ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆಯುತ್ತಾರೆ:ಚಿನ್ಮಯನ ಕಾಡು -2

ಚಿನ್ಮಯನನ್ನು ಒಳಗೆಳೆದುಕೊಂಡ ಸ್ಟೀಫನ್, ನೀನಿಲ್ಲೇ ಇರು ಅಂತ ಹೇಳಿ, ರಾಹುಲ್ ಜೊತೆಗೆ ಒಳಕೋಣೆಗೆ ಹೋದ. ಪೋಲಿಸರು ಬಂದು ಕೇಳಿದರೆ ನಾವು ಮನೇಲಿರೋದು ಹೇಳಬೇಡ ಅಂದ.  ನನ್ನನ್ನು ಕೆಲಸಕ್ಕಿಟ್ಟುಕೊಂಡಿದ್ದಾರೆ ಎಂದಷ್ಟೇ ಹೇಳು. ಅವರು ಹೊರಟು ಹೋದ ಮೇಲೆ ನಾವು ಬರುತ್ತೇವೆ ಎಂದು ಹೇಳಿ ಚಿನ್ಮಯನ ಕೈಗೆ ಒಂದಷ್ಟು ದುಡ್ಡು ತುರುಕಿ, ಕಣ್ಮರೆಯಾದ.

ಪೊಲೀಸರು ಬಾಗಿಲು ಬಡಿದು ಸುಸ್ತಾಗಿ, ಇನ್ನೇನು ಬಾಗಿಲು ಒಡೆಯಬೇಕು ಎಂದು ಯೋಚಿಸುತ್ತಿರಬೇಕಾದರೆ ಚಿನ್ಮಯ ಆಗ ತಾನೇ ನಿದ್ದೆಯಿಂದ ಎದ್ದವನಂತೆ ಮುಖ ಮಾಡಿಕೊಂಡು ಬಾಗಿಲು ತೆರೆದ. ಅವನನ್ನು ಪೊಲೀಸರು ಅಲ್ಲಿ ನಿರೀಕ್ಷಿಸಿರಲಿಲ್ಲವೋ ಅಥನಾ ಬೇರೆ ಯಾರನ್ನೋ ನಿರೀಕ್ಷಿಸಿದ್ದರೋ? ಚಿನ್ಮಯ ಬಾಗಿಲು ತೆಗೆಯುತ್ತಿದ್ದ ಹಾಗೇ, ಅವನನ್ನು ಪಕ್ಕಕ್ಕೆ ತಳ್ಳಿ ಒಳಗೆ ನುಗ್ಗಿದರು. ಕೋಣೆಕೋಣೆಗಳನ್ನು ಜಾಲಾಡತೊಡಗಿದರು. ಅಲ್ಲಿದ್ದ ಕಂಪ್ಯೂಟರ್, ಲ್ಯಾಪುಟಾಪುಗಳನ್ನೆಲ್ಲ ಸೀಝ್ ಮಾಡತೊಡಗಿದರು. ಚಿನ್ಮಯನಿಗೆ ಪರಿಸ್ಥಿತಿ ಗಂಭೀರವಾಗಿದೆ ಅನ್ನಿಸತೊಡಗಿತು. ಇಲ್ಲೇ ನಿಂತಿದ್ದರೆ ತಾನೂ ಇವರ ಕೈಗೆ ಸಿಕ್ಕಿ ಒದ್ದಾಡಬೇಕಾಗುತ್ತದೆ ಅನ್ನಿಸಿ, ಮೆತ್ತಗೆ ಹೊರಗೆ ಹೋದ. ಒಳಗೆಲ್ಲ ಹುಡುಕಿದ ಪೇದೆಗಳು ಯಾರೂ ಇಲ್ಲ ಸಾರ್,ನನ್ಮಕ್ಕಳು ಹಿಂದಿನ ಬಾಗಿಲಿನಿಂದ ತಪ್ಪಿಸಿಕೊಂಡಿದ್ದಾರೆ. ನಮ್ಮೋರು ಛೇಸ್ ಮಾಡ್ತಿದ್ದಾರೆ ಎಂದದ್ದು ಕೇಳಿಸಿತು. ಚಿನ್ಮಯ ಹೊರಬಂದು ಹಾಗೇ, ಕತ್ತಲಲ್ಲಿ ಕರಗಿಹೋದ.

ಚಿನ್ಮಯನಿಗೆ ಆಶ್ಚರ್ಯವಾಯಿತು. ಪೊಲೀಸರು ಬಂದಿಸುವಂಥ ಯಾವ ತಪ್ಪು ಮಾಡಿದ್ದಾನೆ ಸ್ಟೀಫನ್ ಎನ್ನುವುದು ಅರ್ಥವಾಗಲಿಲ್ಲ. ಅಲ್ಲಿಂದ ಸಾಕಷ್ಟು ದೂರ ಹೋಗಿ, ಚಿನ್ಮಯ ಜೋಬಿಗೆ ಕೈ ಹಾಕಿ ಸ್ಟೀಫನ್ ಕೊಟ್ಟಿದ್ದ ದುಡ್ಡನ್ನು ಲೆಕ್ಕ ಹಾಕಿದ. ಚಿನ್ಮಯನಿಗೆ ಗಾಬರಿಯಾಯಿತು. ಎಲ್ಲವೂ ಸಾವಿರ ರುಪಾಯಿ ನೋಟುಗಳೇ. ಅವಸರದಲ್ಲಿ ಅವನು ಜೋಬಿಗೆ ಕೈ ತುರುಕಿದ್ದು ಒಂದೂವರೆ ಲಕ್ಷದಷ್ಟಿತ್ತು.

ಸ್ಟೀಫನ್ ಏನು ಮಾಡುತ್ತಿದ್ದ ಎಂಬುದು ಚಿನ್ಮಯನಿಗೆ ಗೊತ್ತಾದದ್ದು ಮಾರನೆಯ ದಿನ. ಪೊಲೀಸರ ಕಾರ್ಯಾಚರಣೆಯ ವಿವರಗಳು ಪತ್ರಿಕೆಯಲ್ಲಿ ದಾಖಲಾಗಿದ್ದವು. ಅವರು ಸ್ಟೀಫನ್ನಿಗೋಸ್ಕರ ಮೂರು ತಿಂಗಳಿಂದ ಹೊಂಚು ಹಾಕಿದ್ದರು. ಅವನು ಪ್ರತಿವರ್ಷ ಭಾರತಕ್ಕೆ ಬಂದು, ಭಾರತದ ಪ್ರಸಿದ್ಧ ಐತಿಹಾಸಿಕ ಸ್ಥಳಗಳನ್ನು ಚಿತ್ರೀಕರಿಸಿಕೊಂಡು ಹೋಗುತ್ತಿದ್ದ.ನಂತರ ಆ ಐತಿಹಾಸಿಕ ಸ್ಥಳಗಳ ಹಿನ್ನೆಲೆ ಇಟ್ಟುಕೊಂಡು ಭಾರತದ ಹುಡುಗಿಯರ ಅಶ್ಲೀಲ ಸಿನಿಮಾ ಚಿತ್ರೀಕರಿಸುತ್ತಿದ್ದ. ಹಂಪೆ, ಬಾದಾಮಿ-ಐಹೊಳೆ, ಶ್ರೀರಂಗಪಟ್ಟಣ, ಬೇಲೂರು ಹಳೇಬೀಡುಗಳನ್ನೆಲ್ಲ ಹಿನ್ನೆಲೆಯಾಗಿಟ್ಟುಕೊಂಡು ಕಾಮಪ್ರಚೋದಕ ಚಿತ್ರ ನಿರ್ಮಿಸಿ ಅರಬ್ ರಾಷ್ಟ್ರಗಳಿಗೆ ಮಾರುತ್ತಿದ್ದ ಎಂದು ಅವನ ಮೇಲೆ ಪೋಲೀಸರು ಆರೋಪ ಹೊರಿಸಿದ್ದರು.

ಚಿನ್ಮಯನಿಗೆ ಆಘಾತವಾಗಿತ್ತು. ಸ್ಚೀಫನ್ ಏಕಾಗ್ರತೆಯ ಹಿಂದೆ ಅಂಥದ್ದೊಂದು ದುರುದ್ದೇಶ ಇರುತ್ತದೆ ಎನ್ನುವ ಕಲ್ಪನೆಯೂ ಅವನಿಗಿರಲಿಲ್ಲ. ಅಲ್ಲಿಂದಾಚೆ ಅವನ ದೃಷ್ಟಿಕೋನವೇ ಬದಲಾಗಿಹೋಯಿತು. ಯಾರು ಏನೇ ಮಾಡಲಿ, ಅದರ ಹಿಂದೆ ಬೇರೇಯೋ ಒಂದು ಉದ್ದೇಶವಿರುತ್ತದೆ ಎನ್ನುವುದು ಅವನಿಗೆ ಖಾತ್ರಿಯಾಯಿತು.

ಅದು ಖಚಿತವಾದದ್ದು ಅವನು ಬಂಡೀಪುರಕ್ಕೆ ಹೋದಾಗ. ಸ್ಚೀಫನ್ ಕೊಟ್ಟಿದ್ದ ಒಂದೂವರೆ ಲಕ್ಷ ರುಪಾಯಿಯನ್ನು ಏನು ಮಾಡುವುದು

ಎಂದು ಗೊತ್ತಾಗದೇ ಆತ ಬಂಡೀಪುರದ ಸಮೀಪದಲ್ಲಿ ಆರೆಕೆರೆ ಭೂಮಿ ಖರೀದಿ ಮಾಡಿದ. ನೀರಿನ ಆಸರೆ ಇರುವ ಜಾಗ ಅದು. ಅಲ್ಲಿಂದ ಗುಂಡ್ಲುಪೇಟೆ ತುಂಬ ದೂರ ಇದ್ದದ್ದರಿಂದ ಯಾರೂ ಆ ಪ್ರದೇಶದಲ್ಲಿ ನೆಲೆಸುವುದಕ್ಕೆ ತಯಾರಿರಲಿಲ್ಲ. ಸ್ಕೂಲು, ಆಸ್ಪತ್ರೆ, ಅಂಗಡಿ ಯಾವುದೂ ಹತ್ತಿರ ಇಲ್ಲದ ಪ್ರದೇಶ. ವಿದ್ಯುತ್ ಸರಬರಾಜು ಕೂಡ ಇಲ್ಲದ ಜಾಗ. ಜೊತೆಗೆ ಕಾಡುಪ್ರಾಣಿಗಳ ಕಾಟ. ಒಮ್ಮೊಮ್ಮೆ ಹುಲಿ,ಕಾಡಾನೆಗಳೆಲ್ಲ ದಾರಿತಪ್ಪಿ ಅಲ್ಲೆಲ್ಲ ಓಡಾಡುತ್ತಿದ್ದವು.

ಚಿನ್ಮಯ ಅಲ್ಲಿ ಆಸ್ತಿ ಕೊಂಡದ್ದು ಕೃಷಿ ಮಾಡುವ ಸಲುವಾಗಿ. ಆದರೆ ಒಂದು ವರ್ಷದೊಳಗೆ ಅದು ಆಗುವ ಹೋಗುವ ಮಾತಲ್ಲ ಎಂದು ಗೊತ್ತಾಯಿತು. ಆ ಒಂದು ವರ್ಷದಲ್ಲಿ ಬಂಡೀಪುರದ ಸುತ್ತಲೂ ಅಲೆದಾಡಿ ಅಲ್ಲಿದ್ದ ಫಾರೆಸ್ಟರುಗಳ, ಪೋಚರುಗಳ ಪರಿಚಯ ಮಾಡಿಕೊಂಡಿದ್ದ ಚಿನ್ಮಯ. ಅವರೆಲ್ಲ ಅಲ್ಲಿ ಭೂಮಿ ಕೊಂಡದ್ದು ಮೂರ್ಖತನ ಎಂದು ನಗಾಡಿದ್ದರು.

ಕೊನೆಗೆ ಅಲ್ಲೇನು ಮಾಡಬಹುದು ಎಂಬ ಉಪಾಯ ಚಿನ್ಮಯನಿಗೆ ಹೊಳೆದದ್ದು ಅಚಾನಕ್ಕಾಗಿ.  ಅಷ್ಟು ಹೊತ್ತಿಗಾಗಲೇ ಸರ್ಕಾರ ಜಂಗಲ್ ಲಾಡ್ಜ್ ಪ್ರಾಜೆಕ್ಟು ಶುರುಮಾಡಿತ್ತು.ಪ್ರವಾಸೋದ್ಯಮವನ್ನು ವಿಸ್ತರಿಸುವ ಸಲುವಾಗಿ ಕಾಡಿನ ಮಧ್ಯೆ ಖಾಸಗಿಯವರಿಗೂ ಜಂಗಲ್ ಲಾಡ್ಜು ಮತ್ತು ರೆಸಾರ್ಟುಗಳನ್ನು ಕಟ್ಟುವುದಕ್ಕೆ ಅನುಮತಿ ಕೊಟ್ಟಿತ್ತು. ಆ ಯೋಜನೆಗೆ ಮೊದಲು ಅರ್ಜಿ ಸಲ್ಲಿಸಿದವನು ಚಿನ್ಮಯ. ಆ ಪ್ರದೇಶದ ಜನರ ಪ್ರೀತಿ, ಬೆಂಬಲ ಎಲ್ಲವೂ ಇದ್ದದ್ದರಿಂದ, ಅವನದೇ ಜಾಗವೂ ಇದ್ದದ್ದರಿಂದ ಅವನಿಗೆ ಲೈಸನ್ಸು ಸಿಕ್ಕಿಯೇ ಬಿಟ್ಟಿತು.  ಒಂದೇ ವರ್ಷದಲ್ಲಿ ಟಸ್ಕರ್ ಜಂಗಲ್ ರಿಸಾರ್ಟು ಎದ್ದು ನಿಂತಿತು.

ಚಿನ್ಮಯನ ಬದುಕಿನ ಚಿತ್ರ ಬದಲಾದದ್ದು ಆಗಲೇ. ಬೇರೆ ಬೇರೆ ಪ್ರವಾಸೋದ್ಯಮ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡು ಚಿನ್ಮಯ ಬಂಡೀಪುರಕ್ಕೆ ಬರುವವರು ಟಸ್ಕರ್ ರೆಸಾರ್ಟಿಗೆ ಬರುವಂತೆ ವ್ಯವಸ್ಥೆ ಮಾಡಿದ. ಮಕ್ಕಳಿಗೆಂದೇ ಅಲ್ಲಿ ಈಜುಕೊಳ, ಪಾರ್ಕು ನಿರ್ಮಿಸಿದ. ಶ್ರೀಮಂತರಿಗೆ ಮಧ್ಯಮವರ್ಗದವರಿಗೆಂದು ಕಾಟೇಜುಗಳನ್ನು ಕಟ್ಟಿಸಿದ. ರಾತ್ರಿ ಟ್ರೆಕಿಂಗು,ಬೆಳದಿಂಗಳ ಊಟದ ವ್ಯವಸ್ಥೆಯನ್ನೂ ಮಾಡಿದ. ಕಾಡಿನಲ್ಲಿ ನಡಿಗೆ, ನದಿಯಲ್ಲಿ ತಿರುಗಾಟ, ತೆಪ್ಪದಲ್ಲಿ ಸುತ್ತಾಟ, ಟೆಂಟ್ ವಾಸ, ಪ್ರೇಮಿಗಳಿಗೆ ವಿಶೇಷ ಕಾಟೇಜು- ಹೀಗೆ ವಿನೂತನ ಆಲೋಚನೆಗಳನ್ನು ಜಾರಿಗೆ ತಂದ. ಕೈ ತುಂಬ ದುಡಿಯತೊಡಗಿದ.

ಚಿನ್ಮಯನಿಗೆ ಅದು ಇಷ್ಟದ ಕೆಲಸವೂ ಆಗಿತ್ತು. ಅಪ್ಪ ಕಾಡಿನ ಮೇಲೆ ಪ್ರೀತಿ ಹುಟ್ಟುವಂತೆ ಮಾಡಿದ್ದ. ಅರಣ್ಯ ಇಲಾಖೆಯ ನೌಕರರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಅಲ್ಲಿದ್ದ ಅಧಿಕಾರಿಗಳಿಗೂ ಧಾರಾಳವಾಗಿ ಮದ್ಯ ಮಾಂಸ ಸರಬರಾಜಾಗುತ್ತಿತ್ತು. ರಾಜಕೀಯ ಮುಖಂಡರೂ ಆಗಾಗ ಅಲ್ಲಿಗೆ ಬಂದುಹೋಗತೊಡಗಿದರು. ಚಿನ್ಮಯ ತುಂಬ ಪ್ರಭಾವಿ ಉದ್ಯಮಿ ಎನ್ನಿಸಿಕೊಂಡಿದ್ದ.

ಇವೆಲ್ಲದರ ನಡುವೆಯೂ ಅವನನ್ನು ನಿರರ್ಥಕತೆ ಕಾಡುತ್ತಿತ್ತು. ನಗರದಲ್ಲಿರುವ ಮಂದಿ ಆ ಕಾಡಿಗೆ ಬಂದು ಏರ್ ಕಂಡೀಷನ್ಡ್  ಕೋಣೆಯೊಳಗೆ ಇಸ್ಪೀಟು ಆಡುತ್ತಾ, ಕುಡಿಯುತ್ತಾ ಕೂತು ಸೋತ ಕಣ್ಣುಗಳೊಂದಿಗೆ ವಾಪಸ್ಸಾಗುತ್ತಿದ್ದರು. ಎಷ್ಟೋ ಮಂದಿ ಸಫಾರಿಗೆ ಬರುತ್ತಲೇ ಇರಲಿಲ್ಲ. ಹೆಚ್ಚಿನವರು ಗೆಳತಿಯರನ್ನೋ ಮತ್ಯಾರನ್ನೋ ಕರೆದುಕೊಂಡು ಬಂದು ಒಂದೋ ಎರಡೋ ರಾತ್ರಿಗಳನ್ನು ಅಲ್ಲಿ ಕಳೆದುಹೋಗುತ್ತಿದ್ದರು. ಆರಂಭದಲ್ಲಿ ಅಂಥವರಿಗೆ ಪ್ರವೇಶವಿಲ್ಲ ಎನ್ನುತ್ತಿದ್ದ ಚಿನ್ಮಯ ಕೊನೆಕೊನೆಗೆ ಯಾರಾದರೂ ಬರಲಿ ಎಂದುಕೊಂಡು ಸುಮ್ಮನಾಗುತ್ತಿದ್ದ.

ಕೈ ತುಂಬ ಹಣ, ಓಡಾಡಲು ಲ್ಯಾಂಡ್ ರೋವರ್, ತನ್ನಿಚ್ಛೆಯ ಪರಿಸರ-ಹೀಗೆ  ಚಿನ್ಮಯನಿಗೆ ಇದ್ದಕ್ಕಿದ್ದಂತೆ ಎಲ್ಲವೂ ದಕ್ಕಿಬಿಟ್ಟಿತ್ತು. ಒಳಗೊಳಗೇ ಇದ್ಯಾವುದೂ ತನ್ನದಲ್ಲ ಅನ್ನಿಸಲು ಶುರುವಾಗಿತ್ತು. ಮತ್ತೇನಾದರೂ ಮಾಡಬೇಕು. ಇದನ್ನು ಮೀರಿದ್ದೇನಾದರೂ ಮಾಡಿ ಗೆಲ್ಲಬೇಕು ಎಂದು ಒಮ್ಮೊಮ್ಮೆ ಅನ್ನಿಸುತ್ತಿತ್ತು. ಆದರೆ ದೈನಂದಿನ ಜಂಜಡಗಳು ಅವನನ್ನು ಬಿಡುಗಡೆಯಾಗದಂತೆ ನಿರ್ಬಂಧಿಸಿದ್ದವು.

ಈ ಮಧ್ಯೆ ಸಣ್ಣಪುಟ್ಟ ಗಲಾಟೆಯೂ ಆಗುತ್ತಿತ್ತು. ಯಾರೋ ಬಂದು ಕಿರಿಕಿರಿ ಮಾಡುತ್ತಿದ್ದರು ಕುಡಿದುಗಲಾಟೆ ಮಾಡುತ್ತಿದ್ದರು. ಒಮ್ಮೊಮ್ಮೆ ಅವರನ್ನು ಬೈದು ಸುಮ್ಮನಾಗಿಸಬೇಕಾಗಿತ್ತು.ಆಗೆಲ್ಲ ಚಿನ್ಮಯನಿಗೆ ನಿಜಕ್ಕೂ ಹಿಂಸೆಯಾಗುತ್ತಿತ್ತು. ಕೆಲವರು ಅನಗತ್ಯವಾಗಿ ರೆಸಾರ್ಟಿನ ಹುಡುಗರನ್ನು ಬೈಯುತ್ತಿದ್ದರು. ಅಂಥವರನ್ನು ಚಿನ್ಮಯ ನಿರ್ದಾಕ್ಷಿಣ್ಯವಾಗಿ ಹೊರಗೆ ಕಳಿಸುತ್ತಿದ್ದ.ಅವರು ಎಂಥ ದೊಡ್ಡ ವ್ಯಕ್ತಿಯಾದರೂ ತನಗೆ ಲೆಕ್ಕ ಇಲ್ಲ ಎನ್ನುತ್ತಿದ್ದ.

ಒಂದು ಮಧ್ಯಾಹ್ನ ಮೈಸೂರಿನಿಂದ ಮರಳುವ ಹೊತ್ತಿಗೆ ರೆಸಾರ್ಟಿನಿಂದ ಫೋನ್ ಬಂತು. ಶಾಸಕರೊಬ್ಬರು ರೆಸಾರ್ಟಿಗೆ ಬಂದಿದ್ದಾರೆ. ಹೇಳದೇ ಕೇಳದೇ ಬಂದಿರೋದರಿಂದ ಕಾಟೇಜು ಖಾಲಿಯಿಲ್ಲ. ಬಂದು ಗಲಾಟೆ ಮಾಡುತ್ತಿದ್ದಾರೆ. ರೆಸಾರ್ಟು ಬಂದ್ ಮಾಡಿಸೋದಾಗಿ ಹೇಳುತ್ತಿದ್ದಾರೆ. ಚಿಕ್ಕಣ್ಣ ಕಾಟೇಜ್ ಇಲ್ಲ ಅಂದಿದ್ದಕ್ಕೆ ಅವನ ಮೇಲೆ ಕೈ ಮಾಡಿದ್ದಾರೆ.

ಚಿನ್ಮಯನಿಗೆ ಸಿಟ್ಟು ನೆತ್ತಿಗೇರತೊಡಗಿತ್ತು. ಸಾಮಾನ್ಯವಾಗಿ ನಿಧಾನಕ್ಕೆ ಗಾಡಿ ಓಡಿಸುವ ಚಿನ್ಮಯ ಆವತ್ತು ಶರವೇಗದಲ್ಲಿ ಕಾರು ಓಡಿಸಿ, ರೆಸಾರ್ಟ್ ತಲುಪಿದ. ಅವನು ಅಲ್ಲಿಗೆ ಹೋಗಿ ಮುಟ್ಟುವ ಹೊತ್ತಿಗೆ ಅಲ್ಲೊಂದಷ್ಟು ಮಂದಿ ನೆರೆದಿದ್ದರು. ಚಿನ್ಮಯ ಒಳಗೆ ಹೋಗಿ ಶಾಸಕನನ್ನು ಹೊರಗೆ ಕಳಿಸಬೇಕು ಎಂದು ತೀರ್ಮಾನ ಮಾಡಿಕೊಂಡೇ ಬಂದಿದ್ದ.

ಅವನು ಕಾರು ನಿಲ್ಲಿಸಿ ಗೆಸ್ಟ್ ರಿಲೇಷನ್ ಡೆಸ್ಕಿನತ್ತ ಹೋಗುತ್ತಿದ್ದಂತೆ, ಅಲ್ಲಿ ಶಾಸಕ ಮತ್ತು ಅವನ ಜೊತೆ ಬಂದಿದ್ದ ಮಹಿಳೆ ಗೆಸ್ಟ್ ರಿಲೇಷನ್ ಆಫೀಸರ್ ಇಸ್ಮಾಯಿಲ್ ಜೊತೆ ಜಗಳ ಆಡುತ್ತಿದ್ದರು. ಆ ಹೆಂಗಸು ಎತ್ತರದ ದನಿಯಲ್ಲಿ ಕಿರುಚುತ್ತಿದ್ದಳು. ಚಿನ್ಮಯ ನೇರವಾಗಿ ಅಲ್ಲಿಗೆ ಹೋಗಿ `ಗೆಟೌಟ್ ಫ್ರಮ್ ಹಿಯರ್. ನಿಮಗೆ ಕಾಟೇಜ್ ಕೊಡಲಾಗುವುದಿಲ್ಲ. ಅದೇನು ಮಾಡ್ಕೋತೀರೋ ಮಾಡ್ಕೊಳ್ಳಿ’ ಎಂದ.

ಅವನ ಧ್ವನಿ ಕೇಳಿ ಆ ಹೆಂಗಸರು ತಿರುಗಿ ನೋಡಿದಳು. ಅವಳ ಕಣ್ಣಲ್ಲಿ ಅವಮಾನ, ರೋಷ, ರೇಜಿಗೆ, ಅಹಂಕಾರ ಎಲ್ಲವೂ ಧುಮ್ಮಿಕ್ಕುತ್ತಿತ್ತು. ಆಕೆ ತಿರುಗುತ್ತಿದ್ದಂತೆ ಚಿನ್ಮಯ ಅವಾಕ್ಕಾಗಿ ನಿಂತು ಬಿಟ್ಟ. ನಿಮ್ಮಿ ಕೂಡ ಚಿನ್ಮಯನ ಮುಖ ನೋಡುತ್ತಿದ್ದಂತೆ ಗರಬಡಿದವಳಂತೆ ನಿಂತುಬಿಟ್ಟಳು.

ಚಿನ್ಮಯನಿಗೆ ಮೈಸೂರಿಂದ ಶರವೇಗದಲ್ಲಿ ಬಂದ ಸುಸ್ತಿಗೋ ಏನೋ ನಿದ್ದೆ ಎಳೆಯತೊಡಗಿತು. ನಿಂತಲ್ಲೇ ಕಣ್ಮುಚ್ಚಿದ. ಕಣ್ಮುಂದೆ ಶಶಿಕಾಂತ ಸತ್ತು ಮಲಗಿದ್ದ. ನಿಮ್ಮಿ ಗಡಸು ಮುಖ ಹೊತ್ತು ಕೂತಿದ್ದಳು.

 

 

‍ಲೇಖಕರು avadhi

29 July, 2011

2 Comments

  1. manjunayaka

    interesting aagittu sir…..nirarthakathe nimmastu innarannoo kaadilla ansutte

  2. Dr.D.M.Sagar

    “ನಂಬಿಕೆ ಕೂಡ ಒಂಥರದ ಆತ್ಮರತಿ. ಯಾರನ್ನೂ ತುಂಬ ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು. ಇನ್ನೊಬ್ಬರ ಭಾವನೆಗಳ ಮೇಲೆ ನಮ್ಮ ಬದುಕನ್ನು ರೂಪಿಸಿಕೊಳ್ಳಬಾರದು. ಪ್ರತಿಯೊಬ್ಬರ ಒಳಗೂ ಮತ್ತೊಂದು ಜಗತ್ತಿರುತ್ತದೆ, ಆ ಜಗತ್ತಿನೊಳಗೆ ಯಾರೂ ಯಾರನ್ನೂ ಬಿಟ್ಟುಕೊಳ್ಳುವುದಿಲ್ಲ. ಒಂದು ಪುಟ್ಟ ಕಿಟಕಿ ತೆರೆದು ಇಷ್ಟಿಷ್ಟನ್ನೇ ತೋರಿಸುತ್ತಾರೆ. ಸಂಬಂಧಗಳು ಕಾಡಿನ ಹಾಗೆ. ನಡೆಯುತ್ತಾ ಹೋದರೆ ದಾರಿ ತಪ್ಪುತ್ತೇವೆ. ಪ್ರತಿಯೊಬ್ಬರು ಏನನ್ನೋ ನಿರೀಕ್ಷೆ ಮಾಡಿಯೇ ಸ್ನೇಹಹಸ್ತ ಚಾಚುತ್ತಾರೆ ಮತ್ತು ಅವರ ನಿರೀಕ್ಷೆ ಸುಳ್ಳಾದಾಗ ನಿಮ್ಮನ್ನು ಕೆಟ್ಟವರಂತೆ ನೋಡುತ್ತಾರೆ.” – this is the modern bible/Bhagavadgeetha!. Quintessential philosophy of life!.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading