– ಕೆ ಅಕ್ಷತಾ
ಒಮ್ಮೆ ತೇಜಸ್ವಿಗೆ ಅವರ ಮಾವನ ಮನೆ ಹತ್ತಿರದಲ್ಲೆ ಬೀದಿ ನಾಯಿಯೊಂದು ಕಚ್ಚಿಬಿಟ್ಟಿತು. ಕಚ್ಚಿದ್ದು ಹುಚ್ಚು ನಾಯಿಯಾದರೆ ಹದಿನಾಲ್ಕು ಇಂಜೆಕ್ಷನ್ ಹಾಕಿಸ್ಕಬೇಕಾಗೋದು. ತೇಜಸ್ವಿ ಇಂಜೆಕ್ಷನ್ಗೆ ಹೆದರಿ ಡಾಕ್ಟರ್ ಹತ್ರ ತೋರಿಸೋಕೆ ನಿರಾಕರಿಸಿದ್ರು. ನಾನು ಒತ್ತಾಯ ಮಾಡಿ, `ತೇಜಸ್ವಿ ನಿಮ್ಗೆ ಹುಚ್ಚುಗಿಚ್ಚು ಹಿಡಿದು ಬಿಟ್ಟಾತು ಮಾರಾಯ್ರ’ ಅಂತಾ ಹೆದರಿಸಿ ಸಕರ್ಾರಿ ಆಸ್ಪತ್ರೆಗೆ ಕರ್ಕಂಡ್ಹೋದೆ. ಅಲ್ಲಿನ ಡಾಕ್ಟರ್ ಹತ್ರ ತೇಜಸ್ವಿ `ನಂಗೆ ಇಂಜೆಕ್ಷನ್ ಹಾಕಿಸ್ಕಾಳ್ಳಾಕೆ ಸಾಧ್ಯಾನೇ ಇಲ್ಲ ಡಾಕ್ಟ್ರೇ ತುಂಬಾ ಹೆದರಿಕೆ ಆಗತ್ತೆ. ಬೇರೆ ಏನೇ ಹೇಳಿ ಮಾಡ್ತೀನಿ’ ಅಂತಾ ರಿಕ್ವೆಸ್ಟ್ ಮಾಡಿಕಂಡ್ರು. ಆ ಡಾಕ್ಟ್ರಿಗೆ ಏನೆನಿಸ್ತೋ, `ಒಂದ್ಕೆಲಸ ಮಾಡಿ ಮನೆ ಹತ್ತಿರಾನೆ ನಾಯಿ ಕಚ್ಚಿದ್ದು ಅಂತೀರಲ್ಲ ಹೋಗಿ ಆ ನಾಯಿನ ಹುಡುಕಿ ಸಿಕ್ಕಿದ್ರೆ ಕಟ್ಟಿಹಾಕಿ ಅದು ನಾಳೆವರೆಗೆ ಸಾಯ್ಲಿಲ್ಲ. ಅದಕ್ಕೆ ಹುಚ್ಚು ಹಿಡಿದ ಲಕ್ಷಣ ಕಾಣಿಸ್ಲಿಲ್ಲ ಅಂದ್ರೆ ಹದಿನಾಲ್ಕು ಇಂಜೆಕ್ಷನ್ ತಗೋಳ್ಳೋದು ಬೇಡ. ಸೇಫ್ಟಿಗೆ ಒಂದೇ ಒಂದು ಇಂಜೆಕ್ಷನ್ ತಗೋಬೇಕಾಗತ್ತೆ. ಆದರೆ ಏನಕ್ಕೂ ನಾಳೆವರೆಗೆ ಮಾತ್ರ ಟೈಮಿರೋದು’ ಅಂತಾ ಹೇಳಿ ಕಳಿಸಿದ್ರು. ಮನೆ ಸುತ್ತಮುತ್ತ ಎಲ್ಲಾ ಕಡೆ ನಾಯಿಯನ್ನ ಹುಡಕ್ಕಂಡು ಅಲೆದ್ವಿ. ಎಲ್ಲೂ ನಾಯಿ ಸಿಗ್ಲಿಲ್ಲ. ಅದೂ ಅಲ್ಲದೆ ನಾಯಿ ಕಚ್ಚಿದ ಗಾಬರಿಯಲ್ಲಿ ತೇಜಸ್ವಿ ಆ ನಾಯಿಯನ್ನು ಗಮನಿಸಿರ್ಲಿಲ್ಲ. ನಾಯಿಯ ಬಣ್ಣ, ಅದು ಹೆಣ್ಣೋ ಗಂಡೋ, ಬಾಯಲ್ಲಿ ಜೊಲ್ಲು ಸುರಿಸ್ತತ್ತೋ ಇಲ್ಲವೋ ಇದ್ಯಾವ ವಿವರಗಳು ತಿಳಿದಿರಲಿಲ್ಲ. ತೇಜಸ್ವಿ ಇಂಜೆಕ್ಷನ್ನಿಂದ ತಪ್ಪಿಸ್ಕಳ್ಳಾಕ್ಕೆ ಎಂತಹ ಅತಿರೇಕದ ಕ್ರಮಕ್ಕೆ ಕೈ ಹಾಕಿದ್ರು ಅಂದ್ರೆ ಯಾವುದೇ ನಾಯಿ ಎದುರಿಗೆ ಬಂದ್ರೂ ಅದನ್ನ ಹಿಡ್ಕೊಂಡು ಅದರ ಬಾಲ ಎತ್ತಿ, ಮುಖ, ಮೂತಿ, ಹಲ್ಲು ಎಲ್ಲ ಪರೀಕ್ಷಿಸಿ, ಥೂ ಇದಲ್ಲ ಕಣ್ರಿ ಅಂತಾ ಬಿಟ್ಟು ಓಡಿಸೋರು.
0 ಪ್ರತಿಕ್ರಿಯೆಗಳು