿಗಣಿಸಲೇಬೇಕಾದ ಕಾಲ ಬಂದಿದೆ. ಸೂಕ್ಷ್ಮವಾಗಿ ನೋಡಿದರೆ ಹಳಗನ್ನಡ ಸಾಹಿತ್ಯದ ವಿಶಾಲತೆಯಲ್ಲಿ ಎಲ್ಲದಕ್ಕೂ ದೃಷ್ಟಾಂತ ಸಿಗುತ್ತದೆ ಅನ್ನುವುದು ಸತ್ಯ.  ಹೆಣ್ಣಿನ ಸಕಲ ಅಸ್ತಿತ್ವವನ್ನು ಒಂದೇ ಪಾತ್ರದಲ್ಲಿ ತುರುಕುವುದು ಯಾವ ಕವಿಗೂ ಅಸಾಧ್ಯ ಮತ್ತು ಅದು ಸಾಧುವೂ  ಅಲ್ಲ.  ಅಗತ್ಯವಾದಂತೆ ಅಗತ್ಯವಾದಷ್ಟು ಹಲವು ಮಜಲುಗಳಲ್ಲಿ  ಹೆಣ್ಣಿನ ಅಸ್ತಿತ್ವದ ಅನಾವರಣ ಆಗುವುದು ಯಾವುದೇ ಕಾಲದ ಸಾಹಿತ್ಯದ ಮುಖ್ಯ ಲಕ್ಷಣ.  ಹಾಗಾಗಿ ವಜ್ರದಂತ ತನ್ನ ಮಗಳು ಶ್ರೀಮತಿಯನ್ನು ಆ ಸಂದರ್ಭದಲ್ಲಿ ಹಾಗೆ ನೋಡಿದ್ದು ಅವಳ ಹೆಣ್ತನದ ಸಹಜ ಅಂಗೀಕಾರವೇ ಹೊರತು ಅವಳನ್ನು  ಲೈಂಗಿಕ ವ್ಯಕ್ತಿತ್ವದ ಮಿತಿಗೊಳಪಡಿಸುವುದರ ಸೂಚನೆ ಅಲ್ಲ, ಹಾಗೆಯೇ ವಿಕೃತ ಕಾಮದಿಂದಲೂ ಅಲ್ಲ.

ಹಳಗನ್ನಡ ಕಾವ್ಯಗಳು ನಿಜವಾಗಿ ಅಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿವೆಯಾ ಎನ್ನುವುದನ್ನು ಪ್ರಶ್ನಿಸಿಕೊಂಡು ಉತ್ತರ ಹುಡುಕಲು ಹೋದರೆ ನಮನಮಗೆ ಬೇಕಾದ ಉತ್ತರ ಸಿಗುತ್ತವೆ.  ಟೀಕೆಗೂ ಪ್ರಶಂಸೆಗೂ ಸಮಾನ ಅವಕಾಶಗಳು ಸಿಗುತ್ತವೆ.  ಹಾಗೆಯೇ ಹಳಹನ್ನಡದ ಕಾವ್ಯಗಳಲ್ಲಿ ಸಿಗುವ ಅನೇಕ  ಸ್ತ್ರೀ ಪಾತ್ರಗಳು – ಮಹಾಶ್ವೇತೆ, ಕಾದಂಬರಿ, ಪತ್ರಲೇಖೆ – ಉದಾತ್ತತೆಯನ್ನು ತೋರುವಷ್ಟೇ, ಕಥಾಸರಿತ್ಸಾಗರದಲ್ಲಿ, ವಡ್ಡಾರಾಧನೆಯಲ್ಲಿ ಸಿಗುವ ಸ್ತ್ರೀ ಪಾತ್ರಗಳು ” ಹೆಣ್ಣಿನ ಸೈಕಿಯ” ಸಕಲ ಆಯಾಮಗಳನ್ನು ಹೊಂದಿರುವ ನೂರಾರು ಉದಾಹರಣೆಗಳಿವೆ.  ಹಾಗೆ ನೋಡಿದರೆ ಭವಭೂತಿಯ “ಮಾಲತಿ ಮಾಧವ” ಕಥೆಗೂ ಇವತ್ತಿನ ಬಾಲಿವುಡ್ ಸಿನಿಮಾ ಕಥೆಗೂ ಯಾವುದೇ ಅಂತರವಿಲ್ಲ!  ಗಂಡು ಹೆಣ್ಣಿನ ಸಂಬಂಧದಲ್ಲಿ ಸಮಸ್ಯೆಗಳು ಬೇರೆಯಾಗಿವೆ ಆದರೆ ಸಂಬಂಧದ ಜಟಿಲತೆಗಳು ತಿಳಿಯಾಗಿಲ್ಲ. ಮನುಷ್ಯ ಸ್ವಭಾವದಲ್ಲಿ ನಾವು ಇಂಚಿರಲಿ ಸೂಕ್ಷ್ಮ ಮಿಲಿಮೀಟರಷ್ಟು ಸಹ ಬದಲಾಗಿಲ್ಲ ಎನ್ನುವುದು ಕಟು ಸತ್ಯ.  ಹಾಗಾಗಿ ಸಾವಿರ ವರ್ಷಗಳ ಹಿಂದಿನ ಹಳಗನ್ನಡ ಕಾವ್ಯದಲ್ಲಿ ನಮಗೆ ಕಾಣಸಿಗುವ ಹೆಣ್ಣಿನ ಚಿತ್ರಣದಲ್ಲಿ ಕಾಲಧರ್ಮವನ್ನು ಪ್ರತಿನಿಧಿಸುತ್ತಲೇ  ಸೂಕ್ಷ್ಮಗಳಲ್ಲಿ ಅವಳ ಭಾವಲೋಕವನ್ನೂ ಹಿಡಿದಿಡುತ್ತದೆ ಎನ್ನುವುದನ್ನು ಕಂಡುಕೊಳ್ಳಬೇಕು.  ಸ್ತ್ರೀವಾದಿ ನೆಲೆಯ ಮರುಓದಿನಲ್ಲಿ ಹಳಗನ್ನಡ ಕಾವ್ಯ ಮಂಕಾಗುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಲು ಮನಸ್ಸು ಹಿಂಜರಿಯುತ್ತದೆ.

