ಜಯರಾಮಾಚಾರಿ
ಅಲ್ಲೆಲ್ಲೊ ಪೆಟ್ಟಿಗೆ ಅಂಗಡಿಯ ಬಳಿ ಅವನಿದ್ದಾನೆ
ತುಟಿ ಒರಟು ತುಸು ಕಪ್ಪು
ಎಡಗೈಯೀಲಿ ಗ್ಲಾಸು ಚಾ
ಬಲಗೈಲೀ ಹೇಗೋ
ಸಿಗರೇಟು
ಮೊಬೈಲು
ಸಂಭಾಳಿಸಿದ್ದಾನೆ.
ಗಾಢ ಚಿಂತೆಯೇನಿಲ್ಲ
ಹೆಚ್ಚೆಂದರೆ ಬಸ್ ಸ್ಟಾಪಲ್ಲಿ ಪ್ರೊಪೋಸಲ್ ರಿಜೆಕ್ಟ್
ಮಾಡಿದವಳ ಹಿಂಭಾಗವೋ
ಮಿಥುನುತ್ತರಕ್ಕೂ ಹೊಳೆಯುವ ಪಂಜಾಬಿಯವಳೋ
ಟೆರೇಸಿನಲ್ಲಿ ಬಟ್ಟೆ ಹಾಕಲು ಬಂದ ಎಳೆಯವಳೋ
ನೆನಪಿಸಿಕೊಳ್ಳುವನು
ಬೆರಳ ತುದಿ ಸಿಗರೇಟಿನ ಹೀಟಿಗೆ ಸುಡುವವರೆಗೂ
ಒಮ್ಮೊಮ್ಮೆ ತೀರ ಕಾಡುತ್ತದೆ
ಊರ ಹೊಳೆ
ಅಂಡೆ ಒಲೆ
ಅಮ್ಮನ ಬಳೆ
ಅಪ್ಪನ ಚಿತೆಯಲ್ಲುಟ್ಟ ಜ್ವಾಲೆ
ಬಾಗಿಲಿಲ್ಲದ ಶಾಲೆ
ಮೌನವಾಗುತ್ತಾನೆ ಆವಿಯಾಗುತ್ತಾನೆ
ಊರಲ್ಲಿದ್ದರೆ ಏನಾಗುತ್ತಿದ್ದ?
ಮಾಸ್ತರನಾ? ಅಲ್ಲ
ಕೂಲಿಯವನ? ಅಲ್ಲ
ಏನು ಹೇಳಲಿಕ್ಕಾಗಲ್ಲ
ಅವನಿಗೂ
ಉತ್ತರವಿನ್ನೂ ದಕ್ಕಿಲ್ಲ

ಬಡಾ ಬೆಂಗಳೂರಲ್ಲಿ
ಬಡ ಬಿಕನಾಸಿ ಜೀವನ
ಸ್ವಿಗ್ಗಿ ಡೆಲಿವರಿ ಹುಡುಗ ಹೆಸರು ರಾಜ
ಅಪಾರ್ಟ್ಮೆಂಟಿನಲ್ ಲೇ ಹೆಚ್ಚು ಆರ್ಡರು
ಬೆಳಗ್ಗೆ ನಾಸ್ತಾ ಇಡ್ಲಿ ವಡ ಸಾಂಬರು
ಬದುಕಿಗೆ ಅರ್ಥವಿದೆಯಾ ಪ್ರಶ್ನೆ ಯಾವಾಗಲೊಮ್ಮೆ ಕಾಡುವುದು
ಇತ್ತೀಚೆಗೆ ಎಲ್ಲವೂ ಸರಿ ಎಂಬ ಭ್ರಮೆ ಕಾಡುವುದವನಿಗೆ
ಅವನ ಪೋಸ್ಟುಗಳಿಗೂ ಲೈಕುಗಳು ದಕ್ಕಿವೆ
ಮಂತ್ರಿ ಮಾಲಿಗೂ ಈಗವನು ಹೆದರುವುದಿಲ್ಲ
ವಾಟ್ಸಾಪಿನ ಪ್ರತಿ ಹೊಸ ಡೀಪಿಗೂ
ಹೊಸ ಹುಡುಗಿ ಮುತ್ತಿನೀಮೋಜಿ ಕಳಿಸುತ್ತಾಳೆ
ಈಗವನೂ ಅಪ್ ಗ್ರೇಡಾಗಿದ್ದಾನೆ
ಹೆಚ್ ಡೀ ವಿಡೀಯೋಗಳು ಕೈಗಾಹಾರ
ಅವಳಿಗೆ ಒಸಿ ಜ್ವರ ಬೆಂಗಳೂರಲ್ಲಿರಿಸಿ ಕೊಳ್ಳಬೇಕು
ಚಾಕೋಲೇಟು ಬೋರು
ಹುಡುಗಿಗೇ ಚಿನ್ನದುಂಗುರ ತೊಡಿಸಬೇಕು
ಆಗ್ಗಾಗ್ಗೆ ಕನಸು ಮ್ಯಾನೇಜರಾದಂತೆ
ಬೆಂಗಳೂರು ಕಾಂಪಿಟೇಷನ್ನಿನ ಸಂತೆ
ಸಿಡುಕು ಮೋರೆಯವ ಮತ್ತೆ ಬಿರಿಯಾನಿ ಆರ್ಡರು ಒತ್ತಿದ್ದಾನೆ






ಸ್ವಿಗ್ಗಿ ಬಾಯ್ !!! , ,, ಹೇಗೆ ನಗರ ತಲ್ಲಣಗಳು ಸೊಗಸಾದ ಕವನ ಆಗಿಬಿಡುತ್ತವೆ ಈಗಿನ ಹುಡುಗ ಹುಡುಗಿಯರ ಕೈಯಲ್ಲಿ.