ಮಾತಾಡಿ ಮಳೆಯಾಗುವವರು, ಮಾತಾಡದೆಯೇ ಮೋಡವಾಗುವವರು..

ಬೇರೆ ಬೇರೆಯಾಗಿಯೇ ಮಿಡಿದ ಯುಗಳ ಗಾನ Duet

ಮಾತಾಡಿ ಮಳೆಯಾಗುವವರು, ಮಾತಾಡದೆಯೇ ಮೋಡವಾಗುವವರು ಇಬ್ಬರೂ ಸೇರಿ ನುಡಿಸಿದ ರಾಗ DUET.

ಇದು Navid Danesh ನಿರ್ದೇಶನದ ಇರಾನಿಯನ್ ಚಿತ್ರ.

ಇಡೀ ಚಿತ್ರದಲ್ಲಿ ಮಾತಿಗಿಂತಾ ಹೆಚ್ಚು ಪರಿಣಾಮಕಾರಿ ಆಗಿರುವುದು ಮಾತುಗಳ ನಡುವಿನ ಮೌನ.  ಇಲ್ಲಿ ಒಂದು ವಿಶೇಷವಿದೆ. ಚಿತ್ರದಲ್ಲಿ ಬಾಗಿಲುಗಳು ಪ್ರಧಾನ ಪಾತ್ರ ವಹಿಸುತ್ತವೆ.  ಮುಚ್ಚಿದ ಬಾಗಿಲು, ತೆರೆದ ಬಾಗಿಲು, ಇಬ್ಬರ ನಡುವೆ ನಿಂತ ಬಾಗಿಲು, ಭೂತ-ವರ್ತಮಾನಗಳನ್ನು ವಿಭಾಗಿಸಿದ್ದ ಬಾಗಿಲು, ಗೋಡೆಯ ಮೇಲಿನ ಚಿತ್ರದ ಬಾಗಿಲು, ಕತ್ತಲಿಗೆ ತೆರೆದುಕೊಳ್ಳುವ ಕಿಟಕಿಯ ಬಾಗಿಲು….

ನಿನ್ನೆಗಳ ಬೆನ್ನಿಗೆ ಜಡಿದ ಬಾಗಿಲುಗಳನ್ನು ಹಾಗೆಯೇ ಬಿಡಬೇಕೆ ಅಥವಾ ತೆರೆದು ನೋಡಬೇಕೆ?  ಇದು ಪ್ರಶ್ನೆ. 

ಚಿತ್ರದ ನಾಯಕ ಹಮೀದ್ ಹಾಗೆ ಹಠಕ್ಕೆ ಬಿದ್ದವನಂತೆ ಒಂದು ಬಾಗಿಲು ತೆರೆಯುತ್ತಾನೆ.  ಅವನ ಕೈಯಲ್ಲಿರುವುದು ಅಷ್ಟೇ, ತೆರೆದ ಬಾಗಿಲಿನಿಂದ ಅವನಿಗೆ ಬೇಕಾದ್ದು ಮಾತ್ರವೇ ಬರುವುದಿಲ್ಲ, ಆ ಬಾಗಿಲಿಂದ ಬರುವ ಭಾವಗಳು ಎರಡು ಕುಟುಂಬಗಳನ್ನು, ನಾಲ್ಕು ಬದುಕುಗಳನ್ನು ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ.

ಹಮೀದ್ ಕಾಲೇಜಿನಲ್ಲಿರುವಾಗ ಸಫೀದೆ ಎನ್ನುವ ಸಹಪಾಠಿಯನ್ನು ಪ್ರೀತಿಸಿರುತ್ತಾನೆ.  ಸಂಗೀತ ಅವನ ಆಸಕ್ತಿ, ಹವ್ಯಾಸ.  ಆಕೆಯೂ ಸಂಗೀತಗಾರಳು.  ಸಂಗೀತವನ್ನು ಮುಂದುವರೆಸಲು ಪ್ಯಾರಿಸ್ ಗೆ ಹೋಗುತ್ತಾನೆ.  ಆದರೆ ಹಾಗೆ ಹೋಗುವಾಗ ತನ್ನ ಗೆಳತಿಗೆ ಏನನ್ನೂ ಹೇಳದೆ, ಒಂದು ವಿದಾಯದ ಬಿಡುಗಡೆಯನ್ನೂ ಕೊಡದೆ ಹೊರಟು ಹೋಗಿರುತ್ತಾನೆ.  ಅಲ್ಲಿ ಆತನಿಗೆ ಮೀನೂ ಎನ್ನುವವಳ ಜೊತೆ ಪ್ರೇಮವಾಗುತ್ತದೆ, ಮದುವೆ ಆಗುತ್ತದೆ, ಒಂದು ಮಗು ಸಹ ಆಗುತ್ತದೆ.

ಇದೆಲ್ಲಾ ಆದ ಮೇಲೆ ಆತ ತನ್ನ ಊರಿಗೆ ಹಿಂದಿರುಗುತ್ತಾನೆ. ಆಗ ಅವನಿಗೆ ತನ್ನ ಗೆಳತಿಯ ನೆನಪಾಗುತ್ತದೆ. ಅವಳನ್ನು ಭೇಟಿ ಮಾಡಿ ಕ್ಷಮೆ ಕೇಳಬೇಕು ಎಂದುಕೊಂಡು ಆ ಪ್ರಯತ್ನ ಮಾಡುತ್ತಾನೆ.  ಅದೇ ಕಾರಣ ಹೇಳಿ ಹೆಂಡತಿಯನ್ನೂ ಒಪ್ಪಿಸಿರುತ್ತಾನೆ.  ಆದರೆ ಅದು ಕೇವಲ ಅಷ್ಟೆಯೇ?  ಇವನು ಹೇಳಿದ್ದಾನೆ ಎನ್ನುವ ಕಾರಣಕ್ಕೆ ಹೆಂಡತಿಯ ಮನಸ್ಸಿನಲ್ಲಿ ಯಾವುದೇ ಸಂಕಟ ಆಗುವುದಿಲ್ಲವೆ?  ಇಲ್ಲಿ ಅವನ ಮನಸ್ಸು ಹಗುರಾಗಲು ಅದನ್ನು ಮಾಡುತ್ತಿದ್ದೇನೆ ಎಂದರೂ ಅದು ಅವಳ ಮನಸ್ಸಿನ ಮೇಲೆ ಮಾಡುತ್ತಿರುವ ಪರಿಣಾಮ ಏನು?  ಇವನದು ಕೇವಲ ಆ ಉದ್ದೇಶ ಮಾತ್ರವೇ?  ಅಷ್ಟಕ್ಕೂ ಕ್ಷಮೆ ಕೇಳಿ ಇವನು ಹಗುರಾಗಬಹುದು ಆದರೆ ಆ ಗೆಳತಿ ನಿಜಕ್ಕೂ ಇವನನ್ನು ಕ್ಷಮಿಸಬಲ್ಲಳೇ?  ಇವನ ನಿರ್ಗಮನ ಅವಳಲ್ಲಿ ಹುಟ್ಟಿಸಿರುವ ಖಾಲಿತನ ಎಂತಹುದು?  ಚಿತ್ರ ಈ ಎಲ್ಲಾ ಪ್ರಶ್ನೆಗಳ ಸುತ್ತಲೂ ಸುತ್ತುತ್ತದೆ.

ಈ ಪ್ರಶ್ನೆಗೆ ಸಂವಾದಿಯಾಗುವುದು ಭೌತಿಕ ವಸ್ತುಗಳಾದ ಬಾಗಿಲು ಮತ್ತು ವಾಸವಿದ್ದ ಮನೆಯ ಗೋಡೆಗಳ ಒಳಗಿಂದ ಮುರಿದ ಪೈಪ್ ನಿಂದ ತಣ್ಣಗೆ ಒಸರುವ ನೀರು.

ಚಿತ್ರ ಪ್ರಾರಂಭವಾಗುವುದೇ ಒಂದು ವಿಶಿಷ್ಟ ಫ್ರೇಂ ನಿಂದ.  ಕಾರ್ ಒಳಗಿರುವ ಕ್ಯಾಮೆರಾ. ಮಸುಕು ಬೆಳಕು. ಅದೊಂದು ಗಲ್ಲಿ. ಅಲ್ಲಿ ಕಾರ್ ನಿಂತಿದೆ.  ಎದುರಿನಿಂದ ಬರುವ ಕಾರ್ ಗೆ ಮುಂದೆ ಹೋಗಲು ದಾರಿಯಿಲ್ಲ.  ಆ ಕಾರಿನ ಚಾಲಕಿ ಏನೆಂದು ನೋಡಲು ಬರುತ್ತಾಳೆ. ನಿಂತಿರುವ ಕಾರಿನಲ್ಲಿ ಸಹ ಒಬ್ಬ ಮಹಿಳೆ, ಒಡಲೇ ಸೋತಂತೆ ಗಾಡಿ ನಿಲ್ಲಿಸಿಕೊಂಡಿದ್ದಾಳೆ.  ಗಾಡಿ ಅಡ್ಡ ಎಂದು ತಿಳಿದು ಗಾಡಿಯನ್ನು ರಿವರ್ಸ್ ತೆಗೆದುಕೊಳ್ಳುತ್ತಾಳೆ.  ಆದರೆ ಅವಳಿಗೆ ಮನೆಗೆ ಹೋಗುವ ಯಾವ ಅವಸರವೂ ಇಲ್ಲ.  ಹೇಗೋ ಮನೆಗೆ ಬರುತ್ತಾಳೆ, ಮೆಟ್ಟಿಲ ಬಳಿ ಒಂದೆರಡು ಕ್ಷಣ ತಡವರಿಸುತ್ತಾಳೆ.

ಯಾಕೋ ಮನೆ ಅವಳನ್ನು ಒಳಗಿನಿಂದ ತಳ್ಳುತ್ತಿದೆ.  ಮನೆ ಭವ್ಯವಾಗಿದೆ, ಆದರೆ ಅದರ ರಿನೋವೇಶನ್ ನಡೆಯುತ್ತಿದೆ.  ಹೊಸದಾಗಿ ಮನೆ ಕಟ್ಟುವ ಸಂಭ್ರಮ ಬೇರೆ, ಆದರೆ ಅದೇ ಮನೆಯಲ್ಲಿ ವಾಸವಾಗಿದ್ದು ಅದನ್ನು ರಿನೋವೇಟ್ ಮಾಡುವ ಕಿರಿಕಿರಿ ಸಹಿಸುವುದು ಸುಲಭವಲ್ಲ. ಆ ಕಿರಿಕಿರಿ ಇದೊಂದು ದೃಶ್ಯದಲ್ಲಿ ಮಾತ್ರವಲ್ಲ, ಇಡೀ ಚಿತ್ರದಲ್ಲಿ ಸ್ಥಾಯಿ ಆಗಿರುವ ಹಾಗೆ ಕ್ಯಾಮೆರಾ ಕೆಲಸ ಮಾಡುತ್ತದೆ. ಈ ಚಿತ್ರದಲ್ಲಿ ಕ್ಯಾಮೆರಾದ್ದು ಸಲೀಸು ಚಲನೆ ಅಲ್ಲ, ಆ ಮೂಲಕ ಚಿತ್ರದ ಒಟ್ಟು ಭಾವವನ್ನು ದಾಟಿಸುವುದು ಛಾಯಾಗ್ರಾಹಕನ ಉದ್ದೇಶವಿರುವಂತೆ ಕಾಣಿಸುತ್ತದೆ.

ತಡವರಿಸುತ್ತಾ ಮನೆಯೊಳಗೆ ಬಂದವಳು ಮೀನೂ, ಮನೆಯಲ್ಲಿ ಮನೆಯೊಡೆಯ ಹಮೀದ್. ಗೋಡೆಗೆ ಬಣ್ಣ ಹಾಕಿಸುವುದರ ಬಗ್ಗೆ ಪೇಂಟರ್ ಜೊತೆ ಮಾತನಾಡುತ್ತಿದ್ದಾನೆ. ಅವನಿಗೆ ಹಳೆಯ ಬಣ್ಣವಷ್ಟೇ ಸಾಲದು, ಹಳೆಯ ಶೇಡ್ ಸಹ ಆಗಬೇಕು. ಅದಕ್ಕಾಗಿ ಅವನ ಜಗ್ಗಾಟ. ಮೀನೂ ಮೌನವಾಗಿ ದಿಟ್ಟಿಸುತ್ತಿರುತ್ತಾಳೆ.  ಗೋಡೆಯ ಬಣ್ಣದ ಬಗ್ಗೆ ತಲೆಕೆಡಿಸಿಕೊಂಡಿರುವ ಹಮೀದ್ ನನ್ನು ಕರೆದ ಪೇಂಟರ್ ಒಂದು ಗೋಡೆ ತೋರಿಸುತ್ತಾನೆ.  ಗೋಡೆ ತೋಯ್ದಿದೆ, ಅಂಟಿಸಿದ್ದ ಬಣ್ಣದ ಪೇಪರ್ ಅಂಟನ್ನು ಕಡೆದುಕೊಂಡು ನೇತಾಡುತ್ತಿದೆ. ಪೇಂಟರ್ ಹೇಳುತ್ತಾನೆ, ’ನೋಡಿ ಒಳಗೆ ಯಾವುದೋ ಪೈಪ್ ಒಡೆದು ನೀರು ಒಸರುತ್ತಿದೆ. ಒಳಗಿಂದೊಳಗೆ ಪ್ಲಾಸ್ಟರ್ ತೇವವಾಗಿದೆ. ಮತ್ತೆ ಪ್ಲಾಸ್ಟರ್ ಹಾಕಬೇಕು. ಇಲ್ಲದಿದ್ದರೆ ಬಣ್ಣ ನಿಲ್ಲುವುದಿಲ್ಲ’.

ಆ ಮನೆಯಲ್ಲಿನ ಬದುಕಿಗೆ ಆ ಮಾತುಗಳು ಪ್ರತಿಮೆಯಾಗಿ ನಿಲ್ಲುತ್ತವೆ. 

ಹಮೀದ್ ಗೆಳೆಯ ಒಂದು ಸ್ಟೇಷನರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅವನ ಮೂಲಕ ಸಫೀದೆ ಅಲ್ಲಿಗೆ ಬರುವ ವಿಷಯ ಗೊತ್ತಾಗುತ್ತದೆ. ಅವಳನ್ನು ಭೇಟಿ ಮಾಡುವ ಹಂಬಲ ಅವನಿಗೆ. ಅದನ್ನು ಅವನು ಹೆಂಡತಿಯಿಂದ ಮುಚ್ಚಿಡುವುದೂ ಇಲ್ಲ. ಹೆಂಡತಿಯ ಬಳಿ ಅದಕ್ಕೆ ಅವನು ಕೊಡುವ ಕಾರಣ ’ಒಮ್ಮೆ ಸಾರಿ ಕೇಳಿ ಆ ಸಂಬಂಧ ಮುಗಿಸಿಬಿಡುತ್ತೇನೆ.’ ಆದರೆ ಅದು ಅಷ್ಟೇ ಅಲ್ಲ ಎನ್ನುವುದರ ಅರಿವು ಹೆಂಡತಿಗಿದೆ. ಹಾಗಾಗಿಯೇ ಅವಳಲ್ಲಿ ಆ ತಳಮಳ. ಹಮೀದ್ ನ ಬಿಟ್ಟು ನಡೆಯುವ ಮತ್ತು ಮತ್ತೆ ನೋಡುವ ಎರಡೂ ನಿರ್ಧಾರಗಳೂ ಸಂಬಂಧ ಪಟ್ಟವರಲ್ಲಿ ಎಂತಹ ಒತ್ತಡ ಸೃಷ್ಟಿಸುತ್ತದೆ ಎಂದರೆ ಇಡೀ ಚಿತ್ರದಲ್ಲಿ ಮುಖ್ಯ ಪಾತ್ರಧಾರಿಗಳು ಯಾರೂ ಮನಸ್ಸು ಬಿಚ್ಚಿ ಒಮ್ಮೆಯೂ ನಗುವುದಿಲ್ಲ.

ಅವರೆಲ್ಲರೂ ಹಮೀದ್ ಮನೆಯ ಗೋಡೆಯ ಹಾಗೆ ಒಳಗೊಳಗೇ ಟೊಳ್ಳಾದವರು.

ಅಂದು ಸ್ಟೇಷನರಿ ಅಂಗಡಿಗೆ ಹಮೀದ್ ಹೋಗುತ್ತಾನೆ, ಹೆಂಡತಿ ಗಾಡಿಯಲ್ಲಿ ಕೂತಿರುತ್ತಾಳೆ. ಅಂಗಡಿಯಲ್ಲಿ ಸ್ನೇಹಿತನಿಗೆ ಈಗ ಪಾಪಪ್ರಜ್ಞೆ.  ಸಫೀದೆ ಬರುವ ವಿಷಯ ಹೇಳಿ ತಪ್ಪು ಮಾಡಿದೆನೇ ಎನ್ನುವ ಗೊಂದಲ. ಹಾಗಾಗಿಯೇ ಅವಳು ಬಂದು ಹೋದಳು ಎಂದು ಹೇಳಿಬಿಡುತ್ತಾನೆ. ಸರಿ ಎಂದು ಹಿಂದಿರುಗುವ ಹಮೀದ್ ಬಾಗಿಲು ತೆರೆದರೆ ಎದುರಿಗೆ ಸಫೀದೆ. ಬಾಗಿಲ ಈಚೆಗೆ ಅವನು, ಆಚೆಗೆ ಅವಳು. ಇಬ್ಬರ ನಡುವಿನ ಅಸಹನೀಯ ಮೌನ, ಅದನ್ನು ತುಂಬಲೆಂದೇ ಆಡುವ ದೇಶಾವರಿ ಮಾತುಗಳು, ತುಟಿಯನ್ನು ದಾಟಿ ಕಣ್ಣುಗಳನ್ನು ಸ್ಪರ್ಶಿಸದ ಅವಳ ನಗು… ಅಷ್ಟರಲ್ಲಿ ಯಾರೋ ’ನೀವಿಬ್ಬರೂ ಬಾಗಿಲಿಗೆ ಅಡ್ಡ ನಿಂತಿದ್ದೀರಿ, ಬಾಗಿಲು ಮುಚ್ಚಿಕೊಳ್ಳುತ್ತಿಲ್ಲ ಎನ್ನುತ್ತಾರೆ.  ಅಷ್ಟರಲ್ಲಾಗಲೇ ಬಾಗಿಲಾಚೆಯ ಶೀತಗಾಳಿ ಒಳಹೊಕ್ಕಾಗಿದೆ. ಇವನು ಬಿಟ್ಟು ಹೋದವನು, ಅವಳು ನಿರಾಕರಣೆಗೊಂಡವಳು.  ಬಿಟ್ಟು ಹೋಗುವವರದು ಸ್ವಂತ ನಿರ್ಧಾರ. ಹಿಂದೆ ಉಳಿದವರದು ಹಾಗಲ್ಲ. ಅವರಲ್ಲಿ ನಿರಾಸೆಯ ಜೊತೆಗೆ ತಮ್ಮಲ್ಲಿಯೇ ಏನಾದರೂ ಕೊರತೆ ಇತ್ತೆ ಎನ್ನುವುದು ಕಾಡುತ್ತಿರುತ್ತದೆ.

ಮಾತನಾಡಿ ಮುಗಿಯಿತು ಎನ್ನುವಂತೆ ಹಮೀದ್ ಹೋಗುತ್ತಾನೆ. ಆದರೆ ಮತ್ತೆ ಒಳಬರುತ್ತಾನೆ, ಮತ್ತೇ ಅವಳೊಡನೆ ಮಾತಿಗಿಳಿಯುತ್ತಾನೆ. ಅವಳು ತನಗೆ ಮದುವೆ ಆಗಿದೆ ಎಂದು ಮಾತಿನ ನಡುವೆ ಹೇಳುತ್ತಾಳೆ.  ತಾನೇ ಮದುವೆ ಆಗಿ, ಮಗು ಆಗಿದ್ದರೂ ಹಮೀದ್ ಗೆ ಅದು ಅಪ್ರಿಯ ವಿಷಯ. ಆ ಬಗ್ಗೆ ಏನೇನೋ ವಿವರಗಳನ್ನು ಕೇಳುತ್ತಾನೆ. ಅಷ್ಟೇ ಅಲ್ಲ, ಅಲ್ಲಿದ್ದ ಸಿನಿಮಾ ಸಿಡೀಗಳನ್ನು ತೋರಿಸಿ ತಾವಿಬ್ಬರೂ ಒಟ್ಟೊಟ್ಟಿಗೆ ಅವುಗಳನ್ನು ನೋಡುತ್ತಿದ್ದದ್ದನ್ನು ನೆನಪಿಸಿ ಹಳೆಯ ದಿನಗಳ ನೆರಳನ್ನು ನಿಜ ಮಾಡಲು ಪ್ರಯತ್ನಿಸುತ್ತಾನೆ. ಸಫೀದೆ ತನಗೆ ಅದು ನೆನಪೇ ಇಲ್ಲ ಎಂದು ನಟಿಸುತ್ತಿರುತ್ತಾಳೆ. ಅವರಿಬ್ಬರೂ ಈ ಹಗ್ಗ ಜಗ್ಗಾಟದಲ್ಲಿರುವಾಗ ಗಂಡನಿಗಾಗಿ ಗಾಡಿಯಲ್ಲಿ ಕಾದು ಕುಳಿತಿದ್ದ ಮೀನೂ ಇನ್ನು ತಾಳಲಾಗದೆ ಒಳಗೆ ಬರುತ್ತಾಳೆ.  ಆ ದೃಶ್ಯದಲ್ಲಿ ನಾಲ್ಕೈದು ಕ್ಷಣಗಳ ಕಾಲ ಸಫೀದೆ ಮತ್ತು ಮೀನೂ ಇಬ್ಬರೇ ಫ್ರೇಮಿನಲ್ಲಿರಬೇಕಾಗುತ್ತದೆ.  ತೆರೆದ ಬಾಗಿಲಿನ ಕಟ್ಟಿಗೆ ಒರಗಿ ನಿಂತ ಇಬ್ಬರು. ಇಡೀ ಚಿತ್ರದ ಮೂಡ್ ಆ ಒಂದು ದೃಶ್ಯದಲ್ಲಿ ಹರಳುಗಟ್ಟಿದೆ.

ಅವರಿಬ್ಬರ ನಡುವೆ ಗಾಂಧಾರಿಯ ಗರ್ಭದಂತಹ ಮೌನ…

ಹಮೀದ್, ಮೀನೂ ಇಬ್ಬರೂ ತೆರಳುತ್ತಾರೆ.  ಆದರೆ ಹಮೀದ್ ತೆರೆದ ಬಾಗಿಲು ಮುಚ್ಚಿಕೊಳ್ಳುವುದಿಲ್ಲ.  ಹೊರಟಿದ್ದ ಸಫೀದೆ ಮತ್ತೆ ಬಂದು ಹಮೀದ್ ನ ಸಂಗೀತದ ಸೀಡಿ ತೆಗೆದುಕೊಳ್ಳುತ್ತಾಳೆ.  ಹಮೀದ್ ಹೋಗುವ ಮೊದಲು ಅವನ ಪಿಯಾನೋ ಮತ್ತು ಇವಳ ವಯಲಿನ್ ನಿಂದ ಅವರಿಬ್ಬರೂ ಒಂದು ಸಣ್ಣ ಸಂಗೀತದ ತುಣುಕನ್ನು ಸೃಷ್ಟಿಸಿರುತ್ತಾರೆ. ಈಗ ಹಮೀದ್ ಅದನ್ನು ಬೆಳಸಿ ಕೇವಲ ಪಿಯಾನೋ ವಾದನದ ಸೀಡಿ ಮಾಡಿದ್ದಾನೆ. ಸಫೀದೆ ಈಗ ವಯೋಲೀನ್ ನುಡಿಸುತ್ತಿಲ್ಲ.  ಆದರೆ ಮನೆಯಲ್ಲಿ ಆಗಾಗ ಅವರಿಬ್ಬರ ಸಂಗೀತದ ತುಣುಕಿನ ಸೀಡಿ ಕೇಳುತ್ತಾಳೆ, ಅದನ್ನು ಕೇಳಿದಾಗೆಲ್ಲಾ ದುಃಖಿತಳಾಗುತ್ತಾಳೆ ಮತ್ತು ಅದು ಅವಳ ಗಂಡನಿಗೂ ಗೊತ್ತಿದೆ.

ಹಮೀದ್ ತೊರೆದು ಹೋದ ಮೇಲೆ ಸಫೀದೆ ಬದುಕಿನ ಬಗೆಗಿನ ನಂಬಿಕೆಯನ್ನು ಕಳೆದುಕೊಂಡಿದ್ದಾಳೆ.  ’ಗಮ್ ಇಸ್ ಬಾತ್ ಕ ನಹಿ ಕಿ ತುಮ್ ನೆ ಬೇವಾಫಾಯಿ ಕಿ, ಗಮ್ ಇಸ್ ಬಾತ್ ಕಾ ಹೈ ಕಿ ಮೊಹಬ್ಬತ್ ಸೆ ಯಕೀನ್ ಉಡ್ ಗಯಾ’ – ’ದುಃಖ ನೀನು ನಂಬಿಕೆ ದ್ರೋಹ ಮಾಡಿದೆ ಎಂದಲ್ಲ, ನೋವಿರುವುದು ಆಮೇಲೆ ಪ್ರೇಮದ ಮೇಲೆ ನಂಬಿಕೆಯೇ ಹೊರಟು ಹೋಯಿತು ಎನ್ನುವುದಕ್ಕೆ’ : ಈ ಸಾಲಿಗೆ ಜೀವ ಬಂದಂತೆ ಅವಳ ಬದುಕಿದೆ. ಅವಳ ಗಂಡ ಆರ್ಕಿಟೆಕ್ಟ್. ಒಳ್ಳೆಯ ಮನುಷ್ಯ. ಆದರೆ ಅವನನ್ನು ಮನಸ್ಸು ಬಿಚ್ಚಿ ಪ್ರೀತಿಸಲು ಅವಳಿಗೆ ಸಾಧ್ಯವೇ ಆಗುವುದಿಲ್ಲ. ಅವಳಿಗೀಗ ಪ್ರೀತಿ ಅಂದರೆ ಹೆದರಿಕೆ. ಅವಳು ಮುಕ್ತವಾಗಿ ನಗಲಾರಳು, ಕೂಗಾಡಲಾರಳು, ಪ್ರೀತಿಸಲಾರಳು, ನಂಬಲಾರಳು.

ಮಸೂದ್ ಗೆ ಅದರ ಅರಿವಿದೆ.  ಹೆಂಡತಿಯ ಮನಸ್ಸನ್ನು ಆವರಿಸಿದ ನೆರಳು ಯಾವುದು ಎನ್ನುವುದು ಅವನ ತಳಮಳ.  ಅದಕ್ಕೆ ಉತ್ತರ ಹುಡುಕಲೆಂದೇ ಅವನು ಆ ಸ್ಟೇಷನರಿ ಅಂಗಡಿಗೆ ಹೋಗುತ್ತಾನೆ, ಹಮೀದ್ ನ ಸಿಡಿ ಕೊಳ್ಳುತ್ತಾನೆ, ಅದರಲ್ಲಿನ ವಿಳಾಸ ನೋಡಿ ಮೀನೂಳ ಸಂಗೀತ ಶಾಲೆಗೂ ಹೋಗುತ್ತಾನೆ.  ಅಲ್ಲಿಯವರೆಗೂ ಅವನದು ಅನುಮಾನದ ಸ್ವಭಾವ ಇರಬೇಕು ಅನ್ನಿಸುತ್ತಿರುತ್ತದೆ. ಆದರೆ ಅಲ್ಲಿ ಮೀನೂಳ ಎದುರಿಗೆ ಅವನು ಸಂಪೂರ್ಣ ಕುಸಿಯುತ್ತಾನೆ.  ಅವನೊಂದು ಕಥೆ ಹೇಳಲು ಪ್ರಾರಂಭಿಸುತ್ತಾನೆ. ಅವನು ಕಾಲೇಜಿನಲ್ಲಿ ಓದುವಾಗ ಒಂದು ಸ್ನೇಹಿತರ ಗುಂಪು. ಆ ಗುಂಪಿನಲ್ಲಿ ಸಫೀದೆಯ ಅಕ್ಕನೂ ಇರುತ್ತಾಳೆ.  ಆ ಗುಂಪಿಗೆ ಜೀವ ಎನ್ನುವಂತೆ ಒಬ್ಬ ಹುಡುಗಿ ಇರುತ್ತಾಳೆ.  ಎಲ್ಲರನ್ನೂ ಒಟ್ಟಾಗಿಟ್ಟಿದ್ದ ತಂತು ಅವಳು. ಒಂದು ದಿನ ಅವಳು ಮಸೂದ್ ಗೆ ಫೋನ್ ಮಾಡಿದ್ದಾಳೆ, ಏನೋ ಮಾತನಾಡಬೇಕು ಎಂದಿದ್ದಾಳೆ.  ಕೆಲಸದ ನಡುವೆ ಇದ್ದ ಮಸೂದ್ ಅವಳಿಗೆ ಮತ್ತೆ ಕರೆ ಮಾಡುವುದಿಲ್ಲ.

ಅಂದಿನ ರಾತ್ರಿ ಮಲಗಿದ ಆ ಹುಡುಗಿ ಮತ್ತೆ ಏಳುವುದಿಲ್ಲ.  ಅದು ಸಹಜ ಸಾವೋ ಅಥವಾ ಆತ್ಮಹತ್ಯೆಯೋ ಎನ್ನುವುದು ಇವನ ಅನುಮಾನ. ಎಲ್ಲಕ್ಕಿಂತ ಹೆಚ್ಚಾಗಿ ಸದಾ ತನ್ನ ಕೋಶದಲ್ಲಿ ಬಂಧಿಯಾಗಿರುವ ಸಫೀದೆ ಸಹ ಹೀಗೇನಾದರೂ ಮಾಡಿಕೊಂಡಾಳು ಎನ್ನುವುದು ಅವನ ಆತಂಕ. ಅವನು ಅದೆಲ್ಲಾ ಹೇಳಿಕೊಳ್ಳುವಾಗ ಎದುರಿಗೆ ಒಂದು ಫೋಟೋ ಇರುತ್ತದೆ, ಕ್ಯಾಮೆರಾ ಅದರ ಮೇಲೆ ಪ್ಯಾನ್ ಆಗುತ್ತದೆ.  ಅದೊಂದು ಹಿಮ ಸುರಿದ ಪರ್ವತ ರಾಶಿ. ಎಲ್ಲೆಲ್ಲೂ ಹಿಮ, ಹಸಿರಿನ ತುಣುಕಿಲ್ಲ. ಅದರ ನಡುವಿನಿಂದ ಒಂದು ಹಾದಿ ಹಾದು ಹೋಗಿದೆ. ಆ ಹಾದಿಯ ಮೇಲೆ ಎರಡು ಸಮಾನಾಂತರ ರೇಖೆಗಳು ಸಾಗಿವೆ. ಅವು ಎಲ್ಲೂ ಸಂಧಿಸುವುದೇ ಇಲ್ಲ. ಮಸೂದ್ ನ ಮನಸ್ಸಿನ ಒಂಟಿತನವನ್ನು ಆ ಚಿತ್ರ ಹೇಳುತ್ತದೆ.

ಮಸೂದ್ ಅಲ್ಲಿಂದ ಹೋಗಿ ಹೆಂಡತಿಯನ್ನು ನೇರವಾಗಿ ಕೇಳುತ್ತಾನೆ. ನನ್ನ ಪ್ರೀತಿಯನ್ನು ನೀನು ಏಕೆ ಒಪ್ಪಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸುತ್ತಾನೆ. ಮದುವೆ ಆದ ಮೇಲೆ ಅವಳ ಇಷ್ಟದಂತೆಯೇ ನಡೆದಿದ್ದರೂ ಏಕೆ ಅವಳು ತನ್ನನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ ಎಂದು ಕೇಳುತ್ತಾನೆ.  ಕಡೆಯಲ್ಲಿ ’ನೀನು ಬಯಸಿದವ ನಾನಾಗಿರಲಿಲ್ಲವಾ’ ಎಂದು ಸಹ ಕೇಳಿಬಿಡುತ್ತಾನೆ. ಅವನ ಯಾವ ಪ್ರಶ್ನೆಗೂ ಅವಳಲ್ಲಿ ಉತ್ತರವಿಲ್ಲ. ಅವನ ಪ್ರಶ್ನೆಗೆ ಉತ್ತರಿಸದೆ, ತನ್ನದೇ ಕೆಲವು ಪ್ರಶ್ನೆಗಳನ್ನೆಸೆದು ಅವಳು ಅಲ್ಲಿಂದ ಹೊರಗೆ ಬಂದು ರಸ್ತೆಯಲ್ಲಿ ನಡೆಯಲಾರಂಭಿಸುತ್ತಾಳೆ.

ಅದುವರೆಗೂ ಸಹಜತೆಯ, ಮೌನದ ಮುಖವಾಡ ತೊಟ್ಟಿದ್ದ ಅವಳಿಗೂ ಸಾಕಾಗಿದೆ, ಮುಖವಾಡ ಉಸಿರು ಕಟ್ಟಿಸುತ್ತಿದೆ.  ಸ್ಟೇಶನರಿ ಅಂಗಡಿಯ ಸ್ನೇಹಿತನಿಗೆ ಫೋನ್ ಮಾಡಿ ಹಮೀದ್ ನ ಜೊತೆ ಮಾತನಾಡಬೇಕು ಅನ್ನುತ್ತಾಳೆ. ಅವನಿಗೋ ಗಾಬರಿ. ತಾನು ಹೇಳಿದ ಒಂದು ಸುದ್ದಿ ಇದೆಲ್ಲಿಗೆ ತಂದು ನಿಲ್ಲಿಸಿತಪ್ಪಾ ಎನ್ನುವ ಆತಂಕ. ಏನೂ ತೋಚದೆ ಮೀನೂ ಬಳಿ ಬಂದು ’ಏನು ಮಾಡಲಿ’ ಎಂದು ಕೇಳುತ್ತಾನೆ.

ಮೀನೂ ಏನು ಹೇಳಬೇಕು?  ನಂಬರ್ ಕೊಡು ಮಾತಾಡಲಿ ಎನ್ನಲು ಮನಸ್ಸಿಲ್ಲ, ಕೊಡಬೇಡ ಎನ್ನುವುದು ತಪ್ಪಾದೀತೆ ಎನ್ನುವ ತಳ್ಳಂಕ.  ಏನಾದರೂ ಮಾಡಿಕೋ, ನನಗೆ ಗೊತ್ತಿಲ್ಲ ಎನ್ನುತ್ತಾಳೆ.  ಅಲ್ಲಿಗೆ ಬಂದ ಹಮೀದ್ ಫೋನ್ ಕೊಡು ನಾನು ಮಾತನಾಡುತ್ತೀನಿ ಅನ್ನುತ್ತಾನೆ.  ಅಷ್ಟೇ ಅಲ್ಲ, ತನ್ನ ನಿಸ್ಪೃಹತೆಯನ್ನು ಸಾಬೀತುಪಡಿಸಿಕೊಳ್ಳಲು ಸ್ಪೀಕರ್ ಫೋನ್ ಗುಂಡಿಯನ್ನು ಒತ್ತುತ್ತಾನೆ.  ಅಂದರೆ ಆ ಮೂಲಕ ತನ್ನ ಪ್ರತಿ ಕ್ರಿಯೆಯೂ ಹೆಂಡತಿಯ ಉಪಸ್ಥಿತಿಯಲ್ಲೇ ನಡೆದಿತ್ತು ಎನ್ನುವ ಮೊಹರು ಒತ್ತುವ ಪ್ರಯತ್ನ ಅವನದು. ಹೆಂಡತಿ ಆಗ ಸಿಡಿಯುತ್ತಾಳೆ. ಎಲ್ಲಾ ವಿಷಯ ತಿಳಿಯಬೇಕೆಂದು ನಾನು ಕೇಳಿಲ್ಲ ಎಂದು ಬ್ಯಾಗ್ ತೆಗೆದುಕೊಂಡು ಹೊರಟುಬಿಡುತ್ತಾಳೆ.  ’ಕೊಂದ ಪಾಪ ತಿಂದು ಪರಿಹಾರ’ ಆಗುವ ಹಾಗೆ, ಮಾಡಿದ ಪಾಪ ಹೇಳಿ ಪರಿಹಾರ ಆಗಿಬಿಡುತ್ತದೆಯೆ?  ಹಮೀದ್ ಹಾಗೆಯೇ ನಂಬಿದ್ದಾನೆ. ಅವನ ಆ ನಂಬಿಕೆಯನ್ನು ನಿರಾಕರಿಸಿ ಮೀನೂ ಹೊರಟುಬಿಡುತ್ತಾಳೆ.

ಅವನು ತಿಳಿಯಬೇಕಾದ್ದು ಇನ್ನೂ ಇದೆ… ಫೋನಿನಲ್ಲಿ ಸಫೀದೆ ಇದ್ದಾಳೆ. ಅಷ್ಟು ದಿನಗಳ ಅವಳ ಮೌನ ಈಗ ಮಾತಾಗಿದೆ. ’ನಿನ್ನ ಮೇಲೆ ನನಗೆ ಸಿಟ್ಟು ಅಂದುಕೊಂಡಿದ್ದೀಯಾ? ಇಲ್ಲ ನನಗೆ ನಿನ್ನ ಮೇಲೆ ಧ್ವೇಷ…. ಬೇಕಿದ್ದರೆ ನಾನೇ ನಿನ್ನನ್ನು ಹುಡುಕುತ್ತಿದ್ದೆ. ನನಗೆ ನೀನು ಬೇಡ’ ಎಂದು ಅಬ್ಬರಿಸುತ್ತಾಳೆ.

ಅಲ್ಲಿಂದ ಎದ್ದು ಬಂದ ಮೀನೂ ಮನೆಗೆ ಬಂದಿದ್ದಾಳೆ. ಅವಳದೇ ಮನೆಯ ಬಾಗಿಲಿನ ಬೀಗ ಸರಾಗವಾಗಿ ತೆಗೆಯಲಾಗುತ್ತಿಲ್ಲ. ಹಿಂಬಾಗಿಲಿನಿಂದ ಒಳಗೆ ಹೋಗುತ್ತಾಳೆ. ದಿಕ್ಕುದೆಸೆಯಿಲ್ಲದಂತೆ ಮನೆಯಲ್ಲಿ ಓಡಾಡುತ್ತಿದ್ದವಳು ಹಠಾತ್ತಾಗಿ ನೆಲ ನೋಡುತ್ತಾಳೆ.  ಮನೆ ಪೂರ್ತಿ ನೀರು ನಿಂತಿದೆ.  ಸದ್ದಿಲ್ಲದಂತೆ ಪೈಪ್ ನಿಂದ ಒಸರಿ, ಗೋಡೆಯಿಂದ ಜಿನುಗುತ್ತಿದ್ದ ನೀರು ಈಗ ಮನೆಯ ನೆಲವನ್ನೆಲ್ಲಾ ಆವರಿಸಿದೆ. ಕಾಲು ಸೋತವಳಂತೆ ಅವಳು ಮೆಟ್ಟಿಲಿನ ಮೇಲೆ ಕುಸಿದು ಕೂರುತ್ತಾಳೆ. ಹಮೀದ್ ಮನೆಗೆ ಬರುತ್ತಾನೆ…..ಕರೆಗೆ ಓಗೊಡದೆ ಕುಸಿದು ಕೂತ ಹೆಂಡತಿ, ಮನೆಯ ನೆಲವನ್ನೆಲ್ಲಾ ಆವರಿಸಿದ ನೀರು…. ಚಿತ್ರ ಮುಗಿಯುತ್ತದೆ.

ಚಿತ್ರದ ಕಥೆ, ಪಾತ್ರಗಳ ನಟನೆ ಇವುಗಳ ಬಗ್ಗೆ ಎರಡು ಮಾತಿಲ್ಲ.  ಚಿತ್ರದ ನಾಲ್ಕು ಮುಖ್ಯ ಪಾತ್ರಗಳಲ್ಲದೆ, ಸ್ಟೇಷನರಿ ಅಂಗಡಿಯ ಸ್ನೇಹಿತ ಸಹ ಪಾತ್ರದಲ್ಲಿ ಮುಳುಗಿ ನಟಿಸಿದ್ದಾನೆ.  ಆದರೆ ಕೆಲವು ಕಡೆ ಸ್ಕ್ರೀನ್ ಪ್ಲೇ ಕೆಲವು ಎಳೆಗಳನ್ನು ಹಾಗೇ ಬಿಟ್ಟಿದೆ ಅನ್ನಿಸುತ್ತದೆ.  ಹಮೀದ್ ನ ತಾಯಿಯ ಪ್ರಸ್ತಾಪ ಬರುತ್ತದೆ, ಏಕೆ ಎಂದು ಗೊತ್ತಾಗುವುದಿಲ್ಲ.  ಇಡೀ ಚಿತ್ರದಲ್ಲಿ ಹಮೀದ್ ಮತ್ತು ಮೀನೂರ ಮಗ ಒಂದು ದೃಶ್ಯದಲ್ಲೂ ಕಾಣುವುದಿಲ್ಲ.  ಹೀಗೆ ಅಲ್ಲಲ್ಲಿ ಕೆಲವು ಪ್ರಶ್ನೆಗಳು ಉಳಿದುಕೊಂದುಬಿಡುತ್ತದೆ.

ಡ್ಯುಯೆಟ್ ಕೇವಲ ಇಬ್ಬರು ಹಳೆಯ ಪ್ರೇಮಿಗಳ ನಡುವೆ ನಡೆಯುವ ಯುಗಳ ಗೀತೆ ಅಷ್ಟೇ ಅಲ್ಲ, ಹಳೆಯ ಪ್ರೇಮದ ಸ್ವರಗಳು ಎರಡು ಕುಟುಂಬದಲ್ಲಿ ಮಿಡಿಸುವ ರಾಗಗಳೂ ಹೌದು.

ಎಲ್ಲಾ ಯುಗಳ ಗೀತೆಗಳೂ ಜೊತೆಯಾಗಿಯೇ ಹಾಡಾಗಬೇಕಿಲ್ಲ, ಇಲ್ಲಿರುವುದು ಬೇರೆಬೇರೆಯಾಗಿಯೇ ಉಳಿದ ಯುಗಳಗೀತೆ.  ಇಲ್ಲಿ ಒಂದು ಕುಟುಂಬದ ಹೆಂಡತಿ ಮತ್ತು ಮತ್ತೊಂದು ಕುಟುಂಬದ ಗಂಡನಿಗೆ ತಮ್ಮ ತಮ್ಮ ಸಂಗಾತಿಗಳ ಹಳೆಯ ಪ್ರೇಮದ ವಿಷಯ ಗೊತ್ತಾಗಿದೆ. ಆ ಕಿಡಿ ಇನ್ನೂ ಜೀವಂತವಾಗಿದೆ ಎನ್ನುವುದು ಅರ್ಥವಾಗಿದೆ. ಅದರಿಂದ ಉಂಟಾಗುವ ಸಿಟ್ಟು, ಹತಾಶೆ, ಅಭದ್ರತೆ, ಪ್ರೀತಿಗೆ ಬದಲಾಗಿ ಪ್ರೀತಿ ಸಿಗದ ಏಕಾಕಿತನ ಎಲ್ಲವೂ ಇಲ್ಲಿ ದೃಶ್ಯಗಳಾಗಿವೆ.

ಇಲ್ಲಿ ನಾಲ್ಕೂ ಜನರೂ ಗಾಯಗೊಂಡವರೇ, ಆ ಗಾಯದ ನೋವು ಎಲ್ಲರ ಮುಖದ ಮೇಲೂ ಅಚ್ಚೊತ್ತಿರುತ್ತದೆ.

‍ಲೇಖಕರು avadhi

May 13, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

9 ಪ್ರತಿಕ್ರಿಯೆಗಳು

  1. K.Nalla Tambi

    I have seen this movie. You have again placed the screen in front of me and projected the movie. I think i understood well now….thanks Sandhyaji.

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      Thank you so much for reading the articles and commenting sir. This also reminds of the festival days 🙂

      ಪ್ರತಿಕ್ರಿಯೆ
  2. ಭಾರತಿ ಬಿ ವಿ

    ಫಿಲ್ಮ್ ಫೆಸ್ಟಿವಲ್ ನ ಹಲವು ದಿನ ನಾಲ್ಕೈದು ಸಿನೆಮಾ ನೋಡಿ ಹೈರಾಣಾಗಿ ಕೆಲವು ಪೂರ್ತಿ ತಲ್ಲೀನತೆಯಿಂದ ನೋಡಲಾಗಿರಲೇ ಇಲ್ಲ. ಎಲ್ಲೋ ಒಳಗೆ ಸಣ್ಣ ನೆನಪಿನೆಳೆಯಾಗಿ ಉಳಿದ ಚಿತ್ರವನ್ನು ಈಗ ಕಣ್ಣೆದುರು ಮತ್ತೆ ಬಿಚ್ಚಿಟ್ಟಿದ್ದೀಯಾ … ಈಗ ಮತ್ತೆ ನನಗೆ ಇದನ್ನು ಕೊಡುವುದು ನಿನ್ನದೇ ಜವಾಬ್ದಾರಿ!
    ತುಂಬ ತುಂಬ ತುಂಬ ಚೆನ್ನಾಗಿದೆ

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      🙂 ಆಯ್ತು ಇದನ್ನು ಕೊಡುವ ಜವಾಬ್ದಾರಿ ನನ್ನದು! ಥ್ಯಾಂಕ್ಸ್ ಕಣೆ. ಶಾಲ್ಮಲೆಯಂತಹ ಸಂಕಟ ಈ ಚಿತ್ರದ್ದು….

      ಪ್ರತಿಕ್ರಿಯೆ
  3. Bhavya

    ಅವರಿಬ್ಬರ ನಡುವೆ ಗಾಂಧಾರಿಯ ಗರ್ಭದಂತಹ ಮೌನ…
    Eee saalu sakath hididitu Sandhyakka 🙂

    ಬಿಟ್ಟು ಹೋಗುವವರದು ಸ್ವಂತ ನಿರ್ಧಾರ. ಹಿಂದೆ ಉಳಿದವರದು ಹಾಗಲ್ಲ. ಅವರಲ್ಲಿ ನಿರಾಸೆಯ ಜೊತೆಗೆ ತಮ್ಮಲ್ಲಿಯೇ ಏನಾದರೂ ಕೊರತೆ ಇತ್ತೆ ಎನ್ನುವುದು ಕಾಡುತ್ತಿರುತ್ತದೆ.
    Very Practical.. Very True..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: