ಟೈಮ್ ಪಾಸ್ ಕಡ್ಲೆಕಾಯ್ : ಅಂಗೈ ಹುಣ್ಣಿಗೆ…

~ ಎಸ್ ಜಿ ಶಿವಶಂಕರ್

ಯಾವಾಗ ಯಾವ ವಾಹನ ಡಿಕ್ಕಿ ಹೊಡೆಯುವುದೋ ಎಂಬ ಭಯದಿಂದ ಜೀವ ಕೈಯಲ್ಲಿ ಹಿಡಿದು ಬೆಂಗಳೂರಿನ ರಸ್ತೆಯಲ್ಲಿ ನಡೆಯುತ್ತಿರುವಾಗ ಯಾರೋ ಹಿಂದಿನಿಂದ ಭುಜ ಹಿಡಿದು ಎಳೆದರು.
‘ಎಸ್..?’ ಎನ್ಮ್ನತ್ತಾ ಹಿಂದೆ ತಿರುಗಿದೆ.
ತನ್ನೆಲ್ಲಾ ದಂತ ಪ್ರದರ್ಶಿಸುತ್ತಾ ನಿಂತಿದ್ದ ಕಲ್ಲೇಶಿ!
‘ಈ ಎಸ್ ಪಸ್ ಎಲ್ಲಾ ಬಿಟ್ಬಿಟ್ಟು ಕನ್ನಡದಲ್ಲಿ ಮಾತಾಡ್ಬಾರ್ದಾ ಮೇಷ್ಟ್ರೇ ? ಕರ್ನಾಟಕದ ರಾಜಧಾನೀಲಿ ಕನ್ನಡಾನ ನೀವೇ ಪರದೇಶಿ ಮಾಡಿದ್ರೆ ಎಂಗೆ?’ ಕಲ್ಲೇಶಿ ಆಕ್ಷೇಪಿಸಿ ನನ್ನನ್ನು ಕಸಿವಿಸಿ ಮಾಡಿದ.
‘ಹಂಗಲ್ಲ ಕಲ್ಲೇಶಿ, ಇಲ್ಲಿ ಕನ್ನಡ ಮಾತಾಡೋರಾದ್ರೂ ಎಲ್ಲಿ ಸಿಗ್ತಾರಪ್ಪ??ಇಂಗ್ಲೀಷು, ಹಿಂದಿ, ತಮಿಳು, ತೆಲುಗು, ಹಿಂದಿ, ಬಂಗಾಳಿ-ಭಾಷೆಗಳು ಬರದೆ ಬೆಂಗ್ಳೂರಲ್ಲಿ ಜೀವ್ನ ಮಾಡೋಕಾಗ್ತದ?’
‘ನಿಜ ಸಾ! ಬೆಂಗ್ಳೂರಲ್ಲಿ ಕನ್ನಡ ಕಂಗಾಲಾಗ್ತಿದೆ! ಶಾನೆ ದಿನಾ ಆಯ್ತಲ್ಲ ಸಾ ನೀವು ಸಿಕ್ಕಿ ? ಬನ್ನಿ ಟೀ ಕುಡಿಯೋಣ’ ಕಲ್ಲೇಶಿಯ ಆಹ್ವಾನ ಆಪ್ಯಾಯಮಾನವಾಗಿತ್ತು!
‘ಎರಡು ಟೀ ಕೊಡು ಗುರು’ ರಾಯಲ್ ಬೇಕರೀಲಿ ಕಲ್ಲೇಶಿ ಆರ್ಡರ್ ಮಾಡಿದ.
‘ಎತ್ತನೆ?’ ಬೇಕರಿ ಹುಡುಗ ಕೇಳಿದ.
‘ಎರಡೂಂತ ಆಗ್ಲೇ ಹೇಳ್ಲಿಲ್ಲವಾ ಮೂದೇವಿ..?’ ಕಲ್ಲೇಶಿ ರಾಂಗಾಗಿ ಹೇಳಿದ.
ಕಲ್ಲೇಶಿ ಅವತಾರಕ್ಕೆ ಬೆದರಿದ ಬೇಕರಿಯ ಮಲೆಯಾಳಿ ಹುಡುಗ! ತಮಿಳು, ತೆಲುಗು, ಮಲೆಯಾಳಿ, ಕನ್ನಡ ಎಲ್ಲಾ ಮಿಕ್ಸ್ ಮಾಡಿದ ಹೈಬ್ರಿಡ್ ಭಾಷೆಯಲ್ಲಿ ಸಮಜಾಯಿಸಿ ಹೇಳಿದ.
‘ಯಾಕ್ಸಾ ಹಿಂಗಾಯ್ತು?’
‘ಅಂದ್ರೆ ಕನ್ನಡದ ಸ್ಠಿತೀನಾ ಕಲ್ಲೇಶಿ?’
‘ಹೂಂಸಾ! ಕನ್ನಡ ಕನ್ನಡಿಗರಿಗೆ ಬೆಂಗ್ಳೂರಲ್ಲೇ ನೆಲೆ ಇಲ್ದಂಗೆ ಆಗೋಯ್ತಲ್ಲ ಸಾ..?’
‘ಕನ್ನಡಿಗರ ಹೃದಯವಂತಿಕೆಯಿಂದ ಹಿಂಗಾಗಿರೋದು ಕಲ್ಲೇಶಿ. ನಾವು ಎಲ್ಲರನ್ನೂ ಸಹಿಸ್ತೀವಿ! ಎಲ್ಲವನ್ನೂ ಸಹಿಸ್ತೀವಿ, ತುಂಬು ಔದಾರ್ಯತೆಯಿಂದ ನೆಲ, ಜಲ ಎಲ್ಲಾ ಕೊಡ್ತೀವಿ!’
‘ನಿಜ ಸಾ, ನನ್ನ ಮನೆ ಓನರು ಬಂಗಾಲಿ, ಆಫೀಸಿನಾಗೆ ನನ್ನ ಬಾಸು ತಮಿಳಿನವನು’ ಕಲ್ಲೇಶಿ ಮಾತು ಒಪ್ಪಿ ತಲೆದೂಗಿದ.
ಟೀ ಬಂತು, ಗುಟುಕರಿಸತೊಡಗಿದೆವು.

ಯಾರೋ ಬಂದು ಅಡ್ರೆಸ್ ಕೇಳಿದರು-ಇಂಗ್ಲೀಷಿನಲ್ಲಿ. ನಾನೂ ಅದೇ ಭಾಷೆಯಲ್ಲಿ ವಿವರಣೆ ನೀಡಲು ತೊಡಗಿದೆ.
ಕಲ್ಲೇಶಿ ಅಡ್ಡ ಬಂದ!
‘ಕೂಡ್ದು ಸಾ..! ಇಲ್ಲೇ ನಾವ್ ತಪ್ಪಿರೋದು! ತಮಿಳ್ನಾಡಿನಲ್ಲಿ ಇಂಗ್ಲೀಷಿನಲ್ಲಿ ಅಡ್ರೆಸ್ ಕೇಳಿದ್ರೆ ಹೇಳ್ತಾರಾ..? ನೀವು ಕನ್ನಡದಲ್ಲೇ ಮಾತಾಡಿ ಸಾ..’
ಕಲ್ಲೇಶಿ ಹಾಕಿದ ಲಕ್ಷ್ಮಣ ರೇಖೆಯೊಳಗೆ ನಿಂತು ಕನ್ನಡದಲ್ಲೇ ವಿವರಣೆ ಕೊಟ್ಟೆ! ಅರ್ಥವಾದಂತೆ ಆತ ತಲೆಯಾಡಿಸಿದ.
‘ಅರ್ಥವಾಯ್ತೆ?’ ಅನುಮಾನದಿಂದ ಕೇಳಿದೆ.
‘ಅರ್ಥವಾಗದೆ ಏನು ಸಾರ್..ಎಷ್ಟು ನೀಟಾಗಿ ಹೇಳಿದೀರಿ..ನಾನೂ ಕನ್ನಡದವನೇ ಸಾರ್’ ಆತ ಮುಗುಳು ನಗುತ್ತಾ ಮಾನ್ರ್ಮಡಿದ..
‘ಕನ್ನಡದವರೇ ಆಗಿದ್ರೆ, ಕನ್ನಡದಲ್ಲಿ ಮಾತಾಡೋಕೆ ಏನ್ರೀ ರೋಗ?’ ಕಲ್ಲೇಶಿ ರೇಗಿದ.
‘ನೋಡಪಾ ತಮ್ಮಾ, ಬೆಂಗ್ಳೂರಿನಾಗೆ ಕನ್ನಡ ಮಾತಾಡೋರು ಕಮ್ಮಿ ಅದ್ಕೇ….ತ್ಯಾಂಕ್ಸ್ ಸಾರ್..’
ಎನ್ಮ್ನತ್ತಾ ಆತ ಹೋದ.
‘ನೋಡಿದ್ರಾ ಸಾ..ನಾವು ಯಾ ಮಟ್ಟಕ್ಕೆ ಇಳ್ದಿದ್ದೀವಿ? ಅದಂಗೆ ನಿಮ್ಮ ಕಾಲ್ಭೆಜ್ನಾಗೆ ಕನ್ನಡ ಹುಡುಗ್ರು, ಹುಡಿಗಿಯರು ಕಲೀತಾರ ಸಾ..’ ಕಲ್ಲೇಶಿ ಕನಲಿದ.
‘ಇರಬಹುದು ಕಲ್ಲೇಶಿ, ಆದ್ರೆ ಗೊತ್ತಾಗೊಲ್ಲ! ನೋಡು ಕಲ್ಲೇಶಿ ನನ್ನ ಇಲಾಖೇಲಿ ಇರೋ ಎಲ್ಲಾ ಅಧ್ಯಾಪಕರೂ ಬೇರೆ ಭಾಷೆಯವರೇ! ನಾನೊಬ್ನೇ ಕನ್ನಡದವನು. ಕಾಲೇಜಿನಲ್ಲೂ ಯಾರೂ ಕನ್ನಡ ಮಾತಾಡೊಲ್ಲ!’
