ಟಿ ಎಸ್ ಶ್ರವಣ ಕುಮಾರಿ ಹೊಸ ಕಥೆ – ತಿಮಿರ ದಿವ್ಯ

ಟಿ ಎಸ್ ಶ್ರವಣ ಕುಮಾರಿ

ಅವನಿಗೆ ಒಟ್ಟಿನಲ್ಲಿ ಆ ಊರು ಬಿಟ್ಟು ಎಲ್ಲಿಗಾದರೂ ಓಡಿಹೋಗಬೇಕಿತ್ತು. ಕಿತ್ತು ತಿನ್ನುತ್ತಿದ್ದ ಆ ಊರಿನ ನೆನಪುಗಳಿಂದ ದೂರವಾಗಬೇಕಿತ್ತು. ತನಗಾಗಿ ಕಾಯುತ್ತಿದ್ದ ಜೀವವೊಂದು ಕಣ್ಮರೆಯಾದಾಗ ಬದುಕಿಗೇ ಅರ್ಥವಿಲ್ಲವೆನಿಸಿಬಿಟ್ಟಿತ್ತು. ಕಾಡುತ್ತಿದ್ದ ಸಾಯುವ ಯೋಚನೆಯಿಂದ ಹೊರಬರಲು ಏನಾದರೂ ಮಾಡಬೇಕಿತ್ತು. ಓಡುವುದಾದರೂ ಎಲ್ಲಿಗೆ? ಎಲ್ಲಾದರೂ ತೆರೆದ ಅವಕಾಶಗಳಿರುವ ಊರಿನಲ್ಲಿ ಹೊಸತಾಗಿ ತನ್ನ ಬದುಕನ್ನು ಕಂಡುಕೊಳ್ಳಬೇಕು ಎಂದುಕೊಂಡವನು ಬೆಂಗಳೂರಿಗೆ ಬಂದಿದ್ದ. ಮೂರುದಿನ ಗೊತ್ತುಗುರಿಯಿಲ್ಲದೆ ಓಡಾಡಿ ಹೈರಾಣಾಗಿದ್ದ.

ಮೆಜೆಸ್ಟಿಕ್‌ನಲ್ಲಿ ಓಡಾಡುತ್ತಿದ್ದಾಗ ಊರಿನ ಬಸ್ಸು ಕಂಡು ಯಾರೋ ಬಸ್ಸಿನಲ್ಲಿರುವವರಿಗೆ ಇಲ್ಲೆಲ್ಲೋ ನಿಂತಿರುವ ತಾನು ಕಂಡುಬಿಟ್ಟರೆ ಎನ್ನುವ ಅವ್ಯಕ್ತ ಭಯ ಶುರುವಾಗಿತ್ತು. ಇಲ್ಲಿದ್ದರೆ ತನ್ನನ್ನು ಕಂಡುಕೊಳ್ಳುವ ಬದಲು ಕಳೆದುಹೋಗುವ ಸಂಭವವೇ ಹೆಚ್ಚೇನೋ ಎನಿಸಿಬಿಟ್ಟಿತು. ಈ ನಗರವೇ ಬೇಡ, ತನ್ನವರಾರೂ ಇಲ್ಲದ, ಯಾರೂ ಗುರುತಿಸದ, ಯಾವುದಾದರೊಂದು ಇದುವರೆಗೂ ಕಂಡಿರದ ಊರಿಗೆ ಹೋಗಿ ಬೇರೆಯದೇ ಪರಿಸರದಲ್ಲಿ ಜೀವನವನ್ನು ಕಂಡುಕೊಳ್ಳಬೇಕು ಅನಿಸಿಬಿಟ್ಟಿತು. ಹಾಗೆ ಸಂಜೆ ಹೊರಡುವ ಈ ಅಂತರ ರಾಜ್ಯದ ಸಾರಿಗೆ ಬಸ್ಸನ್ನು ಹತ್ತಿದ್ದ. ಅದು ರಾತ್ರಿಯೆಲ್ಲಾ ಪ್ರಯಾಣ ಮಾಡಿ ಮರುದಿನ ಮಧ್ಯಾಹ್ನಕ್ಕೆ ತನ್ನ ಗಮ್ಯವನ್ನು ತಲುಪುವುದರಲ್ಲಿತ್ತು. ಬಸ್ಸಿನಲ್ಲಿ ಕೂಡಾ ತನ್ನ ಗುರುತಿನವರು ಯಾರೂ ಇಲ್ಲವೆಂದು ಎರೆಡೆರೆಡು ಬಾರಿ ನೋಡಿ ಖಚಿತಪಡಿಸಿಕೊಂಡಿದ್ದ. 

ಜೇಬಿನಲ್ಲಿ, ತಂದಿದ್ದ ಬ್ಯಾಕ್‌ಪ್ಯಾಕಿನಲ್ಲಿ ಒಂದು ಹತ್ತು ಹದಿನೈದು ದಿನಕ್ಕೆ ಸಾಕಾಗುವಷ್ಟು ದುಡ್ಡಿದೆ. ಅಷ್ಟರಲ್ಲಿ ಯಾವುದಾದರೂ ಒಂದು ಸಂಪಾದನೆಯ ಮಾರ್ಗವನ್ನು ಹೊಂಚಿಕೊಳ್ಳಬೇಕಿದೆ. ಯಾವ ಕೆಲಸವನ್ನಾದರೂ ಮಾಡಲು ತಯಾರಾಗಿ ಹೊರಟವನಿಗೆ ಅದೇನು ಕಷ್ಟವಲ್ಲ ಅನ್ನಿಸಿತು. ಕಿಟಕಿಯ ಪಕ್ಕದ ಸೀಟು. ಬಸ್ಸಿನ ತುಂಬಾ ತನಗರ್ಥವಾಗದ ಭಾಷೆಯನ್ನು ಮಾತಾಡುವ ಜನರು.

ಪಕ್ಕದ ಸೀಟಿಗೆ ಇನ್ನೂ ಯಾರೂ ಬಂದಿರಲಿಲ್ಲ… ಯಾರು ಬಂದರೆ ತಾನೆ ತನಗೇನು? ತನ್ನನ್ನು ಮಾತಾಡಿಸಿ ಪುರಾಣ ಕೆದಕದವರಾದರೆ ಸಾಕು ಎನ್ನಿಸಿತು. ಇನ್ನೂ ಹೊರಡಲು ಹದಿನೈದು ನಿಮಿಷವಿದೆ; ಬಂದಾರು ಅಷ್ಟರೊಳಗೆ. ಯಾರೂ ಬರದೇ ಇದ್ದರೆ ಇನ್ನೂ ಒಳ್ಳೆಯದು ಅನ್ನಿಸಿತು. ಹಾಗೆಯೇ ಕಣ್ಮುಚ್ಚಿಕೊಂಡು ಸೀಟಿಗೊರಗಿದ. ಬಂದವರು ತಾನು ನಿದ್ರೆಯಲ್ಲಿ ಮುಳುಗಿದ್ದೇನೆಂದುಕೊಳ್ಳಲಿ ಎಂಬಂತೆ…

***

ಎಂದೋ ಹುಚ್ಚು ಆವೇಶದಲ್ಲಿ ಜೊತೆಯವರೊಂದಿಗೆ ಸೇರಿ ಮಾಡಿದ ತಪ್ಪಿಗೆ ಶಿಕ್ಷೆಯಾಗಿದ್ದು ತನ್ನೊಬ್ಬನಿಗೇ. ಪುರಲೆಯೆಬ್ಬಿಸಿದವರೆಲ್ಲರೂ ತಿರುಗಿ ಕೂಡಾ ನೋಡದೆ ತನ್ನೆದುರೇ ಕೋರ್ಟಿನಿಂದ ಗತ್ತಿನಲ್ಲಿ ಹೊರನಡೆದು ತಮ್ಮವರೊಂದಿಗೆ ಮಾಯವಾಗಿದ್ದರು. ತನ್ನನ್ನು ಜೊತೆಗೊಯ್ಯಬೇಕೆಂದು ಯಾರೊಬ್ಬನಿಗೂ ಅನ್ನಿಸಲಿಲ್ಲವಲ್ಲ! ಏಕನ್ನಿಸುತ್ತೆ?? ಅವರೆಲ್ಲಾ ಶ್ರೀಮಂತರ ಮಕ್ಕಳು. ಅವರಿಗೆ ತಮ್ಮ ಹೆತ್ತವರೊಂದಿಗೆ ಬದುಕುವ ಹಕ್ಕಿದೆ; ಹೆತ್ತವರಿಗೆ ಬಿಡಿಸಿಕೊಳ್ಳುವ ಬಲವಿದೆ. ತನಗೇನಿದೆ? ಬಡ ಟೈಲರ್‌ನ ಮಗನಿಗೆ ಅವರೊಂದಿಗೆ ಸೇರುವಷ್ಟು ಧಿಮಾಕು ಬಂದಿತ್ತಷ್ಟೆ! ಸಹವಾಸ ಮಾಡಿದ್ದಕ್ಕೆ ತಕ್ಕ ಶಿಕ್ಷೆ ಅನುಭವಿಸಲೇಬೇಕಲ್ಲ.

ಜಾಮೀನು ಕೊಟ್ಟು ಬಿಡಿಸಿಕೊಳ್ಳುವಷ್ಟು ದುಡ್ಡು ಅಪ್ಪನಲ್ಲಿರಲಿಲ್ಲ. ತಿಂಗಳು, ಎರಡು ತಿಂಗಳಿಗೊಮ್ಮೆ ತನ್ನನ್ನು ನೋಡಿಕೊಂಡು ಹೋಗಲು ಬಂದಾಗೆಲ್ಲಾ, ತಮ್ಮಿಬ್ಬರ ನಡುವೆ ಮಾತಿಲ್ಲ; ಕತೆಯಿಲ್ಲ. ಮೌನವಾಗಿ ಕುಳಿತಿರುತ್ತಿದ್ದೆವು, ನನ್ನಲ್ಲಿದ್ದ ಪಶ್ಚಾತ್ತಾಪ, ಅವನಲ್ಲಿದ್ದ ಮರುಕ ವಾತ್ಸಲ್ಯ ತಾನಾಗಿಯೇ ಅರ್ಥವಾಗುತ್ತಿತ್ತು, ಪರಸ್ಪರ ಸಾನ್ನಿಧ್ಯದ ಅನುಭೂತಿಯಲ್ಲಿ ಮುಳುಗಿ… ಜೊತೆಯಲ್ಲಿದ್ದಾಗಿಗಿಂತಲೂ ಜೈಲಿನಲ್ಲಿದ್ದಾಗಲೇ ಅಪ್ಪ ಹೆಚ್ಚು ಹೆಚ್ಚು ಅರ್ಥವಾಗಿದ್ದ… ಆಪ್ತನಾಗಿದ್ದ…

ತನ್ನನ್ನು ಹೆತ್ತ ತಕ್ಷಣವೇ ಅಮ್ಮ ತೀರಿಕೊಂಡದ್ದಂತೆ. ಅಪ್ಪ ಮರುಮದುವೆಯಾಗದೆ ಬೆಳೆಸಿದ್ದು. ಒಂದು ದಿನವೂ ಹೊಡೆದವನಲ್ಲ, ಬೈದವನಲ್ಲ. ಓದಿಲ್ಲದ ಅಪ್ಪನಿಗೆ ನಾನು ಓದಿ ಕೆಲಸಕ್ಕೆ ಸೇರಿ ಸಂಪಾದಿಸಬೇಕೆಂಬ ಕನಸಿತ್ತು. ಪಿಯುಸಿಯವರೆಗೆ ತಡೆಯಿಲ್ಲದೆ ಪಾಸಾಗಿ ಬಂದವನಿಗೆ ಕಾಲೇಜು ಸೇರಿದ ಮೇಲೆ ಅದೇನಾಯಿತೋ… ಕಾಲೇಜಿಗೆ ಬರುತ್ತಿದ್ದ ಶ್ರೀಮಂತ ಹುಡುಗರ ಸಹವಾಸಕ್ಕೆ ಸೇರಿ ಶೋಕಿಗೆ ಬಿದ್ದಾಗ ಅಪ್ಪ ಬಾರಿಬಾರಿಗೂ ಹೇಳಿದ್ದ. “ಮಗಾ, ದೊಡ್ಡೋರ ಸಾವಾಸ ಬ್ಯಾಡ, ಎಂತದೇ ಆದ್ರೂ ಅವ್ರಿಗೆ ತಡ್ಕಳಾ ಬಲವಿದೆ. ನಾನು ದುಡಿಯೋದು ನಮ್ಮಿಬ್ರ ಊಟಬಟ್ಟೆಗೆ, ನಿನ್ನೋದಿಗೆ ಸಮಾಸಮ ಅಷ್ಟೇ. ನೀ ಯಂತಾರೂ ಮಾಡಿ ಚಂದ ಓದಿ ಒಂದು ಕೆಲ್ಸ ಹಿಡ್ದು ಮದಿವ್ಯಾಗು ಮತ್ತೆ. ಜೀವ್ನ ನೇರಾಗ್ತದೆ”. ಆ ಮಾತುಗಳು ತಲೆಯ ಮೇಲೆ ಹಾರಿಹೋದವಷ್ಟೇ. ಆ ವಯಸ್ಸಿನ ಆಕರ್ಷಣೆ…!?

***

ಪಕ್ಕದ ಸೀಟಿಗೆ ಒಬ್ಬ ನಡುವಯಸ್ಕ ಬಂದು ಕುಳಿತ. ಅವನ ಇರಸರಿಕೆ ನೋಡಿದರೆ ಯಾವುದೋ ಒಳ್ಳೆಯ ವ್ಯಾಪಾರಸ್ಥನ ಹಾಗಿದೆ. ಯಾರಾದರೆ ತನಗೇನು? ಏನೂ ಮಾತಾಡದೆ ಅವನು ತನ್ನ ಬ್ರೀಫ್‌ಕೇಸನ್ನು ತಲೆಯ ಮೇಲಿನ ಅಟ್ಟದಲ್ಲಿಟ್ಟ. ಇನ್ನೊಂದು ಊಟದ ಬ್ಯಾಗೇನೋ… ತನ್ನ ಕಾಲಬುಡದಲ್ಲೇ ಇಟ್ಟುಕೊಂಡು ಕುಳಿತ. ಅವನೂ ಈ ಊರಿನವನಿರಲಿಕ್ಕಿಲ್ಲ. ಅಲ್ಲಿಯವನೇ ಯಾರೋ. ಸಧ್ಯ! ಮಾತಾಡುವ ಉತ್ಸಾಹ ತೋರದೆ ತನ್ನ ಮೊಬೈಲ್ನಲ್ಲಿ ಮುಖ ತೂರಿದ.

ಬಸ್ಸು ಹೊರಟಿತು. ನಂತರವೂ ಎಷ್ಟೋ ಹೊತ್ತು ಮೇಲಿಂದ ಮೇಲೆ ಅವನ ವ್ಯವಹಾರದ, ಹೆಂಡತಿಯ, ಮಕ್ಕಳ ಕರೆಗಳು ಬರುತ್ತಿದ್ದವು. ಅದರಲ್ಲೇ ಮುಳುಗಿಹೋದ. ಕಿವಿಯಮೇಲೆ ಬೀಳುತ್ತಲೇ ಇದ್ದ ಮಾತುಗಳಿಂದ ಯೋಚನೆಗೆ ಭಂಗ ಬಂದಂತಾಗಿ ಕರೆಕರೆಯಾಗತೊಡಗಿತು. ಕಿಟಕಿಯ ಗ್ಲಾಸನ್ನು ಪಕ್ಕಕ್ಕೆ ಸರಿಸಿ ಹೊರಗೆ ಮುಖಮಾಡಿ ಕುಳಿತ. ಮತ್ತೆ ತಲೆಯಲ್ಲಿ ಹಳೆಯ ನೆನಪುಗಳು ಎದ್ದು ಬರತೊಡಗಿದವು…

***

ಕ್ಲಬ್ಬು, ಇಸ್ಪೀಟು, ಬಾರು ಎಲ್ಲಾ ಕಂಡಿದ್ದಾಯ್ತು. ಅವರೆಂದೂ ನನ್ನನ್ನ ದುಡ್ಡೂ ಕೇಳಲಿಲ್ಲ, ಹಂಗಿಸಲೂ ಇಲ್ಲ. ಅವರಿಗೆ ಬೇಕಿದ್ದದ್ದು ನಾನು ಬರೆದುಕೊಳ್ಳುತ್ತಿದ್ದ ನೋಟ್ಸಷ್ಟೇ. ಅದಕ್ಕೆ ಪ್ರತಿಫಲವಾಗಿ ನನಗೆ ಎಲ್ಲ ಮೋಜುಗಳೂ ಸಿಗುತ್ತಿದ್ದವು. ಹೀಗೇ ಬಾರಲ್ಲಿ ಕೂತಾಗೊಮ್ಮೆ ಯಾರೊಂದಿಗೋ ಜಗಳ ಶುರುವಾಗಿದ್ದು… ಅದೂ ಎಂತಹ ಕ್ಷುಲ್ಲಕ ಕಾರಣಕ್ಕೆ. ನಾವು ಕರೆದದ್ದಕ್ಕೆ ಬಂದ ಬಾರ್‌ಅಟೆಂಡರ್ ನಮ್ಮ ಆರ್ಡರ್‌ ಕೇಳುವ ಮುನ್ನವೇ ಪಕ್ಕದ ಟೇಬಲ್ಲಿನ ಆರ್ಡರ್‌ ತೆಗೆದುಕೊಳ್ಳಲು ಹೋದ. ಅಲ್ಲಿ ಕುಳಿತಿದ್ದವರು ಮಿನಿಸ್ಟರ್‌ ಮಗನ ಗುಂಪಿನವರಂತೆ… ಅವರು ಯಾರಾದರೇನು? ನಾವು ಮೊದಲು ಕರೆದಿದ್ದು ಎನ್ನುವುದು ನಮ್ಮ ಗುಂಪಿನ ಜಗಳ. ಇನ್ನೊಂದು ಗುಂಪಿಗೆ ರಾಜಕೀಯ ಬಲವೂ ಇತ್ತಲ್ಲ; ಅವರೂ ತೋಳೇರಿಸಿಕೊಂಡೇ ಬಂದರು.

ನಮ್ಮ ಲೀಡರ್‌ನ ಕತ್ತಿನ ಪಟ್ಟಿ ಹಿಡಿದು ರಪ್ಪನೆ ಕೆನ್ನೆಗೆ ಬಾರಿಸಿದ ಆ ನಾಯಕ. ನಾವು ಸುಮ್ಮನಿರುವುದು ಹೇಗೆ? ಎದುರು ಗುಂಪಿನವರನ್ನು ಚಚ್ಚಲು ಎಲ್ಲರೂ ಮುಂದಾದರು. ಹೆದರಿ ಮೂಲೆಯಲ್ಲಿ ನಿಂತೆ. ನಮ್ಮ ಲೀಡರ್‌ ಸೋಲಲು ಸಾಧ್ಯವೇ? ಎದುರಿಗಿದ್ದ ಬಾಟಲನ್ನು ಮೇಜಿಗೊಡೆದು ಒಡೆದ ಬಾಟಲಿಯಿಂದ ಚುಚ್ಚಿ ʻಸಾಯಿಸೇಬಿಡ್ತೀನಿʼ ಎನ್ನುತ್ತಾ ಮುನ್ನುಗ್ಗಿದ. ಪುಣ್ಯಕ್ಕೆ ಏಟು ಎದುರಿನವನ ತೋಳಿಗೆ ಬಿದ್ದು ಪ್ರಾಣಾಪಾಯವಾಗಲಿಲ್ಲ; ಆದರೆ ರಕ್ತ ಚಿಲ್ಲನೆ ಚಿಮ್ಮಿ ಆ ಟೇಬಲ್‌, ನಮ್ಮ ಟೇಬಲ್‌ ಎಲ್ಲಾ ರಕ್ತಮಯವಾಯಿತು. ಅಷ್ಟರಲ್ಲಾಗಲೇ ಓಡಿಬಂದ ಬಾರ್‌ ಮ್ಯಾನೇಜರ್‌, ಭದ್ರತಾ ಸಿಬ್ಬಂಧಿ ಎರಡೂ ಗುಂಪಿನವರನ್ನೂ ಬೇರೆ ಬೇರೆ ಮಾಡಿ, ಅಂಬುಲೆನ್ಸ್‌ಗೆ ಫೋನ್‌ ಮಾಡಿ ಅವನನ್ನು ಆಸ್ಪತ್ರೆಗೆ ಕಳಿಸಿದರು. ಪೋಲೀಸರಿಗೂ ಕರೆಹೋಯ್ತು. ಮಿನಿಸ್ಟರ್‌ ಕಡೆಯವರಾದ್ದರಿಂದ ಅವರ‍್ಯಾರನ್ನೂ ಮುಟ್ಟದೆ ನಮ್ಮನ್ನೆಲ್ಲಾ ಎಳೆದೊಯ್ದರು.

ʻಅಟೆಂಪ್ಟ್‌ ಟು ಮರ್ಡರ್‌ʼ ಕೇಸಾಯಿತು. ಕೋರ್ಟಿಗೆ ಕರೆತಂದಾಗ ಮಿಕ್ಕವರನ್ನೆಲ್ಲಾ ಅವರವರ ತಂದೆತಾಯಿಯರು ಜಾಮೀನಿನ ಮೇಲೆ ಬಿಡಿಸಿಕೊಂಡು ಹೋದರು. ನಾನೊಬ್ಬ ಹರಕೆಯ ಕುರಿಯಾಗಿದ್ದೆ! ಎರಡು ಲಕ್ಷ ರೂಪಾಯನ್ನು ಕಟ್ಟುವ ಶಕ್ತಿ ಅಪ್ಪನಲ್ಲಿರಲಿಲ್ಲ. “ಮಗಾ, ನನ್ನೇ ಮಾರ‍್ಕೊಂಡ್ರೂ ಐವತ್ತು ಸಾವ್ರಾನೂ ಉಟ್ಟಲ್ಲ, ಜಾಮೀನಿಗೆ ಎರಡ್ಲಕ್ಸ ಎಲ್ಲಿಂದ ತರ‍್ಲಿ?” ಎಂದು ಅಳುತ್ತಾ ಮೇಲೆ ನೋಡಿ ಕೈಮುಗಿದ. ನಾನು ಜೈಲೊಳಗೆ ಹೋದೆ… 

ತಪ್ಪು ಮಾಡಿ ಶಿಕ್ಷೆ ಅನುಭವಿಸುವುದು ಒಂದು ರೀತಿ. ಸುಮ್ಮನೆ ಜೊತೆಗೆ ನಿಂತಿದ್ದಕ್ಕೆ ನನಗೆ ಜೈಲುವಾಸ, ಇರಿದವನಿಗೆ ಹಾಯಾಗಿ ಮನೆವಾಸ. ಅಪ್ಪ ಹೇಳುತ್ತಿದ್ದ ಮಾತುಗಳು ಈಗ ನಿಜಕ್ಕೂ ಅರ್ಥವಾಗುತ್ತಿದ್ದವು. ಪ್ರಯೋಜನವೇನು ಊರೆಲ್ಲಾ ಕೊಳ್ಳೆ ಹೊಡೆದಮೇಲೆ…! ಎಂಥೆಂಥಾ ಜನರನ್ನು ಕಂಡಿದ್ದಾಯಿತು ಆ ನರಕವಾಸದಲ್ಲಿ. ಕ್ರೂರಿಗಳು, ಕಳ್ಳಕಾಕರು, ಕೊಲೆಗಡುಕರು ಅವರ ಜೊತೆ ತನ್ನಂಥವರೂ… ನ್ಯಾಯವನ್ನು ಕೊಂಡುಕೊಳ್ಳುವ ಶಕ್ತಿಯಿಲ್ಲದವನು ಜೈಲು ಅನುಭವಿಸುತ್ತಾನೆ ಅನ್ನಿಸಿಬಿಟ್ಟಿತು! ಮಿಕ್ಕವರೆಲ್ಲರೂ ಆರಾಮಾಗಿ ಹೊರಗೆ ತಿರುಗುತ್ತಿದ್ದಾಗ ಕೇಸು ಮುಗಿಸುವ ಅವಸರ ಯಾರಿಗಿತ್ತು! ಅವರು ಬಂದಾಗ ಇವರಿಲ್ಲ, ಇವರು ಬಂದಾಗ ಅವರಿಲ್ಲ ಅನ್ನುತ್ತಾ ವರ್ಷಗಳೇ ಕಳೆದುಹೋದವು. ಅಂತೂ ಕಡೆಗೊಂದು ದಿನ, ಈ ಅಸಹನೀಯ ದಿನಗಳು ಸಾಯುವವರೆಗೂ ಹೀಗೇ ಏನೋ ಅನ್ನಿಸುತ್ತಿರುವಾಗ, ಪ್ರಾಯಶಃ ಅವರವರೇ ಸರಿಮಾಡಿಕೊಂಡಿದ್ದರೇನೋ, ಯಾರ ಅಪರಾಧವೂ ಸಾಬೀತಾಗದೆ ಕೇಸು ಖುಲಾಸೆಯಾಗಿ ಹೊರಬಂದದ್ದಾಯಿತು. ಕೇಸೇನೋ ಖುಲಾಸೆಯಾಯಿತು. ಆದರೆ ಜೀವನದಲ್ಲಿ ನಾನು ಕಳೆದುಕೊಂಡ ಏಳು ವರ್ಷಗಳನ್ನು ಹಿಂತಿರುಗಿಸುವ ಶಕ್ತಿ ನ್ಯಾಯಕ್ಕಿತ್ತೆ?!

ಆರು ತಿಂಗಳಿಂದ ಜೈಲಿಗೆ ಬಂದಿರದಿದ್ದ ಅಪ್ಪನನ್ನು ನೋಡುವ ಕಾತರದಿಂದ ಹಳ್ಳಿಗೆ ಹೋದೆ. ಪಾರ್ಶ್ವವಾಯು ಬಡಿದು ಹಾಸಿಗೆ ಹಿಡಿದಿದ್ದವನನ್ನು ಎದುರುಮನೆಯ ಸಂಗಣ್ಣ ತನ್ನ ಮನೆಯಲ್ಲಿರಿಸಿಕೊಂಡು ನೋಡಿಕೊಳ್ಳುತ್ತಿದ್ದ. ಬಾಯಿ ಬಿದ್ದುಹೋಗಿ ಮಾತನಾಡಲು ಸಾಧ್ಯವಾಗದ ಅಪ್ಪ ಕಣ್ಣೀರು ಸುರಿಸತೊಡಗಿದ. ಪಕ್ಕದಲ್ಲಿ ಕುಳಿತು ಕೈ ಹಿಡಿದುಕೊಂಡೆ. “ನಾನು ಬಂದಿದೀನಿ, ನಿನ್ನ ಚೆನ್ನಾಗಿ ನೋಡ್ಕೋತೀನಿ” ಎಂದೆ. ಅವನಿಗೆ ಸಂತೋಷವಾಯಿತೆ?! ಗೊತ್ತಾಗಲಿಲ್ಲ… ಮೊದಲು ಏನಾದರೂ ಕೆಲಸ ಹಿಡಿಯಬೇಕಾಗಿತ್ತು. ಊರೀಗ ಸಾಕಷ್ಟು ದೊಡ್ಡದಾಗಿತ್ತು. ಹಳೆಯ ಗೆಳೆಯರ ಕುಟುಂಬದವರದೆಲ್ಲಾ ಅವರವರದೇ ವ್ಯಾಪಾರ ವ್ಯವಹಾರಗಳಿದ್ದವು. ಕೆಲವು ಗೆಳೆಯರನ್ನು ಅವರಪ್ಪಂದಿರು ಬೇರೆ ಊರಲ್ಲೇ ಸ್ಥಾಪಿಸಿದ್ದರು. ಅಲ್ಲೇ ಇದ್ದ ಒಂದಿಬ್ಬರು ನನ್ನೊಂದಿಗೆ ಗುರುತಿಸಿಕೊಳ್ಳಲೂ ಇಷ್ಟಪಡದೆ ಜಾರಿಕೊಂಡರು. ʻಸಧ್ಯಕ್ಕೆ ಎಲ್ಲೋ ಒಂದು ಸಣ್ಣ ಕೆಲಸ ಸಿಕ್ಕರೂ ಸಾಕುʼ ಎಂದುಕೊಂಡು ಭೇಟಿಮಾಡಿದ ಊರಿನ ಒಬ್ಬಿಬ್ಬರು ʻಸಧ್ಯಕ್ಕಿಲ್ಲ, ಏನಾದರೂ ಇದ್ದರೆ ತಿಳಿಸ್ತೀನಿʼ ಎಂದು ನಾಲಿಗೆಯ ತುದಿಯ ಮಾತನ್ನಾಡಿದರಷ್ಟೇ. ಇನ್ನೇನಿಲ್ಲದಿದ್ದರೂ ಸಣ್ಣ ಪುಟ್ಟ ಊರಿನಲ್ಲಿ ಇಂತಹ ವಿಷಯಗಳು ಎಲ್ಲರಿಗೂ ಗೊತ್ತಾಗಿರುತ್ತದೆ ಮತ್ತು ನೆನಪಿನಲ್ಲೂ ಉಳಿದಿರುತ್ತದೆ…

***

ಎಂಟು ಗಂಟೆಯಾಯಿತೇನೋ, ಡ್ರೈವರ್‌ ಎಲ್ಲೋ ಊಟಕ್ಕೆ ನಿಲ್ಲಿಸಿದ. ತಾವೇ ತಂದುಕೊಂಡಿದ್ದವರು ಬುತ್ತಿಗಳನ್ನು ಬಿಚ್ಚಿಕೊಂಡಿದ್ದರು. ಇಡೀ ಬಸ್ಸಿನ ತುಂಬಾ ಬಗೆಬಗೆಯ ಪರಿಮಳ. ಪಕ್ಕದಲ್ಲಿದ್ದವನು ಊಟಕ್ಕಿಳಿದು ಹೋದ. ತಾನೂ ಈಗಲೇ ತಿಂದು ಕುಳಿತರೆ ಸರಿ ಎಂದುಕೊಂಡು ಅವನು ತನ್ನ ಬ್ಯಾಕ್‌ಪ್ಯಾಕನ್ನು ಮೇಲಿಂದ ಇಳಿಸಿಕೊಂಡು ಅದರಲ್ಲಿದ್ದ ಬನ್ನು ಮತ್ತು ಬಾಳೆಹಣ್ಣನ್ನು ತೆಗೆದು ತಿನ್ನತೊಡಗಿದ. ಇನ್ನೂ ಎರಡು ಬನ್ನು, ನಾಲ್ಕು ಕಿತ್ತಳೆ ಹಣ್ಣಿದೆ. ನಾಳೆ ಮಧ್ಯಾಹ್ನದವರೆಗೂ ಸಾಕು. ಅಲ್ಲಿಳಿದಮೇಲೆ ಮುಂದಿನ ಕತೆ ನೋಡೋಣ ಎಂದುಕೊಳ್ಳುತ್ತಾ ನೀರುಕುಡಿದು ಬ್ಯಾಕ್‌ಪ್ಯಾಕಿನ ಜಿಪ್ಪೆಳೆದು ಅಲ್ಲೇ ಸೀಟಿನ ಮೇಲಿಟ್ಟ. ಕೆಳಗಿಳಿದು ಶೌಚಾಲಯಕ್ಕೆ ಹೋಗಿ ವಾಪಸಾಗುತ್ತಾ ಬೀಡಾ ಅಂಗಡಿಯ ಮುಂದೆ ಬರುವಾಗ ಸಿಗರೇಟಿನ ಘಮಲು ಸೆಳೆಯಿತು. ʻಇಲ್ಲ ಮತ್ತೆಂದೂ ಅದಕ್ಕೆ ಬೀಳಬಾರದುʼ ಎಂದು ನಿಶ್ಚಯಿಸಿಕೊಂಡಂತೆ ಹತ್ತಿಬಂದು ತನ್ನ ಸೀಟಲ್ಲಿ ಕುಳಿತು ಬ್ಯಾಕ್‌ಪ್ಯಾಕನ್ನು ತೊಡೆಯಮೇಲಿಟ್ಟುಕೊಂಡ. ಪಕ್ಕದವನೂ ಬಂದು ಕುಳಿತ. ಸಿಗರೇಟು ಸೇದಿ ಬಂದಿದ್ದನೇನೋ, ವಾಸನೆ ಗಾಢವಾಗಿ ಬಡಿಯುತ್ತಿತ್ತು. ಬಸ್ಸು ಹೊರಟಿತು. ಮತ್ತೆ ಕಿಟಕಿಯಿಂದ ಹೊರನೋಡತೊಡಗಿದ. ಸ್ವಲ್ಪ ಹೊತ್ತಿನ ನಂತರ ಪಕ್ಕದವನು ಇಂಗ್ಲೀಷಿನಲ್ಲಿ “ದಯವಿಟ್ಟು ಕಿಟಕಿ ಮುಚ್ತೀರಾ. ತಣ್ಣಗಿನ ಗಾಳಿ ಬಡಿಯುತ್ತಿದೆ” ಎಂದ. ಅವನು ಮಾತಿಲ್ಲದೆ ಮುಚ್ಚಿದ. ಸ್ವಲ್ಪ ಹೊತ್ತಿನಲ್ಲೇ ಬಸ್ಸಿನ ದೀಪ ಆರಿತು. ಪಕ್ಕದವನು ಸೀಟನ್ನು ಹಿಂದಕ್ಕೆಳೆದು ಕಾಲನ್ನು ಚಾಚಿ ಶಾಲನ್ನು ಹೊದ್ದುಕೊಂಡು ನಿದ್ರಾಭಂಗಿಗೆ ಜಾರಿದ. ಇವನ ಬಳಿ ಹರಿದಿದ್ದ ಕಂಬಳಿಯನ್ನು ಬಿಟ್ಟರೆ ಹೊದಿಯುವಂತದೇನೂ ಇರಲಿಲ್ಲ. ಚಳಿಯೆನಿಸುತ್ತಿತ್ತು. ತನ್ನ ಬ್ಯಾಕ್‌ಪ್ಯಾಕಿನ ಎರಡೂ ಬೆಲ್ಟಿನೊಳಗೆ ಕೈತೂರಿಸಿ ಬೆಚ್ಚಗೆ ಎದೆಗಪ್ಪಿಕೊಂಡು ನಿದ್ರಿಸಲು ಪ್ರಯತ್ನಿಸಿದ…

***

ಊರಿನಲ್ಲಂತೂ ಕೆಲಸ ಸಿಗುವ ಸಂಭವ ತೀರಾ ಕಡಿಮೆಯಿತ್ತು. ಹಾಗೆಂದು ಈಗಲೂ ಅಪ್ಪನನ್ನು ಬಿಟ್ಟು ಹೋಗುವುದು ಹೇಗೆ ಎನ್ನುವ ಚಿಂತೆ ಕಾಡತೊಡಗಿತು. ಆದರೆ ಅಪ್ಪ ಹೆಚ್ಚುದಿನ ಪರೀಕ್ಷೆಗೊಡ್ಡದೆ ಒಂದು ರಾತ್ರಿ ಮಲಗಿದವನು ಎಚ್ಚರವಾಗಲೇ ಇಲ್ಲ. ತಾನು ಹಿಂತಿರುಗಿ ಬರುವುದನ್ನೇ ಕಾದಿದ್ದನೇನೋ! ಊರಿನ ಋಣ ಹರಿಯಿತೆಂದೆನಿಸಿತು. ಅಪ್ಪನಿಲ್ಲದ ಮೇಲೆ ಇಲ್ಲಿನ ವ್ಯಾಮೋಹವೇಕೆ? ಯಾವೂರಾದರೂ ಒಂದೇ, ಇಲ್ಲೇ ಇದ್ದು, ಸಂಶಯದ, ಅವಮಾನದ ಅಸಹನೀಯ ನೋಟವನ್ನು ಎದುರಿಸುವುದಕ್ಕಿಂತ ಬೇರೆ ಊರಿನಲ್ಲಿ ಕೂಲಿ ಮಾಡಿ ಬದುಕುವುದೂ ಒಳ್ಳೆಯದೇ ಅನ್ನಿಸಿಬಿಟ್ಟಿತು. ಜೈಲಿನಲ್ಲಿ ಅಷ್ಟು ದಿನವೂ ಮಾಡುತ್ತಿದ್ದಿದ್ದು ಅದನ್ನೇ ತಾನೆ. ಅದರಲ್ಲಿ ಗಳಿಸಿದ ಹಣವೆಂದು ಒಂದಷ್ಟನ್ನು ಬಿಡುಗಡೆಯಾದಾಗ ಕೊಟ್ಟಿದ್ದಾರಲ್ಲ! ಅಪ್ಪನನ್ನು ನೋಡಿಕೊಳ್ಳುತ್ತಿದ್ದ ಸಂಗಣ್ಣನ ಮನೆಯವರಿಗೆ ಮನೆಯಲ್ಲಿದ್ದ ಪಾತ್ರೆ ಪಡಗ, ಟೈಲರಿಂಗ್‌ ಮೆಶೀನ್‌ ಕೊಟ್ಟು ಊರು ಬಿಡುವ ನಿರ್ಧಾರ ಕೈಗೊಂಡಿದ್ದಾಯಿತು.

ಈಗ ಹೋಗುತ್ತಿರುವ ಊರು ತಾನು ಓದುತ್ತಿದ್ದ ಕಾಲದಲ್ಲಿ ಭೂಗೋಳದ ಪುಸ್ತಕದಲ್ಲಿ ಹೆಸರು ನೋಡಿದ್ದಷ್ಟೇ. ಸಾಕಷ್ಟು ದೊಡ್ಡ ಊರೇ ಇರಬೇಕು. ಬೇಕಾದಷ್ಟು ಹತ್ತಿಯ ಮಿಲ್‌ಗಳಿವೆ ಎಂಬಂತೆ ಜ್ಞಾಪಕ. ಎಲ್ಲಾದರೊಂದು ಕಡೆ ಪ್ರಯತ್ನ ಮಾಡಬಹುದು. ನೋಡೋಣ ಏನು ಕಾದಿದೆಯೋ ಭವಿಷ್ಯದಲ್ಲಿ… ಹೌದೂ… ಅಪ್ಪ ಸತ್ತ ತಕ್ಷಣವೇ ಸಾಯಬೇಕೆಂದು ಏಕನಿಸಲಿಲ್ಲ?! ಅವನಿಗಾಗಿಯೇ ಬದುಕಬೇಕೆಂದುಕೊಂಡವನು ಅವನು ಸತ್ತ ನಂತರವೂ ಬದುಕಿದ್ದೇನಲ್ಲ! ಸಾವನ್ನು ಕಂಡರೆ ಭಯವೇ?! ಜೈಲಿನಲ್ಲಿದ್ದಾಗಲೇ ಎಷ್ಟೋ ಬಾರಿ ಆತ್ಮಹತ್ಯೆಯ ಯೋಚನೆ ಬಂದಿದ್ದಾಗಲೂ, ಅಪ್ಪನ ನೆನಪಾದಾಗ ಅದು ಹಾಗೇ ಕರಗಿಹೋಗುತ್ತಿತ್ತು. ಆದರೆ ಈಗ ಅಪ್ಪನೇ ಇಲ್ಲ; ತಾನು ಬದುಕಿದ್ದು ಮಾಡುವುದಾದರೂ ಏನಿದೆ? ಆಲೋಚನೆಗಳು ಈ ದಿಕ್ಕಿನಲ್ಲಿ ಓಡುತ್ತಿರುವಾಗ ಅವನು ಯೋಚನೆಯ ಭಾರದಿಂದ ಕಂಗೆಟ್ಟ. ಮುಚ್ಚಿದ ಗ್ಲಾಸಿನ ಕಿಟಕಿಯ ಹೊರಗೆ ಗವ್ವೆನ್ನುವ ಕತ್ತಲೆ. ಯಾವುದೋ ಸಣ್ಣ ಟೀ ಅಂಗಡಿಯ ಮುಂದೆ ಬಸ್ಸು ನಿಂತಿತು. ಯಾರೂ ಇಳಿಯಬೇಡಿ ಎಂದು ಎಚ್ಚರಿಕೆ ನೀಡಿದ ಕಂಡಕ್ಟರ್‌ ಡ್ರೈವರ್‌ನೊಂದಿಗೆ ಕೆಳಗಿಳಿದು ಹೋಗಿ ಇಬ್ಬರೂ ಟೀ ಕುಡಿದು, ಒಂದು ದಂ ಹೊಗೆಯನ್ನು ಎಳೆದು ಬಂದು ಬಸ್ಸನ್ನು ಹತ್ತಿದರು. ಬಸ್ಸು ನಿಧಾನವಾಗಿ ಮುಂದೆ ಸಾಗಿತು. ಘಾಟ್‌ ಸೆಕ್ಷನ್ನಿನ ಆರಂಭವೇನೋ… ಇನ್ನು ಹೊಟ್ಟೆ ತೊಳಸುತ್ತದೆ. ಕಣ್ಣುಮುಚ್ಚಿ ನಿದ್ರಿಸಲು ಯತ್ನಿಸುವುದೇ ಮೇಲು ಎಂದುಕೊಂಡವನು ಹಿಂದಕ್ಕೊರಗಿ ಕಣ್ಮುಚ್ಚಿಕೊಂಡ. ಸ್ವಲ್ಪ ಹೊತ್ತಿನಲ್ಲೇ ಮಂಪರಾವರಿಸಿತು…

***

ಧಡ್‌ ಧಡ್‌ ಧಢಾಲ್‌… ಭಡ್‌ ಢಗ್…‌ ಭಢಾರ್…‌ ಭಡ್‌ ಭಡ್‌ ಭಡ್ ಎನ್ನುತ್ತಾ ಬಸ್ಸು ಯಾವುದಕ್ಕೋ ಡಿಕ್ಕಿಹೊಡೆದ ಹಾಗಾಯಿತು… ಜೋರಾಗಿ ಅಲುಗಾಡಿದ ಬಸ್ಸಲ್ಲಿ ಚೀರಾಟ ಶುರುವಾಯಿತು… ಇವನು ಕುಳಿತಿದ್ದ ಜಾಗ ಎಮರ್ಜೆನ್ಸಿ ಎಕ್ಸಿಟ್‌ ಪಕ್ಕದ್ದು… ಅರ್ಥವಾಗುವ ಮುಂಚೆಯೇ ಆ ಹೊಡೆತದ ರಭಸಕ್ಕೆ ಅದರ ಬಾಗಿಲು ಧಢಾಲನೆ ತೆರೆದುಕೊಂಡು ಇವನು ಪಕ್ಕದ ಕಣಿವೆಗೆ ಉರುಳಿದ್ದ. ಬಸ್ಸೂ ಉರುಳಿತೆ?! ಮಿಕ್ಕ ಜನರ ಗತಿ ಏನಾಯಿತು? ಏನೂ ಗೊತ್ತಾಗಲಿಲ್ಲ… ಜ್ಞಾನ ತಪ್ಪಿತು… ಉರುಳುತ್ತಾ ಹೋಗಿ ಅದ್ಯಾವುದೋ ದೊಡ್ಡ ಮರದ ಬೊಡ್ಡೆಗೆ ಅಡ್ಡವಾಗಿ ಬಿದ್ದ… ತೋಳುಗಳಿಗೆ ತೂರಿಸಿಕೊಂಡಿದ್ದ ಬ್ಯಾಕ್‌ಪ್ಯಾಕ್‌ನ ಹಿಡಿಕೆ ಕಿತ್ತು ಮತ್ತಷ್ಟು ದೂರದಲ್ಲಿ ಬಿತ್ತು… ಮಬ್ಬಾದ ರಾತ್ರಿ… ಮಂಪರು, ಕನಸು, ಯೋಚನೆ ಏನೂ ಇಲ್ಲದ ನಿಶ್ಯಬ್ದ ತಲೆಯೊಳಗೆ… ಹೊರಗೆ………

***

ಎಚ್ಚರಾದಾಗ ಮಧ್ಯಾಹ್ನದ ಬಿಸಿಲು… ಅದೆಷ್ಟು ಹೊತ್ತಾಗಿತ್ತೋ… ನಿಧಾನವಾಗಿ ಏಳಲು ಯತ್ನಿಸಿದ… ಮೈಯೆಲ್ಲಾ ನೋವು, ವಿಪರೀತ ಆಯಾಸ… ಎದ್ದು ಕುಳಿತು ನೋಡಿಕೊಂಡ… ಕೈಕಾಲುಗಳಿಗೆ ತರಚು ಗಾಯಗಳಾಗಿದ್ದವು; ಮುರಿದಂತಿಲ್ಲ, ಹಣೆಗೆ ಏನೋ ತಗುಲಿ ಗಾಯವಾಗಿದ್ದು ರಕ್ತವೂ ಸುರಿದಿತ್ತೇನೋ… ಈಗ ಒಂದು ಸಣ್ಣ ಆಲೂಗಡ್ಡೆಯಂತೆ ಊದಿಕೊಂಡು ರಕ್ತ ನಿಂತಿತ್ತು. ಜೋರಾದ ಶಬ್ದ… ಬಸ್ಸು ಎರ್ರಾಬಿರ್ರಿ ಅಲುಗಾಡಿದ್ದು… ಚೀರಾಟ… ತಾನು ಎಡಪಕ್ಕಕ್ಕೆ ಎಸೆದಂತೆ ಬಿದ್ದಿದ್ದು ಅಷ್ಟೇ ಜ್ಞಾಪಕಕ್ಕೆ ಬಂದಿದ್ದು… ಹಾಗಾದರೆ ಬಸ್‌ ಆಕ್ಸಿಡೆಂಟ್‌ ಆಗಿದೆ…! ಬಸ್ಸೆಲ್ಲಿ? ಬಸ್ಸಲ್ಲಿದ್ದ ಮಿಕ್ಕವರೆಲ್ಲಿ? ತಲೆಯೆತ್ತಿ ನೋಡಿದ ಏನೂ ಕಾಣಲಿಲ್ಲ, ಏನಾಯಿತೋ! ಉರುಳುತ್ತಾ ಬೇರೆಲ್ಲಾದರೂ ಬಿದ್ದಿದೆಯೋ… ಅವುಚಿಕೊಂಡಿದ್ದ ಚೀಲ… ಸುತ್ತ ಮುತ್ತ ಕಣ್ಣು ಹಾಯಿಸಿದ… ಹಾ… ಕತ್ತೂ ನೋಯುತ್ತಿದೆ… ಹೊಟ್ಟೆ ಹಸಿಯುತ್ತಿದೆ, ಬ್ಯಾಗ್‌ ಸಿಕ್ಕರೆ ತಿನ್ನಲು ಸಿಗುತ್ತೆ. ಆದರೆ ಬ್ಯಾಗೆಲ್ಲಿ? ಕಷ್ಟಪಟ್ಟು ಎದ್ದು ನಿಂತ. ಸ್ವಲ್ಪ ದೂರ ನಡೆದು ಮತ್ತೆ ಸುತ್ತಾ ಕಣ್ಣಾಡಿಸಿದ. ಅಲ್ಲೆಲ್ಲೋ ಪೊದೆಗಳಿಗೆ ಏನೋ ಕೆಂಪುಬಣ್ಣದ್ದು ಸಿಕ್ಕಿಕೊಂಡಂತಿದೆ. ಕಷ್ಟದಿಂದ ಅದರ ಹತ್ತಿರಕ್ಕೆ ಹೋದ. ಹೌದು, ಅವನ ಬ್ಯಾಗೇ. ಮುಳ್ಳಿನ ಪೊದೆಯೊಳಗೆ ಸೇರಿಹೋಗಿತ್ತು. ನಿಧಿ ಕಂಡಂತಾಗಿ ಮುಳ್ಳಿನ ಕಾಂಡಗಳನ್ನು ಪಕ್ಕಕ್ಕೆ ಸರಿಸುತ್ತಾ ಅಂತೂ ಬ್ಯಾಗನ್ನು ಕೈಗೆಟೆಕಿಸಿಕೊಂಡ. ಮೈಕೈ ಮತ್ತಷ್ಟು ತರಚಿತು. ಅಂತೂ ಅದನ್ನು ಬಿಡಿಸಿಕೊಂಡು ಅಲ್ಲೇ ಪಕ್ಕದಲ್ಲಿ ಕುಸಿದು ಕುಳಿತ. ಬ್ಯಾಗನ್ನು ತೆರೆದರೆ ಬನ್ನೆಲ್ಲವೂ ಪುಡಿಪುಡಿಯಾಗಿ ಕಿತ್ತಳೇ ರಸದಲ್ಲಿ ಮುದ್ದೆಯಾಗಿತ್ತು. ಎಂಥದನ್ನೂ ತಿನ್ನಲು ಜೈಲುವಾಸ ಕಲಿಸಿದೆ! ಅದನ್ನೇ ತೆಗೆದುಕೊಂಡು ತಿನ್ನತೊಡಗಿದ. ಯಾವ ರುಚಿಯೂ ತಿಳಿಯಲಿಲ್ಲ; ಅಂತೂ ಹೊಟ್ಟೆಗಷ್ಟು ಸಾಮಗ್ರಿ ಬಿದ್ದು ಚೈತನ್ಯ ಬಂದಿತ್ತು. ಬಾಟಲು ನಜ್ಜುಗುಜ್ಜಾಗಿ ನೀರೆಲ್ಲವೂ ಸೋರಿ ಎಲ್ಲೋ ತಳದಲ್ಲಿ ಎರಡು ಗುಟುಕು ನೀರಿತ್ತು; ಅದನ್ನೇ ಅಮೃತವೆಂಬಂತೆ ಕುಡಿದ. ಈಗವನ ಗಮನ ಹರಿದಿದ್ದ, ರಕ್ತದ ಕಲೆಗಳಾಗಿದ್ದ ಬಟ್ಟೆಗಳೆಡೆಗೆ ಹೊರಳಿತು. ಬ್ಯಾಗಿನಿಂದ ತೆಗೆದು ಒದ್ದೊದ್ದೆಯಾಗಿದ್ದ ಬೇರೆಯದನ್ನು ಹಾಕಿಕೊಂಡ. ಹರಿದುಹೋದವನ್ನು ಆ ಪೊದೆಯ ಬುಡಕ್ಕೇ ಎಸೆದು ಸುತ್ತಲೂ ತಿರುಗಿ ನೋಡಿದ.

ಹೆಚ್ಚು ಮರಗಳಿಲ್ಲದ ಈ ಜಾಗದಿಂದ ಸುತ್ತಲಿನ ಒಂದಷ್ಟು ಜಾಗ ಸುಮಾರಾಗಿ ಕಾಣುತ್ತಿದೆ. ಎಲ್ಲೋ ದೂರದಿಂದ ಘಂಟಾನಾದ ಕೇಳಿಸಿದಂತಾಯಿತು. ಆ ದಿಕ್ಕಿನೆಡೆ ಕಣ್ಣು ಹೊರಳಿಸಿದ. ಎಷ್ಟೋ ದೂರದಲ್ಲಿ, ಎಲ್ಲೋ ಮರಗಳ ಮಧ್ಯೆ ಹಳೆಯ ಗೋಪುರವೊಂದರ ಮೇಲ್ಬಾಗದ ತುಣುಕು ಕಾಣಿಸುತ್ತಿದೆ. ಗಂಟೆಯ ಶಬ್ದ ಕೇಳುತ್ತಿದೆಯೆಂದರೆ ಅಲ್ಲಿ ಜನರು ಓಡಾಡುವ ಯಾವುದೋ ದೇವಸ್ಥಾನವಿರಬೇಕು. ಹೇಗಾದರೂ ಸರಿ, ಕತ್ತಲಾಗುವುದರೊಳಗೆ ಅಲ್ಲಿಗೆ ಹೋಗಿ ಸೇರಬೇಕು. ಜನರಿರುವ ಜಾಗವಾದರೆ ಏನಾದರೂ ತಿನ್ನಲು, ಎಲ್ಲಕ್ಕಿಂತ ಹೆಚ್ಚಾಗಿ ಕುಡಿಯಲು ನೀರು ಸಿಗಬಹುದು… ಓ… ಮರೆತು ಹೋಯಿತು. ಉಳಿದಿದ್ದ ಆ ಎರಡು ಗುಟುಕು ನೀರಿನಲ್ಲಿ ಬ್ಯಾಗಲ್ಲಿದ್ದ ಒಂದು ನೋವಿನ ಗುಳಿಗೆಯನ್ನಾದರೂ ನುಂಗಬಹುದಿತ್ತು. ಜ್ವರ ಬಂದಿದೆಯೇ?! ನೋವಿಗೆ ಮೈಯೆಲ್ಲಾ ಬಿಸಿಯಾಗಿದೆಯೇ? ಏನೋ… ಈಗ ಮೊದಲು ಅಲ್ಲಿಗೆ ಹೋಗಿ ತಲುಪಿಕೊಳ್ಳಬೇಕು ಎಂದುಕೊಳ್ಳುತ್ತಾ ನಿಧಾನವಾಗಿ ಇಳಿಯುತ್ತಾ ಹೋದ. ತೀರಾ ಸುಸ್ತಾದಾಗ ಸ್ವಲ್ಪ ಹೊತ್ತು ಕುಳಿತ… ಮತ್ತೆ ನಡೆದ… ಆಗಾಗ ಕೇಳುತ್ತಿರುವ, ಹತ್ತಿರವಾಗುತ್ತಿರುವ ಗಂಟೆಯ ಶಬ್ದ ಅವನಿಗೆ ಒಂದಷ್ಟು ಹುರುಪು ನೀಡುತ್ತಿತ್ತು… ನಿಧಾನವಾಗಿ ಕತ್ತಲಾವರಿಸತೊಡಗಿತು. ಇನ್ನೆಷ್ಟು ದೂರವೋ… ಇದುವರೆಗೂ ಯಾವ ಕಾಡುಮೃಗಗಳೂ ಕಂಡಿಲ್ಲ. ಕತ್ತಲಾದ ಮೇಲೆ ತಾನೆ ಅವು ಹೊರಬರುವುದು. ಅಷ್ಟರೊಳಗೆ ಜನವಸತಿ ಇರುವ ಜಾಗಕ್ಕೆ ಸೇರಿಕೊಂಡುಬಿಡಬೇಕು… ಒಂದೊಂದು ಹೆಜ್ಜೆಯಿಡುವುದೂ ಕಷ್ಟವೆನಿಸುತ್ತಿದೆ. ಏದುಸಿರು ಬರುತ್ತಿದೆ. ಕತ್ತಲಾಗೇ ಹೋಯಿತು… ಒಂದಷ್ಟು ಕುಳಿತ… ಮತ್ತೆದ್ದು ನಡೆದ… ಕುಳಿತ… ನಡೆದ…

ಎಷ್ಟೋ ಹೊತ್ತಿನ ನಂತರ ಅಂತೂ ಈಗ ಸ್ವಲ್ಪ ದೂರದಲ್ಲಿ ದೇವಸ್ಥಾನ ಕಾಣುತ್ತಿದೆ. ಸಾಕಷ್ಟು ದೊಡ್ಡ ದೇವಸ್ಥಾನವೇ ಅನ್ನಿಸುತ್ತಿದೆ. ವಿದ್ಯುದ್ದೀಪವಿಲ್ಲದಿದ್ದರೂ ಅಲ್ಲಲ್ಲಿ ಹಚ್ಚಿರುವ ದೊಂದಿ ಉರಿಯುತ್ತಿದೆ. ಆದರೆ ಯಾರೂ ಓಡಾಡುತ್ತಿರುವ ಸುಳಿವೇ ಇಲ್ಲ. ಘಂಟಾನಾದವೂ ನಿಂತುಹೋಗಿದೆ… ರಾತ್ರಿ ಎಷ್ಟು ಹೊತ್ತಾಗಿದೆಯೋ… ಅಂತೂ ಕಷ್ಟಪಟ್ಟು ದೇವಸ್ಥಾನವನ್ನು ಮುಟ್ಟಿದ. ಪ್ರಾಕಾರದಲ್ಲಿ ಮೂರು ದೇವಸ್ಥಾನಗಳಿವೆ. ದೊಡ್ಡದೆಂದು ಕಾಣಿಸುತ್ತಿದ್ದ ಗುಡಿಯ ಕಿಂಡಿಯಲ್ಲಿಣುಕಿ ನೋಡಿದ. ಶಿವನ ದೇವಸ್ಥಾನ. ನಂದಾದೀಪ ಉರಿಯುತ್ತಿದೆ. ಮಂಕು ಬೆಳಕಿನಲ್ಲಿ ಹೂವಿನ ಅಲಂಕಾರ ಕಾಣುತ್ತಿದೆ. ಸನಿಹದಲ್ಲೆಲ್ಲೋ ಏನೋ ಆಹಾರದ ಘಮಲು ಬರುತ್ತಿದೆ. ವಾಸನೆ ಬರುತ್ತಿದ್ದ ದಿಕ್ಕಿಗೆ ಹೊರಳಿದ ಅಲ್ಲಿ ಇನ್ನೊಂದು ಗುಡಿ. ಅದರ ಬಳಿಗೆ ಹೋದ. ಬಾಗಿಲು ಮುಂದೆ ಹಾಕಿದೆಯಷ್ಟೇ. ತಳ್ಳಿದ ತಕ್ಷಣ ತೆರೆದುಕೊಂಡಿತು. ಯಾವ ದೇವರೋ ಗೊತ್ತಾಗಲಿಲ್ಲ. ಯಾವುದೋ ರೌದ್ರ ಮುಖವಿರುವ ವಿಗ್ರಹ. ಅದರ ಮುಂದಿನ ಹರಿವಾಣದಲ್ಲಿ ಏನೋ ಪ್ರಸಾದವಿದ್ದಂತಿದೆ. ಹತ್ತಿರ ಹೋದ… ಹೌದು ಕಿಚಡಿಯಿರಬೇಕು. ಇನ್ನೂ ಬೆಚ್ಚಗಿದೆ, ಸಾಕಷ್ಟಿದೆ. ಮೂಲೆಯಲ್ಲಿ ಪ್ರಸಾದ ನೀಡುವ ಎಲೆಗಳ ರಾಶಿಯಿದೆ. ಅದರಲ್ಲಿ ದೊಡ್ಡದೊಂದನ್ನು ಆಯ್ದುಕೊಂಡು ಬಂದು ಅದರ ತುಂಬಾ ತುಂಬಿಕೊಂಡ. ದೇವರ ಪಕ್ಕದ ತಾಮ್ರದ ಬಿಂದಿಗೆಯನ್ನು ನೋಡಿದ. ಅದರಲ್ಲಿ ತುಂಬಿದ್ದ ನೀರಿತ್ತು. ಅದರ ಪಕ್ಕದಲ್ಲಿದ್ದ ಚೊಂಬಿನಲ್ಲಿ ತುಂಬಿಕೊಂಡು ಎಲೆಯನ್ನೂ, ಚೊಂಬನ್ನೂ ಹಿಡಿದುಕೊಂಡು ಹೊರಬಂದು ಕಟ್ಟೆಯ ಮೇಲೆ ಕುಳಿತು ಸಾವಕಾಶವಾಗಿ ತಿಂದ… ಇಷ್ಟು ರುಚಿಯಾದದ್ದನ್ನು ಜೀವನದಲ್ಲೇ ಹಿಂದೆಂದೂ ತಿಂದಿರಲಿಲ್ಲವೇನೋ ಎನ್ನುವಂತೆ ಸವಿದು ಸವಿದು ತಿಂದ… ಮಧ್ಯೆ ಮಧ್ಯೆ ನೀರು ಕುಡಿದ… ತೃಪ್ತಿಯಾದ ನಂತರ ಖಾಲಿಯಾದ ಎಲೆಯನ್ನು ಅಲ್ಲೇ ಮೂಲೆಯಲ್ಲಿದ್ದ ಕಸದ ರಾಶಿಗೆಸೆದು ಕೈತೊಳೆದುಕೊಂಡು ಬಂದು ನೋವಿನ ಮಾತ್ರೆ ನುಂಗಿ ಮತ್ತೊಮ್ಮೆ ಒಳಹೋಗಿ ದೇವರಿಗೆ ಉದ್ದಂಡ ನಮಸ್ಕಾರ ಮಾಡುವಾಗ ಅದೇಕೋ ಅಳು ನುಗ್ಗಿ ಬಂತು, ಮನಸೋಯಿಚ್ಛೆ ಬಿಕ್ಕಿ ಬಿಕ್ಕಿ ಅತ್ತ. ಎಷ್ಟೋ ಹೊತ್ತಿನ ಮೇಲೆ ಅಲ್ಲೇ ಒಂದು ಮೂಲೆಯಲ್ಲಿ ಬ್ಯಾಗನ್ನು ತಲೆಯಡಿ ಇಟ್ಟುಕೊಂಡು ಮಲಗಿದ. ಮಲಗಿದ್ದೊಂದೇ ಗೊತ್ತು ಎನ್ನುವಂತೆ ಬೆಳಗಿನ ಝಾವದ ಹಕ್ಕಿಗಳ ಚಿಲಿಪಿಲಿ ಕೇಳುವ ತನಕ ಕನಸುಗಳಿಲ್ಲದ ನಿದ್ರೆ…

ಎಚ್ಚರವಾದ ನಂತರ ಎದ್ದು ಬ್ಯಾಗನ್ನೂ ತೆಗೆದುಕೊಂಡು ಹೊರಬಂದ. ಇನ್ನೂ ಮೈಕೈ ನೋವಿದ್ದರೂ ಸ್ವಲ್ಪ ಮಟ್ಟಿಗೆ ಶಕ್ತಿಕೂಡಿತ್ತು. ನಿಸರ್ಗದ ರಮ್ಯ ತಾಣದಲ್ಲಿದ್ದ ನೂರಾರು ವರ್ಷಗಳ ಹಳೆಯ ದೇವಸ್ಥಾನಗಳು. ಮೂರೂ ದೇವಸ್ಥಾನಗಳ ಸುತ್ತಲೂ ಏನೇನೋ ಪೌರಾಣಿಕ ಕತೆಗಳಿರುವ ಭಿತ್ತಿ ಚಿತ್ರಗಳನ್ನು ಕೆತ್ತಿದ್ದರು. ಇವನಿಗೇನೂ ಅರ್ಥವಾಗಲಿಲ್ಲ. ಸುಮ್ಮನೇ ಮೂರೂ ದೇವಸ್ಥಾನಗಳನ್ನೂ ಸುತ್ತಿಬಂದ. ರಾತ್ರಿ ಆ ಇನ್ನೊಂದು ಮಗ್ಗುಲಲ್ಲಿದ್ದ ದೇವಸ್ಥಾನವನ್ನು ಕಂಡಿರಲಿಲ್ಲ. ಅತ್ತ ಹೋಗಿ ಆ ದೇವಸ್ಥಾನದ ಕಂಡಿಯಲ್ಲಿ ಇಣುಕಿದ. ಸ್ತ್ರೀ ದೇವತೆ. ಪಾರ್ವತಿಯದೇ ಇರಬೇಕು ಅಂದುಕೊಂಡು ಹೊರಗಿಂದಲೇ ಕೈಮುಗಿದು ಪ್ರಾಕಾರದಿಂದ ಹೊರಬಂದ. ಹತ್ತಿರದಲ್ಲೆಲ್ಲೂ ಜನವಸತಿ ಇರಲಿಲ್ಲ. ದೇವಸ್ಥಾನದ ಮುಂದಿನಿಂದ ಬಲಗಡೆಗೆ ಓರೆಯಾಗಿ ಒಂದು ರಸ್ತೆ ಉದ್ದಕ್ಕೆ ಸಾಗಿತ್ತು. ಪ್ರಾಯಶಃ ಅದು ಜನವಸತಿಯಿರುವ ಊರಿನ ಕಡೆ ಸಾಗುವ ರಸ್ತೆಯೇನೋ ಅಂದುಕೊಂಡ. ಎಡಗಡೆಗೆ ತಾನು ಬಂದಿದ್ದ ಕಾಲು ದಾರಿ. ಸ್ವಲ್ಪ ದೂರದಲ್ಲೊಂದು ಸಣ್ಣ ನೀರಿನ ಝರಿಯಿದ್ದಂತೆ ತೋರಿತು. ರಾತ್ರಿಯ ಕತ್ತಲಲ್ಲಿ ಕಂಡಿರಲಿಲ್ಲ. ಅದರ ಬಳಿ ಹೋಗಿ ತನ್ನ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಸ್ನಾನ ಮಾಡಿ ಬಟ್ಟೆಗಳನ್ನು ಧರಿಸಿಕೊಂಡ. ಅಲ್ಲಿ ಯಾರೋ ಬಿಸಾಡಿದ ಬಿಸ್ಲೇರಿ ಬಾಟಲು ಬಿದ್ದಿತ್ತು. ಅದನ್ನೊಮ್ಮೆ ತೊಳೆದುಕೊಂಡು ನೀರನ್ನು ತುಂಬಿಕೊಂಡು ದೇವಸ್ಥಾನದೆಡೆಗೆ ನಡೆದ. 

ಅಷ್ಟರಲ್ಲಾಗಲೇ ದೇವಸ್ಥಾನದ ಪೂಜಾರಿ ಬಂದಿದ್ದರೇನೋ, ಜೊತೆಗೆ ಇನ್ನೊಂದಿಷ್ಟು ಜನರೂ ಇದ್ದರು. ಎಲ್ಲರೂ ಆ ಮೂರೂ ದೇವಸ್ಥಾನಗಳಿಗೆ ಓಡಾಡುತ್ತಾ ತಮ್ಮ ತಮ್ಮಲ್ಲೇ ಏನೋ ಗಾಭರಿಯಿಂದ ಮಾತಾಡಿಕೊಳ್ಳುತ್ತಿದ್ದಂತಿತ್ತು. ಸ್ವಲ್ಪ ಹೊತ್ತಿನಲ್ಲೇ ಇನ್ನೊಂದಷ್ಟು ಜನರು ಸೇರಿದರು. ಅವರವರಲ್ಲೇ ಏನೋ ಗುಸುಗುಸು ಮಾತುಗಳು ಆರಂಭವಾಯಿತು. ಎಲ್ಲರ ಮುಖದಲ್ಲೂ ಏನೋ ಭಯ ಆತಂಕ ಎದ್ದು ತೋರುತ್ತಿತ್ತು. ಇವನಿಗೆ ಏನೂ ಅರ್ಥವಾಗಲಿಲ್ಲ. ಏನೆಂದು ಕೇಳಲು ಅವರ ಭಾಷೆ ತಿಳಿಯದು. ಸ್ವಲ್ಪ ಹೊತ್ತಿನಲ್ಲೇ ಶಿವನಾಲಯದಲ್ಲಿ ಪೂಜೆ ಆರಂಭವಾಯಿತು. ಇವನೂ ಹೋಗಿ ಮಿಕ್ಕವರ ಜೊತೆ ಕುಳಿತುಕೊಂಡು ಪೂಜೆ ಮುಗಿಯುವ ತನಕವೂ ನೋಡಿದ. ಹೊತ್ತಾಗುತ್ತಾ ಬಂದ ಹಾಗೆ ರಾತ್ರಿ ನಿರ್ಜನವಾಗಿ ಕಂಡದ್ದೇ ಸುಳ್ಳು ಅನ್ನುವ ಹಾಗೆ ಬೇಕಾದಷ್ಟು ಜನ ಸೇರತೊಡಗಿದರು. ಬೇರೆ ಊರಿಗಳಿಂದಲೂ ಕಾರುಗಳು, ಜೀಪುಗಳು, ವ್ಯಾನುಗಳು ಬರತೊಡಗಿದವು. ಒಂದೆರಡು ಬಸ್ಸು ಕೂಡಾ ಬಂದು ಯಾತ್ರಿಕರನ್ನು ಇಳಿಸಿತು. 

ಬಂದವರಿಗೆಲ್ಲಾ ಒಬ್ಬ ಗೈಡ್‌ ದೇವಸ್ಥಾನದ ಸುತ್ತಮುತ್ತಲೂ ಕರೆದುಕೊಂಡು ಹೋಗಿ ಎಲ್ಲ ಕತೆಗಳನ್ನು ವಿವರಿಸುತ್ತಿದ್ದ. ಅಲ್ಲಿನ ಭಾಷೆ ಬಾರದವರಿಗೆ, ಹಿಂದಿ ಬಾರದವರಿಗೆ ಹರಕು ಪುರಕು ಇಂಗ್ಲೀಷಿನಲ್ಲಿ ಸ್ಥಳಪುರಾಣವನ್ನು ಹೇಳುತ್ತಿದ್ದ. ಇವನೂ ಬಂದಬಂದವರೆಲ್ಲರ ಜೊತೆಗೆ ಸೇರಿಕೊಂಡು ದೇವಸ್ಥಾನದ ಪ್ರದಕ್ಷಿಣೆ ಹೊಡೆಯುತ್ತಾ ಆ ಕತೆಗಳನ್ನು ಕೇಳಿಯೇ ಕೇಳಿದ. ಅಷ್ಟಿಷ್ಟು ಅರ್ಥಮಾಡಿಕೊಂಡ. ಆ ಕತೆಗಳಿಂದ ಅವನಿಗೆ ಅರ್ಥವಾದದ್ದೇನೆಂದರೆ ಶಿವ ಸತಿಯನ್ನು ಕಳೆದುಕೊಂಡ ಕೋಪದಲ್ಲಿ ಇಡೀ ಭೂಮಂಡಲವನ್ನೇ ರಂಗವನ್ನಾಗಿ ಮಾಡಿಕೊಂಡು ರುದ್ರನರ್ತನ ಮಾಡಿದ್ದಾಗ ಇಲ್ಲೂ ಹೆಜ್ಜೆಯಿರಿಸಿದ್ದ ಜಾಗವಂತೆ ಅದು. ಅವನ ಉಗ್ರತೆಯೇ ಗಣರೂಪವಾಗಿ ಆ ಪಕ್ಕದ ಗುಡಿಯಲ್ಲಿರುವುದಂತೆ. ಈ ದೇಗುಲದ ಇಡೀ ಪ್ರದೇಶ ಆ ಗಣಕ್ಕೆ ಸೇರಿದ್ದು ಅಲ್ಲಿ ಮನುಷ್ಯರಾರೂ ವಾಸಮಾಡುವಂತಿಲ್ಲವಂತೆ. ಏನಿದ್ದರೂ ಬೆಳಗ್ಗೆ ಬಂದು ದೇವರ ಪೂಜೆ, ದರ್ಶನ, ಪ್ರಸಾದ ಎಲ್ಲವನ್ನೂ ಮುಗಿಸಿಕೊಂಡು ಸಂಜೆ ಸೂರ್ಯ ಮುಳುಗುವುದರೊಳಗೆ, ಸಂಜೆಯ ಪೂಜೆ ನೈವೇದ್ಯವಾದ ಮೇಲೆ ದೊಂದಿಗಳನ್ನು ಹಚ್ಚಿಟ್ಟು, ಗಣದ ಮುಂದೆ ಪ್ರಸಾದದ ತಟ್ಟೆಯನ್ನಿಟ್ಟು ಆ ದೇಗುಲದ ಬಾಗಿಲನ್ನು ಹಾಕದೆ ಅರ್ಚಕರೂ ಸಹಾ ತಿರುಗಿನೋಡದೆ ಊರಕಡೆಗೆ ನಡೆದುಬಿಡಬೇಕಂತೆ. ರಾತ್ರಿಯಲ್ಲಿ ಆ ಗಣದೇವ ದೇಗುಲದಿಂದ ಹೊರಬಂದು ಓಡಾಡುತ್ತಾ ಆ ಪ್ರದೇಶವನ್ನೆಲ್ಲಾ ಕಾಯುತ್ತಾನಂತೆ. ಆಗ ಯಾರಾದರೂ ನರಮನುಷ್ಯರು ಕಂಡರೆ ರಕ್ತಕಾರಿ ಅಲ್ಲೇ ಸಾಯುತ್ತಾರಂತೆ. ಬಹಳ ಸತ್ಯದ ದೇವರು. ತುಂಬಾ ನಂಬಿಕೆಯಿಂದ ಜನರು ಇಲ್ಲಿಗೆ ಬರುತ್ತಾರೆ…! ನಂಬಿದವರ ಕಷ್ಟಗಳನ್ನು ಪರಿಹರಿಸುವ ಭಗವಂತನಿವನು. ಹಾಗಾದರೆ ನಿನ್ನೆ ತಾನು ಹೇಗೆ ಉಳಿದೆ??!

***

ಸಂಜೆಯಾಗುತ್ತಾ ಬಂದಂತೆ ದೇವಸ್ಥಾನ ನಿರ್ಜನವಾಗತೊಡಗಿತು. ಕರ್ಪುರ ಕರಗಿದಂತೆ ಅದು ಹೇಗೋ ಒಬ್ಬೊಬ್ಬರೇ ಚದುರಿಹೋದರು. ಇದ್ದುದರಲ್ಲಿ ಸ್ವಲ್ಪ ಪರಿಚಿತನಾಗಿದ್ದ ಹೊರಡುವುದರಲ್ಲಿದ್ದ ಗೈಡನ್ನು ಇವನು “ಇಲ್ಲಿ ರಾತ್ರಿ ಉಳಿದುಕೊಳ್ಳಲು ಸ್ಥಳವಿದೆಯೇ” ಎಂದು ಕೇಳಿದ. “ಇಲ್ಲೆಲ್ಲೂ ಇಲ್ಲ; ಏನಿದ್ದರೂ ಊರಿನೊಳಗೇ. ಹಾಗೆ ಅಲ್ಲಿಯೂ ವಸತಿ, ಊಟದ ವ್ಯವಸ್ಥೆಯೇನೂ ಇಲ್ಲ. ಯಾರಾದರೂ ಸ್ಥಳವಂದಿಗರು ಜಾಗ ಕೊಟ್ಟರೆ ಅವರ ಮನೆಯಲ್ಲಿರಬಹುದು” ಎಂದು ತಾನು ಹೇಳಿದ್ದನ್ನು ಇವನಿಗೆ ಅರ್ಥಮಾಡಿಸಿದ. “ಅಂಥದೇನಾದರೂ ವ್ಯವಸ್ಥೆ ಮಾಡಿಕೊಡಲು ಸಾಧ್ಯವೇ?” ಎಂದಿವನು ಅವನನ್ನೇ ಕೇಳಿದ. “ಸೂರ್ಯ ಮುಳುಗುತ್ತಿದ್ದಾನೆ. ಅರ್ಚಕರೂ ಹೊರಟರು, ಮೊದಲು ಇಲ್ಲಿಂದ ಹೊರಡೋಣ. ದಾರಿಯಲ್ಲಿ ಮಾತಾಡೋಣ” ಎನ್ನುತ್ತಾ ಅವಸರದಿಂದ ಇವನನ್ನೂ ಕರೆದುಕೊಂಡು ಹೊರಟ.

ದಾರಿಯುದ್ದಕ್ಕೂ ಅವನು ಇವನ ಬಗ್ಗೆ ಕೇಳಿದ ಪ್ರಶ್ನೆಗೆ ಹೆಚ್ಚೇನೂ ಹೇಳದೆ ತಂದೆ ಸತ್ತ ಬೇಸರದಲ್ಲಿ ಸುಮ್ಮನೆ ಊರು ಬಿಟ್ಟು ಬಂದೆ ಎನ್ನುವುದನ್ನಷ್ಟೇ ಹೇಳಿದ. ಅವನು ದೇವಸ್ಥಾನದಲ್ಲಿ ತಾನು ಕಳೆದ ಮೂವತ್ತು ವರ್ಷಗಳಿಂದಲೂ ಗೈಡಾಗಿ ಕೆಲಸ ಮಾಡುತ್ತಿರುವುದನ್ನೂ, ಅದರಿಂದ ಬರುವ ಹಣದಿಂದಲೇ ಜೀವನ ನಿರ್ವಹಣೆಯಾಗುತ್ತಿದೆಯೆಂದೂ, ಹೆಂಡತಿ ಹೋಗಿ ಬಹಳ ವರ್ಷಗಳಾದವೆಂದೂ ಹೇಳಿದ. ಎಷ್ಟು ಹೇಳಿದರೂ ಕೇಳದೆ, ತನ್ನ ಒಬ್ಬನೇ ಅಳಿಯ ಈ ದೇವರ ಸತ್ಯ ಪರೀಕ್ಷೆ ಮಾಡಲು ಹೋಗಿ ಕಳೆದ ವರ್ಷ ಕಾರ್ತೀಕ ಅಮಾವಾಸ್ಯೆಯ ರಾತ್ರಿ ದೇವಸ್ಥಾನದಲ್ಲೇ ಮಲಗುವ ಹಟಮಾಡಿ ಉಳಿದುಕೊಂಡನೆಂದೂ, ಆತಂಕದಿಂದ ರಾತ್ರಿಯೆಲ್ಲಾ ನಿದ್ರೆ ಬಾರದೆ ಬೆಳಗಿನ ಝಾವವೇ ತಾನೆದ್ದು ಓಡಿಬರುವ ವೇಳೆಗೆ ಗಣ ದೇವರ ಗುಡಿಯೆದುರು ಸತ್ತು ಬಿದ್ದಿದ್ದನೆಂದೂ, ಅವನ ಮೂಗಿನಿಂದ, ಬಾಯಿಯಿಂದ ರಕ್ತ ಸುರಿಯುತ್ತಿತ್ತೆಂದೂ ಹೇಳಿದ. ಈಗ ಆ ವಿಧವೆ ಮಗಳೂ ತನ್ನೊಂದಿಗಿರುವುದನ್ನೂ ಒಂದಷ್ಟು ಹಿಂದಿಯಲ್ಲಿ, ಒಂದಷ್ಟು ಇಂಗ್ಲೀಷಿನಲ್ಲಿ ಹೇಳಿ ಇವನಿಗೆ ಅರ್ಥಮಾಡಿಸಿದ. ಅಂದಿನಿಂದ ನನಗೂ ದೇವಸ್ಥಾನಕ್ಕೆ ಹೋಗಲು ಬೇಸರವೇ. ಅಳಿಯನ ನೆನಪಾಗದ ದಿನವೇ ಇಲ್ಲ. ವಯಸ್ಸಾಗಿದೆ; ಸೇವೆಯೆಂದು ಮಾಡುತ್ತಿದ್ದೀನಿ ಅಷ್ಟೇ. ಯಾರಾದರೂ ಮಾಡುವವರು ಸಿಕ್ಕರೆ ಬಿಟ್ಟುಕೊಟ್ಟು ಹಾಯಾಗಿರುತ್ತೇನೆ ಎಂದ. 

ಇವನ ತಲೆಯಲ್ಲಿ ಕೋಲಾಹಲವೆದ್ದಿತು… ಮಾತು ಮುಂದುವರೆಸಿದ ಗೈಡು “ನೋಡು, ನಿನ್ನೆ ರಾತ್ರಿ ಗಣದ ಮುಂದಿದ್ದ ಪ್ರಸಾದದ ತಟ್ಟೆಯಿಂದ ಒಂದಿಷ್ಟು ಪ್ರಸಾದ ತೆಗೆದ ಹಾಗಿದೆ. ಅಲ್ಲಿದ್ದ ಕೊಡದ ನೀರಿನಲ್ಲೂ ಒಂದಿಷ್ಟು ಖಾಲಿಯಾದಂತಿದೆ. ಬೆಳಗ್ಗೆ ನಮ್ಮೆಲ್ಲರಲ್ಲೂ ಅದೇ ಒಂದಿಷ್ಟು ಆತಂಕವಾಗಿತ್ತು. ಯಾರಾದರೂ ಮನುಷ್ಯರು ಬಂದಿದ್ದಾದರೆ ಅವರ ಹೆಣ ಅಲ್ಲೇ ಬಿದ್ದಿರುತ್ತಿತ್ತು. ಯಾವುದಾದರೂ ಪ್ರಾಣಿಯೆಂದುಕೊಂಡರೆ ಅದು ಕೊಡದ ನೀರನ್ನು ಅಷ್ಟು ಚೆನ್ನಾಗಿ ಹೇಗೆ ಬಗ್ಗಿಸಿಕೊಂಡು ಕುಡಿದು ಖಾಲಿ ಮಾಡಿರುತ್ತದೆ? ಇದುವರೆಗೂ ಒಂದೇ ಒಂದು ಪ್ರಾಣಿ ಬಂದ ಪ್ರಸಂಗವೂ ಇಲ್ಲ. ಗಣದೇವರೇ ಬಂದು ತಿಂದಿರಬಹುದೇನೋ ಎಂದು ನಮ್ಮೆಲ್ಲರ ನಂಬಿಕೆ. ಯಾವತ್ತೂ ಹೀಗಾಗಿಲ್ಲ. ಈಗ ಹೀಗೆ ಪ್ರತ್ಯಕ್ಷವಾಗಿದೆಯೆಂದರೆ ಏನಾದರೂ ಅನಾಹುತ ಕಾದಿದೆಯೇನೋ ಎಂದು ಅರ್ಚಕರಿಗೆ, ಆಡಳಿತ ಮಂಡಳಿಯವರಿಗೆ ಚಿಂತೆಯಾಗಿದೆ” ಎಂದ. ನಿನ್ನೆ ರಾತ್ರಿಯ ವಿಷಯ ಅವನೊಂದಿಗೆ ಹೇಳಬೇಕೋ, ಬೇಡವೋ ಎಂಬ ಜಿಜ್ಞಾಸೆಯಲ್ಲೇ ಇವನು ಮೌನವಾಗಿ ಜೊತೆ ಸಾಗಿದ…

“ಇನ್ನೇನು ಊರು ಬಂತು, ನೀನೇನು ಮಾಡುತ್ತಿ? ಅಗೋ ಅಲ್ಲಿ ಲೈಟುಕಂಬದ ಪಕ್ಕದಲ್ಲಿ ಕಾಣುತ್ತಿರುವುದೇ ನಮ್ಮನೆ. ಬೇಕಾದರೆ ಜಗಲಿಯ ಮೇಲೆ ಮಲಗಿಕೋ. ಹೇಗೂ ಸಾಕಷ್ಟು ಪ್ರಸಾದ ತಂದಿದ್ದೇನೆ. ನಿನಗಷ್ಟು ಕೊಡುತ್ತೇನೆ” ಒಂದರ್ಧ ಮೈಲು ದೂರದಲ್ಲಿದ್ದ ಮನೆಯನ್ನು ತೋರುತ್ತಾ ಇವನನ್ನು ಕೇಳಿದ. ʻಅವರವರ ನಂಬಿಕೆ ಅವರಿಗೆ, ಕೆಡಿಸುವುದೇಕೆ, ಸುಮ್ಮನಿದ್ದುಬಿಡೋಣʼ ಎಂದು ತೀರ್ಮಾನಿಸಿ ಇವನು “ಸರಿ, ನಿಮ್ಮ ಜಗಲಿಯಲ್ಲೇ ಮಲಗುತ್ತೇನೆ. ಒಂದಷ್ಟುದಿನ ಇಲ್ಲಿರಲು ಅವಕಾಶವಿದೆಯೇ?” ಎಂದು ಕೇಳಿದ. “ಈ ಕೊಂಪೆಯಲ್ಲಿ ಯಾರು ಬಂದಿರುತ್ತಾರೆ ನಿನಗೆ ಬೇಕಾದಷ್ಟು ದಿನವಿರು” ಎನ್ನುತ್ತಾ ಬೇಲಿಯ ಗಳುವನ್ನು ಸರಿಸಿ ಒಳಗೆ ಕರೆದುಕೊಂಡ.

***

ಇದಾಗಿ ಹತ್ತು ವರ್ಷಗಳಾಗಿವೆ. ಅವನ ವಿಧವೆ ಮಗಳನ್ನು ಮದುವೆಯಾಗಿ ಇವನು ಮಾವನ ಮನೆಯಲ್ಲೇ ನೆಲಸಿದ್ದಾನೆ. ಅಲ್ಲಿನ ಭಾಷೆಯನ್ನು, ನಡಾವಳಿಗಳನ್ನೂ ರೂಢಿಸಿಕೊಂಡಿದ್ದಾನೆ. ಮಾವನಿಗೆ ಬಿಡುವುಕೊಟ್ಟು ದೇವಸ್ಥಾನದ ಗೈಡಾಗಿ ಹಲವು ಭಾಷೆಗಳಲ್ಲಿ ಬಂದವರಿಗೆ ಅಲ್ಲಿನ ಸ್ಥಳಪುರಾಣವನ್ನೂ, ಮಹಿಮೆಯನ್ನೂ ಕತೆಕತೆಯಾಗಿ ಹೇಳುತ್ತಾನೆ. ಅಂದು ರಾತ್ರಿ ಪ್ರಸಾದ ಖಾಲಿಯಾದ ಪ್ರಸಂಗವನ್ನೂ ಆ ಗಣದೇವತೆ ಅಲ್ಲಿರುವುದಕ್ಕೆ ಸಾಕ್ಷಿಯೆಂದೇ ದೇವಸ್ಥಾನದವರೆಲ್ಲರೂ ನಂಬಿದ್ದಾರೆ; ಹಾಗೆಯೇ ಇವನೂ ಬಂದವರಿಗೂ ಅದನ್ನು ಹೇಳಿ ನಂಬಿಸುತ್ತಾನೆ. ತನ್ನ ಗುಟ್ಟನ್ನು ಇದುವರೆಗೂ ಯಾರಿಗೂ ಬಿಟ್ಟುಕೊಟ್ಟಿಲ್ಲ.  ಒಮ್ಮೊಮ್ಮೆ ʻಇನ್ನೊಂದು ಅಮಾವಾಸ್ಯೆಯ ರಾತ್ರಿ ಇಲ್ಲಿದ್ದು ನೋಡಬಾರದೇಕೆ?ʼ ಎಂದನ್ನಿಸಿದರೂ ಅವನಿಗೆ ಈಗ ಆ ತಿಮಿರ ದಿವ್ಯವನ್ನು ಎದುರಿಸುವ ಧೈರ್ಯವಾಗುವುದಿಲ್ಲ!!

‍ಲೇಖಕರು Admin

May 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ರಘುರಾಂ

    ಗಾಡವಾಗಿ ಆವರಿಸಿಕೊಳ್ಳುವ ಕಥೆ. ಉತ್ಕೃಷ್ಟ ಬಾಷೆ, ಕಥೆ ತೆರೆದುಕೊಳ್ಳುವ ಪರಿ ಒಂದಕ್ಕೊಂದು ಪೂರಕವಾಗಿದೆ. ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: