
ಮಹಾಂತೇಶ ಪಾಟೀಲ
ನಿನ್ನ ಹೆಸರಿನ ಕೆಳಗೆ
ನನ್ನ ಹೆಸರು ಗೀಚಿದ್ದಾರಂತೆ
ನಾವೆಂದು ಹಾಗೆ ಮೇಲೆ ಕೆಳಗಾದವರಲ್ಲ.
ಕಾಫಿ ತೋಟದ ಚಳಿಯಲಿ
ಅಂತರವಿತ್ತು ಚಹಾ ಚುಂಬಿಸುವ ತುಟಿಗೂ.
ನಿನ್ನ ಮುಂಗುರುಳಿನ ಸುರಳಿಯಲಿ
ನನ್ನ ಮೀಸೆ ಸಿಕ್ಕಂತೆ ಚಿತ್ರ ಬರೆದವರಂತೆ
ನಾವೆಂದೂ ಹಾಗೆ ಮುಂಗುರುಳ ಇರುಳಲಿ
ತೊಗಲಿನಾಟವಾಡಿದವರಲ್ಲ.
ಕಬ್ಬಿನ ಗದ್ದೆಯ ಕಸ ಕೀಳುವಾಗಲೂ
ಬೆರಳ ಬೆಲ್ಲದಚ್ಚನು ಸೋಕಿಸಿದವರಲ್ಲ.

ನೀನು ಬಜಾರಿನ ಹೂವಂತೆ
ನಾನು ಮಾರು ಮಾಲೆಗಾರನಂತೆ
ಪ್ರೀತಿಯ ಮಾರುವ ಸಂತೇಲಿ
ನಾವೆಂದೂ ಮುಗುಳು ಮಾರಿದವರಲ್ಲ.
ನಮ್ಮ ಪ್ರೇಮವ ಟಾಯ್ಲೆಟಿನ ಗೋಡೆಗೆ
ಅಂಟಿಸಿದವರೆ; ನಿಮ್ಮ ಮನಕ್ಕೆ ಮೆತ್ತಿಕೊಂಡ
ಮಲಮೂತ್ರದ ವಾಸನೆಯನ್ನಾದರೂ
ನಮ್ಮ ಕಣ್ಣೀರಿನಿಂದ ತೊಳೆದುಕೊಳ್ಳುವಿರಾ?
ನಿಮ್ಮ ನೀಲಿಕಂಗಳ ಕನಸುಗಳನು
ಟಾಯ್ಲೆಟಿನ ಮುಖಕ್ಕೆ ಅಂಟಿಸದೀರಿ
ವಿಟಾತ್ಮದ ಹುಳುಗಳೆ…






0 Comments