
ಪ್ರಸನ್ನ ಸಂತೆಕಡೂರು ಪುಸ್ತಕ ಮೋಹಿ. ಓದಿದಷ್ಟೂ ಮುಗಿಯದ ಉತ್ಸಾಹದ ಅವರು ಓದಿದ ‘ಬೊಂಬಾಟ್ ಪುಸ್ತಕ’ವನ್ನು ಪ್ರತೀ ವಾರ ಅವಧಿ ಓದುಗರಿಗೆ ಪರಿಚಯಿಸಲಿದ್ದಾರೆ-
ಕನ್ನಡ ಸಾಹಿತ್ಯದಲ್ಲಿ ‘ಅನುಭವ ಕಥನ’ಗಳು ‘ಆತ್ಮಕಥನ’ಗಳು ತುಂಬಾ ಬಂದಿವೆ.
ಅದರಲ್ಲಿ ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಜೊತೆಗೆ ಅವರ ಹಲವು ಕಾದಂಬರಿಗಳು, ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿ ಮತ್ತು ಬೇರೆ ಬೇರೆ ಕತೆಗಳು, ನಾಗಲೋಟಿಮಠರ ‘ಬಿಚ್ಚಿಟ್ಟ ಜೋಳಿಗೆ’ ಕವಿ ಸಿದ್ಧಲಿಂಗಯ್ಯನವರ ‘ಊರುಕೇರಿ’ ಅರವಿಂದ ಮಾಲಗತ್ತಿಯವರ ‘ಗೌರ್ಮೆಂಟ್ ಬ್ರಾಹ್ಮಣ’ ಓ ಎಲ್ ನಾಗಭೂಷಣ ಸ್ವಾಮಿಯವರ ‘ನನ್ನ ಹಿಮಾಲಯ’ ಭಾರ್ಗವಿ ನಾರಾಯಣರ ಆತ್ಮಚರಿತ್ರೆ ‘ನಾನು, ಭಾರ್ಗವಿ’ ಡಾ ವಿಜಯಾ ಅವರ ಆತ್ಮಕಥೆ ‘ಕುದಿ ಎಸರು’ ಬಿ ಜಯಶ್ರೀ ಅವರ ‘ಕಣ್ಣಾಮುಚ್ಚೆ ಕಾಡೇ ಗೂಡೇ’ (ನಿರೂಪಣೆ: ಪ್ರೀತಿ ನಾಗರಾಜ್) ಪುರುಷೋತ್ತಮ ಬಿಳಿಮಲೆಯವರ ‘ಕಾಗೆ ಮುಟ್ಟಿದ ನೀರು’ ಮೂಡ್ನಾಕೂಡು ಚಿನ್ನಸ್ವಾಮಿಯವರ ‘ನೆನಪಿನ ಹಕ್ಕಿಯ ಹಾರಲು ಬಿಟ್ಟು’ ಕೆ ಸತ್ಯನಾರಾಯಣ ಅವರ ಆತ್ಮಕಥಾನಕಗಳು ಪ್ರಮುಖವಾದವು ಎಂದರೆ ತಪ್ಪಾಗಲಾರದು.
ಇವುಗಳ ಜೊತೆಗೆ ಮರಾಠಿಯ ಪ್ರಖ್ಯಾತ ಲೇಖಕ ಲಕ್ಷ್ಮಣ ಗಾಯಕವಾಡರ ಆತ್ಮಕತೆ ‘ಉಚಲ್ಯಾ’ ಕನ್ನಡದಲ್ಲಿ ತುಂಬಾ ಜನಪ್ರಿಯವಾಗಿದೆ. ಇದರ ಅನುವಾದಕರು ಚಂದ್ರಕಾಂತ ಪೋಕಳೆಯವರು. ಈ ‘ಉಚಲ್ಯಾ’ ಗಾತ್ರದಲ್ಲಿ ಚಿಕ್ಕ ಪುಸ್ತಕವಾದರೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ.

ಇವುಗಳ ಜೊತೆಗೆ ಇನ್ನು ಹಲವು ಇರಬಹುದು. ಆದರೆ, ಗೊರವರ ಆತ್ಮಕತೆ ಅಥವಾ ಅನುಭವ ಕಥನ ‘ಆಡು ಕಾಯೋ ಹುಡುಗನ ದಿನಚರಿ’ ಇಲ್ಲಿ ಏಕೆ ಮುಖ್ಯವಾಗುತ್ತದೆ ಎಂದು ಕೇಳಬಹುದು. ಈ ಅನುಭವ ಕಥನ ಬರೆದಾಗ ಗೊರವರರು ಕೇವಲ ಇಪ್ಪತ್ತೇಳು ವರ್ಷದ ಯುವಕರಾಗಿದ್ದರು.
ಕವಿ ಸಿದ್ಧಲಿಂಗಯ್ಯ ಮತ್ತು ಲಕ್ಷ್ಮಣ ಗಾಯಕವಾಡರು ಈ ವಯಸ್ಸಿನಲ್ಲಿಯೇ ಆತ್ಮಕಥನಗಳನ್ನ ಬರೆದು ಕೊಂಡಿರುವುದು ಎಂದು ಅನಿಸುತ್ತದೆ. ಇಪ್ಪತ್ತೇಳು ವರ್ಷದ ಯುವಕನಿಗೆ ಬದುಕಿನ ವಿಸ್ತಾರವಾದ ಅನುಭವವಿರದಿದ್ದರೂ ತನ್ನ ಬಾಲ್ಯ ಮತ್ತು ಪ್ರೌಢಾವಸ್ಥೆಗೆ ಬರುವಾಗಿನ ದಟ್ಟವಾದ ಅನುಭವವಿರುತ್ತದೆ. ಇದರ ಜೊತೆಗೆ ಕಿತ್ತು ತಿನ್ನುವ ಬಡತವಿದ್ದರೆ ಅನುಭವವ ಇನ್ನೂ ಹೆಚ್ಚಿರುತ್ತದೆ.
ಇಲ್ಲಿ ಜೀತಗಾರನೊಬ್ಬನ ಮಗ ಆಡುಗಳನ್ನು ಕಾಯುತ್ತಾ ತನ್ನ ಬದುಕನ್ನು ಕಟ್ಟಿಕೊಳ್ಳಲು ನಡೆಸುವ ಹೋರಾಟವನ್ನು ಕಾಣಬಹುದು. ಇಲ್ಲಿ ಎಲ್ಲವೂ ಆಕಸ್ಮಿಕದಂತೆ ಕಂಡರೂ ಬಾಲಕನ ಒಳಗೆ ಕಿಚ್ಚಿಲ್ಲದಿದ್ದರೆ ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ನಾವು ಕಾಣಬಹುದು. ಇಲ್ಲಿನ ಭಾಷೆ ಕೂಡ ಉತ್ತರ ಕರ್ನಾಟಕದ ಅದರಲ್ಲೂ ಅವಿಭಜಿತ ಧಾರವಾಡ ಜಿಲ್ಲೆಯ ಗದಗ ಸಮೀಪದ ಮತ್ತು ಪಕ್ಕದ ಹೈದರಾಬಾದ್ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದ ಸೊಗಡನ್ನೂ ಹೆಚ್ಚಾಗಿ ಕಾಣಬಹುದು.
ಇಲ್ಲಿ ಬಡ ಕುಟುಂಬವೊಂದರ ಬದುಕಿನ ಚಿತ್ರಣವನ್ನು ಕಾಣಬಹುದು. ಆ ಕುಟುಂಬದಲ್ಲಿ ಗಂಡ ಹೆಂಡತಿ ಮೂರು ಮಕ್ಕಳು. ಮೂರು ಮಕ್ಕಳಲ್ಲಿ ಸ್ವಲ್ಪ ದೊಡ್ಡವನೇ ಈ ಕಥನದ ನಾಯಕ. ಆ ಬಾಲಕನ ಬದುಕಿನ ಅನುಭವದ ಚಿತ್ರಗಳು ಇಲ್ಲಿ ಸುಂದರವಾಗಿ ತೆರೆದುಕೊಳ್ಳುತ್ತವೆ. ಗಂಡ ಅನಕ್ಷರಸ್ಥ ಬದುಕನ್ನು ಜೀತದಲ್ಲಿಯೇ ಕಳೆದವನು. ಅವರದು ಒಂದು ರೀತಿಯ ಬಾಲ್ಯವಿವಾಹ. ಹೆಂಡತಿಯೂ ತನ್ನ ಬದುಕನ್ನು ದಿನಗೂಲಿಯಲ್ಲಿಯೇ ಕಳೆದವಳು. ಅವರ ಬದುಕಿನ ಮುಖ್ಯ ಗುರಿ ಅಂದಂದಿನ ಊಟ ಮತ್ತು ಬಟ್ಟೆ ಅಷ್ಟೇ. ಅಂತ ಕುಟುಂಬದಲ್ಲಿ ಹುಟ್ಟಿದ ಬಾಲಕನ ಬದುಕಿನ ಗುರಿ ಏನಾಗಿರಬಹುದು? ಅವನ ಗುರಿ ಕೂಡ ಅಂದಂದಿನ ಬದುಕನ್ನು ಸಾಗಿಸುವುದೇ ಆಗಿರುತ್ತದೆ. ಇವನಿಗೆ ಮೊದಮೊದಲು ಓದಲು ಇಷ್ಟವಿರುವುದಿಲ್ಲ.
ಕಥಾನಾಯಕ ಆಡು, ಎಮ್ಮೆ, ಹಸು ಕಾಯುವ ಹುಡುಗರ ಜೊತೆ ಸೇರುವುದು. ಕೊನೆಗೆ ತನ್ನ ತಾಯಿಯೇ ಸಾಕಿದ ಆಡುಗಳನ್ನು ನೋಡಿಕೊಳ್ಳುವುದು, ಹುಣಸೆ ಹಣ್ಣು ಮತ್ತು ಜೇನು ಕೀಳುವುದು. ಒಳ್ಳೆಯ ಜೇನು ಕಿತ್ತು ಜೇನು ತುಪ್ಪ ಕುಡಿಯುವುದು ಹವ್ಯಾಸ ಮಾಡಿಕೊಂಡಿರುತ್ತಾನೆ. ಆನಂತರ ಸಿಗುವ ಒಳ್ಳೆಯ ಗುರುಗಳು ಇವನಿಗೆ ಓದು ನಾಟಕಗಳ ಬಗ್ಗೆ ಆಸಕ್ತಿ ಮೂಡುವಂತೆ ಮಾಡುತ್ತಾರೆ. ನಾಟಕದಲ್ಲಿ ಚೆನ್ನಾಗಿ ಅಭಿನಯಯಿಸಿ ಎಲ್ಲರಿಂದಲೂ ಸೈ ಎನಿಸಿಕೊಳ್ಳುತ್ತಾನೆ. ಮುಂದೆ ಬಾಲಕ ಹೆಚ್ಚು ಓದಿ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಉನ್ನತ ಶಿಕ್ಷಣ ಪೂರೈಸಲು ಹೋಗುವುದನ್ನು ಕಾಣಬಹುದು.

ಈ ಅನುಭವ ಕಥನದಲ್ಲಿ ಒಂದು ಹಳ್ಳಿಯ ಮುಗ್ದ ಜನರ ಸಹಭಾಳ್ವೆಯನ್ನು ಕೂಡ ಕಾಣಬಹುದು. ಮೊಹರಂ ಹಬ್ಬವನ್ನು ಹಿಂದೂ ಮತ್ತು ಮುಸ್ಲಿಮರು ಸೇರಿಕೊಂಡೇ ಮಾಡುವುದು ಈ ಹಳ್ಳಿಯ ಜನರ ಇನ್ನೊಂದು ವಿಶೇಷ. ಬಾಲಕನ ಗೆಳೆಯರು ಮತ್ತು ಇಲ್ಲಿ ಬರುವ ಬೇರೆ ಬೇರೆ ಪಾತ್ರಗಳು ಕೂಡ ಸಮಾಜದ ಬೇರೆ ಬೇರೆ ಹಿನ್ನೆಲೆಯಿಂದ ಬಂದಿರುವವರೇ ಆಗಿದ್ದಾರೆ. ಪುಸ್ತಕವೂ ಕೂಡ ತುಂಬಾ ಕುತೂಹಲಕರವಾಗಿ ಓದಿಸಿಕೊಂಡು ಹೋಗುತ್ತದೆ.
ಈ ‘ಆಡು ಕಾಯೋ ಹುಡುಗನ ದಿನಚರಿ’ ಹೊಸದಾಗಿ ಬರವಣಿಗೆ ಶುರು ಮಾಡಬೇಕು ಎನ್ನುವವರಿಗೆ ಸ್ಫೂರ್ತಿದಾಯಕವಾಗಿಯೂ ಇದೆ. ಈ ಎಲ್ಲಾ ಕಾರಣದಿಂದಲೇ ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಎಂದು ನಿರ್ವಿವಾದವಾಗಿ ಹೇಳಬಹುದು.
ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದಲ್ಲಿ ಜನಿಸಿದ ಟಿ ಎಸ್ ಗೊರವರ ಅವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ‘ವಿಜಯ ಕರ್ನಾಟಕ’ದಲ್ಲಿ ಎಂಟು ವರ್ಷಗಳ ಕಾಲ ಉಪಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡಿ ಈಗ ಸದ್ಯಕ್ಕೆ ‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಮತ್ತು ‘ಸಂಗಾತ’ ಪುಸ್ತಕದ ಪ್ರಕಾಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ಈಗಾಗಲೇ ‘ಭ್ರಮೆ’ ‘ಕುದರಿ ಮಾಸ್ತರ’ ‘ಮಲ್ಲಿಗೆ ಹೂವಿನ ಸಖ’ ಎಂಬ ಕಥಾಸಂಕಲನಗಳನ್ನು ‘ರೊಟ್ಟಿ ಮುಟಗಿ’ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಜೊತೆ ದ ರಾ ಬೇಂದ್ರೆ ಗ್ರಂಥ ಬಹುಮಾನ, ಅರಳು ಮಲ್ಲಿಗೆ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಪುರಸ್ಕಾರ ಸೇರಿದಂತೆ ಇನ್ನು ಹಲವು ಪ್ರಶಸ್ತಿಗಳು ಬಂದಿವೆ.






ಈ ಪುಸ್ತಕ ನಾನೂ ಓದಿರುವೆ…. ಒಳ್ಳೇ ನಿರೂಪಿಸಿದ್ದಾರೆ, ಅವರ ರೊಟ್ಟಿ ಮುಟಿಗಿ ಇನ್ನೂ ಅದ್ಭುತ