‍ಲೇಖಕರು avadhi

29 June, 2018

11 Comments

  1. Girijashastry

    ಇಲ್ಲಿ ಪೀನನಿತಂಬ ಎರಡು ಸಲ ಬಂದಿದೆ ಗಮನಿಸಿದಿರಾ? ಪೀನ ಎನ್ನುವ ವಿಶೇಷಣವನ್ನು ಬಳಸುತ್ತಾನೆ. ಒಬ್ಬ ತಂದೆಯಾಗಿ ಮಗಳನ್ನು ಹೀಗೆ ನೋಡುತ್ತಾನೆ ಎನ್ನುವುದಕ್ಕಿಂತಲೂ ಕಾವ್ಯ ವನ್ನು ರಂಜನೀಯ ಮಾಡಬೇಕು ಎನ್ನುವ ದೃಷ್ಟಿ ಯೇ ಮೇಲುಗೈಯಾಗುತ್ತದೆ. ಇಲ್ಲಿ ಒಬ್ಬ ತಂದೆ ಮಾತನಾಡುತ್ತಿಲ್ಲ. ಒಬ್ಬ ಪುರುಷ ಮಾತನಾಡುತ್ತಿದ್ದಾನೆ ಎಂದೇ ಎನಿಸುತ್ತದೆ. ಇದು ಆ ಕಾಲದ ಸತ್ಯವೂ ಹೌದು ಈ ಕಾಲದ ಸತ್ಯವೂ ಹೌದು ಎಂದು ನನಗೆ ಅನ್ನಿಸುತ್ತದೆ. ಹೆಣ್ಣಿನ ಭಾವಕೋಶವನ್ನು ಪ್ರಾಚೀನ ಕವಿಗಳು ಹಿಡಿದಿರಬಹುದು ಆದರೆ ಅವಳನ್ನು ಭೋಗಕ್ಕೆ ಬಳಸಿರುವುದೇ ಹೆಚ್ಚು. ಸಾಮಾಜಿಕ ಕಾರಣಗಳನ್ನು ಕೊಟ್ಟಾಕ್ಷಣ ವಸ್ತುಸ್ಥಿತಿ ಯೇನೂ ಬದಲಾಗುವುದಿಲ್ಲವಲ್ಲ. ಹೆಣ್ಣಿಗೆ ಗಂಡು ಗಂಡಿಗೆ ಹೆಣ್ಣು ಬೇಕು ಎನ್ನುವುದು ನೀರು ಬೇಕು ಎನ್ನುವ ಆಸರದಂತಹ ಒಂದು ಆಸರ ಎಂದು ಮಾಸ್ತಿಯವರು ಒಂದು ಕತೆಯಲ್ಲಿ ಹೇಳುತ್ತಾರೆ. ಹಿಂದೆ ಪುರುಷರೇ ಹೆಚ್ಚಾಗಿ ಕಾವ್ಯಗಳನ್ನು ರಚಿಸಿದ್ದರಿಂದ ಹೀಗೆ ಆಗುವುದು ಎದ್ದುಕಾಣುತ್ತದೆ ಅಲ್ಲವೇ?
    ಯಾರಾದರೂ ಹೆಣ್ಣೊಬ್ಬಳ ನಿತಂಬ ಮೊಲೆಗಳನ್ನು ಸಾರ್ವಜನಿಕವಾಗಿ ಹೊಗಳಿದಾಗ ಅವಳಿಗೆ ಸಂತೋಷವಾಗುವುದೋ ಮುಜಗರವಾಗುವುದೋ?
    (ಏಕಾಂತದ ಪ್ರಶ್ನೆ ಬೇರೆ)

    • Prathibhanandakumar

      Saarvajanikavaagi Heluvudilla manassinolGe andukolluttane

  2. puttukulkarni

    90 ರ ದಶಕದ ನಂತರದಲ್ಲಿ ಅಕಾಡಿಮಿಕ್ ವಲಯದಲ್ಲಿ “ಹಳಗನ್ನಡ”ವನ್ನು , ಅದರಲ್ಲಿದ್ದ “ಸಂಸ್ಕೃತ”ದ ವಿಷಯವಾಗಿ ವಿರೋಧಿಸಿ, ರೂಪಣೆಗೊಂಡ ಕಾವ್ಯಾಭ್ಯಾಸದಲ್ಲಿ ಹಳಗನ್ನಡದ ರಸಾಸ್ವಾದದ ಓದು, ವಿಚಾರ ವಿನಿಮಯ , ವಿಮರ್ಶೆ, ಪ್ರಚಲಿತದಲ್ಲಿ ಆ ಕಾವ್ಯವು ಹೇಳುತ್ತಿರುವ ಸಾರ್ವಕಾಲಿಕ ಸತ್ಯಗಳನ್ನು ಅರ್ಥೈಸಿಕೊಳ್ಳುವ ಪದ್ಧತಿ ನಿಂತೇ ಹೋಗಿದೆ. ಅದರ ಫಲಿತಾಂಶವನ್ನು ಇಂದು ಮಂಡಿಸಲ್ಪಡುತ್ತಿರುವ ಹೇಳಿಕೆಗಳಲ್ಲಿ ಕಾಣುತ್ತಿದ್ದೇವೆ.

    ರನ್ನನನ್ನು ಓದಲು , ಪಂಪನನ್ನು ಅರ್ಥೈಸಿಕೊಳ್ಳಲು ರೂಪಣೆಗೊಂಡ ಪ್ರಯತ್ನಗಳು , ಶಾಂತಿನಾಥ ಪುರಾಣ, ರುದ್ರಭಟ್ಟನ ಜಗನ್ನಾಥ ಚರಿತ್ರೆ, ಅಲ್ಲಮನ ಬೆಡಗಿನ ವಚನಗಳ ಪರಿಭಾಷೆ ಇತ್ಯಾದಿಗಳಲ್ಲಿ ಮೂಡಲೇ ಇಲ್ಲ. ಈ ಕಂದಕವನ್ನು ತುಂಬುವದು ಒಂದು ದೊಡ್ಡ ಸವಾಲು. ಕನ್ನಡ ವಿಶ್ವವಿದ್ಯಾಲಯವಾದರೂ ಈ ದಿಸೆಯಲ್ಲಿಯೇssss ಕಾರ್ಯ ನಿರ್ವಹಿಸಲು ಇಚ್ಛಿಸಿದರೆ ಏನನ್ನಾದರೂ ಕಾಣಬಹುದೇನೋ

  3. kvtirumalesh

    ಹಳೆಕಾಲದ ಯಾವುದೇ ಭಾಷೆಯ ಕಾವ್ಯಗಳನ್ನು ತೆಗೆದುಕೊಂಡರೂ ನಮಗಿಂತಹ ಸಮಸ್ಯೆ ಎದುರಾಗುತ್ತ್ತದೆ. ಕುಮಾಅರವ್ಯಾಸ ಭಾರತದ ವಿದುರನೀತಿಯಲ್ಲೂ ನಾವಿಂದು ಸ್ವೀಕರಿಸಲಾಗದ ಬೋಧನೆಗಳಿವೆ. ಹರಿಶ್ಚಂದ್ರಕಾವ್ಯದ ಹೊಲತಿಯರ ಗತಿಯೇನು? ನಮ್ಮ ಜನಪದ ಕಾವ್ಯಗಳಾಗಲಿ ಹಾಡುಗಳಾಗಲಿ ಇದಕ್ಕೆ ಹೊರತಾಗಿಲ್ಲ. ಶೇಕ್ಸ್ ಪಿಯರನ ನಾಟಕಗಳು ಸಹಾ ಅಂದಿನ ಕಾಲದ ಕೆಲವು ಪೂರ್ವಾಗ್ರಹಗಳನ್ನು ಹಾಗೇ ಬಳಸಿಕೊಳ್ಳುತ್ಫ್ತವೆ. ‘ಕುಚೋನ್ನತೇ’ ಎಂವುದು ದೇವಿಯನ್ನು ಸ್ತುತಿಸುವ ಒಂದು ಪದ ಕೂಡ ಹೌದು ಎನ್ಫ್ನುವುದನ್ನು ಮರೆಯಬಾರದು. ಪ್ರತಿಭಾ ಹೇಳುವಂತೆ ಇವಕ್ಕೆ ಅತೀತವಾದ ಉದ್ದೇಶವನ್ನು ಮರೆತು ನಿರೂಪಿಸುವುದು ಅಸಮರ್ಕಕ ಎನಿಸುವುದಿಲ್ಲವೇ? ಹೇಗಿದ್ದರೂ ಮಿಂದ ನೀರಿನ ಜತೆ ಮಗುವನ್ನೂ ಚೆಲ್ಲುವುದು ಬೇಡ!
    ಕೆ.ವಿ. ತಿರುಮಲೇಶ್

  4. ಗಿರೀಶ

    ತರ್ಕಯಿಸಿ ಎಂದು ನೀವು ಹೇಳುವ ಭಾಗ ನಾನು ಓದಿದ ಪಾಠದಲ್ಲಿ ತಳ್ಕೈಸಿ(ಹಳೆಗನ್ನಡದ ಳ, ಇಲ್ಲಿ ಅದನ್ನು ಬರೆಯಲು ಆಗುತ್ತಿಲ್ಲ ನನಗೆ) ಎಂದೇ ಇದೆ. ಅಂದರೆ ಆಲಂಗಿಸಿ ಅಂತಾಗುತ್ತದೆ. ತರ್ಕೈಸಿ ಅಂದರೂ ಅದೇ ಆಲಂಗಿಸುವ ಅರ್ಥವೇ ಹೊಂದುತ್ತದೆ. ತರ್ಕ ಮಾಡಿದುದು ಅನ್ನುವುದಕ್ಕೆ ಅಷ್ಟು ಮಹತ್ವ ಏನೂ ಕಾಣುವುದಿಲ್ಲ ಅಲ್ಲಿ. –ಅಜಕ್ಕಳ ಗಿರೀಶ

    • prathibha nandakumar

      ಎಸ್ ಜಿ ನರಸಿಂಹಾಚಾರ್ ಅವರು ಸಂಪಾದಿಸಿದ ಆವೃತ್ತಿಯಲ್ಲಿ ತರ್ಕೈಸಿ ಕೊಂಡು ಅಂತ ಇದೆ. ಕುಂದಣಕಾರರ ಸಂಪಾದಿತ ಆವೃತ್ತಿಯಲ್ಲಿ “..ಎಂದು ಮನದೊಳೆ ಬಗೆದು ಮಗಳ ಮೊಗಮಂ ಮುಗುಳ್ ನಗೆವೆರಸು ನೋಡಿದಾಗಳ್ ” ಅಂತ ಮಾತ್ರ ಇದೆ. ಇದು ತಳ್ಕೈಸಿ ಅಂತ ಮತ್ತು ಅದು ಆಲಂಗಿಸಿ ಅಂತ ಗೊತ್ತಿರಲಿಲ್ಲ.

      • ರೇಣುಕಾ

        ಒಳ್ಳೇ ಚಿಂತನೆಗೆ ಹಚ್ಚಿದ ಬರಹ

  5. ಬೊಳುವಾರು

    ನಾನು ಆಲಿಸುವುದು, ನಾವು ಓದುವುದು ‘ನಮ್ಮ ನಮ್ಮ ಮಾತುಗಳನ್ನು ಮಾತ್ರ’ ಎಂಬುದು ಸುಳ್ಳಲ್ಲ ಹಾಗಾದರೆ..!!

  6. ಶ್ರೀರಂಗ ಯಲಹಂಕ

    ಇದು ನನ್ನ ಒಂದು ‘ಅಸಾಹಿತ್ಯಿಕ ಪ್ರತಿಕ್ರಿಯೆ’!!
    ೧. ಇಂದಿನ ನಮ್ಮ ಸಾಹಿತ್ಯದ ಓದಿಗೆ ಹಳಗನ್ನಡ ಕಾವ್ಯಗಳ ಓದು ಅವಶ್ಯಕವೆ?
    ೨.ಇಂದು ಒಂದು ಕತೆಯನ್ನೋ, ಕವಿತೆಯನ್ನೋ ಬರೆಯುವಾಗ ಹಳಗನ್ನಡ ಸಾಹಿತ್ಯದ ಓದು ಯಾವ ರೀತಿ ಪ್ರಯೋಜನಕ್ಕೆ ಬರುತ್ತದೆ? ಪ್ರತಿಭೆ ಮುಖ್ಯವೋ ಪರಂಪರೆಯ ಓದು ಮುಖ್ಯವೋ?
    ೩.ಹಳಗನ್ನಡ ಸಾಹಿತ್ಯದಲ್ಲಾಗಲಿ, ಹೊಸಗನ್ನಡ ಸಾಹಿತ್ಯವೇ ಆಗಲಿ ಅವುಗಳಲ್ಲಿ ನಮ್ಮ ಇಂದಿನ ‘ನಾನಾ ವಾದಗಳನ್ನು ‘( ರೈತ, ದಲಿತ, ಪುರೋಹಿತಶಾಹಿ ವಿರೋಧಿ, ಜಾಗತಿಕರಣ ವಿರೋಧಿ, ಸ್ತ್ರೀವಾದಿ ಇತ್ಯಾದಿ ನಾನಾ ತರಹದ ಹೆಸರಿನವುಗಳನ್ನು) ಹುಡುಕುವ ಹಠ ಅನಿವಾರ್ಯವೇ?

  7. Dr. Sushi Kadanakuppe

    Apt analysis…. Feminism taken too far ultimately shifts the focus away from its intentions and of course can inhibit achieving equity through a single hate narrative. Let’s celebrate human vulnerabilities and strengths beyond sexes.

  8. ಎಚ್. ಸುಂದರ ರಾವ್

    ಒದವಿದ ನೂಲ ತೊಂಗಲುಲಿಯಿಲ್ಲದೆ ಪೀನನಿತಂಬಮಾರಮಿ
    ಲ್ಲದೆ ಕುಚಮಂಡಳಂ ಪಲವುಮಂದದ ಚಂದದ ಚಿನ್ನಪೂಗಳಿ
    ಲ್ಲದೆ ಲುಳಿತಾಳಕಂ ಕ್ವಣಿತನೂಪುರಮಿಲ್ಲದೆ ಪಾದಪದ್ಮಮೊ
    ಪ್ಪಿದಪುದು ನೋಡ ರೂಪಿನಿತು ಬೇಸರೊಳಂ ಸೊಗಯಿಪ್ಪುದೀಕೆಯಾ
    ಎಂದು ಮನದೊಳೆ ಬಗೆದು ಮಗಳ ಮೊಗವಂ ಮುಗುಳ್ನಗೆವೆರಸು ನೋಡಿದಾಗಳ್

    ಈ ಪದ್ಯವನ್ನು ಹೀಗೆ ಬಿಡಿಸಬೇಕೆಂದು ಕಾಣುತ್ತದೆ:

    ಒದವಿದ ನೂಲ ತೊಂಗಲುಲಿಯಿಲ್ಲದೆ ಪೀನನಿತಂಬಂ,
    ಆರಮಿಲ್ಲದೆ ಕುಚಮಂಡಳಂ,
    ಪಲವುಂ ಅಂದದ ಚಂದದ ಚಿನ್ನಪೂಗಳಿಲ್ಲದೆ ಲುಳಿತಾಳಕಂ,
    ಕ್ವಣಿತನೂಪುರಮಿಲ್ಲದೆ ಪಾದಪದ್ಮಂ
    ಒಪ್ಪಿದಪುದು ನೋಡ ರೂಪಿನಿತು ಬೇಸರೊಳಂ ಸೊಗಯಿಪ್ಪುದೀಕೆಯಾ

    ಪೀನ ನಿತಂಬದ ಮೇಲೆ (ಧಾರಾಳವಾದ) ನೂಲಿನ ಕುಚ್ಚು(ಗೊಂಡೆ)ಗಳಿಲ್ಲ,
    ಕುಚಮಂಡಲದ ಮೇಲೆ ಹಾರವಿಲ್ಲ,
    ಗುಂಗುರುಕೂದಲುಗಳಲ್ಲಿ ಅಂದಚೆಂದದ ಹೂವುಗಳಿಲ್ಲ,
    ಪಾದಗಳಲ್ಲಿ ಕಿಣಿಕಿಣಿ ಎಂದು ಉಲಿಯುವ ನೂಪುರವಿಲ್ಲ
    ಹೀಗೆ ಬೇಸರದಲ್ಲಿದ್ದರೂ ಸಹ ಇವಳ ರೂಪವು ಸೊಗಸಾಗಿಯೇ ಇದೆಯಲ್ಲ!
    ಈ ಅರ್ಥವು ಪ್ರತಿಭಾ ನಂದಕುಮಾರ್ ಅವರ ಅಭಿಪ್ರಾಯಕ್ಕೆ ಹೊಂದುವಂತೆಯೇ ಇದೆ. ಪಂಪ ಈ ಪದ್ಯವನ್ನು ಬರೆಯದಿದ್ದರೆ ಒಳ್ಳೆಯದಿತ್ತೋ ಏನೋ!
    -ಎಚ್. ಸುಂದರ ರಾವ್ ೩೧-೮-೨೦೧೯

Trackbacks/Pingbacks

  1. ಪ್ರತಿಭಾ ಬರೆದ ‘ಹೆಣ್ಣಿನ ದೇಹ’: ಹಲವು ನೋಟ – Avadhi/ಅವಧಿ - […] “ಹೆಣ್ಣಿನ ದೇಹದ ಬಗ್ಗೆ ಹಳಗನ್ನಡ ಕಾವ್ಯ ಕೃತಿಗಳು ತೋರುವ ಉತ್ಸಾಹವನ್ನು ಅವಳ ಭಾವಲೋಕ ಹಾಗೂ ವ್ಯಕ್ತಿತ್ವವನ್ನು ಚಿತ್ರಿಸುವ ನಿಟ್ಟಿನಲ್ಲಿ ತೋರಿಸುವುದಿಲ್ಲ. ಹೆಣ್ಣು ಭೋಗಕ್ಕೆ ಆಕರ ಅಥವಾ…
  2. ಎಂ ಎಸ್ ಆಶಾದೇವಿಯವರು ಹೇಳಿದ ಮಾತುಗಳಿಗೆ ಪ್ರತಿಕ್ರಿಯಾತ್ಮಕ ಸಣ್ಣ ಟಿಪ್ಪಣಿಯಷ್ಟೇ ಇದು. – Avadhi/ಅವಧಿ - […] “ಹೆಣ್ಣಿನ ದೇಹದ ಬಗ್ಗೆ ಹಳಗನ್ನಡ ಕಾವ್ಯ ಕೃತಿಗಳು ತೋರುವ ಉತ್ಸಾಹವನ್ನು ಅವಳ ಭಾವಲೋಕ ಹಾಗೂ ವ್ಯಕ್ತಿತ್ವವನ್ನು ಚಿತ್ರಿಸುವ ನಿಟ್ಟಿನಲ್ಲಿ ತೋರಿಸುವುದಿಲ್ಲ. ಹೆಣ್ಣು ಭೋಗಕ್ಕೆ ಆಕರ ಅಥವಾ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading