
ಶಿವಕುಮಾರ್ ಮಾವಲಿ.
ಆಂಗ್ಲ ಉಪನ್ಯಾಸಕ.
Beware toppers, you will be hanged !!!
ತಪ್ಪು ತಿಳಿಯಬೇಡಿ. ಈಚಿನ ವರ್ಷಗಳಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಸಾಗುತ್ತಿರುವ ದಿಕ್ಕನ್ನು ನೋಡಿದಾಗ ಇಂಥದ್ದೊಂದು ಶೀರ್ಷಿಕೆ ಅನಿವಾರ್ಯ ಎಂದೆನ್ನಿಸುತ್ತದೆ.
ಪ್ರತಿ ಶಿಕ್ಷಣ ಸಂಸ್ಥೆಯು ‘ವ್ಯಾವಹಾರಿಕ ಘಟಕ’ ವಾಗಿ ಮಾರ್ಪಾಡಾಗಿದೆ. ಮಕ್ಕಳು ಪಡೆಯುವ ಅಂಕಗಳ ಹಿಂದೆ ಪೋಷಕರು ಮತ್ತು ಬಂಧುಗಳಿಗಿಂತ ಅವರ ಶಾಲೆ ಅಥವ ಕಾಲೇಜುಗಳೇ ಹೆಚ್ಚು ಬೆಂಬತ್ತಿವೆ. ಇದಕ್ಕಾಗಿ ಅವರ ಮಾಡುವ ಸರ್ಕಸ್ ಗಳು ಒಂದೆರಡಲ್ಲ. ಸ್ಪೆಷಲ್ ಕ್ಲಾಸ್, ರೆಮಿಡಿಯಲ್ ಕ್ಲಾಸ್, ಎಕ್ಸ್ ಪರ್ಟ್ ಗಳನ್ನು ಕರೆಸಿ ಕೋಚಿಂಗ್ ಕೊಡಿಸೋದು, ವಾರಕ್ಕೊಮ್ಮೆ ಟೆಸ್ಟ್ ಬರೆಸೋದು, ಹೀಗೆ ಅನೇಕ.
ವರ್ಷವಿಡೀ ಈ ಥರ ಸರ್ಕಸ್ ಮಾಡೋ ಈ ಸಂಸ್ಥೆಗಳು ತಮ್ಮನ್ನು ತಾವು ‘ರೆಪ್ಯೂಟೆಡ್ ‘ ಎಂದುಕೊಳ್ಳಲು ವಿದ್ಯಾರ್ಥಿಗಳಿಗೆ, ಪೋಷಕರಿಗೆ , ಮುಖ್ಯವಾಗಿ ಶಿಕ್ಷಕರಿಗೆ ನೀಡುವ ಯಾತನೆ ಅಷ್ಟಿಷ್ಟಲ್ಲ. ಇದಕ್ಕಿಂತ ಫನ್ನಿ ವಿಚಾರವೆಂದರೆ ಕೆಲವು ಖಾಸಗಿ ಕಾಲೇಜುಗಳು ತಮ್ಮಲ್ಲಿ ಮಕ್ಕಳಿಗೆ ಪ್ರವೇಶ ನೀಡಲು ಅವರ ಶೇಕಡಾವಾರು ಅಂಕಗಳನ್ನೇ ಮಾನದಂಡವಾಗಿಸುತ್ತಿರುವುದು.
ಹಾಗಾಗಿ ಕೇವಲ 80%, 90% ಪಡೆದವರಿಗೆ ಮಾತ್ರ ತಮ್ಮಲ್ಲಿ ಪ್ರವೇಶ ನೀಡುತ್ತವೆ. ಆ ನಂತರ ಎರಡು ವರ್ಷಗಳಾದಮೇಲೆ ಈ ಹಿಂದೆ ಎಸ್.ಎಸ್.ಎಲ್.ಸಿ ಯಲ್ಲಿ ಯಾರು ಟಾಪರ್ ಆಗಿದ್ದರೋ ಹೆಚ್ಚು ಕಡಿಮೆ ಮತ್ತೆ ಅವರೇ ಪಿ.ಯು.ಸಿ. ಯಲ್ಲೂ ಟಾಪರ್ಗಳಾಗಿರುತ್ತಾರೆ. ಅದನ್ನೇ ಆ ಕಾಲೇಜಿನವರು ತಮ್ಮ ಸಾಧನೆಯೆಂಬಂತೆ ದೊಡ್ದ ದೊಡ್ಡ ಫ್ಲಕ್ಸ್ ಗಳಲ್ಲಿ ಅವರನ್ನು ನೇತುಹಾಕುತ್ತಾರೆ (ಈ ಪದವನ್ನೇ ಬಳಸಿದರೆ ಈ ಲೇಖನದ ಉದ್ದೇಶಕ್ಕೆ ಸರಿಯಾಗಿರುತ್ತದೆ ). ಅದನ್ನು ನೋಡಿ ತಮ್ಮ ಕಾಲೇಜಿಗೆ ಈ ವರ್ಷ ಇನ್ನೂ ಹೆಚ್ಚಿನ ಪ್ರವೇಶ ಸಿಗಬಹುದೇನೋ ಎಂಬ ಕಾರಣ ಒಂದೆಡೆಯಾದರೆ, ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಹೊಸ ಸಂಸ್ಥೆಗಳ ನಡುವೆ ತಮ್ಮ ಅಸ್ತಿತ್ವ ಆಭಾದಿತವಗಿರಬೇಕೆಂಬ ಹಪಹಪಿ ಮತ್ತೊಂದೆಡೆ.
ನನಗಂತೂ ಈ “ಟಾಪರ್“ ಎಂಬ ಪದವೇ ಕಿರಿಕಿರಿಯಾಗುತ್ತದೆ. ಯಾರು ಟಾಪರ್ ಎಂದರೆ ? ಯಾವುದರಲ್ಲಿ ಟಾಪರ್ ? ನಮ್ಮ ಸಿಲಬಸ್ ನಲ್ಲಿರುವ ಒಂದು ಪುಸ್ತಕವನ್ನು ತನ್ನ ಮಟ್ಟಿಗೆ ಅರ್ಥ ಮಾಡಿಕೊಂಡು ಅದರಲ್ಲಿ ಸೆಂಟಮ್ ಸ್ಕೋರ್ ಮಾಡಿಬಿಟ್ಟರೆ ಅವರೇ ಟಾಪರ್ಗಳ ? ಆ ಪ್ರಶ್ನೆ ಪತ್ರಿಕೆಗೆ ಮಾತ್ರ ಅವರ ಆ ಅಂಕ ಸೀಮಿತ. ಹಾಗೆಂದು ಆ ವಿಷಯದಲ್ಲಿ ಅವರಿಗೆ ಪ್ರೌಢಿಮೆ ಬಂದಿದೆ ಎಂದರ್ಥವೇ ?. ಹಾಗೆ ನೋಡಿದರೆ ಪಾಪ ಆ ಟಾಪರ್ಗಳಿಗೇ ಇಲ್ಲದ ಅಹಂ ಕೆಲವೊಮ್ಮೆ ಅವರ ಶಾಲೆ, ಕಾಲೇಜು ಮತ್ತು ಮಾಧ್ಯಮಗಳಿಗೆ ಇರುತ್ತೆ.
ಪಬ್ಲಿಕ್ ಪರೀಕ್ಷೆಗಳ ಫಲಿತಾಂಶದ ದಿನವಂತೂ ಟೀವಿಯವರು “Most Expected” ಶಾಲಾ ಕಾಲೇಜುಗಳಿಗೆ ತಮ್ಮ ಪ್ರತಿನಿಧಿಗಳನ್ನು ಬೆಳಗ್ಗಿನಿಂದಲೇ ಕಳುಹಿಸಿರುತ್ತಾರೆ. ಫಲಿತಾಂಶ ಬಂದೊಡನೆ ಶುರುವಾಗಿಬಿಡುತ್ತದೆ ಅವರ “ಬ್ರೇಕಿಂಗ್ ನ್ಯೂಸ್ “ ಹಾವಳಿ. ಟಾಪರ್ಗಳನ್ನು ಕರೆಸಿಕೊಂಡು ಬಂದು ಪ್ಯಾನೆಲ್ ಡಿಸ್ಕಷೆನ್ ಶುರುಮಾಡುತ್ತಾರೆ. ಅಲ್ಲಿ ಕೆಲವು ಟಾಪರ್ಗಳು ಮಾತಾಡೋದರಲ್ಲಿ ಗೊತ್ತಾಗುತ್ತೆ ಅವರೆಂತ “ಅರೆಬೆಂದ“ ಬುದ್ಧಿವಂತರು ಎಂದು.
ನನ್ನ ಕ್ಲಾಸ್ರೂಂ ಅನುಭವದಲ್ಲಿ ಹೇಳುವುದಾದರೆ ಇತ್ತೀಚಿಗೆ ವಿದ್ಯಾರ್ಥಿಗಳಲ್ಲಿ “ಇನ್ಫಾರ್ಮೇಷನ್ ಹಂಟ್” ಜಾಸ್ತಿಯಾಗಿದೆ. ಆದರೆ “ವಿವೇಕ” ಇಲ್ಲದಂತಾಗಿದೆ. ಇದಕ್ಕೆ ಉದಾಹರಣೆಗಳನ್ನೂ ಕೊಡಬಹುದು. ತಾವು ಬದುಕುತ್ತಿರುವ ಸ್ಥಳ, ಅದರ ವಿಶೇಷತೆ, ಭೌಗೋಳಿಕ ವ್ಯಾಪ್ತಿ, ಇವುಗಳ ಬಗ್ಗೆ ಕಿಂಚಿತ್ತೂ ತಿಳಿದಿರುವುದೂ ಇಲ್ಲ. ಇದಕ್ಕೆ ‘ಪ್ಯಾಶನ್’ ಇಲ್ಲದೆ ಕೇವಲ ‘ಫ್ಯಾಷನ್’ಗಾಗಿ ಶಿಕ್ಷಕರಾದವರೂ ಅಷ್ಟೇ ಕಾರಣ ಎಂಬುದನ್ನೂ ನಾನು ಒಪ್ಪುತ್ತೇನೆ. ಅಲ್ಲದೆ ಇಂದಿನ ಶಾಲಾ-ಕಾಲೇಜುಗಳಲ್ಲಿ ಪಾಠ, ಪ್ರವಚನ, ಉಪನ್ಯಾಸ, ಚರ್ಚೆಗಳಿಗಿಂತ “ಗುಮಾಸ್ತರಿಕೆಯೇ” ಹೆಚ್ಚು.
ಒಬ್ಬ ವಿದ್ಯಾರ್ಥಿಗೆ ಸಂಬಂಧಿಸಿದಂತೆ ತರಹೇವಾರಿ ದಾಖಲೆ ಪುಸ್ತಕಗಳನ್ನು ಈ ಶಿಕ್ಷಕರು, ಉಪನ್ಯಾಸಕರು ವರ್ಷವಿಡೀ ಸಿದ್ಧಮಾಡುವುದರಲ್ಲಿಯೇ ಸಮಯ ವ್ಯಯವಾಗುತ್ತದೆ ಹೊರತು ಹೊಸತನಕ್ಕೆ, ಹೊಸ ಓದಿಗೆ ಅವರು ತೆರೆದುಕೊಳ್ಳಲು ಅವಕಾಶವೇ ಇಲ್ಲ. “ಪೇರೆಂಟ್ ಟೀಚರ್ ಮೀಟಿಂಗ್” ಎಂಬ ನೆಪಮಾತ್ರದ ಸಭೆಯಲ್ಲಿ ಮಕ್ಕಳಿಗೆ ಉಪಯೋಗವಾಗುವಂತ ಯಾವ ಅಂಶಗಳು ಚರ್ಚೆಯಾಗುವುದು ಕಡಿಮೆಯೇ. ಇಲ್ಲಿ ಪೋಷಕರಿಗೆ ‘ನಿಮ್ಮ ಮಗ/ಮಗಳು ಚೆನ್ನಾಗಿ ಪರ್ಫಾರ್ಮ್ ಮಾಡುತ್ತಿಲ್ಲ ,ಹಾಗಾಗಿ ಅಂತಿಮ ಪರೀಕ್ಷೆಯಲ್ಲಿ ಫೇಲಾದರೆ ನಾವು ಜವಾಬ್ದಾರರಲ್ಲ’ ಎಂದು ತಿಳಿಸಲಾಗುತ್ತದೆ.
ಮಕ್ಕಳ ಹಾಜರಾತಿ ಬಗ್ಗೆ , ರಜದ ಬಗ್ಗೆ, ಟೆಸ್ಟ್ ಗಳ ಮಾರ್ಕ್ಸ್ ಬಗ್ಗೆ, ಮೊಬೈಲ್ಗೆ ಮೆಸೇಜ್ ಕಳುಹಿಸುವುದು ಇವೆಲ್ಲ ಜವಾಬ್ದಾರಿಯುತ ಕ್ರಮಗಳಂತೆ ಕಂಡರೂ ಅವುಗಳ ಹಿಂದೆ ಇರುವುದು ಸುರಕ್ಷತೆಯ ಸೋಗು ಮತ್ತು ‘We have kept you informed ‘ಎಂದು ಹೇಳಿ ನಂತರದ ಅವಘಡಗಳಿಗೆ ನಾವು ಜವಾಬ್ದಾರರಲ್ಲ ಎನ್ನುವ ಮುನ್ನೆಚ್ಚರಿಕೆ.
ಟಾಪರ್ಗಳನ್ನು ಹೊಗಳಿ ಅಟ್ಟಕ್ಕೇರಿಸುವ, ಸಿಕ್ಕಸಿಕ್ಕಲ್ಲಿ ದೊಡ್ಡ ದೊಡ್ಡ ಪ್ಲೆಕ್ಸ್ ಗಳನ್ನು ಅವರ ಫೋಟೋದೊಂದಿಗೆ ಹಾಕುವ ಈ ಶಾಲಾ-ಕಾಲೇಜುಗಳಿಗೆ ನನ್ನ ಸಣ್ಣ ಪ್ರಶ್ನೆಯೊಂದಿದೆ. ಸಾಮಾನ್ಯವಾಗಿ ಈ ಪಬ್ಲಿಕ್ ಪರೀಕ್ಷೆಗಳಲ್ಲಿ ಇಡೀ ರಾಜ್ಯದ ಫಲಿತಾಂಶ 60%ರ ಆಸುಪಾಸಿನಲ್ಲೇ ಇರುತ್ತದೆ. ಅಂದರೆ ಪರೀಕ್ಷೆ ಬರೆದವರಲ್ಲಿ ಪ್ರತಿ 100ಕ್ಕೆ ಕೇವಲ 60 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗುತ್ತಾರೆ. ಉಳಿದ 40 ಮಂದಿ ಫೇಲಾಗುತ್ತಾರೆ. ಆ ಉಳಿದ 40 ಮಕ್ಕಳನ್ನು ಪಾಸ್ ಮಾಡಿಸುವ ಹೊಣೆ ಯಾರದ್ದು ? ಅಷ್ಟೊಂದು ಪ್ರಮಾಣದಲ್ಲಿ ಫೇಲಾದವರಿದ್ದಾಗ ಈ ಸಂಸ್ಥೆಗಳು ಅದ್ಯಾವ ಪುರುಷಾರ್ಥಕ್ಕೆ ತಮ್ಮ ಟಾಪರ್ ಗಳನ್ನು ಮೆರೆಸುತ್ತಾರೆ ?
ಅಲ್ಲದೇ ಒಳ್ಳೆಯ ಅಂಕ ಪಡೆದವರಿಗೇ ಪ್ರವೇಶ ನೀಡಿ ಅವರು ಮತ್ತೆ ಒಳ್ಳೆಯ ಅಂಕ ಪಡೆವಂತೆ ಮಾಡುವಲ್ಲಿ ಇವರದ್ದೇನು ಹೆಚ್ಚುಗಾರಿಕೆ ಇದೆಯೋ ? ಆ 40% ಅನುತ್ತೀರ್ಣರಾದವರ ಬಗ್ಗೆ ಕಾಳಜಿ ಯಾರಿಗೂ ಇದ್ದಂತಿಲ್ಲ. ಅವರಲ್ಲಿ ಎಷ್ಟೋ ಮಂದಿ ಮುಂದೆ ಸಮಾಜವಿರೋಧಿ ಕೆಲಸಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಟಾಪರ್ ಗಳನ್ನೇ ಮತ್ತೆ ಟಾಪರ್ ಗಳಾಗಿ ಮಾಡುವ ಈ ವ್ಯಾಪಾರೀ ಮನೋಭಾವವನ್ನು ಬಿಟ್ಟು, ಸರ್ವರಿಗೂ ಸಮಾನ ಶಿಕ್ಷಣ ಸಿಗಬೇಕೆಂಬ ಆಶಯಕ್ಕೆ ಇವರು ಕಟಿಬದ್ಧರಾಗುವುದು ಯಾವಾಗ ?
ದೆಹಲಿಯ ಕಾಲೇಜೊಂದರಲ್ಲಿ ಪಿ.ಯು.ಸಿ ಪ್ರವೇಶಕ್ಕೆ ಈ ವರ್ಷ ಕಟ್ ಆಫ್ 99% ಇತ್ತಂತೆ. ಇದನ್ನು ಸಾಧನೆ ಅನ್ನೋದಾದರೆ ಅಲ್ಲೇ ಇರುವ ಸರ್ಕಾರೀ ಕಾಲೇಜುಗಳಲ್ಲಿ ಫಲಿತಾಂಶ 50% ರಷ್ಟಿರುತ್ತದೆ. ಕಾರಣ ಅವರು ಯಾವುದೇ % ನೋಡದೆ ಪ್ರವೇಶ ನೀಡಬೇಕಾಗಿರುತ್ತದೆ. ಈ ದೊಡ್ಡ ಅಂತರವನ್ನು ಹೋಗಲಾಡಿಸದ ಹೊರತು, ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಟಾಪರ್ ಗಳನ್ನು ಹೀಗೆ ಮೆರೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ರೀತಿಯ ಅನಗತ್ಯ ವಿಜೃಂಭಣೆಯಿಂದಾಗಿ ಕಡಿಮೆ ಅಂಕ ಪಡೆದ ಎಷ್ಟೋ ಮಕ್ಕಳು ಆತ್ಮಹತ್ಯೆಯಂತಹ ದುರದೃಷ್ಟ ಸನ್ನಿವೇಶಕ್ಕೆ ಈಡಾಗುತ್ತಿದ್ದಾರೆ.
ಹಾಗಾಗಿಯೇ“ May is the cruelest month because it’s a month of results ” ಎಂದು ನನಗನ್ನಿಸುತ್ತೆ. ಒಂದು ಪರೀಕ್ಷೆ ಫಲಿತಾಂಶ ಓರ್ವ ವಿದಾರ್ಥಿಯನ್ನು ಬಲಿಪಡಿಯುತ್ತದೆ ಎಂದಾದಲ್ಲಿ ಪರೀಕ್ಷೆ ಎಂಬುದು ಒಂದು “ಭಯೋತ್ಪಾದಕ ಚಟುವಟಿಕೆ” ಯಲ್ಲದೆ ಮತ್ತಿನ್ನೇನು ?
ಅಂದಹಾಗೆ ಟಾಪರ್ ಗಳ ಶ್ರಮ ಮತ್ತು ಸಾಧನೆಯನ್ನು ಮೂದಲಿಸುವುದು ನನ್ನ ಉದ್ದೇಶವಲ್ಲ. ನಿಮ್ಮ ಕಮಿಟ್ಮೆಂಟ್, ಡೆಡಿಕೇಶನ್ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ನಿಮ್ಮ ಸಾಧನೆಯನ್ನು, ನಿಮ್ಮನ್ನು Advertisement Commodity ಯಂತೆ ಬಳಸಿಕೊಳ್ಳುತ್ತಿದ್ದಾರಲ್ಲ ಅದರ ಬಗ್ಗೆ ಹೇಸಿಗೆಯೆನಿಸುತ್ತದೆ. ಯಾವುದೇ ವಿದ್ಯಾರ್ಥಿ ಗಳಿಸುವ ಅಂಕಗಳು ಸಾರ್ವಜನಿಕ ಪ್ರದರ್ಶನಕ್ಕಲ್ಲ ಬದಲಾಗಿ ಆತ್ಮಪ್ರಶಂಸೆ ಮತ್ತು ಆತ್ಮಜ್ಞಾನಕ್ಕಾಗಿ. ಹಾಗಾಗಿ ನಿಮ್ಮ ಶ್ರಮವನ್ನು ಮಾರುಕಟ್ಟೆಯ ಸರಕಾಗಿ ಬಳಸಿ ನಿಮ್ಮ ಭಾವಚಿತ್ರಗಳನ್ನು ಶಾಲಾ-ಕಾಲೇಜುಗಳ ಗೇಟ್ ಮತ್ತು ಕಾಂಪೌಂಡ್ಗಳಿಗೆ, ಫ್ಲೈಓವರ್ಗಳ ಮೇಲೆ, ಸಾರ್ವಜನಿಕ ಬಸ್ಗಳ ಹಿಂಭಾಗದಲ್ಲಿ, ಹೀಗೆ ಎಲ್ಲೆಂದರಲ್ಲಿ ನೇತುಹಾಕುತ್ತಾರಲ್ಲ ಅದು ಎಷ್ಟರಮಟ್ಟಿಗೆ ಸರಿ ?
ಮುಂದೊಮ್ಮೆ ತಮ್ಮನ್ನು ಹೀಗೆ ಸಿಕ್ಕಸಿಕ್ಕಲ್ಲಿ ನೇತುಹಾಕುತ್ತಾರೆಂದರೆ ಯಾಕಾದರೂ ನಾನು ಟಾಪರ್ ಆಗಿದ್ದೇನೋ ಎನ್ನುವ ಭಾವ ಅವನಲ್ಲಿ ಮೂಡಿದರೆ ಆತ ನಿಜವಾದ ಟಾಪರ್.
ಇಂಥ ನಾನ್ಸೆನ್ಸ್ ಗಳನ್ನು ವಿರೋಧಿಸುವ, ಇದನ್ನು ಮೀನಿಂಗ್ಲೆಸ್ ಎಂದು ಹೇಳುವ ದಿಟ್ಟ ಮತ್ತು ಸಂವೇದನೆಯುಳ್ಳ ಟಾಪರ್ಗಳ ನಿರೀಕ್ಷೆಯಲ್ಲಿ ನಾನಿದ್ದೇನೆ. Will that suffice ?





It is true. Student has been commodified for their promo. So disgusting about the private college marks mongers and marks hunting.