‘ಮತ್ತೆ ಇದ್ಕೇನಾರಾ ಮಾಡ್ಬೇಕಲ್ಲಾ ಸಾ..? ಕಲ್ಲೇಶಿ ರಾಗ ಎಳೆದ.
‘ಏನ್ಮಾಡೋಣಾಂತೀಯ…?’
‘ಕನ್ನಡ ಇಲ್ಲಿ ಉಳೀಬೇಕು ಸಾ! ಅಷ್ಟೇ ಅಲ್ಲ ಸಾ..ಕನ್ನಡ ಭಾಷೆ ಇಲ್ಲಿ ಬೆಳೀಬೇಕು. ಅದ್ಕೇನಾದ್ರೂ ಒಂದು ಐಡಿಯಾ ಮಾಡಾನಾ ಸಾ..!’
‘ಇದು ನಮ್ಮಿಬ್ಬರ ಕೈಲಿ ಆಗೋ ಕೆಲಸಾನಾ ಕಲ್ಲೇಶಿ?’
‘ಇಲ್ಲ ಸಾ..ಆದ್ರೂ ಪ್ರಯತ್ನ, ಸಂಘ್ಪಟನೆ, ಹೋರಾಟ ಮಾಡ್ಬೇಕು ಸಾ..’ ಪಕ್ಕಾ ರಾಜಕಾರಿಣಿಯಂತೆ ಉತ್ಸಾಹದಿಂದ ಹೇಳಿದ.
ಟೀ ಕುಡಿದು ರಸ್ತೆಗಿಳಿದಿದ್ದೆವು.
‘ನೋಡು ಕಲ್ಲೇಶಿ, ಕನ್ನಡಪರವಾದ ನಿನ್ನ ಎಲ್ಲಾ ಕೆಲಸಕ್ಕೂ ನನ್ನ ಪ್ರ್ರೇತ್ಸಾಹ, ಸಹಾಯ ಇದೆ’
‘ನಿಮ್ಮಾಶೀವರ್ಾದ ಇದ್ರೆ ಎಲ್ಲಾ ಆಗುತ್ತೆ ಸಾ..’
‘ಅಂದಂಗೆ ಕಲ್ಲೇಶಿ ಮದ್ವೆ ಮಾಡ್ಕೊಂಡೆಯಂತೆ?’
‘ಹೂ ಸಾ..ಕ್ಷಮ್ಸಿ ಎಲ್ಲಾ ಶಾನೆ ಅಜರ್ೆಂಟಾಗಿ ಆಗೋಯ್ತು! ಯಾರನ್ನೂ ಸರಿಯಾಗಿ ಕರಿಯೋಕಾಗ್ನಿಲ್ಲ… ಮನೇಗಿ ಬನ್ನಿ ಸಾ..’ ಕಲ್ಲೇಶಿ ವಿಸಿಟಿಂಗ್ ಕಾಡರ್್ ಕೊಟ್ಟ.
‘ಅಂದಂಗೆ ಕಲ್ಲೇಶಿ ಲೌ ಮ್ಯಾರೇಜಂತೆ ?’
‘ಹೂ ಸಾ…’ ಕಲ್ಲೇಶಿ ನಾಚಿ ನಿಂತ!
‘ತೆಲುಗು ಹುಡುಗಿಯಂತೆ ?’
‘ಹೂ ಸಾ..! ಅಜರ್ೆಂಟು ಕೆಲ್ಸ ಇದೆ..ಸಾ..ಇನ್ನೊಂದ್ಸಲ ಸಿಗ್ತೀನಿ…’ ಕಲ್ಲೇಶಿ ಆತುರಾತುರದಲ್ಲಿ ಹೊರಟ.
‘ಕಲ್ಲೇಶಿ ಕನ್ನಡದ ಕೆಲಸಾ…?’ ನೆನಪು ಮಾಡಿದೆ.
ಕಲ್ಲೇಶಿ ಆಗಲೇ ಜನಜಂಗುಳಿಯಲ್ಲಿ ಮಾಯವಾಗಿದ್ದ!
 

‍ಲೇಖಕರು G

January 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

೧ ಪ್ರತಿಕ್ರಿಯೆ

  1. ಕಿರಣ್

    ‘ಕನ್ನಡಿಗರ ಹೃದಯವಂತಿಕೆಯಿಂದ ಹಿಂಗಾಗಿರೋದು ಕಲ್ಲೇಶಿ. ನಾವು ಎಲ್ಲರನ್ನೂ ಸಹಿಸ್ತೀವಿ! ಎಲ್ಲವನ್ನೂ ಸಹಿಸ್ತೀವಿ, ತುಂಬು ಔದಾರ್ಯತೆಯಿಂದ ನೆಲ, ಜಲ ಎಲ್ಲಾ ಕೊಡ್ತೀವಿ!’ ಇದೆಲ್ಲಾ ಬೋಗಸ್ ಮಾತುಗಳು. ನಮ್ಮ ಅಯೋಗ್ಯತನಕ್ಕೆ, ಕೈಲಾಗದ ಪರಿಸ್ಥಿತಿಗೆ ನಾವೇ ಕೊಟ್ಟುಕೊಂಡಿರುವ ಒಳ್ಳೆ ಭಾಷೆಯ ಪ್ರಮಾಣಪತ್ರ! ನಾವು ಕೊಡ್ದೆ ಇದ್ರೆನೂ ಹೊರಗಿನಿಂದ ಬಂದವರು ಕಿತ್ಕೋತಾರೆ. ದುಡ್ಡು ಚೆಲ್ಲಿ, ನಯವಾಗಿ ಮಾತನಾಡಿ, ದಬಾಯಿಸಿ ದಕ್ಕಿಸ್ಕೊತಾರೆ. ನಮ್ಮ ನರವಿಲ್ಲದ ಸರ್ಕಾರ ತನಗೆ ಬರೋ ಆದಾಯಕ್ಕೆ, ನಮ್ಮಗಳ ಹಿತವನ್ನು ಬಲಿಕೊಟ್ಟು ತೆಪ್ಪಗೆ ಇರುತ್ತೆ. ಅವರಿಗೆ ಕನ್ನಡವನ್ನಾಗಲೀ, ಕನ್ನಡಿಗರನ್ನಾಗಲೀ ಉಳಿಸುವ, ಬೆಳೆಸುವ, ಕಾಪಾಡುವ ಎದೆಗಾರಿಕೆ ಇಲ್ಲ! ವೈಯುಕ್ತಿಕ ನೆಲೆಯಲ್ಲಿ ನಾವು ಎಷ್ಟು ಬಡಕೊಂಡರೂ ಅದು ಅರಣ್ಯರೋದನ ಮಾತ್ರ. ನಾವಿಷ್ಟೇ! ಒಂದು ದಿನ ಹೀಗೆ ಕೊರಗುತ್ತ ಸತ್ತುಹೊಗುತ್ತೇವೆ. ನಮ್ಮ ಭಾಷೆ ಮಾತ್ರ ನಿಧಾನವಾಗಿ, ದಾರುಣವಾಗಿ ಸಾಯುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: